ರೈತರು ಬೆಳೆದ ಬೆಳೆಯನ್ನು ರೋಡಿಗೆ ತಂದು ಬಿಸಾಡುವ ದೃಶ್ಯ ಎಲ್ಲರೂ ಕಂಡಿದ್ದಾರೆ. ಲಕ್ಷಾಂತರ ರೂ ಸಾಲ ಮಾಡಿಕೊಂಡು ನಿರಾಸೆ ಅನುಭವಿಸುತ್ತಾನೆ. ಈ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ ರೈತರ ಉತ್ಪಾದನಾ ವೆಚ್ಚ ತಿಳಿದು ಬೆಳೆಗೆ ಬೆಲೆ ನಿಗದಿ ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಆಗ್ರಹಿಸಿದರು.
ತಾಲ್ಲೂಕಿನ ಕಡಬ ಹೋಬಳಿ ಕೋಣೆಮಾದೇನಹಳ್ಳಿ ಗ್ರಾಮದಲ್ಲಿ ರೈತಸಂಘದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಅವರು ಕುಡಿಯುವ ನೀರಿಗೂ ಹಾಲಿಗೂ ಒಂದೇ ಬೆಲೆ ಮಾರುಕಟ್ಟೆಯಲ್ಲಿ ಸಾಕ್ಷಿಯಾಗಿ ನಮ್ಮ ಮುಂದಿದೆ. ಒಂದು ಲೀಟರ್ ನೀರಿನ ಬಾಟಲ್ ಶೋ ಕೇಸ್ ನಲ್ಲಿ ಇದ್ದರೆ, ಹಾಲು ಪ್ಯಾಕೆಟ್ ನಲ್ಲಿದೆ. ಆದರೆ ಹಾಲು ಸಿದ್ಧವಾಗಲು ಆಗುವ ವೆಚ್ಚ ಗಮನಿಸಿದರೆ ಒಂದು ಲೀಟರ್ ಹಾಲು 80 ರೂಗಿಂತ ಹೆಚ್ಚಿರಬೇಕು ಎಂದು ಉದಾಹರಣೆ ನೀಡಿದರು.

ದಿನದ 16 ಗಂಟೆ ದುಡಿಯುವ ಏಕೈಕ ವರ್ಗ ರೈತರು. ಆದರೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ಸಹ ರೈತರದ್ದೇ ಆಗಿದೆ. ಪ್ರತಿ ಗಂಟೆಗೆ 24 ಮಂದಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕಳೆದ ಹತ್ತು ವರ್ಷದಲ್ಲಿ 3.50 ಲಕ್ಷ ಮಂದಿ ರೈತರನ್ನು ಈಗಾಗಲೇ ಕಳೆದುಕೊಂಡಿದ್ದೇವೆ. ದಿನದ 8 ಗಂಟೆ ದುಡಿಯುವ ಕಾರ್ಮಿಕ ನೆಮ್ಮದಿ ಕಾಣುತ್ತಾನೆ. ರೈತರಿಗೆ ಯಾಕೆ ನೆಮ್ಮದಿ ಸಿಕ್ಕಿಲ್ಲ ಎಂಬುದು ಸಮೀಕ್ಷೆ ನಡೆಸಿ ಸರ್ಕಾರ ರೈತ ಪರ ನಿಲ್ಲಬೇಕಿದೆ. ನೀರು, ಗೊಬ್ಬರ, ಕರೆಂಟ್ ನೀಡಿದರೆ ಸ್ವಾಭಿಮಾನಿ ಬದುಕು ನಡೆಸುತ್ತಾನೆ. ಈ ನಿಟ್ಟಿನಲ್ಲಿ ನಮ್ಮ ಹಕ್ಕು ಪಡೆಯಲು ರೈತ ಸಂಘ ಹಳ್ಳಿಗಳಲ್ಲಿ ಬಲವರ್ಧನೆಗೊಳ್ಳಬೇಕು ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ರೈತರಲ್ಲಿ ಅಸಂಘಟಿತ ವಾತಾವರಣ ಹೆಚ್ಚಾಗಿದೆ. ಕೃಷಿಗೆ ಪ್ರಾಮುಖ್ಯತೆ ನೀಡದ ಸರ್ಕಾರದ ವಿರುದ್ಧ ಹೋರಾಟ ಮೂಲಕವೇ ನಮ್ಮ ಕೆಲಸ ಸಾಧಿಸಬೇಕಿದೆ. ಪ್ರತಿ ಗ್ರಾಮದಲ್ಲಿ ರೈತ ಸಂಘ ಘಟಕ ಕೆಲಸ ಮಾಡಿದರೆ ನಮ್ಮ ಹೋರಾಟಕ್ಕೆ ಬಲ ಸಿಗಲಿದೆ. ಸರ್ಕಾರದ ಗಮನ ಸೆಳೆಯಲು ಸಂಘಟಿತ ಶಕ್ತಿ ಪ್ರದರ್ಶನ ಮಾಡಬೇಕಿದೆ. ಈ ನಿಟ್ಟಿನಲ್ಲಿ ರೈತರು ಒಗ್ಗೂಡಿ ಸಂಘದ ಮೂಲಕ ತಮ್ಮ ಹಕ್ಕು ಪ್ರತಿಪಾದಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ 50 ಮಂದಿ ರೈತರ ಸಂಘಕ್ಕೆ ಚಾಲನೆ ನೀಡಲಾಯಿತು.
ವೇದಿಕೆಯಲ್ಲಿ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಮಂಜುನಾಥ್, ಚನ್ನಬಸವಣ್ಣ, ಜಗದೀಶಯ್ಯ, ಗಂಗಣ್ಣ, ಪ್ರಕಾಶ್, ಬಸವರಾಜು, ಮಹದೇವಣ್ಣ, ಯತೀಶ್, ಕನ್ನಿಗಪ್ಪ ಇನ್ನಿತರರು ಇದ್ದರು.