ಕಲಬುರಗಿಯ ವಾಡಿಯಲ್ಲಿ ಬಾಬಾಸಾಹೇಬರು ಭೇಟಿ ನೀಡಿ ಕೂತಿದ್ದ ಸ್ಥಳದಲ್ಲೇ ದೇಶಪ್ರೇಮಿ ಯುವಾಂದೋಲನ ಬೈಕ್ ಜಾಥಾವನ್ನು ಅಮೃತರಾವ್ ಕೋಮಟೆ ಅವರ ಮಗ ಟೋಪಣ್ಣ ಕೋಮಟೆ ಅವರು ಏಪ್ರಿಲ್ 14ರಂದು (ಸೋಮವಾರ) ಉದ್ಘಾಟಿಸಿದ್ದಾರೆ.
ಬಾಬಾಸಾಹೇಬರ ಒಡನಾಟದಲ್ಲಿದ್ದು ಬಾಬಾಸಾಹೇಬರ ಜೊತೆಯೇ ಬೌದ್ಧ ಧಮ್ಮ ಸ್ವೀಕರಿಸಿದ ವಾಡಿಯ ಅಮೃತರಾವ್ ಕೋಮಟೆ ಅವರ ಮಗ ಟೋಪಣ್ಣ ಕೋಮಟೆ ಅವರು ಯುವ ತಂಡಕ್ಕೆ ಬಾಬಾಸಾಹೇಬರ ಬಾವುಟ ನೀಡಿ ಉದ್ಘಾಟಿಸಿ, ಶುಭ ಕೋರಿದರು.
ನಂತರ ಜಾಥಾದ ತಂಡವು ಪುರಸಭೆಯ ನೌಕರರು, ಲಾರಿ ಒಕ್ಕೂಟದ ಸಂಘದವರ ಜೊತೆ ಸಭೆಗಳನ್ನು ನಡೆಸಿ, ಏಪ್ರಿಲ್ 26ರಂದು ದಾವಣಗೆರೆಯಲ್ಲಿ ನಡೆಯುತ್ತಿರುವ ಸಂವಿಧಾನ ಸಂರಕ್ಷಕರ ಸಮಾವೇಶದ ಮಹತ್ವ ಕುರಿತು ತಿಳಿಸಿ, ಸಮಾವೇಶಕ್ಕೆ ಆಹ್ವಾನ ಮಾಡಿತು. ಸಮಾವೇಶದಲ್ಲಿ ದಾವಣಗೆರೆಯಲ್ಲಿ ರಾಜ್ಯದ ವಿವಿಧ ಭಾಗದಿಂದ ಸುಮಾರು 10,000ಕ್ಕೂ ಹೆಚ್ಚು ಸಂವಿಧಾನ ಸಂರಕ್ಷಕ ಹೋರಾಟಗಾರರು ಸೇರಲಿದ್ದಾರೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಗದಗ | ಸಂವಿಧಾನ ರಕ್ಷಣೆ ಮಾಡಬೇಕು: ಹಸನ ತಟಗಾರ
ರಾಜ್ಯದ ಪ್ರತಿ ಜಿಲ್ಲೆಯಿಂದ ಸಂವಿಧಾನ ಸಂರಕ್ಷಕರ ತಂಡಗಳ ಮಹಾಪೂರವೇ ಹರಿದು ಬರಲಿದೆ. ಹಾಗೆಯೇ ರಾಜ್ಯದ ಮತ್ತು ದೇಶದ ಜನ ಚಳವಳಿಗಳ ಮುಂದಾಳುಗಳು ಅಂದು ಆಗಮಿಸಲಿದ್ದು, ಕಸವುಭರಿತ ಸಾಂಸ್ಕೃತಿಕ ತಂಡಗಳಿಂದ ಕಲಾಕಹಳೆ ಮೊಳಗಲಿದೆ ಎಂದು ತಂಡವು ಹೇಳಿದೆ.
ಈ ಸಮಾವೇಶದ ಉದ್ದೇಶ ಅಪಾಯದಲ್ಲಿರುವ ಸಂವಿಧಾನವನ್ನು ರಕ್ಷಿಸಿಕೊಳ್ಳುವುದೇ ಆಗಿದೆ. ಕಾಂಗ್ರೆಸ್ಸಿನ ವೈಫಲ್ಯಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಅಧಿಕಾರಕ್ಕೇರಿದ ಬಿಜೆಪಿ ಭಾರತವನ್ನು ನೈತಿಕವಾಗಿ, ಆರ್ಥಿಕವಾಗಿಯೂ, ರಾಜಕೀಯವಾಗಿ ಅವನತಿಯ ಅಂಚಿಗೆ ತಂದು ನಿಲ್ಲಿಸಿದೆ. ಸಂತ-ಶರಣರ ಬೀಡಾಗಿದ್ದ ಭಾರತವನ್ನು ಜಾತಿ, ಧರ್ಮಗಳ ಹೆಸರಲ್ಲಿ ಕಚ್ಚಾಡುವ ಕುರುಕ್ಷೇತ್ರವನ್ನಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿದೆ.
ಜನರ ಗಮನವನ್ನೆಲ್ಲಾ ದಿಕ್ಕುತಪ್ಪಿಸಿ ದೇಶದ ಬೃಹತ್ ಸಂಪತ್ತನ್ನು ಅದಾನಿ, ಅಂಬಾನಿಯಂತಹ ಕಾರ್ಪೊರೇಟ್ ಕುಳಗಳ ತೆಕ್ಕೆಗೆ ಅರ್ಪಿಸಲಾಗಿದೆ. ಸಂವಿಧಾನ ಮೌಲ್ಯಗಳಿಗೆ ತದ್ವಿರುದ್ದ ದಿಕ್ಕಿನಲ್ಲಿ ದೇಶವನ್ನು ಅಪಹರಿಸಿ ಕೊಂಡೊಯ್ಯಲಾಗುತ್ತಿದೆ. ಸ್ವಾತಂತ್ರ್ಯದ ಜಾಗದಲ್ಲಿ ಸರ್ವಾಧಿಕಾರ, ಸಮಾನತೆಯ ಜಾಗದಲ್ಲಿ ಬಲಾಢ್ಯರ ಅಭಿವೃದ್ಧಿ, ಸೋದರತ್ವದ ಜಾಗದಲ್ಲಿ ಸನಾತನವಾದ, ಸಾಮಾಜಿಕ ನ್ಯಾಯದ ಜಾಗದಲ್ಲಿ ಮೇಲ್ವರ್ಗದವರಿಗೆ ಮೇಲ್ಪಂಕ್ತಿ ನೀತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ದೂರಲಾಗಿದೆ.
ಸಂವಿಧಾನ ಈ ದೇಶದ ದುಡಿಯುವ ಜನರಾದ ರೈತ, ಕೂಲಿ, ಕಾರ್ಮಿಕ, ಸಾಮಾನ್ಯ ಜನರಿಗೆ ನೀಡಿದ್ದ ಹಕ್ಕುಗಳನ್ನೆಲ್ಲಾ ವೇಗಗತಿಯಲ್ಲಿ ರದ್ದುಗೊಳಿಸಲಾಗತ್ತಿದೆ. ಈ ದೇಶದ ದಮನಿತ ಸಮುದಾಯಗಳಾದ ದಲಿತ, ಆದಿವಾಸಿ, ಅಲ್ಪಸಂಖ್ಯಾತ ಅತಿ ಹಿಂದುಳಿದ, ಮಹಿಳಾ, ಲೈಂಗಿಕ ಅಲ್ಪಸಂಖ್ಯಾತ ಮುಂತಾದ ಜನ ವರ್ಗಗಳಿಗೆ ಸಾಮಾಜಿಕವಾಗಿ ಮುಂದೆ ಬರಲು ನೀಡಲಾಗಿದ್ದ ಅವಕಾಶಗಳ ಮಾರ್ಗಗಳನ್ನೆಲ್ಲಾ ಮುಚ್ಚಲಾಗುತ್ತಿದೆ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ವಿಜಯನಗರ | ಪ್ರಸ್ತುತದಲ್ಲಿ ಅಂಬೇಡ್ಕರ್ ತತ್ವ ಅವಶ್ಯ: ಬಸವರಾಜ ಸೂಳಿಬಾವಿ
ಸರ್ಕಾರಿ ಶಿಕ್ಷಣ, ಸರ್ಕಾರಿ ಚಿಕಿತ್ಸೆ ಕಣ್ಮರೆಯಾಗುತ್ತಿವೆ. ಕೆಲಸಕ್ಕೆ ಯಾವ ಭದ್ರತೆಯೂ ಇಲ್ಲವಾಗಿದೆ. ಬೆಲೆ ಏರಿಕೆ, ಭ್ರಷ್ಟಾಚಾರ ದುಡಿದದ್ದನ್ನೆಲ್ಲಾ ಬಾಚಿ ತಿನ್ನುತ್ತಿವೆ. ರೈತರು, ಜನಸಾಮಾನ್ಯರು ಸಾಲದ ಸುಳಿಯಲ್ಲಿ ನಲುಗುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಮಿತಿಮೀರಿ ಬೆಳೆಯುತ್ತಿವೆ. ಜಾತಿ ಧರ್ಮದ ಹೆಸರಿನಲ್ಲಿ ನೆತ್ತರು ಹರಿದಾಡುತ್ತಿದೆ. ಒಟ್ಟಾರೆ ಸಂವಿಧಾನ ಅಪಾಯದಲ್ಲಿದೆ. ಇದರ ರಕ್ಷಣೆಯೇ ನಮ್ಮ ಈ ಸಮಾವೇಶದ ಉದ್ದೇಶ ಎಂದು ಯುವಾಂದೋಲನ ತಂಡವು ನೆರೆದಿದ್ದ ಜನಸಮೂಹಕ್ಕೆ ಹೇಳಿದೆ.
ಸಾರಾಂಶದಲ್ಲಿ ಆಧಿಕಾರ ನಡೆಸುತ್ತಿರುವವರನ್ನು ಪ್ರಶ್ನಿಸುವ, ಬೆದರಿಸುವ, ನಿಯಂತ್ರಿಸುವ ಹಾಗೂ ಬದಲಾಯಿಸುವ ಶಕ್ತಿ ಬೀದಿಗೆ ಬಂದಾಗ ಮಾತ್ರವೇ ಪ್ರಜಾಪ್ರಭುತ್ವವನ್ನು ನಿಜವಾದ ಅರ್ಥದಲ್ಲಿ ಸುರಕ್ಷಿತಗೊಳಿಸಲು ಸಾಧ್ಯ. ಜನಸಾಮಾನ್ಯರ ಬಲ ಕುಗ್ಗಿದೊಡನೆ ಪ್ರಜಾಪ್ರಭುತ್ವ ಸತ್ವ ಕಳೆದುಕೊಳ್ಳುತ್ತದೆ. ಪ್ರತಿಕ್ರಾಂತಿ ಸವಾರಿ ಮಾಡುತ್ತದೆ. ಕಳೆದ 3 ದಶಕಗಳಲ್ಲಿ ಆದದ್ದು ಇದೇ. ನಾವು ಒಡೆದು ಹೋದೆವು. ಅವರು ನಮ್ಮ ಮೇಲೆರಿ ಕುಳಿತರು. ಆದ ಕಾರಣ ರಾಜ್ಯದಲ್ಲಿರುವ ಎಲ್ಲ ಜನಪರ ಸಂಘಟನೆಗಳು, ಜನಪರ ಮನಸ್ಸುಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೂತು ಮಾತನಾಡುತ್ತಿದ್ದೇವೆ. ಪರಸ್ಪರ ಕೈ ಕೈ ಜೋಡಿಸಿ ಕೆಲಸ ಮಾಡಲು ಶುರು ಮಾಡಿದ್ದೇವೆ. ನಮ್ಮ ನಮ್ಮದೇ ರೀತಿಯಲ್ಲಿ ಸರ್ವಾಧಿಕಾರಿ, ಷಡ್ಯಂತ್ರಕಾರಿ ಶಕ್ತಿಗಳನ್ನು ಪ್ರತಿರೋಧಿಸುತ್ತಿದ್ದೇವೆ. ಇದೊಂದು ಮಹಾಯಾನ, ನಾವು ನೀವೆಲ್ಲರೂ ಕೂಡಿ ಮುಂದೆ ಸಾಗಿಸಬೇಕಾದ ನವಯಾನ. ದುಡಿಯುವ ವರ್ಗದ ಹೋರಾಟಗಳಿಗೆ ಹೆಸರಾಗಿದ್ದ ದಾವಣಗೆರೆ ಹೊಸ ತಲೆಮಾರಿನ ಮಹಾಯನಕ್ಕೆ ವೇದಿಕೆಯಾಗುತ್ತಿದೆ. ನೀವೂ ಅಂದು ಜೊತೆಗಿರಿ ಎಂದು ತಂಡವು ಜನತೆಗೆ ಮನವಿ ಮಾಡಿತು.
ವಾಡಿಯಿಂದ ಪ್ರಾರಂಭವಾಗಿರುವ ಈ ನಮ್ಮ ಬೈಕ್ ಯಾನವು ಇಂದಿನಿಂದ (ಏ.14) ಏ.26ರವರೆಗೆ ನಡೆಯಲಿದ್ದು, ಸುಮಾರು 20 ಜಿಲ್ಲೆಗಳ ಮೂಲಕ, ಸರಿ ಸುಮಾರು 2000 ಕಿ.ಮೀ. ಕ್ರಮಿಸಿ 26ರಂದು ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶವನ್ನು ಸೇರಿಕೊಳ್ಳಲಿದೆ ಎಂದು ತಂಡದ ಸರೋವರ್ ಬೆಂಕಿಕೆರೆ ಹೇಳಿದ್ದಾರೆ.
ದೇಶಪ್ರೇಮಿ ಯುವ ಆಂದೋಲನವು ಜಾಥಾದ ಉದ್ದಕ್ಕೂ ವಿದ್ಯಾರ್ಥಿ ಯುವಜನರ ಸಮಸ್ಯೆಗಳು ಮತ್ತು ಸಂವಿಧಾನದ ಸಂರಕ್ಷಣೆಯಲ್ಲಿ ಯುವಜನರ ಪಾತ್ರದ ಕುರಿತು ಹಾಗೂ ಏಪ್ರಿಲ್ 26ರ ಸಮಾವೇಶದ ಪ್ರಚಾರವನ್ನು ನಡೆಸಲಿದೆ. ಏಪ್ರಿಲ್ 14ನೇ ತಾರೀಕು ಅಂಬೇಡ್ಕರ್ ಅವರು ನಮ್ಮ ರಾಜ್ಯದ ಗುಲ್ಬರ್ಗ ಜಿಲ್ಲೆಯ ಈ ವಾಡಿಗೆ ಭೇಟಿ ನೀಡಿದ ಸ್ಥಳವಾದ್ದರಿಂದ ಇಲ್ಲಿಂದಲೇ ನಮ್ಮ ಜಾಥವನ್ನು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿ ಯುವಜನರು ಸೇರಿಕೊಂಡು ನಡೆಸುತ್ತಿರುವ ಈ ಜಾಥಾಕ್ಕೆ ತಮ್ಮೆಲ್ಲರ ಸಹಾಯ ಸಹಕಾರಬೇಕೆಂದು ಬಯಸುತಿದ್ದೇವೆ ಎಂದು ಅವರು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಅಂಬೇಡ್ಕರ್ ಬಗೆಗಿನ ದ್ವೇಷ, ಅಸೂಯೆ, ಅಸಹನೆ ಬಿಜೆಪಿಯವರಲ್ಲಿ ಈಗಲೂ ಜೀವಂತ: ಸಿದ್ದರಾಮಯ್ಯ
ಈ ಜಾಥಾವು ಸುಮಾರು 20 ಬೈಕ್‌ಗಳಲ್ಲಿ 12 ದಿನಗಳು ನಡೆಯಲಿದ್ದು ಸುಮಾರು 20 ಜಿಲ್ಲೆಗಳನ್ನು ಮತ್ತು ಹಲವು ತಾಲೂಕುಗಳನ್ನು ಹಾಗೂ ಊರುಗಳನ್ನು ಸುತ್ತಾಡಿಕೊಂಡು ಏಪ್ರಿಲ್ 25 ನೇ ತಾರೀಕು ದಾವಣಗೆರೆಯನ್ನು ತಲುಪಲಿದ್ದೇವೆ. ನಾವು ಹಾದು ಹೋಗುವ ಜಿಲ್ಲೆಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ ಊರುಗಳಲ್ಲಿ ಯುವಜನರೊಂದಿಗೆ ವಿದ್ಯಾರ್ಥಿ ಯುವಜನರ ಸಮಸ್ಯೆಗಳನ್ನು ಮತ್ತು ಸಂವಿಧಾನದ ಪ್ರಾಮುಖ್ಯತೆಗಳನ್ನು ಹಾಗೂ ಏಪ್ರಿಲ್ 26ರ ದಾವಣಗೆರೆ ಸಮಾವೇಶದ ಕುರಿತು ಚರ್ಚಿಸುತ್ತಾ ಪ್ರಸಾರ ನಡೆಸುತ್ತಾ ಸಾಧ್ಯವಾದ ಕಡೆ ಪತ್ರಿಕಾಗೋಷ್ಠಿ ನಡೆಸುತ್ತಾ, ಸಭೆಗಳನ್ನು ನಡೆಸುತ್ತಾ ಸಾಗುತ್ತವೆ ಎಂದರು.
ಜಾಥಾದ ಇನ್ನೊಬ್ಬ ಯುವ ಮುಂದಾಳು, ವಿದ್ಯಾರ್ಥಿ ನಾಯಕ ಹೇಮಂತ್ ಸಕಲೇಶಪುರ ಮಾತನಾಡಿ, ನಮ್ಮ ಜಾಥಾವು ಇಂದು ವಾಡಿಯಿಂದ ಆರಂಭಿಸಿ, ಸೇಡಂ, ಚಿಂಚೋಳಿಗೆ ಭೇಟಿ ನೀಡಲಿದೆ. ನಾಳೆ ಅಂದರೆ ಏ.15ರಂದು ಭಾಲ್ಕಿ, ಬಸವಕಲ್ಯಾಣ, ಹುಮ್ನಬಾದ್, ಕಲಬುರ್ಗಿಗಳಲ್ಲಿ ಸಂಚರಿಸಲಿದೆ. ಏ.16ರಂದು ಕಲಬುರ್ಗಿ, ಇಂಡಿ, ವಿಜಯಪುರ, ಏ.17ರಂದು ಸಿಂದಗಿ, ಗಹಾಪುರ, ಯಾದಗಿರಿ, ಏ.18 ದೇವದುರ್ಗ, ರಾಯಚೂರು, ಏ.19ರಂದು ಮಾನ್ವಿ, ಸಿಂಧನೂರು, ಗಂಗಾವತಿ, ಏ.20ರಂದು ಗಂಗಾವತಿ, ಕೊಪ್ಪಳ, ಗದಗ, ಅಥವಾ ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಗದಗ, ಏ.21ರಂದು ಹುಬ್ಬಳ್ಳಿ, ಧಾರವಾಡ, ಮುಂಡಗೋಡ, ಏ.22ರಂದು ಶಿಗ್ಗಾಂವಿ, ಹಾವೇರಿ, ರಾಣಿಬೆನ್ನೂರು, ಶಿಕಾರಿಪುರ, ಏ.23ರಂದು ತೀರ್ಥಹಳ್ಳಿ, ಕೊಪ್ಪ, ಜೈಪುರ, ಶೃಂಗೇರಿ, ಏ.24 ಮತ್ತು 25 ಕೊನೆಯ ದಿನದಂದು ಭದ್ರಾವತಿ, ಶಿವಮೊಗ್ಗ, ಚನ್ನಗಿರಿ, ಚಿತ್ರದುರ್ಗ, ದಾವಣಗೆರೆ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.
ಪುರಸಭೆಯ ನೌಕರರು ಜಾಥಾದಲ್ಲಿರುವ ಹೆಣ್ಣುಮಕ್ಕಳಿಗೆ ಗುಲಾಬಿ ಹೂಗಳನ್ನು ನೀಡಿ ಸ್ವಾಗತಿಸಿದರು. ಹಲವು ದಲಿತ -ಪ್ರಗತಿಪರ ಹೋರಾಟಗಾರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
