ಬಾಲಕಿಯನ್ನು ಭೇಟಿ ಮಾಡಲು ಮನೆಗೆ ಬಂದಿದ್ದ ದಲಿತ ಯುವಕನನ್ನು ಬಾಲಕಿಯ ಕುಟುಂಬಸ್ಥರು ವಿವಸ್ತ್ರಗೊಳಿಸಿ, ಅಮಾನುಷವಾಗಿ ಹಲ್ಲೆಗೈದು ವಿಕೃತಿ ಮರೆದಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.
ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ಬಡೆ ರಾವೇಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಂತ್ರಸ್ತ 21 ವರ್ಷದ ದಲಿತ ಯುವಕ ರಾಹುಲ್ ಅಂಚಲ್ ಮತ್ತು ಬಡೆ ರಾವೇಲಿ ಗ್ರಾಮದ ಒಬಿಸಿ ಸಮುದಾಯದ 16 ವರ್ಷದ ಬಾಲಕಿ ಪರಸ್ಪರ ಪರಿಚಿತರಾಗಿದ್ದರು. ಬಾಲಕಿಯನ್ನು ಭೇಟಿ ಮಾಡಲು ಬಡೆ ರಾವೇಲಿ ಗ್ರಾಮದಲ್ಲಿದ್ದ ಬಾಲಕಿಯ ಮನೆಗೆ ರಾಹುಲ್ ತೆರಳಿದ್ದರು. ಈ ವೇಳೆ, ಆತನ ಮೇಲೆ ಹಲ್ಲೆ ಎಸಗಿರುವ ಬಾಲಕಿಯ ಕುಟುಂಬಸ್ಥರು, ಆತನನ್ನು ಬೀದಿಗೆ ಎಳೆದು ತಂದು, ವಿವಸ್ತ್ರಗೊಳಿಸಿ ವಿಕೃತಿ ಮರೆದಿದ್ದಾರೆ.
छत्तीसगढ़ के सक्ति जिले में कुछ गुंडों ने एक दलित युवक को पकड़कर उसे बंधक बना लिया और कपड़े उतारकर बेहरहमी से पीटा।
— Aman Upadhyay (@amansupadhyay) April 11, 2025
युवक भूखा-प्यासा तड़पता रहा और बार-बार पानी के लिए गुहार लगाता रहा, लेकिन किसी ने उसे एक घूंट पानी तक नहीं दिया। बेहद दर्दनाक और अमानवीय घटना।#Chhattisgarh pic.twitter.com/Jk6tWRySQH
“ಬಾಲಕಿಯ ಕುಟುಂಬವು ಯುವಕನನ್ನು ಹಿಡಿದು ಒಂದು ದಿನ ಒತ್ತೆಯಾಳಾಗಿ ಇಟ್ಟುಕೊಂಡಿತ್ತು. ರಾತ್ರಿಯಿಡೀ ಚಪ್ಪಲಿ, ವೈರ್ ಹಾಗೂ ಪೈಪ್‌ಗಳಿಂದ ಆತನನ್ನು ಥಳಿಸಿದೆ. ಮರುದಿನ ಬೀದಿಗೆ ಎಳೆದುಕೊಂಡು ಬಂದು, ಬೆತ್ತಲೆಗೊಳಿಸಿ ಹಲ್ಲೆ ಮಾಡಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ದಲಿತ ಯುವಕ ರಾಹುಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದಾಗ್ಯೂ, ಯುವಕ ಅಥವಾ ಆತನ ಕುಟುಂಬಸ್ಥರು ದೂರು ದಾಖಲಿಸಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋವನ್ನು ಆಧರಿಸಿ ಪೊಲೀಸರೇ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.