ಎರಡು ವಿಭಿನ್ನ ಕೋಮಿನ ಜೋಡಿಗಳನ್ನು ಬೆದರಿಸಿ, ಹಲ್ಲೆಗೈದು, ದಾಂಧಲೆ ನಡೆಸಿ ಪುಂಡರ ಗುಂಪೊಂದು ಅನೈತಿಕ ಪೊಲೀಸ್‌ಗಿರಿ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಪಾರ್ಕ್‌ವೊಂದರ ಹೊರಗೆ ಜೋಡಿಯು ಬೈಕ್ ಮೇಲೆ ಕುಳಿತಿದ್ದಾಗ, ಅಲ್ಲಿಗೆ ಬಂದ ಪುಂಡರ ಗುಂಪೊಂದು ದಾಂಧಲೆ ನಡೆಸಿದೆ. ಜೋಡಿಗೆ ಕಿರುಕುಳ ನೀಡಿದೆ. ಘಟನೆಯನ್ನು ಸಾರ್ವಜನಿಕರೊಬ್ಬರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ; ಕಿತ್ತಳೆ ಬಣ್ಣದ ಟೀ ಶರ್ಟ್ ಧರಿಸಿದ್ದ ಯುವಕ ಮತ್ತು ಬುರ್ಖಾ ಧರಿಸಿದ್ದ ಯುವತಿಯು ಕೆಲವು ಯುವಕರೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. ಪುಂಡರ ಗುಂಪಿನಲ್ಲಿದ್ದ ಒರ್ವ ಯುವತಿಯ ವೀಡಿಯೊವನ್ನು ಸೆರೆಹಿಡಿಯುತ್ತಿರುವುದು ಕೂಡ ಸರೆಯಾಗಿದೆ.
ತಾನು ಇರುವ ಸ್ಥಳದ ಬಗ್ಗೆ ತನ್ನ ಪೋಷಕರಿಗೆ ಮಾಹಿತಿ ಇದೆಯೇ ಎಂದು ಯುವತಿಯನ್ನು ಪುಂಡರ ಗುಂಪಿನಲ್ಲಿದ್ದವರು ಪ್ರಶ್ನಿಸಿದ್ದಾರೆ. ಬುರ್ಖಾ ಧರಿಸಿಕೊಂಡು ಪುರುಷನೊಂದಿಗೆ ಕುಳಿತಿರುವುದಕ್ಕೆ ನಿಮಗೆ ನಾಚಿಕೆಯಾಗುತ್ತಿಲ್ಲವೇ ಎಂದು ನಿಂದಿಸಿದ್ದಾರೆ. ಅಲ್ಲದೆ, ಯುವಕನನ್ನು ಬೇರೆ ಧರ್ಮದ ಯುವತಿಯೊಂದಿಗೆ ಯಾಕೆ ಸುತ್ತಾಡುತ್ತಿದ್ದೀಯಾ ಎಂದೂ ಪ್ರಶ್ನಿಸಿದ್ದಾರೆ. ಬಳಿಕ, ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ.
ಘಟನೆ ಬಳಿಕ, ಯುವತಿಯು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಲ್ಲಿ ಓರ್ವ ಅಪ್ರಾಪ್ತನೂ ಇದ್ದಾನೆ ಎಂದು ತಿಳಿದುಬಂದಿದೆ.
“ಜೋಡಿ ಸ್ಕೂಟರ್‌ನಲ್ಲಿ ಕುಳಿತಿದ್ದಾಗ ಅವರನ್ನು ಐದು ಮಂದಿ ಪ್ರಶ್ನಿಸಿದರು. ಹುಡುಗಿ ಬುರ್ಖಾ ಧರಿಸಿದ್ದಳು. ಯುವತಿಯಿಂದ ನಮಗೆ ದೂರು ಬಂದಿದ್ದು, ಅದರ ಆಧಾರದ ಮೇಲೆ ನಾವು ಪ್ರಕರಣ ದಾಖಲಿಸಿದ್ದೇವೆ…. ನಾವು ತನಿಖೆ ಮುಂದುವರಿಸಿದ್ದೇವೆ” ಎಂದು ಉಪ ಪೊಲೀಸ್ ಆಯುಕ್ತ ಗಿರೀಶ್ ಹೇಳಿದರು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ, “ರಾಜ್ಯದಲ್ಲಿ ಯಾವುದೇ ನೈತಿಕ ಪೊಲೀಸ್‌ಗಿರಿಯನ್ನು ಸಹಿಸುವುದಿಲ್ಲ. ಇದು ಬಿಹಾರ ಅಥವಾ ಉತ್ತರ ಪ್ರದೇಶ ಅಥವಾ ಮಧ್ಯಪ್ರದೇಶ ಅಲ್ಲ; ಕರ್ನಾಟಕ ಪ್ರಗತಿಪರ ರಾಜ್ಯ” ಎಂದು ಅವರು ಹೇಳಿದರು.