2024-25ನೇ ಹಂಗಾಮಿನಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್‌ಎಸ್‌ಎಸ್‌ಕೆ) ಗೆ ಕಬ್ಬು ಪೂರೈಸಿದ ರೈತರ ಕಬ್ಬಿನ ಬಾಕಿ ಬಿಲ್ ಮೇ ತಿಂಗಳ ಮೊದಲನೇ ವಾರದೊಳಗಾಗಿ ಪಾವತಿಸಲು ಎಲ್ಲ ರೀತಿಯಿಂದ ಕ್ರಮವಹಿಸಲಾಗುತ್ತದೆ ಎಂದು ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ ತಿಳಿಸಿದ್ದಾರೆ.
ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಖಾನೆಯು 2024-25ನೇ ಹಂಗಾಮಿಗೆ 3 ಲಕ್ಷ ಮೆಟ್ರಿಕ್ ಟನ್‌ಗೂ ಅಧಿಕ ಕಬ್ಬು ನುರಿಸಿ ಶೇ 9.75 ರಿಕವರಿಯೊಂದಿಗೆ ಸಕ್ಕರೆ ಉತ್ಪಾದಿಸಿ ಹಂಗಾಮನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಮಾರಾಟ ಮಾಡಲು ನಿಯಂತ್ರಣ ವಿಧಿಸಿರುವುದರಿಂದ ಅತಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆಯನ್ನು ಮಾರಾಟ ಮಾಡಲು ಅನುಮತಿ ಆದೇಶ ನೀಡುತ್ತಿರುವ ಹಿನ್ನೆಲೆಯಲ್ಲಿ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರ ಕಬ್ಬಿನ ಬಾಕಿ ಬಿಲ್ ಪಾವತಿಸಲು ಅನುಕೂಲವಾಗುವಂತೆ ಹೆಚ್ಚುವರಿ ಸಕ್ಕರೆ ಬಿಡುಗಡೆ ಮಾಡಲು ಆದೇಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ. ಅದರಂತೆ ಕೇಂದ್ರ ಸರ್ಕಾರವು ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿ 50,000 ಕ್ವಿಂಟಲ್ ಹೆಚ್ಚುವರಿ ಸಕ್ಕರೆ ಬಿಡುಗಡೆಗೆ ಆದೇಶ ನೀಡಲಾಗುವುದು ಎಂದು ಆಶ್ವಾಸನೆ ನೀಡಿರುತ್ತದೆ. ಅಲ್ಲದೇ ಈಗಾಗಲೇ ದಿನನಿತ್ಯ ರೂ.2 ಕೋಟಿ ರೈತರ ಕಬ್ಬಿನ ಬಿಲ್ ಬಾಕಿ ಪಾವತಿ ಮಾಡಲಾಗುತ್ತಿದೆ’ ಎಂದಿದ್ದಾರೆ.
ಈ ಸುದ್ದಿ ಓದಿದ್ದಿರಾ? ಯುಗಧರ್ಮ | ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಎಷ್ಟು ಭಾರತೀಯ?
ಜಿಲ್ಲೆಯ ರೈತ ಸಂಘಟನೆಗಳು ಹಾಗೂ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರು ಯಾವುದೇ ರೀತಿ ಆತಂಕ ಪಡದೇ ಸಹಕರಿಸಲು ಕಾರ್ಖಾನೆಯ ಅಧ್ಯಕ್ಷ ಡಿ.ಕೆ. ಸಿದ್ರಾಮ ಕೋರಿದ್ದಾರೆ.