“ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಜಯಂತಿಯ ಅಂಗವಾಗಿ ಏಪ್ರಿಲ್ 14 ರಂದು ‘ಭೀಮೋತ್ಸವ‘ ಎಂಬ ಹೆಸರಿನ ಕಾರ್ಯಕ್ರಮವನ್ನು ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಇದನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ರಾಜ್ಯಮಟ್ಟದ ಸಮಾವೇಶವಾಗಿ ಆಯೋಜಿಸಲಾಗಿದೆ. ಕೆಆರ್ಎಸ್ ಪಕ್ಷದ ಸೈನಿಕರು ಹಾಗೂ ಅಂಬೇಡ್ಕರ್ ಅವರ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲರಾಜ್ ಕರೆನೀಡಿದರು.
ಚಿತ್ರದುರ್ಗದಲ್ಲಿ ಮಾಹಿತಿ ನೀಡಿದ ಅವರು, “ಡಾ.ಬಿಆರ್ ಅಂಬೇಡ್ಕರ್ ಅವರ ಆದರ್ಶ ಮೌಲ್ಯಗಳನ್ನು ಕೇವಲ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿರುವ ಜೆಸಿಬಿ ಪಕ್ಷಗಳಿಂದ ಯುವ ಸಮುದಾಯವನ್ನು ಮುಕ್ತಗೊಳಿಸಿ ನೈಜಭೀಮವಾದವನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದು ಮತ್ತು ಸಮ ಸಮಾಜದ ಬದುಕನ್ನು ಕಟ್ಟಿಕೊಳ್ಳಲು, ಜಾತ್ಯಾತೀತ ನಿಲುವನ್ನು ಕೇವಲ ಪುಸ್ತಕದ ಆದರ್ಶ ಭಾಷಣವಾಗಿಸದೆ ನೈಜ ಕಾರ್ಯ ರೂಪಕ್ಕೆ ತರುವುದರ ಮೂಲಕ ಆ ಸಮಾಜದ ಯುವಕರನ್ನು ರಾಜಕೀಯ ಮುನ್ನೆಲೆಗೆ ತರುವುದು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖ್ಯ ಧ್ಯೇಯವಾಗಿದೆ” ಎಂದು ಸ್ಪಷ್ಟಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ.
“ನಮ್ಮ ಪಕ್ಷ ಈ ನಾಡಿನಲ್ಲಿ ಸ್ವಚ್ಛ, ಪ್ರಾಮಾಣಿಕ, ಜನಪರ ಆಡಳಿತಕ್ಕಾಗಿ ಅಹೋರಾತ್ರಿ ಹೋರಾಟಗಳನ್ನು ನಡೆಸುತ್ತಿದೆ. ಭಾರತದ ಸಂವಿಧಾನ ಮತ್ತು ಕಾನೂನುಗಳನ್ನು ನಮಗೆ ನಾವೇ ಆವಾಹಿಸಿಕೊಂಡು ಸ್ವಚ್ಛ, ಪ್ರಾಮಾಣಿಕ, ಜನಪರ ಆಡಳಿತಗಳನ್ನು ಜಾರಿಗೊಳಿಸಿಕೊಂಡಿರುವ ಕರ್ನಾಟಕ ಏಕೈಕ ರಾಜಕೀಯ ಪಕ್ಷವೆಂದರೂ ಅದು ಕೆ.ಆರ್.ಎಸ್. ಪಕ್ಷವೇ. ಅಂಬೇಡ್ಕರ್ ಆದರ್ಶಗಳನ್ನು ಅನುಪಾಲನೆ ಮಾಡುವಂಥದ್ದು ನಮ್ಮ ಆದ್ಯ ಕರ್ತವ್ಯವಾಗಬೇಕು” ಎಂದು ಕರೆ ನೀಡಿದರು.
ಈ ವೇಳೆ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಎನ್‍ಟಿ ನಾಗರೆಡ್ಡಿ ಸೇರಿದಂತೆ ಕೆಆರ್ಎಸ್ ಪಕ್ಷದ ಹಲವು ಮುಖಂಡರು ಕಾರ್ಯಕರ್ತರು ಹಾಜರಿದ್ದರು.