ಪಂಜಾಬ್ ಕಿಂಗ್ಸ್ ತಂಡದ ಎಡಗೈ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ(priyansh arya) ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ (Punjab Kings vs Chennai Super Kings) ವಿರುದ್ಧ 39 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದರು. ಆ ಶತಕದಲ್ಲಿ ಒಂಬತ್ತು ಸಿಕ್ಸರ್‌ಗಳು ಮತ್ತು ಏಳು ಬೌಂಡರಿಗಳಿದ್ದದ್ದು ವಿಶೇಷವಾಗಿತ್ತು. ಒಂದೇ ಒಂದು ಪಂದ್ಯದ ಮೂಲಕ ಆರ್ಯ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದರು.
ಇದು 24 ವರ್ಷಗಳ ಪ್ರಿಯಾಂಶ್ ಆರ್ಯ ಅವರ ನಾಲ್ಕನೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯವಾಗಿತ್ತು. ಐದು ಬಾರಿಯ ಚಾಂಪಿಯನ್ ಎನಿಸಿಕೊಂಡ, 43 ವರ್ಷದ ಹಿರಿಯ ಆಟಗಾರ ಧೋನಿಯ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪ್ರಿಯಾಂಶ್ ಆಟ ಎಲ್ಲರಿಗೂ ಶಾಕ್ ನೀಡಿತ್ತು.
ದಿಲ್ಲಿ ತಂಡದ ಆಕ್ರಮಣಕಾರಿ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಅವರನ್ನು ಪಂಜಾಬ್ ಕಿಂಗ್ಸ್ 3.8 ಕೋಟಿ ರೂಪಾಯಿಗೆ ಮೆಗಾ ಹರಾಜಿನಲ್ಲಿ ಖರೀದಿಸಿತ್ತು. ದಿಲ್ಲಿ ಪ್ರಿಮಿಯರ್ ಲೀಗ್‍ನಲ್ಲಿ ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ತಂಡದ ಪರ 10 ಇನ್ನಿಂಗ್ಸ್ ಗಳಲ್ಲಿ 608 ರನ್‍ಗಳನ್ನು ಸಿಡಿಸಿದ ದಾಖಲೆ ಇವರ ಬೆನ್ನಿಗಿತ್ತು. ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ವಿರುದ್ಧ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಬಾರಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದರು.
ಇದನ್ನು ಓದಿದ್ದೀರಾ?: ರಾಜ್ಯದಲ್ಲಿ ಆನ್ಲೈನ್ ಬೆಟ್ಟಿಂಗ್, ಗೇಮಿಂಗ್ ಆ್ಯಪ್ಗೆ ಕಡಿವಾಣ; ಶ್ರೀಘವೇ ಹೊಸ ಮಾನದಂಡ
2023-24ರ ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ದಿಲ್ಲಿ ಪರ 7 ಇನ್ನಿಂಗ್ಸ್ ಗಳಲ್ಲಿ 31.71 ಸರಾಸರಿಯಲ್ಲಿ 166.91 ಸ್ಟ್ರೈಕ್‍ರೇಟ್‍ನಲ್ಲಿ 222 ರನ್ ಕಲೆ ಹಾಕಿದ್ದರು. 2024ರ ಐಪಿಎಲ್‍ಗೆ ಶಾರ್ಟ್‍ಲಿಸ್ಟ್ ಆಗಿದ್ದರೂ, ಯಾರೂ ಇವರನ್ನು ಖರೀದಿಸಿರಲಿಲ್ಲ.
ಐದು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡದ ಯುವ ಆಟಗಾರ ಮಂಗಳವಾರ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿ ಗಮನ ಸೆಳೆದರು. 9 ಸಿಕ್ಸ್ ಮತ್ತು 7 ಬೌಂಡರಿ ಸಿಡಿಸಿ ನೂರ್ ಅಹ್ಮದ್‍ಗೆ ವಿಕೆಟ್ ಒಪ್ಪಿಸುವ ಮುನ್ನ 103 ರನ್ ಗಳಿಸಿದ ಯುವ ಆಟಗಾರ ಪೆವಿಲಿಯನ್‍ಗೆ ವಾಪಸ್ಸಾಗುವ ವೇಳೆ ಸಹ ಆಟಗಾರರು ಹಾಗೂ ತಂಡದ ಒಡತಿ ಪ್ರೀತಿ ಝಿಂಟಾ ಎದ್ದುನಿಂತು ಗೌರವ ಸೂಚಿಸಿದರು.
ಮೊದಲ ಪಂದ್ಯದಲ್ಲಿ ಹೊಡಿಬಡಿಯ 47 ರನ್ ಗಳಿಸಿದ್ದ ಆರ್ಯ ತಮ್ಮ ನಾಲ್ಕನೇ ಪಂದ್ಯದಲ್ಲಿ ವೇಗದ ಶತಕ ಗಳಿಸಿದರು. ಐಪಿಎಲ್ ಎಂದರೆ ಸಾಮಾನ್ಯವಾಗಿ ಹೊಸಬರ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ. ಈ ಬಾರಿಯ ಐಪಿಎಲ್ ನಲ್ಲಿ ಹೊಸ ಹುಡುಗರು ಚೆನ್ನಾಗಿ ಆಡಿ, ಎಲ್ಲರ ಗಮನ ಸೆಳೆಯುತ್ತಿರುವುದು, ಮಿಂಚುತ್ತಿರುವುದು ವಿಶೇಷ.