ರಾಜ್ಯದ ಜನರಿಗೆ ತೆರಿಗೆ ಮೂಲಕ ಬರೆ ನೀಡಿದ ಮುಖ್ಯಮಂತ್ರಿಗಳು ತಲಾ ವ್ಯಕ್ತಿಗೆ 25 ಕೋಟಿ ರೂಗಳ ಟ್ಯಾಕ್ಸ್ ಹಾಕಿದ್ದಾರೆ. ಅಭಿವೃದ್ದಿ ಕಾಣದ ಈ ಸರ್ಕಾರ ನಡೆಸುವವರು ಸಿದ್ದರಾಮಯ್ಯ ಅಲ್ಲ ಟ್ಯಾಕ್ಸ್ ರಾಮಯ್ಯ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ವ್ಯಂಗ್ಯವಾಡಿದರು.
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರದಲ್ಲಿ ಪರಿಶಿಷ್ಟ ಜಾತಿ ಮೀಸಲಿನ 50 ಲಕ್ಷ ಅನುದಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು 80 ರೂಪಾಯಿ ಹಾಲು, ಶೇಕಡಾ 40 ಬಸ್ ಚಾರ್ಜ್ ಏರಿಕೆ, ಶೇಕಡಾ 45 ಮೆಟ್ರೋ ಚಾರ್ಜ್ ಏರಿಕೆ ಮದ್ಯ ಮಾರಾಟಕ್ಕೆ ಮೂರು ಬಾರಿ ತೆರಿಗೆ, ಆಸ್ತಿ ತೆರಿಗೆ ಹೀಗೆ ಅನೇಕ ತೆರಿಗೆ ವಿಧಿಸಿ ಜನರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದು ಕಿಡಿಕಾರಿದರು.
ಹೆಣ್ಣು ಮಕ್ಕಳಿಗೆ ಭಾಗ್ಯದ ಹೆಸರಿನಲ್ಲಿ ನೀಡುವ ಎಲ್ಲಾ ಹಣವೂ ಪುರುಷರ ದುಡಿಮೆಯ ಹಣವಾಗಿದೆ. ತೆರಿಗೆ ಮೂಲಕ ನಮ್ಮ ದುಡ್ಡು ನಮಗೆ ನೀಡುವ ಕಲೆ ಕಾಂಗ್ರೆಸಿಗರಿಗೆ ಕರಗತವಾಗಿದೆ. ದುಡಿಯುವ ಗಂಡಸಿನ ಹಣವನ್ನು ಮನೆಯಲ್ಲಿನ ಹೆಣ್ಣು ಮಕ್ಕಳಿಗೆ ನೀಡುವ ಈ ಸರ್ಕಾರ ಭ್ರಷ್ಟ ಸರ್ಕಾರ ಎಂದೆನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಹಿಂದುಳಿದ ಸಮಾಜವನ್ನು ಮುನ್ನಲೆಗೆ ತರುವ ಹಿನ್ನಲೆ 50 ಲಕ್ಷ ರೂಗಳ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮತ್ತೊಮ್ಮೆ 50 ಲಕ್ಷ ಅನುದಾನ ನೀಡಿ ದೊಡ್ಡ ಭವನ ನಿರ್ಮಾಣ ಮಾಡುವ ಉದ್ದೇಶ ಹೊದಿರುವುದಾಗಿ ತಿಳಿಸಿದರು.
ಕೇವಲ ಕಾಲಹರಣ ಮಾಡುವ ಈ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಲು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ತೆರಿಗೆ ರೂಪದಲ್ಲಿ ವಸೂಲಿ ಮಾಡಿ ಗ್ಯಾರಂಟಿ ಯೋಜನೆ ನಡೆಸುವುದು ಸರಿಯಲ್ಲ ಎಂದು ಕಿಡಿಕಾರಿದ ಅವರು ರೈತರಿಗೂ ಯಾವುದೇ ಅನುಕೂಲ ಮಾಡದೆ ರೈತ ವಿರೋಧಿ ಎಂದು ಸಹ ಗುರುತಿಸಿಕೊಂಡಿದೆ ಎಂದು ಟೀಕಿಸಿದ ಅವರು ಸರ್ಕಾರ ಸಾರ್ವಜನಿಕರಿಗೆ ನೀಡಿದ ಯಾವುದೇ ಭವನಗಳನ್ನು ನಿರ್ವಹಣೆ ಮಾಡುವ ಮನೋಭಾವ ಸ್ಥಳೀಯ ಜನರಲ್ಲಿ ಕಾಣಬೇಕು ಎಂದು ಸಲಹೆ ನೀಡಿದರು.
ದೇವರಾಜ್ ಅರಸು ಅವರ ಕಾಲದಿಂದ ನಾನು ನೋಡಿದ ಸರ್ಕಾರಗಳ ಪೈಕಿ ಈಗಿನ ಕಾಂಗ್ರೆಸ್ ಸರ್ಕಾರ ಕೆಟ್ಟ ಸರ್ಕಾರ ಎಂದು ಹೇಳಬಹುದಾಗಿದೆ. ಅಭಿವೃದ್ದಿ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ಎರಡು ವರ್ಷ ಪೂರೈಸುತ್ತಿದ್ದಾರೆ. ಇಂದಿಗೂ ರಸ್ತೆ ಗುಂಡಿ ಮುಚ್ಚಲು ಬಿಡಿಗಾಸು ನೀಡಿಲ್ಲ ಎಂದು ಕುಟುಕಿದ ಅವರು ಸಿ.ಎಸ್.ಪುರಕ್ಕೆ ಪಾಲಿಟೆಕ್ನಿಕ್ ಕಾಲೇಜು, ತುರುವೇಕೆರೆಯಲ್ಲಿ ಕಾನೂನು ಶಿಕ್ಷಣ ಕಾಲೇಜು, ಉದ್ಯೋಗ ಸೃಷ್ಟಿಸುವ ಕೌಶಲ್ಯ ತರಬೇತಿ ಕಾಲೇಜು ಕೇಳಿದರೂ ಮಂಜೂರು ಮಾಡಿಲ್ಲ. ಸದನದಲ್ಲಿ ಚರ್ಚೆ ಮಾಡುವಾಗ ಮುಖ್ಯಮಂತ್ರಿಗಳೇ ಮಾತು ಕೊಟ್ಟು ಮರೆತಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ದುರ್ಗಮ್ಮ, ಸದಸ್ಯರಾದ ಈಶ್ವರಗೌಡ, ವಿಶಾಲಕ್ಷ್ಮಮ್ಮ, ಸಾವಿತ್ರಮ್ಮ, ರಘು, ಸ್ಥಳೀಯ ಮುಖಂಡರಾದ ನಂಜೇಗೌಡ, ನವೀನ್ ಕುಮಾರ್, ರಾಮು, ದಲಿತ ಮುಖಂಡರಾದ ಗಿರೀಶ್, ರಮೇಶ್, ರಂಗ ಇತರರು ಇದ್ದರು.