- ‘ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಾಮಾನ್ಯ’
- ತಾಳ್ಮೆಯಿಂದ ಇಬ್ಬರೂ ವರ್ತಿಸಲು ಸ್ವಾಮೀಜಿ ಸಲಹೆ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಸಚಿವ ಅಶ್ವತ್ಥನಾರಾಯಣ ನಡುವಿನ ಒಳಜಗಳಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಶ್ರೀಗಳು ಇಬ್ಬರು ನಾಯಕರಿಗೂ ಕಿವಿಮಾತು ಹೇಳಿದ್ದಾರೆ.
ಬೆಂಗಳೂರಿನ ಸದಾಶಿವ ನಗರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕೆಂಪೇಗೌಡರ ಜಯಂತಿಯಲ್ಲಿ ಇಬ್ಬರೂ ನಾಯಕರಿಗೆ ಅವರ ಸಮ್ಮುಖದಲ್ಲೇ ಬುದ್ಧಿ ಹೇಳಿದ ಸ್ವಾಮೀಜಿ, “ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಾಮಾನ್ಯ. ಆದರೂ, ಪರಸ್ಪರ ಕಿತ್ತಾಡಿಕೊಳ್ಳುವುದು, ಪರಸ್ಪರ ಕೆಸರೆರಚಾಡುವುದು ಮಾಡಬೇಡಿ. ತಾಳ್ಮೆಯಿಂದ ಇರಬೇಕು” ಎಂದು ಸಲಹೆ ನೀಡಿದ್ದಾರೆ.
“ಇಬ್ಬರೂ ನಾಯಕರು ಪರಸ್ಪರ ಬೈದಾಡಿಕೊಳ್ಳುವುದು ಸರಿಯಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳ ಆಚೆಗೆ ಸಮಚಿತ್ತದಿಂದ, ತಾಳ್ಮೆಯಿಂದ ಇಬ್ಬರೂ ವರ್ತಿಸಬೇಕು” ಎಂದರು. ವೇದಿಕೆಯಲ್ಲಿ ಆಸೀನರಾಗಿದ್ದ ನಿರ್ಮಲಾನಂದ ಶ್ರೀಗಳ ಆಜುಬಾಜುವಿನಲ್ಲಿ ಇಬ್ಬರೂ ನಾಯಕರು ಕುಳಿತಿದ್ದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಅಧ್ಯಕ್ಷ ಕಟೀಲ್‌ಗೆ ಹಿಂದುತ್ವವೇ ತಲೆನೋವು
ಸುದ್ದಿಯಲ್ಲಿರುವ ನಾಯಕರು
ಡಿಕೆ ಶಿವಕುಮಾರ್ ಮತ್ತು ಅಶ್ವತ್ಥನಾರಾಯಣ್ ನಡುವಿನ ವಾಕ್ಸಮರ ಇತ್ತೀಚೆಗೆ ಮತ್ತಷ್ಟು ತಾರಕಕ್ಕೇರಿದೆ. ಬೆಂಗಳೂರಿನ ಉಸ್ತುವಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಡಿಕೆಶಿ ಅವರಿಗೆ ಅಶ್ವತ್ ನಾರಾಯಣ ಅವರು, “ಬೆಂಗಳೂರಿಗೂ ನಿಮಗೂ ಏನಪ್ಪಾ ಸಂಬಂಧ?” ಎಂದು ಪ್ರಶ್ನಿಸಿದ್ದರು.
ಈ ಹಿಂದೆ ಅಶ್ವತ್ಥನಾರಾಯಣ ಅವರು ರಾಮನಗರದ ಉಸ್ತುವಾರಿ ಸಚಿವರಾಗಿದ್ದಾಗ ಡಿಕೆ ಶಿವಕುಮಾರ್ ಅವರು “ರಾಮನಗರಕ್ಕೂ ನಿನಗೂ ಏನಪ್ಪಾ ಸಂಬಂಧ” ಎಂದು ಪ್ರಶ್ನಿಸಿದ್ದರು.
ಈ ವಿಚಾರವಾಗಿ ಕಳೆದೊಂದು ವಾರದಿಂದ ಮಾಧ್ಯಮಗಳಲ್ಲಿ ಈ ಇಬ್ಬರು ನಾಯಕರ ಪರಸ್ಪರ ವಾಕ್ಸಮರ ಬಗ್ಗೆ ಸುದ್ದಿ ಪ್ರಕಟವಾಗುತ್ತಲೇ ಇತ್ತು.