ತುಂಗಭದ್ರಾ ಎಡದಂಡೆ ಕಾಲುವೆಗೆ ಏಪ್ರಿಲ್ 20 ರವರೆಗೆ ನೀರು ಬಿಡಲು ಒತ್ತಾಯಿಸಿ ಹಾಗೂ ರೈತರ ಹಿತಾಸಕ್ತಿ ಕಡೆಗಣಿಸಿದ ಸಚಿವ ಶಿವರಾಜ್ ಎಸ್ ತಂಗಡಗಿಯವರ ರಾಜೀನಾಮೆಗೆ ಒತ್ತಾಯಿಸಿ ಕೊಪ್ಪಳದ ಕಾರಟಗಿಯಲ್ಲಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಪ್ರತಿಭಟನೆ ನಡೆಸಿತು.
“2024ರ ಆಗಸ್ಟ್‌ನಲ್ಲಿ 100 ಟಿಎಂಸಿ ನೀರು ತುಂಬಿದ ತುಂಗಭದ್ರಾ ಜಲಾಶಯದಿಂದ ರಾಜ್ಯ ಸರ್ಕಾರ ರೈತರ ಎರಡು ಬೆಳೆಗಳಿಗೆ ಸಮರ್ಪಕ ನೀರು ಒದಗಿಸಬಹುದಾಗಿತ್ತು. ಆದರೆ, ಹಿಂಗಾರು ಹಂಗಾಮಿನ ಎರಡನೇ ಬೇಸಿಗೆ ಬೆಳೆಗೆ ಎಡದಂಡೆ ಭಾಗದ ಪಾಲಿನ ನೀರು ಇದ್ದರೂ ನೀರು ಹರಿಸಲು ಅಧಿಕಾರಿಗಳು ಮತ್ತು ಸಚಿವರು ನಿರ್ಲಕ್ಷ್ಯ ಧೋರಣೆವಹಿಸಿದರು” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
“ರಾಜಕಾರಣಿಗಳು ಮತ್ತು ಅಧಿಕಾರಿಗಳು ನೀರನ್ನು ಜಲಾಶಯದ ಮೇಲ್ಭಾಗದ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಜಲಾಶಯದ ನೀರು ಹಂಚಿಕೆಯಲ್ಲಿ ಆಗುತ್ತಿರುವ ಅಕ್ರಮಗಳ ಕುರಿತು ವಿಶೇಷ ತನಿಖಾ ತಂಡವನ್ನು ರಚಿಸಿ ಎಡದಂಡೆ ಭಾಗ ಹಾಗೂ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಮರ್ಪಕ ನೀರು ನೀಡಲು ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.

“ಭದ್ರಾ ಜಲಾಶಯದ ಎಡದಂಡೆ ಭಾಗದಲ್ಲಿ ಮುನಿರಾಬಾದ್‌ನಿಂದ ರಾಯಚೂರು ವರೆಗೆ ಸುಮಾರು 100ಕ್ಕೂ ಹೆಚ್ಚು ಉಪ ಕಾಲುವೆಗಳು ಇದ್ದು, ಪ್ರತಿಯೊಂದು ಉಪ ಕಾಲುವೆಗಳ ಕೊನೆ ಭಾಗದ ರೈತರಿಗೆ ಬೆಳೆ ಕೈಗೆ ಬರಬೇಕಾದರೆ ಇನ್ನೂ 15 ರಿಂದ 20 ದಿನಗಳು ಬೇಕಾಗುತ್ತದೆ. ಆದರೆ, ರಾಜ್ಯ ಸರಕಾರ 123ನೇ ನೀರಾವರಿ ಸಲಹಾ ಸಮಿತಿಯಲ್ಲಿ ಏಪ್ರಿಲ್ 10ವರೆಗೆ ನೀರು ಬಿಡಲು ತೀರ್ಮಾನಿಸಿ ಆದೇಶ ಹೊರಡಿಸಲಾಗಿದೆ. ಇದು ರೈತರ ಬದುಕಿಗೆ ಬರೆ ಹಾಕಿದಂತೆ. ಏಪ್ರಿಲ್ 10 ಕ್ಕೆ ನೀರು ನಿಲ್ಲಿಸಿದರೆ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಹಾಗಾಗಿ ಏಪ್ರಿಲ್ 20ರವರೆಗೆ ನೀರು ಬಿಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಕೊಪ್ಪಳ | 42ನೇ ವಯಸ್ಸಿನಲ್ಲಿ ಮಗಳೊಂದಿಗೆ ಪಿಯು ಪರೀಕ್ಷೆ ಬರೆದು ಪಾಸಾದ ತಾಯಿ
ನಗರದ ಕನಕದಾಸ ವೃತ್ತದಲ್ಲಿ ಪ್ರತಿಭಟನಾನಿರತ ರೈತರನ್ನು ಪೊಲೀಸರು ತಡೆಯಲು ಮುಂದಾದಾಗ.. ಕ್ರಿಮಿನಾಶಕ ಸೇವಿಸಲು ಕೆಲ ರೈತರು ಮುಂದಾಗಿದ್ದು, ಕೆಲವರನ್ನು ಪೊಲೀಸರು ಬಂಧಿಸಿದರು. ಇಬ್ಬರ ನಡುವಿನ ಮಾತಿನ ಜಟಾಪಟಿಯಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿ ಬಳಿಕ ತಿಳಿಯಾಯಿತು.