ತೆಲಂಗಾಣ ಕಾಂಗ್ರೆಸ್ ಸರ್ಕಾರ ಸೋಮವಾರ ಪರಿಶಿಷ್ಟ ಜಾತಿ (ಎಸ್‌ಸಿ) ಒಳಮೀಸಲಾತಿ ಜಾರಿಗೊಳಿಸಿದೆ. ಒಳಮೀಸಲಾತಿಯನ್ನು ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಇದಾಗಿದೆ. “ತೆಲಂಗಾಣವು ಎಸ್‌ಸಿ ಒಳಮೀಸಲಾತಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಎನಿಸಿಕೊಂಡಿದೆ” ಎಂದು ನೀರಾವರಿ ಸಚಿವ ಎನ್ ಉತ್ತಮ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ತೆಲಂಗಾಣ ಸರ್ಕಾರವು ಒಳಮೀಸಲಾತಿ ಜಾರಿ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಮೀಮ್ ಅಲ್ತರ್ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿತ್ತು. ತೆಲಂಗಾಣದಲ್ಲಿ ಎಸ್‌ಸಿ ಪಟ್ಟಿಯಲ್ಲಿ ಒಟ್ಟು 59 ಉಪಜಾತಿಗಳಿದೆ. ಜನಸಂಖ್ಯೆ, ಹಿಂದುಳಿದುರುವ ಆಧಾರದಲ್ಲಿ ಮೂರು ಗುಂಪುಗಳಾಗಿ ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡುವಂತೆ ಸಮಿತಿ ಶಿಫಾರಸು ನೀಡಿತ್ತು.
ಇದನ್ನು ಓದಿದ್ದೀರಾ? ಹಿಂದುಳಿದ ಜಾತಿಯ ಮಹಿಳೆಯರಿಗೆ ಒಳಮೀಸಲಾತಿ ನೀಡದಿದ್ದರೆ ಮೀಸಲಾತಿಯ ಉದ್ದೇಶವೇ ವಿಫಲ: ಸಿದ್ದರಾಮಯ್ಯ
ಅದರಂತೆ ತೆಲಂಗಾಣದಲ್ಲಿ ಎಸ್‌ಸಿಯಲ್ಲಿ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಒಟ್ಟು ಶೇಕಡ 15ರಷ್ಟು ಮೀಸಲಾತಿಯ ಪೈಕಿ ಮೊದಲ ವಿಭಾಗಕ್ಕೆ ಶೇಕಡ 1ರಷ್ಟು, ಎರಡನೇ ವಿಭಾಗಕ್ಕೆ ಶೇಕಡ 9ರಷ್ಟು, ಮೂರನೇ ವಿಭಾಗಕ್ಕೆ ಶೇಕಡ 5ರಷ್ಟು ಮೀಸಲಾತಿ ಲಭಿಸಲಿದೆ. ಮೊದಲ ವಿಭಾಗದಲ್ಲಿ 15, ಎರಡನೇ ವಿಭಾಗದಲ್ಲಿ 18 ಮತ್ತು ಮೂರನೇ ವಿಭಾಗದಲ್ಲಿ 26 ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಜಾತಿಗಳನ್ನು ವರ್ಗೀಕರಿಸಲಾಗಿದೆ.
Telangana is the first state in India to implement the revolutionary decision of #SCSubCategorisation
— Revanth Reddy (@revanth_anumula) April 14, 2025
We are all proud to have made history.
On the highly auspicious day of the birth anniversary of Bharat Ratna, Babasaheb
Dr. B. R. Ambedkar, the #Telangana State government…
ತೆಲಂಗಾಣ ಪರಿಶಿಷ್ಟ ಜಾತಿಗಳ (ಮೀಸಲಾತಿ ತರ್ಕಬದ್ಧಗೊಳಿಸುವಿಕೆ) ಕಾಯ್ದೆ- 2025ಕ್ಕೆ ರಾಜ್ಯಪಾಲರು ಏಪ್ರಿಲ್ 8ರಂದು ಸಹಿತ ಹಾಕಿದ್ದಾರೆ. ಏಪ್ರಿಲ್ 14ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ, “ತೆಲಂಗಾಣವು ಎಸ್‌ಸಿ ಒಳಮೀಸಲಾತಿಗೆ ಸಂಬಂಧಿಸಿದಂತೆ ಕ್ರಾಂತಿಕಾರಿ ನಿರ್ಧಾರವನ್ನು ತೆಗೆದುಕೊಂಡ ಮೊದಲ ರಾಜ್ಯವಾಗಿದೆ. ಈ ಇತಿಹಾಸ ಸೃಷ್ಟಿಯ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ. ಬಾಬಾಸಾಹೇಬ್ ಡಾ ಬಿಆರ್ ಅಂಬೇಡ್ಕರ್ ಅವರ ಜಯಂತಿಯ ಪವಿತ್ರ ದಿನವೇ ನಾವು ಒಳಮೀಸಲಾತಿ ಜಾರಿ ಮಾಡಿದ್ದೇವೆ” ಎಂದಿದ್ದಾರೆ.
