ಇಂದಿನ ಪಂದ್ಯವನ್ನು ಯಾವ ತಂಡ ಗೆಲ್ಲಲಿದೆ ಎಂಬ ಚರ್ಚೆಗಳು ಶುರುವಾಗಿದ್ದು, ಬಹುತೇಕರು ಆರ್‌ಸಿಬಿ ತಂಡವನ್ನು ಗೆಲ್ಲುವ ಹಾಟ್ ಫೆವರಿಟ್ ಎಂದಿದ್ದಾರೆ... ಏಕೆ?
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಆರ್‌ಸಿಬಿ ಮತ್ತು ಡಿಸಿ ತಂಡಗಳ ನಡುವೆ ಚುಟುಕು ಕ್ರಿಕೆಟ್ ಕಾಳಗ ನಡೆಯಲಿದೆ. ಸತತ ಮೂರು ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್, ಗೆಲುವಿನ ನಾಗಾಲೋಟದಲ್ಲಿದೆ. ನಾಲ್ಕು ಪಂದ್ಯಗಳನ್ನಾಡಿ ಒಂದು ಪಂದ್ಯ ಸೋತು ಮೂರು ಗೆದ್ದಿರುವ ರಾಯಲ್ ಚಾಲೆಂಜರ್‍ಸ್ ಬೆಂಗಳೂರು, ತವರಿನಲ್ಲಿ ಗೆಲುವಿನ ಖಾತೆ ತೆರೆಯುವ ತವಕದಲ್ಲಿದೆ.
ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿ ಆಡುತ್ತಿರುವ ರೀತಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕೋಲ್ಕತ್ತದಲ್ಲಿ ಉದ್ಘಾಟನಾ ಪಂದ್ಯ ಗೆದ್ದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 17 ವರ್ಷಗಳ ನಂತರ ಅದರ ನೆಲದಲ್ಲೇ ನೆಲಕಚ್ಚಿಸಿದೆ. ತವರಿನಲ್ಲಿ ಗುಜರಾತ್ ಟೈಟನ್ಸ್‌ಗೆ ಸೋತರೂ, ರನ್ ಹೊಳೆಕಂಡ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೇಲೆ ರೋಚಕ ಜಯ ಪಡೆದು ಪುಟಿದೇಳುತ್ತಿದೆ.
36 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಅವರು ರನ್ ಸುಗ್ಗಿ ಕಾಣುತ್ತಿರುವುದು ತಂಡದ ಮನೋಬಲ ಹೆಚ್ಚಿಸಿದೆ. ಅವರ ಆಟ ಆರ್‌ಸಿಬಿ ಯಶಸ್ಸಿನಲ್ಲಿ ನಿರ್ಣಾಯಕವಾಗಲಿದೆ. ನಾಯಕ ರಜತ್ ಪಾಟೀದಾರ್ ಕೂಡ ಆಕ್ರಮಣಕಾರಿಯಾಗಿಯೇ ಆಡುತ್ತಿದ್ದಾರೆ. ಹಾಗೆಯೇ ಆಡಿರುವ ಮೂರೂ ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಆತ್ಮವಿಶ್ವಾಸದಲ್ಲಿದ್ದಾರೆ.
ಇದನ್ನು ಓದಿದ್ದೀರಾ?: IPL 2025 | ಹಿರಿಯರ ವಿರುದ್ಧ ದಾಖಲೆಯ ಶತಕ ಸಿಡಿಸಿದ ಕಿರಿಯ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ
ಎರಡೂ ತಂಡಗಳು ಸಮಬಲದಲ್ಲಿವೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ಮೈದಾನಕ್ಕೆ ಲಗ್ಗೆ ಇಡಲಿದ್ದಾರೆ. ಈ ಮಧ್ಯೆ ಇಂದಿನ ಪಂದ್ಯವನ್ನು ಯಾವ ತಂಡ ಗೆಲ್ಲಲಿದೆ ಎಂಬ ಚರ್ಚೆಗಳು ಶುರುವಾಗಿದ್ದು, ಬಹುತೇಕರು ಆರ್‌ಸಿಬಿ ತಂಡವನ್ನು ಗೆಲ್ಲುವ ಹಾಟ್ ಫೆವರಿಟ್ ತಂಡವಾಗಿ ಆಯ್ಕೆ ಮಾಡಿದ್ದಾರೆ. ಏಕೆಂದರೆ, ತವರಿನ ಸ್ಟೇಡಿಯಂನಲ್ಲಿ ಒಂದು ಸಲ ಸೋತಿರುವುದು, ಗೆಲುವಿಗೆ ದಾರಿಯಾಗಲಿದೆ. ಸೋಲಿನ ಕಹಿ ಗೆಲುವಿನ ಸಿಹಿ ತಿನ್ನಿಸಲಿದೆ ಎನ್ನುವುದು ಅಭಿಮಾನಿಗಳ ಅನಿಸಿಕೆಯಾಗಿದೆ.
ಹಾಗಾಗಿ ಈ ಪಂದ್ಯ ಆಸಕ್ತಿಕರವಾಗಿದೆ. ಅದರಲ್ಲೂ ತವರಿನ ಅಂಗಳದಲ್ಲಿ ಆಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಸ್ಟಾರ್ ಕೆ.ಎಲ್.ರಾಹುಲ್ ಅವರ ಪ್ರದರ್ಶನ ಕುತೂಹಲಕ್ಕೆ ಎಡೆಮಾಡಿದೆ.
ಹೌದು, ಕೆಎಲ್ ರಾಹುಲ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ಡಿಸಿ ತಂಡದ ಆಟಗಾರನಾಗಿ ಆರ್‌ಸಿಬಿ ವಿರುದ್ಧ ಮೈದಾನಕ್ಕಿಳಿಯಲಿದ್ದಾರೆ. ಕೆಎಲ್ ರಾಹುಲ್ ಆರ್‌ಸಿಬಿಯಲ್ಲಿರಲಿ ಎಂದು ಬಯಸುವ ಕೋಟ್ಯಂತರ ಅಭಿಮಾನಿಗಳಿಗೆ ಇದು ನಿಜಕ್ಕೂ ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗದ ಸಂಗತಿ.
ಆರ್‌ಸಿಬಿ ಅಭಿಮಾನಿಗಳಿಗೆ ಒಂದು ಕಡೆ ತಮ್ಮ ನೆಚ್ಚಿನ ತಂಡ ಗೆಲ್ಲಲಿ ಎಂಬ ಬಯಕೆ. ಆದರೆ ಮತ್ತೊಂದು ಕಡೆ ಕನ್ನಡದ ಹುಡುಗ ಕೆಎಲ್ ರಾಹುಲ್‌ನನ್ನು ಎದುರಾಳಿ ಪಾಳೆಯದಲ್ಲಿ ನೋಡುವ ಅನಿವಾರ್ಯತೆ. ಆರ್‌ಸಿಬಿ ಅಭಿಮಾನಿಗಳು ನಿಜಕ್ಕೂ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಒಟ್ಟಿನಲ್ಲಿ ಹೇಳುವುದಾದರೆ, ಕನ್ನಡದ ಈ ಹುಡುಗ ಕೆಎಲ್ ರಾಹುಲ್ ಅವರನ್ನು ಆರ್‌ಸಿಬಿ ತಂಡದ ವಿರುದ್ಧ, ಅದರಲ್ಲೂ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡುವುದನ್ನು ನೋಡುವುದು ತುಸು ಕಷ್ಟದ ವಿಚಾರವೇ.
ಈ ಆವೃತ್ತಿಯಲ್ಲಿ ಈ ಹಿಂದಿನ ಪಂದ್ಯಗಳಲ್ಲಿ ಬೆಂಗಳೂರಿನ ಆರಂಭಿಕ ಬೌಲರ್‌ಗಳಾದ ಜೋಶ್ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ ಕುಮಾರ್ ಅವರು ಪವರ್ ಪ್ಲೇ ಅವಧಿಯಲ್ಲಿ ಎದುರಾಳಿಗಳನ್ನು ನಿಯಂತ್ರಿಸಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ಚೆನ್ನಾಗಿ ಬಲ್ಲ ಡೆಲ್ಲಿ ತಂಡದ ಕೀಪರ್–ಬ್ಯಾಟರ್ ಕೆ.ಎಲ್.ರಾಹುಲ್ ಅವರನ್ನು ಕಟ್ಟಿಹಾಕುವ ಸವಾಲು ಈ ಬೌಲರ್‌ಗಳ ಮುಂದಿದೆ.
ಪಂದ್ಯ ಆರಂಭ: ರಾತ್ರಿ 7.30, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೊಸ್ಟಾರ್ ಆ್ಯಪ್.