ದಾವಣಗೆರೆಗೆ ಭೇಟಿ ನೀಡಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ದಿಢೀರನೆ ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ, ಕೆಲವು ಅಸಮರ್ಪಕ ವ್ಯವಸ್ಥೆಯ, ಸೇವೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು..
ಆಸ್ಪತ್ರೆಯ ವಾರ್ಡ್ಗಳಲ್ಲಿ ಭೇಟಿ ನೀಡಿ ರೋಗಿಗಳ ಪ್ರತಿಕ್ರಿಯೆ ಪಡೆದರು. ಔಷಧಿ ವಿತರಣಾ ಕೇಂದ್ರ, ಅಡುಗೆ ತಯಾರಿಸುವ ಕೋಣೆ, ನೀರಿನ ಟ್ಯಾಂಕ್ ಗಳ ಪರಿಶೀಲನೆ ನಡೆಸಿದರು. ಈ ವೇಳೆ ನೀರಿನ ನೆಲ ತೊಟ್ಟಿಗಳ ಗೋಡೆ ಪಾಚಿ ಕಟ್ಟಿದ್ದು, ಹುಳುಗಳು, ಜಿರಲೆ ಕಂಡುಬಂದವು. ಅವರು ವ್ಯವಸ್ಥೆಯನ್ನು ಸರಿಪಡಿಸಿ ವರದಿ ನೀಡುವಂತೆ ಸೂಚಿಸಿದರು. ಅಲ್ಲದೆ ನೀರಿನ ಬೃಹತ್ ನೆಲತೊಟ್ಟಿಗಳ ನೀರನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿ ವರಧಿ ಕೊಡುವಂತೆ ಸೂಚಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ಸುತ್ತಲಿನ ತಾಲೂಕು ಹಳ್ಳಿಗಳಿಂದ ಜನರು ಆಸ್ಪತ್ರೆಗೆ ಬರುವುದರಿಂದ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದೆ. 400 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಸುಮಾರು ಅದಕ್ಕೂ ಹೆಚ್ಚಿನ ಒಳ ರೋಗಿಗಳ ಸೇವೆ ನೀಡುತ್ತಿದ್ದಾರೆ. ಹಳೆಯ ಕಟ್ಟಡವಾಗಿದ್ದು , ದುರಸ್ತಿ ನಿರ್ವಹಣೆ ಮಾಡಬೇಕು. ಔಷಧಿ ವಿತರಣಾ ಕೇಂದ್ರಗಳಲ್ಲಿ ಸರಿಯಾದ ಔಷಧಿಗಳನ್ನು ನೀಡುತ್ತಿಲ್ಲ. ಅಲ್ಲಿ ತರಭೇತಿ ಪಡೆಯುವವರು ಕಾರ್ಯ ನಿರ್ವಹಿಸುತ್ತಿದ್ದು ಇರುವ ಔಷಧಿಗಳನ್ನು ಕೂಡ ನೀಡುತ್ತಿಲ್ಲ. ಕೆಲವು ಔಷಧಿಗಳು ಇಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತದೆ. ಆಸ್ಪತ್ರೆ ಆಡಳಿತ, ಶೇಖರಣಾಗಾರದ ಸಿಬ್ಬಂದಿ ಮತ್ತು ವಿತರಣಾ ಸಿಬ್ಬಂದಿಯ ನಡುವೆ ಸಮನ್ವಯದ ಕೊರತೆ ಇದೆ” ಎಂದು ಅಸಮಧಾನ ವ್ಯಕ್ತಪಡಿಸಿದರು.

“ನೀರಿನ ತೊಟ್ಟಿಗಳನ್ನು ಪರಿಶೀಲಿಸಿದ್ದೇನೆ. ಎತ್ತರದಲ್ಲಿರುವ ನೀರಿನ ತೊಟ್ಟಿಯನ್ನು ಆರು ತಿಂಗಳ ಹಿಂದೆ ಸ್ವಚ್ಛಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ. ಅದರ ವರದಿ ಕೇಳಿದ್ದೇನೆ. ಆದರೆ ನೆಲತೊಟ್ಟಿಯಲ್ಲಿ ಪರಿಶೀಲಿಸಿದಾಗ ಜಿರಳೆ, ಜರಿ, ಹಲ್ಲಿ, ಸಣ್ಣಸಣ್ಣ ಹುಳುಗಳು ಕಂಡು ಬಂದಿದ್ದು, ಇದನ್ನು ಸ್ವಚ್ಛಗೊಳಿಸಬೇಕಿದೆ. ಬಹುತೇಕ ಕಾಯಿಲೆಗಳು ನೀರಿನ ಮೂಲದಿಂದಲೇ ಪ್ರಾರಂಭವಾಗುತ್ತವೆ. ಹಾಗಾಗಿ ಬರುವ ಬಡ ರೋಗಿಗಳಿಗೆ ಸ್ವಚ್ಛ, ಉತ್ತಮ ನೀರನ್ನು ಕೊಡಬೇಕು. ನೀರನ್ನು ಪ್ರಯೋಗಾಲಯಕ್ಕೆ ಕಳಿಸಿ ವರದಿ ಕಳಿಸಿಕೊಡುವಂತೆ ಸೂಚಿಸಿದ್ದೇನೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜವಾಹರ್ ಬಾಲ್ ಮಂಚ್ ನಿಂದ ಮಕ್ಕಳ ವಿಶಿಷ್ಟ ಪ್ರತಿಭೆ ಅನಾವರಣಕ್ಕೆ ಮಕ್ಕಳೋತ್ಸವ.
ಹುಬ್ಬಳ್ಳಿಯಲ್ಲಿ ಮಗುವಿನ ಮೇಲೆ ನೆಡೆದಿದ್ದ ಅಮಾನುಷ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು “ಮಂಗಳವಾರ ಮಗುವಿನ ತಾಯಿಯನ್ನು ಭೇಟಿ ಮಾಡಿದ್ದು, ನಾಲ್ಕಾರು ಮನೆಗಳಲ್ಲಿ ಕೆಲಸ ಮಾಡಿಕೊಂಡು ಮಕ್ಕಳಲ್ಲಿ ಸಾಕುತ್ತಿದ್ದ ಆಕೆಗೆ ಎರಡು ಹೆಣ್ಣು ಮಕ್ಕಳು. ಇನ್ನೊಂದು ವಿಶೇಷ ಚೇತನ ಮಗುವಿದೆ. ಮಗುವಿನ ಸ್ಥಿತಿಯನ್ನು ನಾನು ವಿಡಿಯೋಗಳಲ್ಲಿ ನೋಡಿದ್ದು , ಎಂತಹವರಿಗೆ ಆದರೂ ಹೃದಯ ಮಿಡಿಯುವಂತಹ ಸ್ಥಿತಿಯಲ್ಲಿ ಮಗು ದೊರಕಿದ್ದು, ಅದನ್ನು ನೋಡಿದ ಸಾಮಾನ್ಯರಿಗೂ ಅಪರಾಧಿಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ತಾಯಿ ಸುಶಿಕ್ಷಿತಳಾಗಿದ್ದು ಮಗು ಕಾಣೆಯಾದ ತಕ್ಷಣ, ಸಿಸಿಟಿವಿ ಪರಿಶೀಲಿಸಿ, ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಕಾರ್ಯಾಚರಣೆ ನೆಡೆಸಿದ್ದರಿಂದ ಗಂಟೆಯೊಳಗೇ ಆರೋಪಿ ಸಿಕ್ಕಿಬಿದ್ದಿದ್ದಾನೆ. ಅಪರಾಧ ಎಸಗಿದ ವಿಕೃತ ಮನಸ್ಥಿತಿಯ ವ್ಯಕ್ತಿಗೆ ಪೊಲೀಸರು ಸರಿಯಾದ ಶಿಕ್ಷೆ ನೀಡಿದ್ದು ಹತ್ಯೆಗೊಳಗಾದ ಮಗು, ತಾಯಿ ಮತ್ತು ಕುಟುಂಬಕ್ಕೆ, ತಾತ್ಕಾಲಿಕವಾಗಿ ನ್ಯಾಯ ಸಿಕ್ಕಂತಾಗಿದೆ. ಆದರೆ ಮಗುವನ್ನು ವಾಪಸು ಅವರಿಗೆ ಕೊಡಿಸಲು ಸಾಧ್ಯವಾಗದಿರುವುದೇ ನೋವಿನ ಸಂಗತಿ” ಎಂದು ಸಂತಾಪ ವ್ಯಕ್ತಪಡಿಸಿದರು.