ಕೊಪ್ಪಳ ಜಿಲ್ಲೆಯ ಈ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಕಳೆದ ವರ್ಷಕ್ಕಿಂತಲೂ ಗಣನೀಯವಾಗಿ ಕುಸಿತ ಕಂಡಿದ್ದು, ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮರುಪಾಠ ಆರಂಭಿಸಲು ಸರ್ಕಾರಿ ಹಾಗೂ ಎಲ್ಲಾ ಅನುದಾನಿತ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರಿಗೆ ಶಿಕ್ಷಣ ಇಲಾಖೆ ಸೂಚಿಸಿದೆ. ಈ ಹಿನ್ನೆಲೆ ರಜೆ ರದ್ದುಗೊಳಿಸಲಾಗಿದೆ.
3 ವರ್ಷಗಳಿಂದ ವಿದ್ಯಾರ್ಥಿಗಳ ತೇರ್ಗಡೆಯ ಫಲಿತಾಂಶ ಏರಿಕೆಯಲ್ಲಿತ್ತು. ಆದರೆ, ಈ ವರ್ಷದ ಪರೀಕ್ಷೆಯಲ್ಲಿ ಕೊಪ್ಪಳ 23ನೇ ಸ್ಥಾನ ಪಡೆದು ಶೇ.7.98ರಷ್ಟು ಕುಸಿತ ಕಂಡಿದೆ. ಕಲಾವಿಭಾಗದಲ್ಲಿ ಅತಿ ಹೆಚ್ಚು ಅನುತ್ತೀರ್ಣವಾಗಿದ್ದು, ಶಿಕ್ಷಣ ಇಲಾಖೆ ಕಳವಳ ವ್ಯಕ್ತಪಡಿಸಿದೆ. ಹಾಗಾಗಿ ಮರುಪಾಠ ಮಾಡಲು ಆದೇಶಿಸಲಾಗಿದೆ.
ಮುಂಬರುವ ಪರೀಕ್ಷೆ-1ಕ್ಕೆ ವಿದ್ಯಾರ್ಥಿಗಳನ್ನು ತಯಾರಿಗೊಳಿಸಲು ತರಗತಿಗಳನ್ನು ಆರಂಭಿಸಬೇಕು. ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ತುಂಬಿ ಓದಲು ಪ್ರೇರೇಪಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯು ಎಲ್ಲ ಡಿಡಿಪಿಐಗಳಿಗೆ ಸೂಚಿಸಿರುವುದರಿಂದ ತರಗತಿಗಳನ್ನು ಆರಂಭಿಸಲಾಗಿದೆ.
ಗ್ರಾಮೀಣ ವ್ಯಾಪ್ತಿಯ ಕಾಲೇಜುಗಳಲ್ಲಿ ಓದುತ್ತಿರುವ ಒಟ್ಟು 4,296 ವಿದ್ಯಾರ್ಥಿಗಳಲ್ಲಿ 2,629 ಮಕ್ಕಳಷ್ಟೇ ಉತ್ತೀರ್ಣರಾಗಿದ್ದಾರೆ. ಫಲಿತಾಂಶದ ಪ್ರಮಾಣ ಶೇ 61.2ರಷ್ಟಿದೆ. ನಗರ ಪ್ರದೇಶಗಳ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷೆ ಬರೆದ ಒಟ್ಟು 10,025 ವಿದ್ಯಾರ್ಥಿಗಳಲ್ಲಿ 7,002 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.69.78ರಷ್ಟಿದೆ. ಉಳಿದ ಮಕ್ಕಳನ್ನು ಕಾಲೇಜಿಗೆ ಕರೆಯಿಸಿ ಪಾಠ ಮಾಡುವ ಜವಾಬ್ದಾರಿಯೂ ಉಪನ್ಯಾಸಕರ ಮೇಲಿದೆ.
ಇದನ್ನೂ ಓದಿ: ಕೊಪ್ಪಳ | ʼಸದೃಢ ಭಾರತ ನಿರ್ಮಾಣಕ್ಕಾಗಿ ವ್ಯಕ್ತಿತ್ವ ವಿಕಸನ ಅಗತ್ಯʼ
“ಈ ವರ್ಷದ ವಾರ್ಷಿಕ ಪರೀಕ್ಷೆಯ ಫಲಿತಾಂಶ ಕುಸಿದಿದ್ದರಿಂದ ಪುನಃ ತರಗತಿಗಳನ್ನು ಆರಂಭಿಸುವಂತೆ ಇಲಾಖೆ ಸೂಚಿಸಿದೆ. ತರಗತಿಗಳನ್ನೂ ಆರಂಭಿಸಲಾಗಿದೆ ಹಾಗೂ ಮುಂದಿನ ವರ್ಷದಿಂದ ಕೊಪ್ಪಳ ಜಿಲ್ಲೆಗೆ ಹೆಚ್ಚು ಫಲಿತಾಂಶ ಬರುವಂತೆ ಕ್ರಮವಹಿಸಲಾಗುವುದು” ಎಂದು ಕೊಪ್ಪಳ ಜಿಲ್ಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಜಗದೀಶ ಹೇಳಿದ್ದಾರೆ