ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಂಗಳವಾರ (ಜೂನ್ 27) ಸಂಜೆ ನವದೆಹಲಿಯಲ್ಲಿ ತುರ್ತು ಸಭೆ ನಡೆಸಿ ಉದ್ದೇಶಿತ ಕಾಯ್ದೆಯನ್ನು ವಿರೋಧಿಸಲು ನಿರ್ಧರಿಸಿತು.
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ವಿಡಿಯೋ ಮೂಲಕ ಸಭೆ ನಡೆಸಿದ್ದು, “ಅದರ ಸದಸ್ಯರು ಯುಸಿಸಿ ಕುರಿತು ಸುಮಾರು ಮೂರು ಗಂಟೆಗಳ ಕಾಲ ಚರ್ಚೆ ನಡೆಸಿದರು. ಧರ್ಮ – ಆಧಾರಿತ ವೈಯಕ್ತಿಕ ಕಾನೂನುಗಳು, ಉತ್ತರಾಧಿಕಾರದ ನಿಯಮಗಳು, ದತ್ತು ಮತ್ತು ಉತ್ತರಾಧಿಕಾರವನ್ನು ಬದಲಿಸಲು ಕೇಂದ್ರ ಪ್ರಯತ್ನಿಸುತ್ತದೆ” ಎಂದು ಮಂಡಳಿಯ ಸದಸ್ಯರು ವಿರೋಧಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯ ಜತೆಗೆ, ಯುಸಿಸಿಯ ಕಾನೂನಾತ್ಮಕ ಆಯಾಮಗಳ ಬಗ್ಗೆಯೂ ಮಂಡಳಿಯ ಸದಸ್ಯರು ಸಮಾಲೋಚಿಸಿದ್ದಾರೆ. ಸದಸ್ಯರು, ವಕೀಲರು ಹಾಗೂ ಪರಿಣತರು ಮುಂದಿಟ್ಟ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಮಂಡಳಿಯು ಈ ವಿಚಾರದ ಬಗ್ಗೆ ಕಾನೂನು ಆಯೋಗಕ್ಕೆ ತನ್ನ ಕ್ರೋಡೀಕರಿಸಿದ ವಾದಗಳ ಕರಡನ್ನು ಸಲ್ಲಿಕೆ ಮಾಡಲು ನಿರ್ಧರಿಸಿದೆ.
ಸಭೆಯಲ್ಲಿ, ಎಐಎಂಪಿಎಲ್‌ಬಿ ಅಧ್ಯಕ್ಷ ಸಫೀಯುಲ್ಲಾ ರೆಹಮಾನಿ, ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾ ಅಧ್ಯಕ್ಷ ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹಾಲಿ ಹಾಗೂ ಮಂಡಳಿಯ ಸದಸ್ಯರು, ವಕೀಲರು ಭಾಗವಹಿಸಿದ್ದರು.
ಏಕರೂಪ ನಾಗರಿಕ ಸಂಹಿತೆ ಕಾನೂನು ಸಿದ್ಧಪಡಿಸಲು ಸಮಿತಿಯನ್ನು ಸ್ಥಾಪಿಸುವ ಖಾಸಗಿ ಸದಸ್ಯ ಮಸೂದೆಯನ್ನು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. ಇದಕ್ಕೆ ವಿರೋಧ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಕೂಡ ಇದೇ ರೀತಿಯ ಮಸೂದೆಗಳ ಮಂಡನೆಗೆ ಪಟ್ಟಿ ಮಾಡಲಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ.
ಈ ಸುದ್ದಿ ಓದಿದ್ದೀರಾ? ಇದು ಸ್ಟೇಷನ್ ಮಾಸ್ಟರ್ ಮಾಡುವ ಕೆಲಸ; ಪ್ರಧಾನಿಯ ವಂದೇ ಭಾರತ್ ಉದ್ಘಾಟನೆ ಛೇಡಿಸಿದ ಪ್ರಕಾಶ್ ರೈ
ಪ್ರಧಾನಿ ಏಕರೂಪ ನಾಗರಿಕ ಸಂಹಿತಿಯ ಹೇಳಿಕೆಯನ್ನು ವಿರೋಧಿಸಿರುವ ಕಾಂಗ್ರೆಸ್ ಹಿರಿಯ ನಾಯಕರಾದ ಪಿ ಚಿದಂಬರಂ ಹಾಗೂ ಕೆ ಸಿ ವೇಣುಗೋಪಾಲ್, “ನಿರುದ್ಯೋಗ, ಬೆಲೆ ಏರಿಕೆ ಮತ್ತು ದ್ವೇಷದ ಅಪರಾಧಗಳ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಧಾನಿ ಯುಸಿಸಿ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬಿಜೆಪಿಯ ಮಾತು ಮತ್ತು ಕಾರ್ಯಗಳಿಂದ ಇಂದು ರಾಷ್ಟ್ರವು ವಿಭಜನೆಯಾಗಿದೆ. ಜನರ ಮೇಲೆ ಹೇರಿದ ಯುಸಿಸಿಯು ವಿಭಜನೆಯನ್ನು ವಿಸ್ತರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಐಎಂಐಎಂ ಅಧ್ಯಕ್ಷ ಅಸಾಸುದ್ದೀನ್ ಒವೈಸಿ ಕೂಡ ಯುಸಿಸಿ ಜಾರಿಗೊಳಿಸುವುದನ್ನು ಖಂಡಿಸಿದ್ದು, “ ಏಕರೂಪ ನಾಗರಿಕ ಸಂಹಿತೆ ಹೆಸರಿನಲ್ಲಿ ದೇಶದ ವೈವಿಧ್ಯ ಕಾಪಾಡಲು ಸಾಧ್ಯವೇ? ಹಾಗಿದ್ದರೆ ಮೋದಿ ಹಿಂದೂಗಳ ಅವಿಭಕ್ತ ಕುಟುಂಬ ಪದ್ಧತಿ ರದ್ದುಗೊಳಿಸುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.
ಭೋಪಾಲ್‌ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಂಗಳವಾರ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ,” ಮನೆಯಲ್ಲಿ ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಇನ್ನೊಂದು ಕಾನೂನು ಇದ್ದರೆ ಕುಟುಂಬವನ್ನು ನಿಭಾಯಿಸುವುದು ಕಷ್ಟ. ಅಂತೆಯೇ ಎರಡು ಕಾನೂನುಗಳಿದ್ದರೆ ರಾಷ್ಟ್ರವನ್ನು ಮುನ್ನಡೆಸಲು ಸಾಧ್ಯವೇ” ಎಂಬ ಪ್ರಶ್ನೆಯನ್ನು ಮುಂದಿಟ್ಟು ಯುಸಿಸಿ ಜಾರಿಯ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು.