ದೇಶದ ಸರ್ವೋಚ್ಚ ನ್ಯಾಯಾಲಯವು ಈ ಮಹತ್ತರ ತೀರ್ಪಿನ ಮೂಲಕ ರಾಜ್ಯಪಾಲರ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುವ ಮೋದಿ ಸರ್ಕಾರದ ಕುತಂತ್ರಕ್ಕೆ ಕಡಿವಾಣ ಹಾಕಲಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಭಾರತದ ಒಕ್ಕೂಟ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಧ್ವಂಸ ಮಾಡಲು ಹೊರಟಿರುವ ಅಧಿಕಾರಿಶಾಹಿಗಳಿಗೆ ಸರ್ವೋಚ್ಚ ನ್ಯಾಯಾಲಯದ ಈ ಅಭೂತಪೂರ್ವ ತೀರ್ಪು ಒಂದು ಭಾರೀ ಹೊಡೆತವಾಗಿದೆ.
“ಸಂವಿಧಾನ ಎಷ್ಟೇ ಒಳ್ಳೆಯದಾಗಿದ್ದರೂ, ಅದನ್ನು ಜಾರಿಗೆ ತರುವವರು ಒಳ್ಳೆಯವರಲ್ಲದಿದ್ದರೆ, ಅಂತಹ ಸಂವಿಧಾನವು ಕೆಟ್ಟದ್ದೆಂದು ಸಾಬೀತಾಗುವುದು” ಎಂಬ ನುಡಿಮುತ್ತುಗಳನ್ನು ನೀಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ವಿರಚಿತ ಸಂವಿಧಾನವನ್ನೇ ಹಾಳು ಮಾಡಲು ತೊಡಗಿದ್ದ ತಮಿಳುನಾಡಿನ ರಾಜ್ಯಪಾಲರುಗಳಾದ ಬನ್ವಾರಿಲಾಲ್ ಪುರೋಹಿತ್ ಹಾಗೂ ಆರ್. ಎನ್. ರವಿ ಅವರ ಸತತ ಐದು ವರ್ಷಕ್ಕೂ ಹೆಚ್ಚಿನ ದುರಾಡಳಿತವನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನ ಮೂಲಕ ಭಂಗಗೊಳಿಸಿದೆ.
ತಮಿಳುನಾಡಿನ ರಾಜ್ಯ ಶಾಸಕಾಂಗ ಸಭೆಯು ಸುಮಾರು 10 ಕರಡು ಮಸೂದೆಗಳನ್ನು ಜಾರಿಗೊಳಿಸಿ ರಾಜ್ಯದ ರಾಜ್ಯಪಾಲರ ಅನುಮೋದನೆಗೆ ಸಲ್ಲಿಸಿದ್ದು ಆ ಪಟ್ಟಿಯಲ್ಲಿನ ಮೊದಲ ಮಸೂದೆಯು ಜನವರಿ 2020ರಲ್ಲಿಯೇ ರಾಜ್ಯಪಾಲರ ಅನುಮೋದನೆಗೆ ಸಲ್ಲಿಸಲಾಗಿ ಹಲವಾರು ವರ್ಷಗಳಾದರೂ ಸಹ ಕರಡು ಮಸೂದೆಗಳನ್ನು ಅನುಮೋದಿಸದೆ ತಮ್ಮ ಕಚೇರಿಯಿಂದ ರಾಜ್ಯದ ಶಾಸಕಾಂಗ ಸಭೆಗೆ, ನಂತರ ರಾಷ್ಟ್ರಪತಿಗಳ ಕಚೇರಿಗೆ ಹೊತ್ತುಹಾಕುತ್ತ ರಾಜ್ಯದ ಸುಗಮ ಆಡಳಿತಕ್ಕೆ ಧಕ್ಕೆ ತಂದಿಡಲಾಯಿತು. ರಾಜ್ಯಪಾಲರ ಈ ವಿಕೃತ ಕಾರ್ಯದ ವಿರುದ್ಧ ಸಿಡಿದೆದ್ದ ತಮಿಳುನಾಡಿನ ಸರ್ಕಾರವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತು.
ವಾದಿ-ಪ್ರತಿವಾದಿಗಳ ಸುಧೀರ್ಘ ವಿಚಾರಣೆಯ ನಂತರ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠದಲ್ಲಿ ಆಸೀನರಾಗಿರುವ ನ್ಯಾಯಮೂರ್ತಿ ಜೆ. ಬಿ. ಪರ್ಡಿವಾಲ ಹಾಗೂ ಆರ್. ಮಹದೇವನ್‌ರವರು ರಾಜ್ಯಪಾಲರ ವಿಳಂಬ ನಡೆಯನ್ನು “ಅಕ್ರಮ ಹಾಗೂ ತಪ್ಪಿನಿಂದ ಕೂಡಿದ್ದು” ಎಂದು ಏಪ್ರಿಲ್ 8ರ ತಮ್ಮ ತೀರ್ಪಿನ ಮೂಲಕ ಸಾರಿದ್ದಾರೆ.
5 ವರ್ಷಗಳಾದರೂ ತಮ್ಮ ಮುಂದೆ ಮಂಡಿಸಲಾದ ಕರಡು ಮಸೂದೆಗಳ ಮೇಲೆ ಬಹಳಷ್ಟು ಕಾಲ ಯಾವುದೇ ಕ್ರಮ ತೆಗೆದುಕೊಳ್ಳದೆ ಹಾಗೆಯೇ ಸುಮ್ಮನೆ ಇಟ್ಟುಕೊಂಡಿದ್ದು, ಮರುಪರಿಶೀಲನೆಗಾಗಿ ರಾಜ್ಯದ ಶಾಸಕಾಂಗ ಸಭೆಗೆ ಹಿಂತಿರುಗಿಸಿ, ಶಾಸಕಾಂಗವು ಮರು-ಜಾರಿಗೊಳಿಸಿದ ನಂತರವೂ ಆ ಕರಡು ಮಸೂದೆಗಳನ್ನು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಿರುವ ರಾಜ್ಯಪಾಲರ ಈ ಕ್ರಮವು ನಂಬಿಕೆಗೆ ಅರ್ಹವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ. ಪಂಜಾಬಿನ ರಾಜ್ಯಪಾಲರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ ತಮಿಳುನಾಡಿನ ರಾಜ್ಯಪಾಲರು ರಾಷ್ಟ್ರಪತಿಗಳ ಒಪ್ಪಿಗೆಗೆ ಕರಡು ಮಸೂದೆಗಳನ್ನು ಕಳುಹಿಸಿರುವ ಕ್ರಮವು ನಂಬಿಕೆಗೆ ಅರ್ಹವಿಲ್ಲ ಎಂದು ಅಭಿಪ್ರಾಯಪಟ್ಟಿರುತ್ತದೆ.
ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ಕ್ರಮ ವಹಿಸಬೇಕಾಗಿರುವ ರಾಜ್ಯಪಾಲರಿಗೆ “ಸಂಪೂರ್ಣ ನಿರಾಕಾರಣಾಧಿಕಾರ ಅಥವಾ ವಿಟೋ” ಮಾಡುವ ಅಧಿಕಾರವಿಲ್ಲವೆಂಬ ಕಟ್ಟುನಿಟ್ಟಿನ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಜಾರಿ ಮಾಡಿದೆ. ನ್ಯಾಯಮೂರ್ತಿ ಜೆ. ಬಿ. ಪರ್ಡಿವಾಲರವರು ತಮ್ಮ ತೀರ್ಪಿನಲ್ಲಿ ಹೀಗೆ ಹೇಳಲಾಗಿದೆ, “ಈ ವಿಷಯದಲ್ಲಿ ಸಾಮಾನ್ಯ ನಿಯಮವೇನೆಂದರೆ, ಕರಡು ಮಸೂದೆಯನ್ನು ರಾಜ್ಯಪಾಲರು ಮರು-ಪರಿಶೀಲನೆಗೆ ಹಿಂದಿರುಗಿಸಲಾಗಿದ್ದ ವೇಳೆ ಶಾಸಕಾಂಗ ಸಭೆಯು ಅಂತಹ ಮಸೂದೆಯನ್ನು ಮರು-ಜಾರಿಗೊಳಿಸಿ ತದನಂತರ ಸರ್ಕಾರವು ಆ ಮಸೂದೆಯನ್ನು ರಾಜ್ಯಪಾಲರ ಮುಂದೆ ಮರು-ಮಂಡಿಸಲಾಗಿದ್ದ ಪಕ್ಷದಲ್ಲಿ ಅದನ್ನು ರಾಷ್ಟ್ರಪತಿಗಳ ಸಮ್ಮತಿಗೆ ರಾಜ್ಯಪಾಲರು ಕಾಯ್ದಿರಿಸುವ ಅವಕಾಶವಿಲ್ಲ. ರಾಜ್ಯಪಾಲರು ಮರುಪರಿಶೀಲನೆಗೆ ಹಿಂದಿರುಗಿಸಲಾಗಿದ್ದ ಪಕ್ಷದಲ್ಲಿ ಶಾಸಕಾಂಗ ಸಭೆಯು ಮರು-ಜಾರಿಗೊಳಿಸಿದ ಮಸೂದೆಯು ವಿಭಿನ್ನವಾಗಿದ್ದ ಪಕ್ಷದಲ್ಲಿ ಈ ಮೇಲಿನ ನಿಯಮ ಅಳವಡಿಸುವುದಿಲ್ಲ”.

ಸಂವಿಧಾನದ ಅನುಚ್ಛೇಧ 200ರ ಅಡಿಯಲ್ಲಿ ರಾಜ್ಯಪಾಲರು ಕೆಳಗಿನ ಮೂರು ಕ್ರಮಗಳಲ್ಲಿ ಒಂದು ಕ್ರಮವನ್ನು ತೆಗೆದುಕೊಳ್ಳಬಹುದು, ಅಂದರೆ – ಕರಡು ಮಸೂದೆಗೆ ಸಮ್ಮತಿ ನೀಡುವುದು, ಕರಡು ಮಸೂದೆಯನ್ನು ತಡೆ ಹಿಡಿದು ಮರುಪರಿಶೀಲನೆಗಾಗಿ ಹಿಂದಿರುಗಿಸುವುದು ಅಥವಾ ರಾಷ್ಟ್ರಪತಿಗಳ ಅನುಮೋದನೆಗೆ ಕಾಯ್ದಿರಿಸುವುದು. ಸಾಮಾನ್ಯ ನಿಯಮದಂತೆ, ರಾಜ್ಯಪಾಲರು 200ನೇ ವಿಧಿಯ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವಾಗ ಮಂತ್ರಿ ಮಂಡಳಿಯ ಸಹಾಯ ಮತ್ತು ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸರ್ವೋಚ್ಚ ನ್ಯಾಯಾಲಯವು ಈ ವಿಷಯದಲ್ಲಿ ಸಮಯರೇಖೆಗಳನ್ನು ನಿಗದಿಪಡಿಸುತ್ತ ಹೀಗೆ ಅಭಿಪ್ರಾಯಪಟ್ಟಿದೆ, “200ನೇ ವಿಧಿಯ ಸಾಂವಿಧಾನಿಕ ಮಹತ್ವ ಮತ್ತು ದೇಶದ ಫೆಡರಲ್ ರಾಜಕೀಯದಲ್ಲಿ ಅದು ವಹಿಸುವ ಪಾತ್ರವನ್ನು ಗಮನದಲ್ಲಿಟ್ಟುಕೊಂಡು, ಈ ಕೆಳಗಿನ ಸಮಯಸೂಚಿಗಳನ್ನು ಸೂಚಿಸಲಾಗುತ್ತಿದೆ. ಸಮಯಸೂಚಿಗಳನ್ನು ಪಾಲಿಸಲು ವಿಫಲವಾದರೆ ರಾಜ್ಯಪಾಲರ ಕ್ರಮವು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ.
- ರಾಜ್ಯ ಸಚಿವ ಸಂಪುಟದ ಸಹಾಯ ಮತ್ತು ಸಲಹೆಯ ಮೇರೆಗೆ ರಾಷ್ಟ್ರಪತಿಗಳ ಪರಿಗಣನೆಗೆ ಮಸೂದೆಯ ಒಪ್ಪಿಗೆಯನ್ನು ತಡೆಹಿಡಿಯುವ ಅಥವಾ ಕಾಯ್ದಿರಿಸುವ ಸಂದರ್ಭದಲ್ಲಿ, ರಾಜ್ಯಪಾಲರು ಗರಿಷ್ಠ 1 ತಿಂಗಳ ಅವಧಿಗೆ ಒಳಪಟ್ಟು ಅಂತಹ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳುವ ನಿರೀಕ್ಷೆಯಿದೆ.
- ರಾಜ್ಯ ಸಚಿವ ಸಂಪುಟದ ಸಲಹೆಗೆ ವಿರುದ್ಧವಾಗಿ ಒಪ್ಪಿಗೆಯನ್ನು ತಡೆಹಿಡಿಯುವ ಸಂದರ್ಭದಲ್ಲಿ, ರಾಜ್ಯಪಾಲರು ಗರಿಷ್ಠ 3 ತಿಂಗಳ ಅವಧಿಯೊಳಗೆ ಮಸೂದೆಯನ್ನು ಸಂದೇಶದೊಂದಿಗೆ ಹಿಂತಿರುಗಿಸಬೇಕು.
- ರಾಜ್ಯ ಸಚಿವ ಸಂಪುಟದ ಸಲಹೆಗೆ ವಿರುದ್ಧವಾಗಿ ರಾಷ್ಟ್ರಪತಿಗಳ ಪರಿಗಣನೆಗೆ ಮಸೂದೆಗಳನ್ನು ಕಾಯ್ದಿರಿಸುವ ಸಂದರ್ಭದಲ್ಲಿ, ರಾಜ್ಯಪಾಲರು ಗರಿಷ್ಠ 3 ತಿಂಗಳ ಅವಧಿಯೊಳಗೆ ಅಂತಹ ಕಾಯ್ದಿರಿಸುವಿಕೆಯನ್ನು ಮಾಡಬೇಕು ಅಥವಾ
- ಮೊದಲ ನಿಬಂಧನೆಯ ಪ್ರಕಾರ ಮರುಪರಿಶೀಲನೆಯ ನಂತರ ಮಸೂದೆಗಳನ್ನು ಕಾಯ್ದಿರಿಸುವ ಸಂದರ್ಭದಲ್ಲಿ, ರಾಜ್ಯಪಾಲರು ಗರಿಷ್ಠ 1 ತಿಂಗಳ ಅವಧಿಗೆ ಒಳಪಟ್ಟು ತಕ್ಷಣವೇ ಒಪ್ಪಿಗೆ ನೀಡಬೇಕು (ಇದರರ್ಥ ರಾಜ್ಯಪಾಲರು ವಾಪಸ್ ಕಳುಹಿಸಿದ ನಂತರ ವಿಧಾನಸಭೆಯಿಂದ ಮರು-ಜಾರಿಗೆ ತಂದ ಮಸೂದೆಗಳನ್ನು ಒಂದು ತಿಂಗಳೊಳಗೆ ಎರಡನೇ ಸುತ್ತಿನಲ್ಲಿ ರಾಜ್ಯಪಾಲರು ಅನುಮೋದಿಸಬೇಕು)”.
ಮುಂದುವರಿದಂತೆ, ನ್ಯಾಯಮೂರ್ತಿ ಜೆ. ಬಿ. ಪರ್ಡಿವಾಲರವರು ಕೆಳಗಿನಂತೆ ತೀರ್ಪನ್ನು ನೀಡಿದ್ದಾರೆ.
“1. ರಾಜ್ಯ ಶಾಸಕಾಂಗವು ಪುನರ್‌ಪರಿಶೀಲಿಸಿದ ನಂತರ, 28.11.2023 ರಂದು ರಾಷ್ಟ್ರಪತಿಗಳ ಪರಿಗಣನೆಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯುವುದು ಅಥವಾ ಮಸೂದೆಗಳನ್ನು ಕಾಯ್ದಿರಿಸುವುದು, 200ನೇ ವಿಧಿಯ ಅಡಿಯಲ್ಲಿ ಸೂಚಿಸಲಾದ ಕಾರ್ಯವಿಧಾನಕ್ಕೆ ವಿರುದ್ಧವಾಗಿದೆ, ಇದನ್ನು ಕಾನೂನಿನಲ್ಲಿ ತಪ್ಪೆಂದು ಘೋಷಿಸಲಾಗಿದೆ, ಅಸಮಂಜಸ ಮತ್ತು ಈ ಮೂಲಕ ರದ್ದುಗೊಳಿಸಲಾಗಿದೆ.
- ಮೇಲಿನ ತೀರ್ಮಾನದ ಪರಿಣಾಮವಾಗಿ, ಈ ಹತ್ತು ಮಸೂದೆಗಳ ಮೇಲೆ ರಾಷ್ಟ್ರಪತಿಗಳು ತೆಗೆದುಕೊಂಡಿರಬಹುದಾದ ಯಾವುದೇ ಕ್ರಮಗಳು ಅಸಮಂಜಸ ಮತ್ತು ಈ ಮೂಲಕ ರದ್ದುಗೊಳಿಸಲಾಗಿದೆ.
- ಒಪ್ಪಿಗೆ ನೀಡುವುದನ್ನು ತಡೆಹಿಡಿಯುವ ಅಂತಿಮ ಘೋಷಣೆಯ ಮೊದಲು, ಈ ಮಸೂದೆಗಳನ್ನು ರಾಜ್ಯಪಾಲರು ಅನುಚಿತವಾಗಿ ದೀರ್ಘಾವಧಿಗೆ ಬಾಕಿ ಇರಿಸಿದ್ದನ್ನು ಪರಿಗಣಿಸಿ ಮತ್ತು ಪಂಜಾಬ್ ರಾಜ್ಯದ ಸದರಿ ಪ್ರಕರಣದಲ್ಲಿ ಈ ನ್ಯಾಯಾಲಯದ ನಿರ್ಧಾರಕ್ಕೆ ರಾಜ್ಯಪಾಲರು ತೋರಿಸಿದ ಅಲ್ಪ ಗೌರವವನ್ನು ಗಮನದಲ್ಲಿಟ್ಟುಕೊಂಡು ಮತ್ತು ಅವರ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸ್ಪಷ್ಟವಾಗಿ ಕಂಡುಬರುವ ಇತರ ಬಾಹ್ಯ ಪರಿಗಣನೆಗಳನ್ನು ಗಮನದಲ್ಲಿಟ್ಟುಕೊಂಡು, ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ನಮ್ಮ ಅಂತರ್ಗತ ಅಧಿಕಾರವನ್ನು ಚಲಾಯಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಈ ಹಿನ್ನೆಲೆಯಲ್ಲಿ ಸದರಿ ಹತ್ತು ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಪರಿಗಣಿಸಿ ತೀರ್ಮಾನಿಸಲಾಗಿದೆ.”
ದೇಶದ ಸರ್ವೋಚ್ಚ ನ್ಯಾಯಾಲಯವು ಈ ಮಹತ್ತರ ತೀರ್ಪಿನ ಮೂಲಕ ರಾಜ್ಯಪಾಲರ ಹುದ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವ ಮೋದಿ ಸರ್ಕಾರದ ಕುತಂತ್ರಕ್ಕೆ ಕಡಿವಾಣ ಹಾಕಲಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಭಾರತದ ಒಕ್ಕೂಟದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಧ್ವಂಸ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಅಧಿಕಾರಿಶಾಹಿಗಳಿಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಈ ಅಭೂತಪೂರ್ವ ತೀರ್ಪು ಒಂದು ಭಾರೀ ಹೊಡೆತವಾಗಿದೆ. ಡಾ. ಬಿ. ಆರ್. ಅಂಬೇಡ್ಕರ್‌ರವರ ಸಂವಿಧಾನ ಹಾಗೂ ಈ ಸಾಂವಿಧಾನಿಕ ಆಶಯಗಳಿಗೆ ಬದ್ಧರಾಗಿರುವ ನ್ಯಾಯಾಂಗ ವ್ಯವಸ್ಥೆ ನಮ್ಮ ಭಾರತ ದೇಶದ ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಲು ಸಶಕ್ತ ಎಂಬ ಸಂದೇಶವನ್ನು ಈ ತೀರ್ಪು 140 ಕೋಟಿ ಭಾರತೀಯರಿಗೆ ತಲುಪಿಸುತ್ತಿದೆ.
ಎಂಪುರಾನ್ | ಮುನ್ನಾ ಮತ್ತು ಜೂಡಾಸ್; ಮೋಸದ ನವ ವಿದ್ಯಮಾನಗಳು

ಆದರ್ಶ್ ಆರ್ ಅಯ್ಯರ್
ಸಹ ಅಧ್ಯಕ್ಷರು, ಜನಾಧಿಕಾರ ಸಂಘರ್ಷ ಪರಿಷತ್ತು
COMING