ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಜೊತೆಗಿರುವುದನ್ನು ನೋಡಿ ಗುಂಪೊಂದು ಯುವತಿಯ ಹಿಜಾಬ್ ಎಳೆದು ಬಿಚ್ಚಿ, ಇಬ್ಬರಿಗೂ ಥಳಿಸಿದ ಘಟನೆ ಉತ್ತರ ಪ್ರದೇಶದ ಮುಜಫರ್ ನಗರ ಜಿಲ್ಲೆಯಲ್ಲಿ ನಡೆದಿದೆ. ಅನೈತಿಕ ಪೊಲೀಸ್‌ಗಿರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಯುವತಿಯ ತಾಯಿ ಮತ್ತು ಹಲ್ಲೆಗೊಳಗಾದ ಯುವಕ ಸಚಿನ್ ಇಬ್ಬರೂ ಖಾಸಗಿ ಬ್ಯಾಂಕ್‌ನಲ್ಲಿ ಕಲೆಕ್ಷನ್ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಜನರಿಂದ ಸಾಲದ ಕಂತು ಸಂಗ್ರಹಿಸಲು ಜೊತೆಯಾಗಿ ಹೋಗುತ್ತಿದ್ದರು. ಸಾಲ ವಸೂಲಿಗೆ ತನ್ನ ಸಹೋದ್ಯೋಗಿಯೊಂದಿಗೆ ತನ್ನ ಮಗಳನ್ನು ತಾಯಿ ಕಳುಹಿಸಿದ್ದರು. ಈ ವೇಳೆ ಗುಂಪು ಹಲ್ಲೆ ಮಾಡಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ಅನೈತಿಕ ಪೊಲೀಸ್‌ಗಿರಿ; ಮುಸ್ಲಿಂ ಯುವಕನಿಗೆ ಥಳಿಸಿದ ಹಿಂದೂ ಯುವಕರ ಗುಂಪು
ಇಬ್ಬರೂ ಕಂತಿನ ಮೊತ್ತ ಸಂಗ್ರಹಿಸಿದ ಬಳಿಕ ಮೋಟಾರ್‌ಬೈಕ್‌ನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಮುಸ್ಲಿಂ ಪ್ರಾಬಲ್ಯದ ಖಲಾಪರ್ ಪ್ರದೇಶದ ದಾರ್ಜಿ ಗಾಲಿಯಲ್ಲಿ ಗುಂಪೊಂದು ಅವರನ್ನು ತಡೆದಿದೆ. ಯುವಕ ಹಿಂದೂ ಎಂದು ಖಚಿತವಾದ ಬಳಿಕ ಯುವತಿಯ ‘ಹಿಜಾಬ್’ ಎಳೆದು ಬಿಚ್ಚಿ, ಆಕೆಗೆ ಕಪಾಳಕ್ಕೆ ಬಾರಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಕೂಡಾ ಗುಂಪು ಮಾಡಿಕೊಂಡಿದೆ.
ಮಾಹಿತಿ ಪಡೆದ ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ರಕ್ಷಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದ್ದು, ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋದಿಂದ ಆರೋಪಿಗಳನ್ನು ಗುರುತಿಸಲಾಗಿದೆ.
ಈ ಘಟನೆ ಶನಿವಾರ ನಡೆದಿದ್ದರೂ, ಒಂದು ದಿನದ ನಂತರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದಾದ ಬಳಿಕ ಪೊಲೀಸರು ಕ್ರಮಕೈಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಕರಾವಳಿಯಲ್ಲಿ ನಿಲ್ಲದ ಅನೈತಿಕ ಪೊಲೀಸ್‌ಗಿರಿ; ಪೊಲೀಸ್ ಬಳಿಕ ಪತ್ರಕರ್ತನಿಗೆ ನಿಂದನೆ, ಬೆದರಿಕೆ
ಕೆಲವು ತಿಂಗಳ ಹಿಂದೆ, ಉತ್ತರ ಪ್ರದೇಶದ ಸಹರಾನ್‌ಪುರ ಪಟ್ಟಣದಲ್ಲಿ ಇಬ್ಬರು ಮುಸ್ಲಿಂ ಹುಡುಗಿಯರನ್ನು ಹಿಂದೂ ಯುವಕರೊಂದಿಗೆ ಸುತ್ತಾರುತ್ತಿದ್ದಾರೆ ಎಂದು ಅನುಮಾನದಿಂದ ಗುಂಪೊಂದು ಹಲ್ಲೆ ನಡೆಸಿತ್ತು. ಯುವಕರೂ ಮುಸ್ಲಿಮರಾಗಿದ್ದರಿಂದ ಪೋಷಕರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿ ಬಿಟ್ಟಿತ್ತು. ಇಂತಹ ಹಲವು ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳು ದೇಶದಲ್ಲಿ ವರದಿಯಾಗುತ್ತಿದೆ.
ಹಿಂದೂ ಯುವತಿ, ಮುಸ್ಲಿಂ ಯುವಕರು ಜೊತೆಗಿದ್ದ ಕಾರಣ ಅವರ ಮೇಲೆ ಹಲ್ಲೆ ನಡೆಸಿರುವ ಹಲವು ಘಟನೆಗಳೂ ಉತ್ತರ ಪ್ರದೇಶದಲ್ಲಿ ನಡೆದಿದೆ. ಮುಸ್ಲಿಂ ಎಂಬ ಕಾರಣಕ್ಕೆ ಹಲ್ಲೆ ನಡೆಸುವುದು ದೇಶದಲ್ಲಿ ಹೆಚ್ಚಾಗುತ್ತಿದೆ. ಮುಸ್ಲಿಮರ ಮೇಲೆ ದಾಳಿ ಹೆಚ್ಚಾಗುತ್ತಿದ್ದಂತೆ ಪ್ರತಿದಾಳಿಯೂ ನಡೆದು ಕೋಮುಗಲಭೆಗೆ ದೇಶ ಸಾಕ್ಷಿಯಾಗಿದೆ. ಹೋಳಿ ಬಣ್ಣ ಹಾಕಿಸಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಮುಸ್ಲಿಂ ಬಾಲಕನಿಗೆ ಥಳಿಸಿ ಕೊಂದಿರುವ ಘಟನೆ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೋಮು ದ್ವೇಷ ಬಿತ್ತುವ ರಾಜಕಾರಣಿಗಳೇ ಇದಕ್ಕೆಲ್ಲಾ ನೇರ ಕಾರಣ ಎಂದರೆ ತಪ್ಪಾಗಲಾಗದು.
