ಹಲವು ತಿಂಗಳುಗಳಿಂದ ಬಿಬಿಎಂಪಿ ವೇತನ ಪಾವತಿ ಮಾಡದೆ, ವಿಳಂಬ ಮಾಡುತ್ತಿರುವ ಕಾರಣ, ಬೇಸತ್ತ 30ಕ್ಕೂ ಹೆಚ್ಚು ‘ಲೇಕ್’ (ಕರೆ) ಮಾರ್ಷಲ್‌ಗಳು ತಮ್ಮ ಹುದ್ದೆಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಬೆಂಗಳೂರಿನ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಲ್ಲಿ ಕಾವಲು ಕಾಯುತ್ತಿದ್ದ ಮಾರ್ಷಲ್‌ಗಳು ರಾಜೀನಾಮೆ ನೀಡಿದ್ದು, ತಮ್ಮ ಹುದ್ದೆಗಳನ್ನು ತೊರೆದಿದ್ದಾರೆ.
ಈ ಹಿಂದೆ, ಉಭಯ ಕೆರೆಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ, ಕೆರೆಗಳು ಭಾರೀ ಕಲುಷಿತಗೊಂಡಿದ್ದವು. ಕೆರೆ ನಿರ್ವಹಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಶ ಅಸಮಾಧಾನ ವ್ಯಕ್ತಪಡಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸರ್ಕಾರಕ್ಕೆ ಭಾರೀ ದಂಡ ವಿಧಿಸಿತ್ತು. ಕೆರೆಗಳನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿಯನ್ನು ಬಿಡಿಎಗೆ ನೀಡಿತ್ತು. ಜೊತೆಗೆ, ಕೆರೆಗಳ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಸಿ, ಭದ್ರತೆ ನೀಡುವ ಜವಾಬ್ದಾರಿಯನ್ನು ಬಿಬಿಎಂಪಿಗೆ ವಹಿಸಿತ್ತು.
ಅದರಂತೆ, ವರ್ತೂರು ಮತ್ತು ಬೆಳ್ಳಂದೂರು ಕೆರೆಗಳಿಗೆ ತಲಾ 25 ಮಂದಿ ಮಾರ್ಷಲ್‌ಗಳನ್ನು ಕಾವಲಿಗಾಗಿ ಬಿಬಿಎಂಪಿ ನೇಮಿಸಿತ್ತು. ಆದರೆ, ಅವರಿಗೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಬಿಬಿಎಂಪಿ ವೇತನ ಪಾವತಿ ಮಾಡಿಲ್ಲ ಎಂದು ಹೇಳಲಾಗಿದೆ. ಹೀಗಾಗಿ, 30ಕ್ಕೂ ಹೆಚ್ಚು ಮಾರ್ಷಲ್‌ಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಲ್ಲಿ ಸುಮಾರು 50 ಮಾರ್ಷಲ್‌ಗಳು ದಿನ 24 ಗಂಟೆಯೂ ಎರಡು ಪಾಳಿಯಲ್ಲಿ ಕಾವಲು ಕಾಯುತ್ತಿದ್ದರು. ಆದರೆ, ಈಗ ಅವರಲ್ಲಿ ಅರ್ಧಕ್ಕೂ ಹೆಚ್ಚು ಮಾರ್ಷಲ್‌ಗಳು ರಾಜೀನಾಮೆ ನೀಡಿದ್ದು, ಕೆರೆಗಳಲ್ಲಿ ಕಾವಲು ಕಾಯುವವರು ಇಲ್ಲದಂತಾಗಿದೆ.
“ಕೆರೆಯ ಬಫರ್ ವಲಯವನ್ನು ವಲಸಿಗರು ಆಕ್ರಮಿಸಿಕೊಂಡಿದ್ದಾರೆ. ಕೆರೆ ಸುತ್ತಲಿನ ಹಲವು ಪ್ರದೇಶಗಳ ಜನರು ಕಸವನ್ನು ಕೆರೆ ಪ್ರದೇಶದಲ್ಲಿ ಸುರಿಯುತ್ತಾರೆ. ಕೆರೆ ಮಾರ್ಷಲ್‌ಗಳು ಇದನ್ನು ತಡೆಯುತ್ತಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಮಾರ್ಷಲ್‌ಗಳ ಸಂಖ್ಯೆ ಕಡಿಮೆಯಾಗಿದೆ” ಎಂದು ವರ್ತೂರು ಕೆರೆ ಬಳಿಯ ನಿವಾಸಿ ಜಗದೀಶ್ ರೆಡ್ಡಿ ಹೇಳಿದ್ದಾರೆ.
“ಜನವರಿಯಲ್ಲಿ ಎನ್‌ಸಿಸಿ ಹಿನ್ನೆಲೆಯುಳ್ಳವರನ್ನು ಮಾರ್ಷಲ್‌ಗಳಾಗಿ ನೇಮಕ ಮಾಡಿಕೊಳ್ಳಲಾಯಿತು. 20,000 ರೂ. ವೇತನ ನೀಡುವುದಾಗಿ ಹೇಳಿದ್ದರು. ಆದರೆ, 13,000 ರೂ. ಮಾತ್ರವೇ ನೀಡಲಾಗುತ್ತಿದೆ. ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಅಲ್ಲದೆ, ವೇತನವನ್ನೂ ಸರಿಯಾಗಿ ನೀಡುತ್ತಿಲ್ಲ” ಎಂದು ರಾಜೀನಾಮೆ ನೀಡಿರುವ ಮಾರ್ಷಲ್‌ವೊಬ್ಬರು ಹೇಳಿರುವುದಾಗಿ ‘ಕನ್ನಡಪ್ರಭ’ ವರದಿ ಮಾಡಿದೆ.
“ವಿಳಂಬವು ಕೆರೆ ವಿಭಾಗದ ವೇತನ ಪ್ಯಾಕೇಜ್‌ನಿಂದ ಉಂಟಾಗಿದೆ. ಮಾರ್ಷಲ್‌ಗಳಿಗೆ ಈ ಹಿಂದೆ, ಘನತ್ಯಾಜ್ಯ ನಿರ್ವಹಣಾ ಇಲಾಖೆಯು ವೇತನ ಪಾವತಿ ಮಾಡುತ್ತಿತ್ತು. ಆದರೆ, ಈಗ ಕೆರೆ ನಿರ್ವಹಣೆ ಮಾಡುವ ಇಲಾಖೆಗೆ ಹಸ್ತಾಂತರಿಸಲಾಗಿದೆ. ಜವಾಬ್ದಾರಿ ಹಸ್ತಾಂತರದ ಕಾರಣಕ್ಕಾಗಿ ವೇತನ ಪಾವತಿ ವಿಳಂಬವಾಗಿದೆ” ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.