ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಸದಸ್ಯರ ನೇಮಕಕ್ಕೆ ರಾಜ್ಯ ಸರ್ಕಾರ ನೇಮಿಸಿರುವ ಸತ್ಯಶೋಧನಾ ಸಮಿತಿ ರಚನೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
“ಅನರ್ಹ ವ್ಯಕ್ತಿಗಳು ಕೆಪಿಎಸ್‌ಸಿ ಸದಸ್ಯರಾಗಿ ನೇಮಕವಾದಲ್ಲಿ ವಿವಿಧ ಜ್ಞಾನದ ಶಾಖೆಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರುವ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲು ಹೇಗೆ ಸಾಧ್ಯ” ಎಂದು ಹೈಕೋರ್ಟ್ ಪ್ರಶ್ನಿಸಿದೆ.
ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು ಪೂರೈಕೆ ವಿಭಾಗದ ಸಹಾಯಕ ಎಂಜಿನಿಯರ್‌ಗಳ ನೇಮಕದಲ್ಲಿ ಅಕ್ರಮ ನಡೆಸಿ ಆಯ್ಕೆಯಾದ ಕಳಂಕಿತ ಸಹಾಯಕ ಎಂಜಿನಿಯರ್‌ಗಳ ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್‌ಸಿ ಮಾಡಿರುವ ಶಿಫಾರಸ್ಸಿಗೆ ತಡೆ ನೀಡಲು ನಿರಾಕರಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣದ (ಕೆಎಟಿ) ಕ್ರಮ ಪ್ರಶ್ನಿಸಿ, ಎಂಜಿನಿಯರ್‌ಗಳಾದ ವಿಶ್ವಾಸ್ ಮತ್ತಿತರರು ಹೈಕೋರ್ಟ್‌ಗೆ ಎರಡು ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಸರ್ಕಾರದ ಕ್ರಮಕ್ಕೆ ಸಿಟ್ಟಾಗಿದೆ.
ತಮಗಿಂತಲೂ ಕೆಳಮಟ್ಟದವರ ಮುಂದೆ ಸಂದರ್ಶನಕ್ಕೆ ಹಾಜರಾಗುವಂತೆ ಮಾಡಿದರೆ ಉನ್ನತ ವರ್ಗವು ಯಾವ ರೀತಿಯ ಅಭಿಪ್ರಾಯಕ್ಕೆ ಬರುತ್ತದೆ ಎಂಬುದನ್ನು ಹೆಚ್ಚಾಗಿ ವಿವರಿಸುವ ಅಗತ್ಯವಿಲ್ಲ ಎಂದು ಪೀಠ ಸ್ಪಷ್ಟವಾಗಿ ಹೇಳಿದೆ.
ಸರ್ಕಾರದ ಪರವಾಗಿ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ”ಕೆಪಿಎಸ್‌ಸಿ ಸದಸ್ಯರ ಆಯ್ಕೆ ಮತ್ತು ನೇಮಕಾತಿಗೆ ನೆರವು ನೀಡಲು ಶೋಧನಾ ಸಮಿತಿಯ ರಚನೆಗೆ ತುರ್ತು ಆಧಾರದ ಮೇಲೆ ಕೆಲವು ಪ್ರಕ್ರಿಯೆ ರೂಪಿಸಲಾಗುತ್ತಿದೆ. ಆ ಕುರಿತ ಬೆಳವಣಿಗೆಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯದ ಮುಂದೆ ಇಡಲಾಗುವುದು” ಎಂದು ಭರವಸೆ ನೀಡಿದರು.
ಇದಕ್ಕೆ ಪೀಠ, ”ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡಿದೆ. ಸದಸ್ಯರ ನೇಮಕಾತಿಗೆ ಅರ್ಹರ ಹೆಸರು ಶಿಫಾರಸು ಮಾಡಲು ಶೋಧನಾ ಸಮಿತಿಯನ್ನು ರಚಿಸಲು ಸರ್ಕಾರ ಆಸಕ್ತಿ ತೋರಿಸುತ್ತಿರುವುದು ಶ್ಲಾಘನೀಯ. ಆದರೆ, ಈ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಮಾಡಬೇಕಿದೆ. ಈ ಭರವಸೆಯನ್ನು ನ್ಯಾಯಾಲಯ ಪ್ರಶಂಸಿಸುತ್ತದೆ” ಎಂದು ಪೀಠ ತಿಳಿಸಿದೆ.
ಕೆಪಿಎಸ್‌ಸಿ ಖ್ಯಾತಿ ಕುಸಿದಿದೆ
ನೇಮಕಾತಿ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ವಿಶೇಷವಾಗಿ ಸರ್ಕಾರದ ಸಚಿವಾಲಯ ಮಟ್ಟದಲ್ಲಿ ನಡೆದಿರುವ ಹಲವು ಲೋಪಗಳಿದ್ದು, ಅಮಾಯಕ ಅಭ್ಯರ್ಥಿಗಳು ಮತ್ತು ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಯಾವುದೇ ತಪ್ಪಿತಸ್ಥ ವ್ಯಕ್ತಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಹಾನಿಗೊಳಗಾಗುವುದಿಲ್ಲ ಎಂದ ಬೇಸರ ವ್ಯಕ್ತಪಡಿಸಿದ ಪೀಠ, ಕೆಪಿಎಸ್‌ಸಿ ಅಂತಹ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸಾರ್ವಜನಿಕರಿಗೆ ನಂಬಿಕೆ ಕುಸಿದಿದೆ. ಕೆಪಿಎಸ್‌ಸಿಯು ಸಾರ್ವಜನಿಕ ಉದ್ಯೋಗದ ಆಕಾಂಕ್ಷಿಗಳ ವಿಶ್ವಾಸ ಗಳಿಸಬೇಕಿದೆ. ಕಳೆದ ಎರಡು ದಶಕಗಳಲ್ಲಿ ನಡೆದ ನೇಮಕಾತಿಯಲ್ಲಿ ಕೆಪಿಎಸ್‌ಸಿಗೆ ಅಪಖ್ಯಾತಿ ಗಳಿಸಿದೆ. ಅದರ ಘನತೆ ಕೆಳಮಟ್ಟಕ್ಕೆ ಇಳಿದಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.