ಚಾಮರಾಜನಗರ ಜಿಲ್ಲೆಯಲ್ಲಿ ರಾಜರು ದಾನವಾಗಿ ಕೊಟ್ಟಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಜನರಿಂದ ಕಿತ್ತುಕೊಳ್ಳುವುದಿಲ್ಲ. ಈ ಬಗ್ಗೆ ಆತಂಕ ಬೇಡ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಹೇಳಿದರು.
ಜಿಲ್ಲೆಯಲ್ಲಿ ಮೈಸೂರು ರಾಜಮನೆತರದ ಹೆಸರಿನಲ್ಲಿರುವ 5 ಸಾವಿರ ಎಕರೆ ಖಾಸಗಿ ಸ್ವತ್ತಿಗೆ ಖಾತೆ ಮಾಡಿಸಿಕೊಳ್ಳುವ ವಿಚಾರವಾಗಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಕಂದಾಯ ಗ್ರಾಮಗಳನ್ನು ಮಾಡುವುದಾಗಿ ಚಾಮರಾಜನಗರ ಜಿಲ್ಲಾಡಳಿತ ಹೇಳಿದೆ. ಅದರಲ್ಲಿ ನಮಗೆ ಸೇರಿದ ಜಾಗವೂ ಇದೆ. ಹಾಗಾಗಿ ನಮ್ಮಲ್ಲಿರುವ ದಾಖಲೆಗಳ ಆಧಾರದ ಮೇಲೆಯೇ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕಂದಾಯ ಗ್ರಾಮ ಮಾಡುವ ಬಗ್ಗೆ ನಮಗೂ ಮಾಹಿತಿ ನೀಡಿದ್ದರೆ ಇಷ್ಟು ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ” ಎಂದರು.
“ಮಹಾರಾಜರು ದಾನವಾಗಿ ಕೊಟ್ಟಿರುವ ಭೂಮಿ ಕೊಟ್ಟಿದ್ದರೆ ಆ ಬಗ್ಗೆ ಯಾವುದೇ ತಕರಾರಿಲ್ಲ. ಈ ಬಗ್ಗೆ ಯಾವುದೇ ಪ್ರಶ್ನೆಗಳಿದ್ದರೂ ಆ ಭಾಗದ ಗ್ರಾಮಸ್ಥರು ನಮ್ಮನ್ನು ನೇರವಾಗಿ ಭೇಟಿಯಾಗಬಹುದು. ಒಂದು ವೇಳೆ ಅದು ನಮ್ಮ ಜಾಗವೇ ಆಗಿದ್ದರೂ ಸಂಬಂಧಿಸಿದವರಿಗೆ ಉಳುಮೆ ಮಾಡಲು ಜಮೀನು ಕೊಡಲಾಗುತ್ತದೆ. ಜಮೀನು ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗುತ್ತದೆ. ಗ್ರಾಮಸ್ಥರಿಗೆ ಯಾವುದೇ ರೀತಿ ತೊಂದರೆ ಕೊಡುವುದಿಲ್ಲ” ಎಂದು ಪುನರುಚ್ಚರಿಸಿದರು.
ಇದನ್ನೂ ಓದಿ: ಚಾಮರಾಜನಗರ | ಏ. 24 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ