ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಮಂಗಳವಾರ ಏಪ್ರಿಲ್ 15 ರಿಂದ 17ರವರೆಗೆ ಮೂರು ದಿನಗಳ ಕಾಲ ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಸೇರಿದಂತೆ ಜಿಲ್ಲೆಯ ಹಲವು ಭೇಟಿಯ ಕಾರ್ಯಕ್ರಮಗಳನ್ನು ನಿಗದಿಗೊಳಿಸಿದ್ದು, ಮಹಿಳೆಯರ ಸುರಕ್ಷತೆ ಕುರಿತ ಪರಿಶೀಲನೆ ನಡೆಸಲಿದ್ದಾರೆ.
ಏಪ್ರಿಲ್ 15ರ ಬೆಳಿಗ್ಗೆ ಜಯದೇವ ವೃತ್ತದ ಬಳಿ ದಲಿತ ಸಂರಕ್ಷಣಾ ಸಮಿತಿ ಆಯೋಜಿಸಿರುವ ಅಂಬೇಡ್ಕರ್ ಜಯಂತಿ ಉತ್ಸವವನ್ನು ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಕುಂದು ಕೊರತೆಗೆ ಸಂಬಂಧಪಟ್ಟಂತೆ ಭೇಟಿ ನೀಡುವ ಕಾರ್ಯಕ್ರಮವಿದ್ದು, ಮೊದಲು ಮಧ್ಯಾಹ್ನ 1 ಗಂಟೆಗೆ ಆವರಗೊಳ್ಳ ಗ್ರಾಮದ ಕೇಂದ್ರೀಯ ವಿಶ್ವವಿದ್ಯಾನಿಲಯದ ಹಿಂಭಾಗದ ರಾಮಕೃಷ್ಣ ನಗರದ ಸ್ಥಳಾಂತರಗೊಂಡ ನಿವಾಸಿಗಳ ಭೇಟಿ ಮಾಡಲಿದ್ದಾರೆ. ನಂತರ ಸಂಜೆ 5ಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯದ ಮಹಿಳಾ ವಸತಿ ನಿಲಯಕ್ಕೆ ಭೇಟಿ ನೀಡಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಶಂಕುಸ್ಥಾಪನೆ, ದಲಿತ ಹೋರಾಟಗಾರರ ಸಂತಸ.
ಏಪ್ರಿಲ್ 16ರ ಬೆಳಿಗ್ಗೆ ಜಗಳೂರು ಸರ್ಕಾರಿ ತಾಲೂಕು ಆಸ್ಪತ್ರೆ, ತಾಲೂಕು ಕಚೇರಿ ಮತ್ತು ಜಗಳೂರಿನ ಗೊಲ್ಲರಹಟ್ಟಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ದಾವಣಗೆರೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಿಳಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಹಿಳೆಯರ ಕುಂದುಕೊರತೆಗೆ ಸಂಬಂಧಪಟ್ಟಂತೆ ಕಾರ್ಯಕ್ರಮಗಳು, ವಿದ್ಯಾರ್ಥಿನಿಯರ, ಮಹಿಳೆಯರ ಸುರಕ್ಷತೆಯ ಬಗ್ಗೆ ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳ ಬಗ್ಗೆ ಅಂಕಿ ಅಂಶಗಳು, ಮಾಹಿತಿ ಮತ್ತು ಚರ್ಚೆ ನಡೆಸಲಿದ್ದಾರೆ. ಸಂಜೆ ದಾವಣಗೆರೆಯ ಪೋಸ್ಟ್ ಮೆಟ್ರಿಕ್ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಏಪ್ರಿಲ್ 17ರ ಬೆಳಿಗ್ಗೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಬೆಂಗಳೂರು ಕಚೇರಿಗೆ ಹಿಂತಿರುಗಲಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಭೇಟಿಯ ವೇಳೆ ಸಂಬಂಧಪಟ್ಟ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿರುತ್ತಾರೆ.
ಪ್ರವಾಸ ಕಾರ್ಯಕ್ರಮದ ವೇಳೆ ದಾವಣಗೆರೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಕೆಲವು ಸ್ಥಳಗಳಿಗೆ ಭೇಟಿ ನೀಡಲು ಈದಿನ.ಕಾಂ ಮನವಿ ಮಾಡಿತ್ತು. ಅದರಂತೆ ಮನವಿಗೆ ಸ್ಪಂದಿಸಿದ ಮಹಿಳಾ ಆಯೋಗದ ಅಧ್ಯಕ್ಷರು ಮನವಿ ಮಾಡಿ ಸೂಚಿಸಿದ್ದ ಸ್ಥಳಗಳಿಗೆ ಭೇಟಿಯ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಈದಿನ ಡಾಟ್ ಕಾಮ್ ಅಭಿನಂದನೆ ತಿಳಿಸುತ್ತದೆ.