ಕಾಂಗ್ರೆಸ್‌ನಿಂದ ಬಂದವರಿಂದ ಬಿಜೆಪಿಯೊಳಗಿನ ಶಿಸ್ತು ಹೋಗಿದೆ ಎನ್ನುವುದನ್ನು ಅಲ್ಲಿಗೆ ಕರೆದುಕೊಂಡು ಹೋದ ನಾಯಕರೇ ಹೇಳಬೇಕು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಕಾಂಗ್ರೆಸ್‌ನಿಂದ ಶಾಸಕರನ್ನು ಕರೆದುಕೊಂಡು ಹೋಗಿ ಸರ್ಕಾರ ರಚಿಸಿದರು. ಆದರೆ, ಒಳ್ಳೆಯ ಆಡಳಿತ ಕೊಡುವಲ್ಲಿ ವಿಫಲವಾಗಿದ್ದರಿಂದ ಜನರು ಈಗ ಕಾಂಗ್ರೆಸ್‌ಗೆ 135 ಸ್ಥಾನಗಳನ್ನು ಕೊಟ್ಟು ಸ್ಥಿರ ಸರ್ಕಾರ ರಚನೆಗೆ ಅವಕಾಶ ಕೊಟ್ಟರು” ಎಂದರು.
“ಬಿಜೆಪಿಯಲ್ಲಿನ ಬಾಂಬೆ ಟೀಂ ಮೇಲೆ ಈಶ್ವರಪ್ಪ ಕಿಡಿ ಕಾರಿರುವುದನ್ನು ನೋಡಿದೆ. ಅವರ ಪಕ್ಷದಲ್ಲಿ ಆಂತರಿಕ ಜಗಳ ಆಡಬೇಡಿ ಎಂದು ಹೇಳೋಕೆ ನಾವ್ಯಾರು? ಅದು ಆಗುತ್ತಾ? ಅವರಿಗೆ ಏನೇನು ಸಮಸ್ಯೆ ಇದ್ಯೋ? ಏನೇನೂ ನೋವಿದ್ಯೋ? ಎಂದು ವ್ಯಂಗ್ಯವಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜೋಶಿ, ಸಂತೋಷರನ್ನು ಹೊಣೆ ಮಾಡುವ ಧೈರ್ಯ ಬಿಜೆಪಿಗರಿಗಿಲ್ಲ ಏಕೆ: ಕಾಂಗ್ರೆಸ್ ಪ್ರಶ್ನೆ
“ಕಾಂಗ್ರೆಸ್‌ನ ಗ್ಯಾರಂಟಿಗಳಿಂದಾಗಿ ಬಿಜೆಪಿಗೆ ಸೋಲಿನ ಭಯ ಶುರುವಾಗಿದೆ. ಹೀಗಾಗಿ ಜನರಿಗೆ ಕಾಂಗ್ರೆಸ್ ಒಳ್ಳೆಯ ಕಾರ್ಯಕ್ರಮಗಳನ್ನು ಕೊಡುವುದು ಬಿಜೆಪಿಗೆ ಇಷ್ಟವಿಲ್ಲ. ಇದರಿಂದಾಗಿಯೇ ಹಣ ಕೊಟ್ಟರೂ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ” ಕೇಂದ್ರದ ವಿರುದ್ಧ ಅಸಮಾಧಾನದ ವ್ಯಕ್ತಪಡಿಸಿದರು.
ಲೋಕಸಭೆಗೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ನವರು ಮೈತ್ರಿ ಮಾಡಿಕೊಳ್ಳುತ್ತಾರೋ? ಪರೋಕ್ಷವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೋ ಅಥವಾ ಪೂರ್ಣ ವಿಲೀನ ಮಾಡಿಕೊಳ್ಳುತ್ತಾರೋ? ಅದು ಆ ಪಕ್ಷಗಳಿಗೆ ಬಿಟ್ಟಿದ್ದು. ಈಗ ಜನರು ನಮಗೆ ಜವಾಬ್ದಾರಿ ಕೊಟ್ಟಿದ್ದಾರೆ. ಅದರಂತೆ ಕೆಲಸ ಮಾಡುತ್ತಿದ್ದೇವೆ” ಎಂದರು.