- ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗಂಟೆಗೆ ಸರಾಸರಿ 70.54 ಕಿಮೀ ವೇಗದಲ್ಲಿ ಚಲಿಸುತ್ತದೆ
- ಸಧ್ಯ ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಚರಿಸುವ ರಾಜ್ಯದ ವೇಗ ರೈಲು ಜನಶತಾಬ್ದಿ ಎಕ್ಸ್‌ಪ್ರೆಸ್
ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತನ್ನ ಸಂಚಾರವನ್ನು ಆರಂಭಿಸಿದೆ. ಪ್ರಧಾನಿ ಮೋದಿ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ರೈಲಿನ ಪ್ರಯಾಣ ಭಾರೀ ದುಬಾರಿ ಎಂಬುದು ಈಗಷ್ಟೇ ತಿಳಿದುಬಂದಿದೆ. ಈ ರೈಲಿನಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಯಶವಂತಪುರ ರೈಲು ನಿಲ್ದಾಣಕ್ಕೆ 5 ಕಿ.ಮೀ ಪ್ರಯಾಣ ಮಾಡಲು ಎಸಿ ಚೇರ್‌ಕಾರ್ ಸೀಟಿನ ಟಿಕೆಟ್ ದರ ಬರೋಬ್ಬರಿ ₹410 ಹಾಗೂ ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿ ₹545 ಇದೆ.
ಇನ್ನೂ ಬೆಂಗಳೂರಿನಿಂದ ದಾವಣಗೆರೆಗೆ ₹915 ದರವಿದ್ದರೆ, ಎಕ್ಸಿಕ್ಯುಟಿವ್ ಕ್ಲಾಸ್ ₹1,740 ಇದೆ. ಅದೇ ರೀತಿ ಹುಬ್ಬಳ್ಳಿ ಜಂಕ್ಷನ್‌ಗೆ ₹1,135 ಹಾಗೂ ಎಕ್ಸಿಕ್ಯೂಟಿವ್ ಕ್ಲಾಸ್ ಬೆಲೆ ₹2180 ಇದೆ.
ಬೆಂಗಳೂರು-ಹುಬ್ಬಳ್ಳಿ ವಂದೇ ಭಾರತ್ ಪ್ರಯಾಣದ ದರ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆಗಿದ್ದರೂ ಕೂಡ ಈ ರೈಲು ಗಂಟೆಗೆ ಸರಾಸರಿ 70.54 ಕಿಮೀ ವೇಗದಲ್ಲಿ ಮಾತ್ರವೇ ಚಲಿಸುತ್ತದೆ. ಬೆಂಗಳೂರು-ಹುಬ್ಬಳ್ಳಿ ನಡುವೆ 487.47 ಕಿಮೀ ಅಂತರ ಕ್ರಮಿಸಲು 7 ಗಂಟೆ ಸಮಯ ತೆಗೆದುಕೊಳ್ಳುತ್ತದೆ.
ಬೆಂಗಳೂರು-ಧಾರವಾಡ ನಡುವೆ ಸಂಚಾರ ನಡೆಸುವ ವಂದೇ ಭಾರತ್ ರೈಲಿನಲ್ಲಿ ಸಧ್ಯ 8 ಬೋಗಿಗಳಿದ್ದು, 530 ಆಸನಗಳಿವೆ. ಮೂರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ವಂದೇ ಭಾರತ್‌ಗಿಂತ ಜನಶತಾಬ್ದಿಯೇ ‘ಬೆಟರ್’
ಸಧ್ಯ ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಚರಿಸುವ ರಾಜ್ಯದ ವೇಗ ರೈಲು ಜನಶತಾಬ್ದಿ ಎಕ್ಸ್‌ಪ್ರೆಸ್. ಈ ರೈಲಿನಲ್ಲಿ ಬೆಂಗಳೂರು-ಹುಬ್ಬಳ್ಳಿ ನಡುವಿನ ಪ್ರಯಾಣ ದರ ₹700 ಮಾತ್ರ. ಅಲ್ಲದೆ, ಈ ರೈಲು ಉಭಯ ನಗರಗಳನ್ನು 7 ಗಂಟೆ ಅವಧಿಯಲ್ಲಿ ತಲುಪುತ್ತದೆ. ಮಾತ್ರವಲ್ಲದೆ, ಈ ರೈಲು 10 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಅಂದರೆ, ಜನಶತಾಬ್ದಿ ಎಕ್ಸ್‌ಪ್ರೆಸ್ ಹೆಚ್ಚು ನಿಲುಗಡೆಯ ಜೊತೆಗೆ, ವಂದೇ ಭಾರತ್ ರೈಲು ಕ್ರಮಿಸುವ ದೂರವನ್ನು ಅದೇ ಅವಧಿಯಲ್ಲಿ ಕ್ರಮಿಸುತ್ತದೆ. ಇದರ ಅರ್ಥ, ವಂದೇ ಭಾರತ್‌ಗಿಂತ ಜನಶತಾಬ್ದಿಯೇ ವೇಗವಾಗಿ ಚಲುಸುತ್ತದೆ. ಆದರೆ, ಚೇರ್ ಕಾರ್ ಸೀಟುಗಳಿರುವ ಏಕೈಕ ಕಾರಣಕ್ಕೆ ₹500 ರಿಂದ ₹1,500 ಅಧಿಕ ಮೊತ್ತವನ್ನು ವಂದೇ ಭಾರತ್ ರೈಲಿಗೆ ಪ್ರಯಾಣಿಕರು ಪಾವತಿಸಬೇಕಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕರ್ತವ್ಯಲೋಪ ಆರೋಪದಡಿ ಅಶೋಕನಗರ ಇನ್ಸ್‌ಪೆಕ್ಟರ್ ಅಮಾನತು
ವಂದೇ ಭಾರತ್‌ಗೆ ಜಾಗ ಬಿಡಲು 48 ನಿಷಯ ಕಾಯುವ ಮತ್ತೊಂದು ರೈಲು
ವಂದೇ ಭಾರತ್ ರೈಲಿಗೆ ಆದ್ಯತೆ ನೀಡುವ ಸಲುವಾಗಿ ಹೊಸಪೇಟೆ-ಕೆಎಸ್ಆರ್ ಬೆಂಗಳೂರು ರೈಲು ಅರಸೀಕೆರೆಯಲ್ಲಿ 48 ನಿಮಿಷಗಳ ಕಾಲ ನಿಲ್ಲಲಿದೆ ಎಂಬುದು ರೈಲಿನ ಸಮಯ ಪಟ್ಟಿಯಲ್ಲಿ ಕಂಡುಬಂದಿದೆ. ವಂದೇ ಭಾರತ್ ರೈಲಿಗೆ ಕ್ರಾಸಿಂಗ್ ನೀಡಲು ಹೊಸಪೇಟೆ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬರೋಬ್ಬರಿ 48 ನಿಮಿಷ ಒಂದೇ ನಿಲ್ದಾಣದಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಇದೆ.
ಇದು ಕೇಂದ್ರ ಸರ್ಕಾರ ಹಗಲು ದರೋಡೆಗೆ ಒಂದು ಮಾರ್ಗವಾಗಿದೆ.