- ಪಂಜಾಬಿಗರ ಆಕ್ರೋಶಕ್ಕೆ ಕಾರಣವಾದ ವಿಶ್ವಕಪ್ ವೇಳಾಪಟ್ಟಿ
- ಲೀಗ್ ಪಂದ್ಯಾವಳಿಯ ಅವಕಾಶವೂ ಪಡೆಯದ ಮೊಹಾಲಿ ಕ್ರೀಡಾಂಗಣ
ಭಾರತದಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್ ಕ್ರಿಕೆಟ್‌ನ ಸಂಪೂರ್ಣ ಪಂದ್ಯಗಳನ್ನು ಐಸಿಸಿ ಮಂಗಳವಾರ ಬಿಡುಗಡೆ ಮಾಡಿದೆ. ಆದರೆ, ಆತಿಥ್ಯ ವಹಿಸುವ ನಗರಗಳ ಪಟ್ಟಿಯಿಂದ ‘ಮೊಹಾಲಿ ಕ್ರೀಡಾಂಗಣ’ವನ್ನು ಹೊರಗಿಟ್ಟಿರುವುದು ಪಂಜಾಬಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಐಸಿಸಿ ಕ್ರಿಕೆಟ್ ವಿಶ್ವಕಪ್-2023 ಪಟ್ಟಿಯಿಂದ ಮೊಹಾಲಿಯನ್ನು ಹೊರಗಿಟ್ಟಿರುವುದನ್ನು ಖಂಡಿಸಿರುವ ಪಂಜಾಬ್ ಕ್ರೀಡಾ ಸಚಿವ ಗುರ್ಮೀತ್ ಸಿಂಗ್ ಮೀಟ್ ಹೇಯರ್, ” ವಿಶ್ವಕಪ್ ಪಟ್ಟಿಯಿಂದ ಮೊಹಾಲಿಯನ್ನು ಹೊರಗಿಟ್ಟಿರುವುದಕ್ಕೆ ರಾಜಕೀಯ ಹಸ್ತಕ್ಷೇಪವೇ ಕಾರಣ. ಇದು ಸಲ್ಲದು. ಈ ಬಗ್ಗೆ ಪಂಜಾಬ್ ಸರ್ಕಾರವು ಬಿಸಿಸಿಐ ಜೊತೆ ಮಾತನಾಡಲಿದೆ” ಎಂದು ಹೇಳಿದ್ದಾರೆ.
‘1996 ಮತ್ತು 2011ರಲ್ಲಿ ಮೊಹಾಲಿಯಲ್ಲಿ ವಿಶ್ವಕಪ್ ಸೆಮಿಫೈನಲ್ ಪಂದ್ಯಗಳು ನಡೆದಿದ್ದವು. ಆದರೆ ಈ ಬಾರಿ ಪಂಜಾಬ್‌ಗೆ ಒಂದೇ ಒಂದು ಲೀಗ್ ಪಂದ್ಯವನ್ನಾಡಿಸಲು ಅವಕಾಶ ನೀಡಲಾಗಿಲ್ಲ. ಉದ್ಘಾಟನಾ ಹಾಗೂ ಫೈನಲ್ ಪಂದ್ಯಗಳ ಹೊರತಾಗಿಯೂ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಪಂದ್ಯಕ್ಕೂ ಆತಿಥ್ಯ ನೀಡಲಾಗಿದೆ. ಇದರಲ್ಲಿ ರಾಜಕೀಯ ಇರುವುದು ಸ್ಪಷ್ಟ’ ಎಂದು ಆರೋಪಿಸಿದ್ದಾರೆ.
ಮೊಹಾಲಿಯ ಪಿಸಿಎ ಸ್ಟೇಡಿಯಂ ಭಾರತದ ಪ್ರಮುಖ ಐದು ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಮಾತ್ರವಲ್ಲದೆ ವಿಶ್ವದ ಪ್ರಮುಖ ಕ್ರೀಡಾಂಗಣಗಳ ಪಟ್ಟಿಯಲ್ಲಿಯೂ ಇದೆ ಎಂದು ಉಲ್ಲೇಖಿಸಿದ ಪಂಜಾಬ್ ಕ್ರೀಡಾ ಸಚಿವ, ಮೊಹಾಲಿ ಕ್ರಿಕೆಟ್ ಅಭಿಮಾನಿಗಳ ಮೊದಲ ಆಯ್ಕೆ. ಪಂಜಾಬ್ ವಿರುದ್ಧದ ಈ ತಾರತಮ್ಯವನ್ನು ನಾವು ಸಹಿಸುವುದಿಲ್ಲ. ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರ ಈ ತಾರತಮ್ಯದ ವಿಷಯವನ್ನು ಬಿಸಿಸಿಐ ಜೊತೆಗೆ ಪ್ರಸ್ತಾಪಿಸಲಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೋದಿಯವರನ್ನು ಪ್ರಶ್ನಿಸಿದ್ದ ಪತ್ರಕರ್ತೆಗೆ ಹಿಂದುತ್ವವಾದಿಗಳಿಂದ ಕಿರುಕುಳ : ವೈಟ್‌ಹೌಸ್ ಖಂಡನೆ
ಭಾರತದಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್‌ನ ಸಂಪೂರ್ಣ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ಐಸಿಸಿ ಮಂಗಳವಾರ ಬಿಡುಗಡೆ ಮಾಡಿದ್ದು, ಅಕ್ಟೋಬರ್ 5ರಂದು ಚಾಲನೆಗೊಳ್ಳಲಿದೆ. ವಿಶ್ವಕಪ್ ಟೂರ್ನಿಯು ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿದೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮೊದಲ ಪಂದ್ಯವನ್ನು ಆಡಲಿದೆ. ಭಾರತವು ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ. ಭಾರತ-ಪಾಕ್ ನಡುವಿನ ಹೈ ವೋಲ್ಟೇಜ್ ಪಂದ್ಯ ಅ.15ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.