ಸಿದ್ದರಾಮಯ್ಯನವರ ಸರಕಾರ ಉರುಳುವುದು ನಿಶ್ಚಯ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ವಿಶ್ವಾಸದಿಂದ ನುಡಿದರು.
ಇಂದು ಉಡುಪಿಯಲ್ಲಿ ನಡೆದ ಜನಾಕ್ರೋಶ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಿರುಗಾಳಿ ಬೀಸುವುದು, ತೆರೆಯೆದ್ದು ಕುಣಿಯುವುದು, ಹರಿಗೋಲು ಮುಳುಗುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಸರಕಾರದ ವಿರುದ್ಧ ಜನರು ಕರ್ನಾಟಕದಾದ್ಯಂತ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಜನಾಂದೋಲನಗಳೂ ನಡೆಯುತ್ತಿವೆ ಎಂದು ಗಮನ ಸೆಳೆದರು.

ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡಿ, 1 ಲಕ್ಷ ಕೋಟಿಯಾದರೂ ಕೊಡಿ. ನಮ್ಮ ಅಭ್ಯಂತರ ಇಲ್ಲ. ಹಿಂದುಳಿದ ಸಮಾಜಗಳ, ಪರಿಶಿಷ್ಟ ಜಾತಿಗಳ ಪಂಗಡಗಳ ಮಕ್ಕಳು ಹಾಸ್ಟೆಲ್‌ನಲ್ಲಿ ಸೀಟು ಸಿಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುವ ಸ್ಥಿತಿ ಬಂದಿದೆಯಲ್ಲವೇ? ಹಾಗಿದ್ದರೆ ಶೇ 50ಕ್ಕೂ ಹೆಚ್ಚಿರುವ ಈ ಜನಾಂಗಗಳಿಗೆ ನೀವು ಕೊಟ್ಟ ನ್ಯಾಯವಾದರೂ ಏನು ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.
ಪಾಕಿಸ್ತಾನ ಗೆಲ್ಲಲಿ ಎಂದು ವಿಧಾನಸೌಧದಲ್ಲಿ ಘೋಷಣೆ ಕೂಗಲು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರಾ ಎಂಬ ಪ್ರಶ್ನೆಗೆ ರಾಷ್ಟ್ರವಾದಿ ಕಾಂಗ್ರೆಸ್ಸಿಗರು ಎಂದು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.