ಯುವಕನೋರ್ವ ಚಿಕ್ಕಪ್ಪನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ, ಶಿರಚ್ಛೇದ ಮಾಡಿ, ನಂತರ ಅವರ ಕತ್ತರಿಸಿದ ರುಂಡವನ್ನು ಪೊಲೀಸ್ ಠಾಣೆಗೆ ತಂದು ಶರಣಾಗಿರುವ ಘಟನೆ ಒಡಿಶಾದ ಕಿಯೋಂಝಾರ್ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ಕಬಿ ದೇಹುರಿ ಎಂದು ಗುರುತಿಸಲಾಗಿದೆ. ಶುಕ್ರವಾರ ತಡರಾತ್ರಿ ತನ್ನ ಚಿಕ್ಕಪ್ಪ ಹರಿ ದೇಹುರಿಯನ್ನು ಹಳೆ ದ್ವೇಷದಿಂದ ಕೊಂದಿದ್ದಾನೆ ಎಂದು ಹೇಳಲಾಗಿದೆ. ಗ್ರಾಮಸ್ಥರು ಸಾಂಪ್ರದಾಯಿಕ ನೃತ್ಯವಾದ ದಂಡ ನಾಚಾವನ್ನು ನೋಡುವುದರಲ್ಲಿ ಮಗ್ನರಾಗಿದ್ದಾಗ ಕಬಿ ತನ್ನ ಚಿಕ್ಕಪ್ಪನನ್ನು ಸುಳ್ಳು ಕಾರಣ ಹೇಳಿ ಹತ್ತಿರದ ಹೊಲಕ್ಕೆ ಕರೆದೊಯ್ದಿದ್ದಾನೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ವಿವಾಹೇತರ ಸಂಬಂಧಕ್ಕೆ ಒಪ್ಪದ ಮಹಿಳೆಯ ಶಿರಚ್ಛೇದ; ಸೋದರ ಮಾವನೇ ಎಸಗಿದ ಹತ್ಯೆ
ಹೊಲದಲ್ಲಿ ಯಾರೂ ಇಲ್ಲದನ್ನು ನೋಡಿ ಹರಿ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ಅವನ ಶಿರಚ್ಛೇದ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ರುಂಡವನ್ನು ಸುವಾಕತಿ ಪೊಲೀಸ್ ಠಾಣೆಗೆ ಕೊಂಡೊಯ್ದು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಕಬಿಯನ್ನು ಬಂಧಿಸಿ ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ.
“ನಮ್ಮ ಸೋದರಳಿಯ ನನ್ನ ಸಹೋದರನನ್ನು ಕಡಿದು ಕೊಂದಿದ್ದಾನೆಂದು ರಾತ್ರಿ ನನಗೆ ತಿಳಿಯಿತು. ಅವರ ನಡುವೆ ಹಲವು ವಿಷಯಗಳಲ್ಲಿ ನಿರಂತರವಾಗಿ ಜಗಳವಾಗುತ್ತಿತ್ತು” ಎಂದು ಆರೋಪಿಯ ಮತ್ತೊಬ್ಬ ಚಿಕ್ಕಪ್ಪ ಅರ್ಜುನ್ ದೇಹುರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
“ಕೊಲೆ ಮಾಡಿದ ನಂತರ ಆರೋಪಿ ಶರಣಾಗಿದ್ದಾನೆ. ಸುವಾಕತಿ ಪೊಲೀಸ್ ಠಾಣೆಗೆ ಕತ್ತರಿಸಿದ ರುಂಡವನ್ನು ಚೀಲದಲ್ಲಿ ಹೊತ್ತುಕೊಂಡು ಬಂದಿದ್ದಾನೆ. ಆತನನ್ನು ಬಂಧಿಸಿದ್ದೇವೆ. ಭೂ ವಿವಾದದ ಬಗ್ಗೆ ಅವರ ನಡುವೆ ಜಗಳ ನಡೆದಿದ್ದು, ಅದು ಕೊಲೆಗೆ ಕಾರಣವಾಗಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದ್ದಾರೆ.

ಮ ನಿಮ್ಮ ಈ ದಿನ.ಕಂ ಸುದ್ದಿಯು ಅತ್ಯಂತ ಅದ್ಭುತವಾಗಿದೆ ಬೆಳಗೆದ್ದ ತಕ್ಷಣ ನಿಮ್ಮ ಸುದ್ದಿಯನ್ನು ಓದಿದರೆ ಮನಸ್ಸಿಗೆ ನೆಮ್ಮದಿ ಅರಿಸುತ್ತೆ, ಕರ್ನಾಟಕ ನಂಬರ್ ಒನ್ ಸುದ್ದಿ ಎಂದರೆ ಈ ದಿನ.com 🙏