2025ರಲ್ಲಿ ದೇಶದಲ್ಲಿ ಮಾನ್ಸೂನ್ ಸಾಮಾನ್ಯವಾಗಿರಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ತಿಳಿಸಿದೆ. ಜೂನ್-ಸೆಪ್ಟೆಂಬರ್ ಅವಧಿಯಲ್ಲಿ 868.6 ಮಿಮೀ ಸರಾಸರಿ ಮಳೆಯಾಗುವ ನಿರೀಕ್ಷೆಯಿದೆ ಎಂದಿದೆ. ಈ ವರ್ಷದ ಮಾನ್ಸೂನ್‌ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇನ್ನೂ ತನ್ನ ಮುನ್ಸೂಚನೆಯನ್ನು ಬಿಡುಗಡೆ ಮಾಡಿಲ್ಲ.
ಶೇಕಡ 96ರಿಂದ ಶೇಕಡ 106ರವರೆಗೆ ಪ್ರಮಾಣಿತ ವ್ಯಾಪ್ತಿಯಲ್ಲಿ ಸಾಮಾನ್ಯ ಮಾನ್ಸೂನ್ ನಿರೀಕ್ಷೆಯಿದೆ. ದೇಶದ ಶೇಕಡ 20ರಷ್ಟು ಪ್ರದೇಶದಲ್ಲಿ ಮಾತ್ರ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಉಳಿದ ಶೇಕಡ 80ರಷ್ಟು ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಹೇಳಿದೆ.
ಇದನ್ನು ಓದಿದ್ದೀರಾ? ಮುಂದಿನ ಐದು ದಿನ ತಾಪಮಾನ ಇಳಿಕೆ, ಚಳಿ ಹೆಚ್ಚಳ : ಹವಾಮಾನ ಇಲಾಖೆ
ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕೇರಳ, ಕರಾವಳಿ ಕರ್ನಾಟಕ ಮತ್ತು ಗೋವಾ ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚುವರಿ ಮಳೆಯಾಗುವ ಸಾಧ್ಯತೆಯಿದೆ. ಇದು ಅನುಕೂಲಕರ ಮಳೆ ಎಂದು ಸ್ಕೈಮೆಟ್ ಮುನ್ಸೂಚನೆ ನೀಡಿದೆ.
ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶವನ್ನು ಒಳಗೊಂಡಿರುವ ಕೇಂದ್ರ ಮಾನ್ಸೂನ್ ವಲಯದಲ್ಲಿಯೂ ಸಾಕಷ್ಟು ಮಳೆಯಾಗುವ ನಿರೀಕ್ಷೆಯಿದೆ. ಆದರೆ ಈಶಾನ್ಯ ಪ್ರದೇಶ ಮತ್ತು ಉತ್ತರ ಭಾರತದ ಗುಡ್ಡಗಾಡು ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ.
ಸ್ಕೈಮೆಟ್‌ನ ಮಾಸಿಕ ಮುನ್ಸೂಚನೆಯ ಪ್ರಕಾರ, ಜೂನ್‌ನಲ್ಲಿ ಶೇಕಡ 96, ಜುಲೈನಲ್ಲಿ ಶೇಕಡ 102, ಆಗಸ್ಟ್‌ನಲ್ಲಿ ಶೇಕಡ 108 ಮತ್ತು ಸೆಪ್ಟೆಂಬರ್‌ನಲ್ಲಿ ಶೇಕಡ 104ರಷ್ಟು ಮಳೆಯಾಗುವ ಸಾಧ್ಯತೆಯಿದೆ.
