'ಇತಿಹಾಸವನ್ನು ತಿಳಿಯದವರು ಇತಿಹಾಸವನ್ನು ಸೃಷ್ಟಿಸಲಾರರು' ಎಂದು ನುಡಿದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದ ಮುಚ್ಚಿಟ್ಟ ಇತಿಹಾಸವನ್ನು ತೆರೆದಿಟ್ಟರು. ಇತಿಹಾಸವನ್ನು ನೋಡಬೇಕಾದ ಹೊಸ ದೃಷ್ಟಿಕೋನವನ್ನು ದಕ್ಕಿಸಿಕೊಟ್ಟರು. ಅವರು ಬರೆದ
‘ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ (Revolution and Counter-Revolution in Ancient India) ಕೃತಿಯು ಅವರ ಪ್ರಖರ ವಿದ್ವತ್ತಿಗೂ ಸಾಕ್ಷಿಯಾಗಿ ನಿಂತಿದೆ. ಇತಿಹಾಸವನ್ನು ನೋಡಬೇಕಾದ ನಿಜ ಕ್ರಮವನ್ನು ತೋರಿಸಿದ ಈ ಕೃತಿಯಿಂದ ಆಯ್ದ ಸಾಲುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಬಾಬಾ ಸಾಹೇಬರು ತೋರಿದ ನಿಜದ ಇತಿಹಾಸವನ್ನು 134ನೇ ಅಂಬೇಡ್ಕರ್ ಜಯಂತಿಯ ಈ ಸಂದರ್ಭದಲ್ಲಿ ಮೆಲುಕು ಹಾಕೋಣ.

- ಭಾರತದ ಚರಿತ್ರೆಯೆಂದರೆ ಬೌದ್ಧಧರ್ಮ ಮತ್ತು ಬ್ರಾಹ್ಮಣಧರ್ಮದ ನಡುವೆ ನಡೆದ ಮಾರಕ ಕಾಳಗದ ಚರಿತ್ರೆಯೇ ಆಗಿದೆ.
- ಅಶೋಕನ ಕಾಲದಲ್ಲಿ ಮೌರ್ಯ ಸಾಮ್ರಾಜ್ಯ ವಿಸ್ತರಿಸಿತು. ಅಶೋಕ ಬೌದ್ಧ ಧರ್ಮವನ್ನು ರಾಜ್ಯಧರ್ಮವಾಗಿ ಮಾಡಿದ. ಬ್ರಾಹ್ಮಣ ಧರ್ಮಕ್ಕೆ ಒದಗಿದ ಬಹುದೊಡ್ಡ ಪೆಟ್ಟು ಇದೆ. ಅಶೋಕನ ಸಾಮ್ರಾಜ್ಯದಲ್ಲಿ ಬ್ರಾಹ್ಮಣರು ಎಲ್ಲ ರಾಜಾಶ್ರಯ ಕಳೆದುಕೊಂಡು, ಎರಡನೆಯ ಹಾಗೂ ಅಧೀನ ಸ್ಥಾನಕ್ಕೆ ತಳ್ಳಲ್ಪಟ್ಟರು. ಬ್ರಾಹ್ಮಣ ಧರ್ಮದ ಜೀವಾಳವಾದ ಪ್ರಾಣಿಬಲಿಯ ಯಜ್ಞಗಳನ್ನು ಅಶೋಕ ನಿಷೇಧಿಸಿ ಅವರಿಗೆ ವೃತ್ತಿನಷ್ಟವನ್ನೂ ಉಂಟು ಮಾಡಿದನು. ಆದ್ದರಿಂದ ಬ್ರಾಹ್ಮಣರಿಗೆ ಬೌದ್ಧ ರಾಜ್ಯದ ವಿರುದ್ಧ ದಂಗೆ ಏಳುವುದೊಂದೇ ಮಾರ್ಗವಾಗಿತ್ತು. ಈ ಕಾರಣಕ್ಕಾಗಿಯೇ ಶುಂಗಗೋತ್ರದವನೂ, ಸಾಮವೇದಿ ಬ್ರಾಹ್ಮಣನೂ, ಪ್ರಾಣಿ ಬಲಿ ಹಾಗೂ ಸೋಮಯಜ್ಞದಲ್ಲಿ ನಂಬಿಕೆಯುಳ್ಳವನೂ ಆದ ಪುಷ್ಯಮಿತ್ರನು ಬೌದ್ಧ ಧರ್ಮವನ್ನು ನಾಶ ಮಾಡಲು ರಾಜಕೀಯ ಅಧಿಕಾರ ಉಪಯೋಗಿಸಿ ರಾಜಹತ್ಯೆ ಮಾಡಿದನು.
- ಪುಷ್ಯಮಿತ್ರ ಸಿಂಹಾಸನಾರೂಢನಾಗುತ್ತಿದ್ದಂತೆಯೇ ಮಾಡಿದ ಅಶ್ವಮೇಧ ಯಾಗವೆಂಬ ವೈದಿಕ ಯಜ್ಞವು ಬ್ರಾಹ್ಮಣ ಧರ್ಮ ಸ್ಥಾಪನೆಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಪ್ರತಿಯೊಬ್ಬ ಬೌದ್ಧ ಭಿಕ್ಕುವಿನ ತಲೆಗೆ ಆತ ನೂರು ಚಿನ್ನದ ನಾಣ್ಯಗಳನ್ನು ಬೆಲೆ ಕಟ್ಟಿದ್ದು ಬೌದ್ಧ ಧರ್ಮದ ನಾಶಕ್ಕೆ ಆತ ಹವಣಿಸುತ್ತಿದ್ದ ಎಂಬುದನ್ನು ತಿಳಿಸುತ್ತದೆ.
- “ಕಂದಾಚಾರಿಗಳೂ, ಧರ್ಮಾಂಧರೂ ಆಗಿದ್ದ ಶುಂಗರ ಸಾಮ್ರಾಜ್ಯಶಾಹಿ ಪ್ರಭುತ್ವದಲ್ಲಿ ಬೌದ್ಧರು ಅನುಭವಿಸಿದ ಸ್ಥಿತಿಯನ್ನು ವಿವರಿಸುದಕ್ಕಿಂತ ಊಹಿಸುವುದು ಸುಲಭ. ಅನೇಕ ಬೌದ್ಧರು ಈಗಲೂ ಶಾಪವಿಲ್ಲದೆ ಪುಷ್ಯಮಿತ್ರನ ಹೆಸರು ತೆಗೆಯುವುದಿಲ್ಲವೆಂದು ಚೀನೀ ಮೂಲಗಳಿಂದ ತಿಳಿದುಕೊಳ್ಳಬಹುದು” – ಡಾ. ಹರಿಪ್ರಸಾದ್ ಶಾಸ್ತ್ರಿ (ಈ ಅಭಿಪ್ರಾಯವನ್ನು ಬಾಬಾಸಾಹೇಬರು ಅನುಮೋದಿಸುತ್ತಾರೆ.)
- ಮುಸ್ಲಿಮರು ಭಾರತದ ಮೇಲೆ ನಡೆಸಿದ ದಾಳಿಗೆ ತೀರಾ ಮಹತ್ವ ಕೊಡಲಾಗಿದೆ. ಸಂಕುಚಿತ ದೃಷ್ಟಿಕೋನದಿಂದ ನೋಡಿದಾಗ್ಯೂ ಅಧ್ಯಯನಕ್ಕೆ ಯೋಗ್ಯವಾದದ್ದು ಮುಸ್ಲಿಂ ದಾಳಿಯೊಂದೇ ಅಲ್ಲ. ಮುಸ್ಲಿಂ ದಾಳಿಕೋರರು ಹಿಂದೂ ಭಾರತದ ಮೇಲೆ ದಾಳಿ ಮಾಡಿದರೆ, ಬ್ರಾಹ್ಮಣ ದಾಳಿಕೋರರು ಬೌದ್ಧ ಭಾರತದ ಮೇಲೆ ದಾಳಿ ಮಾಡಿದರು. ಹಿಂದೂ ಭಾರತದ ಮೇಲೆ ದಂಡೆತ್ತಿ ಬಂದ ಮುಸ್ಲಿಂ ದಾಳಿಕೋರರು ತಮ್ಮ ವಂಶೀಯ ಆಕಾಂಕ್ಷೆಗಳಿಗಾಗಿ ತಮ್ಮ ತಮ್ಮಲ್ಲೇ ಹೊಡೆದಾಡಿದರು. ಅರಬ್ಬರು, ತುರ್ಕರು, ಮಂಗೋಲರು ಮತ್ತು ಆಫ್ಘನ್ನರು ಪರಸ್ಪರ ಹಿರಿಮೆಗಾಗಿ ಬಡಿದಾಡಿದರು. ಆದರೆ ಮೂರ್ತಿಪೂಜೆಯನ್ನು ನಾಶ ಮಾಡುವುದು ಅವರೆಲ್ಲರ ಗುರಿಯಾಗಿತ್ತು. ಇದೇ ರೀತಿ ಬೌದ್ಧ ಭಾರತದ ಮೇಲೆ ದಾಳಿ ಮಾಡಿದ ಬ್ರಾಹ್ಮಣ ದಾಳಿಕೋರರು, ತಮ್ಮ ತಮ್ಮ ವಂಶದ ಹಿರಿಮೆಗಾಗಿ ಪರಸ್ಪರ ಹೊಡೆದಾಡಿಕೊಂಡರು. ಶುಂಗರು, ಕಣ್ವರು ಮತ್ತು ಆಂಧ್ರರು ಪರಸ್ಪರ ಮೇಲ್ಮೆಗಾಗಿ ಹೋರಾಟ ಮಾಡಿದರು. ಆದರೆ ಮುಸ್ಲಿಂ ದಾಳಿಕೋರರಂತೆಯೇ ಅವರಿಗೂ ಏಕ ಗುರಿಯಿತ್ತು. ಬೌದ್ಧ ಧರ್ಮ ಹಾಗೂ ಮೌರ್ಯರ ಬೌದ್ಧ ಸಾಮ್ರಾಜ್ಯವನ್ನು ನಾಶ ಮಾಡುವುದೇ ಆ ಗುರಿ.
- ಬೌದ್ಧ ಭಾರತದ ಮೇಲೆ ನಡೆದ ಬ್ರಾಹ್ಮಣ ದಾಳಿಗಳಿಗೆ ಹೋಲಿಸಿದರೆ, ಹಿಂದೂ ಭಾರತದ ಮೇಲೆ ಮುಸ್ಲಿಂ ದಾಳಿಗಳ ಪರಿಣಾಮ ಮೇಲು ಮೇಲಿನದೂ ಅಲ್ಪಾಯುಷಿಯಾದದ್ದೂ ಆಗಿದೆ. ತನ್ನ ದಂಡಯಾತ್ರೆಗಳ ಮೂಲಕ ಬ್ರಾಹ್ಮಣ ಧರ್ಮವು ಬೌದ್ಧ ಧರ್ಮವನ್ನು ವಿನಾಶಗೊಳಿಸುವ ರಾಜಕೀಯ ಅಧಿಕಾರ ಪಡೆಯಿತು ಮತ್ತು ಬೌದ್ಧ ಧರ್ಮವನ್ನು ನಾಶ ಮಾಡಿತು ಕೂಡ.
- ಕ್ರಿ.ಪೂ. 642ರಲ್ಲಿ ಬಿಹಾರದಲ್ಲಿ ಉದಯಿಸಿದ ಮಗಧ ಸಾಮ್ರಾಜ್ಯವೇ ಭಾರತದ ರಾಜಕೀಯ ಇತಿಹಾಸದ ಮೊದಲ ಮೈಲಿಗಲ್ಲು. ಈ ಮಗಧ ಸಾಮ್ರಾಜ್ಯವನ್ನು ಸ್ಥಾಪಿಸಿದವನು- ಅನಾರ್ಯ ನಾಗ ಜನಾಂಗಕ್ಕೆ ಸೇರಿದ ಶಿಶುನಾಗ. ಈ ವಂಶದ 5ನೇ ದೊರೆ ಬಿಂಬಸಾರನ ಕಾಲದಲ್ಲಿ ಇದು ಮಹಾಸಾಮ್ರಾಜ್ಯವಾಯಿತು. ಕ್ರಿ.ಪೂ. 413ರವರೆಗೆ ಇದೇ ವಂಶಸ್ಥರು ಆಳಿದರು. ಈ ವರ್ಷವೇ ಶಿಶುನಾಗ ವಂಶದ ಮಹಾನಂದ ಎಂಬ ಚಕ್ರವರ್ತಿ ನಂದ ಎಂಬ ಸಾಹಸಿಯ ಕೈಯಲ್ಲಿ ಕೊಲೆಗೀಡಾದ. ಈ ನಂದ ಮಗದ ಸಿಂಹಾಸನವನ್ನು ಆಕ್ರಮಿಸಿ ಇದೇ ವಂಶ ಕ್ರಿ.ಪೂ. 322 ರವರೆಗೆ ಆಳಿತು. ಕೊನೆಯ ನಂದ ದೊರೆಯನ್ನು ಚಂದ್ರಗುಪ್ತನು ಪದಚ್ಯುತಿಗೊಳಿಸಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ. ಈ ಚಂದ್ರಗುಪ್ತ ಶಿಶುನಾಗ ವಂಶದ ಕೊನೆಯ ದೊರೆಯ ಸಂಬಂಧಿಯಾದ್ದರಿಂದ ಚಂದ್ರಗುಪ್ತನ ಕ್ರಾಂತಿ, ನಾಗ ಆಳ್ವಿಕೆಯನ್ನು ಮರುಸ್ಥಾಪಿಸಿತು.
- ಸಿಂಧದ ಬೌದ್ಧರು ತಮ್ಮ ಬ್ರಾಹ್ಮಣ ರಾಜರ ಕೈಯಲ್ಲಿ ಎಲ್ಲ ರೀತಿಯ ಅವಮಾನ ಹಾಗೂ ತಿರಸ್ಕಾರವನ್ನು ಅನುಭವಿಸಿದರು ಮತ್ತು ಅರಬರು ಅವರ ದೇಶದ ಮೇಲೆ ದಾಳಿ ಮಾಡಿದಾಗ ಬೌದ್ಧರು ಅವರಿಗೆ ಮನಪೂರ್ವಕ ಸಹಾಯ ಮಾಡಿದರು. ಹೊಸ ಆಡಳಿತದಲ್ಲಿಯೂ ಹಿಂದೂಗಳಿಗೇ ಹೆಚ್ಚಿನ ಸ್ಥಾನಮಾನ ಸಿಕ್ಕಿತು. ಇದನ್ನು ಕಂಡ ಬೌದ್ಧರು ದಿಗಿಲುಗೊಂಡು ಇಸ್ಲಾಂ ಸ್ವೀಕರಿಸಿದರು. ಏಕೆಂದರೆ ಮತಾಂತರ ಹೊಂದಿದವರಿಗೆ ಆಡಳಿತವರ್ಗದವರಿಗೆ ಮೀಸಲಾದ ಎಲ್ಲ ಸೌಕರ್ಯಗಳು ಸಿಗುತ್ತಿದ್ದವು. ಆದ್ದರಿಂದ ಸಿಂಧದ ಬೌದ್ಧರು ಬಹುಸಂಖ್ಯೆಯಲ್ಲಿ ಮುಸ್ಲಿಂ ಧರ್ಮವನ್ನು ಸೇರಿಕೊಂಡರು” – ಪ್ರೊ. ಸುರೇಂದ್ರನಾಥ (ಈ ಅಭಿಪ್ರಾಯವನ್ನು ಬಾಬಾಸಾಹೇಬರು ತಮ್ಮ ಕೃತಿಯಲ್ಲಿ ಅನುಮೋದಿಸುತ್ತಾರೆ.)
- ದೇವ ಎಂಬುವರು ಮಾನವ ಜೀವಿಗಳ ಒಂದು ಸಮುದಾಯ ಎಂಬುದನ್ನು ಬೌದ್ಧಸಾಹಿತ್ಯವು ತೋರಿಸುತ್ತದೆ. ಅನೇಕ ಜನ ದೇವರು ಬುದ್ಧನನ್ನು ಕಂಡು ತಮ್ಮ ಸಂಶಯಗಳನ್ನೂ ಸಂಕಷ್ಟಗಳನ್ನೂ ನಿವಾರಿಸಿಕೊಂಡಿದ್ದಾರೆ. ದೇವರು ಮನುಷ್ಯರಲ್ಲದೇ ಹೋಗಿದ್ದರೆ ಇದು ಹೇಗೆ ಸಾಧ್ಯ?
- ದೇವ ಪದದ ಜೊತೆಗೆ ಯಕ್ಷ, ಗಣ, ಗಂಧರ್ವ, ಕಿನ್ನರ ಈ ಹೆಸರುಗಳೂ ಕಂಡುಬರುತ್ತವೆ. ಅವರೆಲ್ಲ ಯಾರು? ‘ಮಹಾಭಾರತ’ ಮತ್ತು ‘ರಾಮಾಯಣ’ ಓದಿದಾಗ ಇವರೆಲ್ಲರೂ ಕಾಲ್ಪನಿಕ ಜೀವಿಗಳಿರಬೇಕೆಂಬ ಭಾವನೆ ಬರುತ್ತದೆ. ಆದರೆ ಯಕ್ಷ, ಗಣ, ಗಂಧರ್ವ, ಕಿನ್ನರರು ನಿಜವಾದ ಮಾನವ ಕುಲದ ಸದಸ್ಯರು. ಅವರೆಲ್ಲ ದೇವ ಎಂಬ ಜನರ ಊಳಿಗದಲ್ಲಿರುವವರು. ಯಕ್ಷರು ಅರಮನೆಗಳನ್ನು ಕಾಯುತ್ತಿದ್ದವರು. ಗಣ ಎಂಬುವರು ದೇವರ ಕಾವಲಿನವರು. ಗಂಧರ್ವರು ತಮ್ಮ ಸಂಗೀತ ಮತ್ತು ನೃತ್ಯದಿಂದ ದೇವರನ್ನು ರಂಜಿಸುತ್ತಿದ್ದರು. ಕಿನ್ನರರು ಕೂಡ ದೇವರ ಊಳಿಗದಲ್ಲಿದ್ದವರು.
- ದೇವ ಪದವಿ ಹೊಂದಿದ್ದವರು ಆರ್ಯಕುಲದಲ್ಲಿ ಪ್ರಭಾವಶಾಲಿಗಳಾಗಿದ್ದರು. ಆರ್ಯರಲ್ಲಿ ಶ್ರೇಷ್ಠರೆನಿಸಿಕೊಳ್ಳುವ ಗಂಡಸರಿಂದ ಹೆಂಗಸು ಸಂತಾನ ಪಡೆಯಲು ಅನುಮತಿ ಕೊಡುವುದು, ಕುಟುಂಬವನ್ನು ಬೆಳೆಸುವುದೆಂದರೆ ಅವರು ದನಗಳ ತಳಿ ತಯಾರು ಮಾಡಿದಂತೆ ಅಥವಾ ಸಂತಾನ ವೃದ್ಧಿ ಮಾಡಿದಂತೆ ಎಂದು ತಿಳಿಯುತ್ತಿದ್ದರು.
- ಪ್ರಾಚೀನ ಕಾಲದಲ್ಲಿ ಉಪನಯನವೆಂದರೆ, ಯಾವುದೇ ವರ್ಣವೃತ್ತಿಯಲ್ಲಿ ನೈಪುಣ್ಯದ ಪದವಿ ಪ್ರಮಾಣ ಪತ್ರವನ್ನು ಗುರುವು ಶಿಷ್ಯರಿಗೆ ನೀಡುವ ಘಟಿಕೋತ್ಸವ ಸಮಾರಂಭದಂತಿತ್ತು. ಮನುಶಾಸ್ತ್ರದಲ್ಲಿ ಈ ಬಹುಮುಖ್ಯ ವ್ಯವಸ್ಥೆಯ ಅರ್ಥ ಹಾಗೂ ಉದ್ದೇಶಗಳ ಸಂಪೂರ್ಣ ಬದಲಾವಣೆ ಜಾರಿಯಾಯಿತು. ಬ್ರಾಹ್ಮಣಧರ್ಮ ತಂದ ಪ್ರಧಾನ ಬದಲಾವಣೆ ಎಂದರೆ ಉಪನಯನ ಮಾಡುವ ಅಧಿಕಾರವನ್ನು ಗುರುವಿನಿಂದ ತಂದೆಗೆ ವರ್ಗಾಯಿಸಿದ್ದು. ಇದರ ಪರಿಣಾಮವಾಗಿ- ತನ್ನ ಮಗುವಿಗೆ ಉಪನಯನ ಮಾಡುವ ಅಧಿಕಾರ ಪಡೆದ ತಂದೆ, ಮಗುವಿಗೆ ತನ್ನ ವರ್ಣವನ್ನೇ ಕೊಡುವ ಮೂಲಕ ಅದನ್ನು ಅನುವಂಶೀಯಗೊಳಿಸಿದ. ಬ್ರಾಹ್ಮಣಧರ್ಮವು ವರ್ಣ ನಿರ್ಧಾರದ ಅಧಿಕಾರವನ್ನು ಹೀಗೆ ಗುರುವಿನಿಂದ ಕಿತ್ತು ತಂದೆಗೆ ಕೊಡುವ ಮೂಲಕ ಅಂತಿಮವಾಗಿ ವರ್ಣವನ್ನು ಜಾತಿಯಾಗಿ ಬದಲಾಯಿಸಿತು. ಪುರಾತನ ಕಾಲದಿಂದಲೂ ಅನುಭವಿಸುತ್ತ ಬಂದ ಉಚ್ಚ ಅಂತಸ್ತನ್ನು ಅರ್ಹತೆ ಯೋಗ್ಯತೆಗಳ ಚಕಾರವೆತ್ತದೆ ಎಲ್ಲ ಬ್ರಾಹ್ಮಣರು ಮತ್ತವರ ಸಂತಾನದ ಸವಲತ್ತನ್ನಾಗಿ ಮಾಡುವುದೇ ಆತನ ಉದ್ದೇಶವಾಗಿತ್ತು.
- ಅಂತರ ವಿವಾಹದ ನಿಷೇಧ ಮತ್ತು ಅಂತರ್ಭೋಜನದ ನಿಷೇಧ- ಇವೆರಡು ನಿಯಮಗಳೇ ಜಾತಿವ್ಯವಸ್ಥೆಯನ್ನು ಸೃಷ್ಟಿಸಿವೆ. ಇವೆರಡೇ ಜಾತಿ ಪದ್ಧತಿಯ ಆಧಾರ ಸ್ತಂಭಗಳು. ಜಾತಿ ವ್ಯವಸ್ಥೆಯ ಸೃಷ್ಟಿಯೇ ಬ್ರಾಹ್ಮಣಧರ್ಮದ ಅಂತಿಮ ಧ್ಯೇಯವಾಗಿತ್ತು.
- ಕ್ರೈಸ್ತ ಮಹಮ್ಮದೀಯರ ಮತಾಂತರ ಕಾನೂನಿನಡಿ, ಧರ್ಮಶ್ರದ್ಧೆಯ ಅಭಾವ ಅಥವಾ ತಪ್ಪು ಧರ್ಮಶ್ರದ್ಧೆ ಮಾತ್ರ ದಂಡನಾರ್ಹವಾಗುತ್ತಿತ್ತು. ಬ್ರಾಹ್ಮಣಧರ್ಮದ ಕಾನೂನಿನಲ್ಲಿ ಶ್ರದ್ಧೆ ಅಥವಾ ಅದರ ಅಭಾವಕ್ಕೂ, ಅನರ್ಹತೆಗೂ ಯಾವುದೇ ಸಂಬಂಧವೇ ಇಲ್ಲ. ಅದು ಜಾತಿ ಎಂಬ ನಿರ್ದಿಷ್ಟ ಸಾಮಾಜಿಕ ವ್ಯವಸ್ಥೆಯ ಪಾವಿತ್ರ‍್ಯಕ್ಕೆ ಮಾತ್ರ ಸಂಬಂಧಿಸಿದ್ದು. ಜಾತಿಯಿಂದ ಹೊರಹೋಗುವ ಕೃತ್ಯವಷ್ಟೇ ಇಲ್ಲಿ ಶಿಕ್ಷಾರ್ಹ. ಇದೇ ಮುಖ್ಯವಾದ ವ್ಯತ್ಯಾಸ.
- ಬ್ರಾಹ್ಮಣರ ವಿರುದ್ಧ ಎದ್ದು ನಿಲ್ಲುವ ಬ್ರಾಹ್ಮಣೇತರರನ್ನು ನಿಶ್ಚೇತನಗೊಳಿಸುವುದು ಬ್ರಾಹ್ಮಣ ಧರ್ಮದ ಯೋಜನೆಯಾಗಿತ್ತು. ಒಂದು ದೇಶವಾಗಿ ತಾವೇ ವಿದೇಶವೊಂದರ ವಿರುದ್ಧ ನಿಶ್ಚೇತಗೊಳ್ಳುವ ಉದ್ದೇಶ ಬ್ರಾಹ್ಮಣಧರ್ಮಕ್ಕಿರಲಿಲ್ಲ. ಆದರೆ ಜಾತಿ ವಿಷದ ಪರಿಣಾಮ ಎಂಥದ್ದೆಂದರೆ, ಜನರು ಬ್ರಾಹ್ಮಣಧರ್ಮದ ವಿರುದ್ಧವಷ್ಟೇ ಅಲ್ಲ, ವಿದೇಶಿಯರ ವಿರುದ್ಧವೂ ನಿಷ್ಕ್ರಿಯರಾಗಿದ್ದಾರೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಬ್ರಾಹ್ಮಣಧರ್ಮವು ಜಾತಿ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ರಾಷ್ಟ್ರೀಯವಾದದ ಬೆಳವಣಿಗೆಗೂ ದೊಡ್ಡ ಅಡಚಣೆ ತಂದೊಡ್ಡಿತು.
- ರಾಷ್ಟ್ರೀಯವಾದಕ್ಕೆ ಜಾತಿಪದ್ಧತಿಯೇ ಅಡ್ಡಿ ಎಂಬುದನ್ನು ಅಲ್ಲಗಳೆಯುವ ರಾಜಕಾರಣಿಗಳು, ಚರಿತ್ರೆಕಾರರಿಗೆ ಇಲ್ಲಿ ಬರವಿಲ್ಲ. ಅವರು ಭಾರತ ಒಂದು ರಾಷ್ಟ್ರ ಎಂದು ಭಾವಿಸುತ್ತಾರೆ ಮತ್ತು ಯಾರಾದರೂ ಭಾರತ ದೇಶದ ಬದಲು ಜನತೆಯ ಬಗ್ಗೆ ಮಾತನಾಡತೊಡಗಿದರೆ ತಪ್ಪು ತಿಳಿಯುತ್ತಾರೆ. ಇದು ಅರ್ಥವಾಗದ ಧೋರಣೆಯೇನಲ್ಲ. ಏಕೆಂದರೆ ಬಹುತೇಕ ರಾಜಕಾರಣಿಗಳು ಹಾಗೂ ಚರಿತ್ರೆಕಾರರು ಬ್ರಾಹ್ಮಣರು. ಅದಕ್ಕೆ ಅವರ ಪೂರ್ವಿಕರ ಕುಕೃತ್ಯಗಳನ್ನಾಗಲೀ, ದುಷ್ಟತನಗಳನ್ನಾಗಲೀ ಬಯಲಿಗೆಳೆಯುವ ಧೈರ್ಯವನ್ನು ಅವರಿಂದ ನಿರೀಕ್ಷಿಸಲಾಗದು. ಭಾರತ ಒಂದು ರಾಷ್ಟ್ರವೇ ಎಂದು ಅವರನ್ನು ಕೇಳಿದರೆ, ಒಕ್ಕೊರಲಿನಿಂದ ಹೌದು ಎಂದು ಉತ್ತರಿಸುತ್ತಾರೆ. ಮುಂದಕ್ಕೂ ಪ್ರಶ್ನಿಸಿದರೆ, ದೇಶದ ಭೌಗೋಳಿಕ ಅಖಂಡತೆ ಮತ್ತು ಮೂಲಭೂತ ಸಾಂಸ್ಕೃತಿಕ ಐಕ್ಯಮತ್ಯಗಳನ್ನು ಉಲ್ಲೇಖಿಸುತ್ತಾರೆ. ವಾದಕ್ಕಾಗಿ ಇವೆಲ್ಲವನ್ನೂ ಒಪ್ಪಬಹುದು. ಆದರೆ ಇವುಗಳಿಂದಲೇ ಭಾರತ ಒಂದು ರಾಷ್ಟ್ರವಾಗಿದೆ ಎಂದರೆ ಅದು ಭ್ರಮೆ.
- ವೇದಕಾಲದ ಅವನತಿಯ ದಿನಗಳಲ್ಲಿ, ಶೂದ್ರರು ಮತ್ತು ಹೆಂಗಸರಿಗೆ ಅತ್ಯಂತ ಕೀಳು ಸ್ಥಾನ ಬಂದುಬಿಟ್ಟಿತ್ತು. ಆದರೆ, ಬೌದ್ಧಧರ್ಮದ ಅಲೆಯುಬ್ಬರ ಇವರಿಬ್ಬರ ಅಂತಸ್ತಿನಲ್ಲೂ ದೊಡ್ಡ ಉನ್ನತಿ ಸಾಧಿಸಿತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಬೌದ್ಧಕಾಲದಲ್ಲಿ ಶೂದ್ರನು ಆಸ್ತಿ, ವಿದ್ಯೆ ಗಳಿಸಿ, ರಾಜನೂ ಆಗಬಹುದಿತ್ತು. ಅಷ್ಟೇಕೆ, ಆತ ವೇದಕಾಲದಲ್ಲಿ ಬ್ರಾಹ್ಮಣರು ಕ್ರಮಿಸಿದ್ದ ಅತ್ಯುನ್ನತ ಸಾಮಾಜಿಕ ಸ್ಥಾನಮಾನಕ್ಕೂ ಏರಬಹುದಿತ್ತು. ಬೌದ್ಧ ಭಿಕ್ಷುಗಳ ಸಂಘ, ವೇದಕಾಲೀನ ಬ್ರಾಹ್ಮಣರಿಗೆ ತತ್ಸಮಾನವಾಗಿತ್ತು. ಇವೆರಡೂ, ತಂತಮ್ಮ ಧರ್ಮಗಳೊಳಗೆ, ಅಂತಸ್ತು ಹಾಗೂ ಘನತೆಗಳ ವಿಚಾರದಲ್ಲಿ ಸಮಾನವಾಗಿದ್ದವು.
- ಸ್ತ್ರೀಯರು ಜನಸಂಖ್ಯೆಯ ಅರ್ಧ ಭಾಗವನ್ನು ಪ್ರತಿನಿಧಿಸಿದರೆ ಉಳಿದವರಲ್ಲಿ ಶೂದ್ರರ ಸಂಖ್ಯೆ- ಮೂರನೇ ಎರಡರಷ್ಟಕ್ಕಿಂತ ಕಮ್ಮಿಯಲ್ಲ. ಇಬ್ಬರೂ ಸೇರಿದರೆ ಜನಸಂಖ್ಯೆಯ ಶೇಕಡಾ 75ರಷ್ಟಾಗುತ್ತದೆ. ಈ ಅಗಾಧ ಜನಸ್ತೋಮವೇ ಬ್ರಾಹ್ಮಣಧರ್ಮದಿಂದಾಗಿ ಶಾಶ್ವತ ಗುಲಾಮಗಿರಿ ಮತ್ತು ನಿರಂತರ ಅವಹೇಳನಕ್ಕೆ ಪಕ್ಕಾಗಿದೆ. ಶೇಕಡಾ 75ರಷ್ಟು ಜನರ ಜೀವನ, ಸ್ವಾತಂತ್ರ‍್ಯ ಮತ್ತು ಸಂತೋಷ ಸಾಧನೆಯ ಹಕ್ಕನ್ನು ಕಸಿದ, ಈ ಅವನತೀಕರಣದ ದೈತ್ಯ ಪ್ರಮಾಣದಿಂದಾಗಿಯೇ ಭಾರತ ಸತ್ತ ದೇಶವಲ್ಲದಿದ್ದರೆ, ಕೊಳೆಯುತ್ತಿರುವ ರಾಷ್ಟçವಂತೂ ಆಗಿಹೋಗಿದೆ.
(ಈದಿನ.ಕಾಮ್ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಲ್ಲಿ ಸಂಗ್ರಹಿಸಲಾಗಿರುವ ಬರಹ. ಬರಹ ಆಧಾರ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ 3 ಹಾಗೂ 'ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ'ಯ ಕೃತಿಯಲ್ಲಿನ
ಬ್ರಾಹ್ಮಣ ಧರ್ಮದ ದಿಗ್ವಿಜಯ’ ಅಧ್ಯಾಯ, ಅನುವಾದ- ಎನ್.ಎಸ್.ಶಂಕರ್.)
