ಜಾತಿ ಜನಗಣತಿ | ಲಿಂಗಾಯತ- ಒಕ್ಕಲಿಗರ ವಿರೋಧದ ಮಧ್ಯೆ ಕುತೂಹಲ ಸೃಷ್ಟಿಸಿದ ಅಹಿಂದ ವರ್ಗಗಳ ಮೌನ

Date:

Advertisements
ಅಸಮಾನತೆಯಲ್ಲಿ ಹಿಂದುಳಿದ ವರ್ಗ ಸದಾ ತುಳಿತಕ್ಕೆ ಒಳಗಾಗುತ್ತಲೇ ಬರುತ್ತಿದೆ. ತಮ್ಮ ಜಾತಿ ಪ್ರೇಮಕ್ಕೆ ಒಳಗಾಗಿ ಜಾತಿ ಗಣತಿ ವರದಿ ವಿರೋಧಿಸುತ್ತಿರುವ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಕಾಂಗ್ರೆಸ್‌ ನಾಯಕರು ತಮ್ಮ ಮತ ಬ್ಯಾಂಕ್‌ ಆಗಿರುವ ಅಹಿಂದ ಸಮುದಾಯಗಳ ವಿರುದ್ಧ ಪರೋಕ್ಷವಾಗಿ ಸಮರ ಸಾರಿದಂತೆ ಕಾಣುತ್ತಿದೆ. 

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ್ದ ಜಾತಿವಾರು ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 ವರದಿ (ಜಾತಿ ಗಣತಿ ವರದಿ) ಬಗ್ಗೆ ಚರ್ಚಿಸಲು ಏ.17ರಂದು ವಿಶೇಷ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಇತ್ತ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ತುರ್ತು ಸಭೆಗಳನ್ನು ನಡೆಸುತ್ತಿದ್ದು, ಜಾತಿ ಗಣತಿ ವರದಿ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಜಾತಿ ಗಣತಿ ವರದಿ ಬಗ್ಗೆ ಇರುವ ವಿರೋಧ ಕೇವಲ ಬಿಜೆಪಿ-ಜೆಡಿಎಸ್‌ನದ್ದು ಮಾತ್ರವಲ್ಲ, ಕಾಂಗ್ರೆಸ್‌ನೊಳಗಿನ ಲಿಂಗಾಯತ ಮತ್ತು ಒಕ್ಕಲಿಗ ನಾಯಕರು ಸಹ ವಿರೋಧ ವ್ಯಕ್ತಪಡಿಸುತ್ತಿರುವುದು ಕುತೂಹಲ ಸೃಷ್ಟಿಸಿದೆ. ತಮ್ಮ ಜಾತಿ ಪ್ರೇಮಕ್ಕೆ ಒಳಗಾಗಿ ಜಾತಿ ಗಣತಿ ವರದಿ ವಿರೋಧಿಸುತ್ತಿರುವ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಕಾಂಗ್ರೆಸ್‌ ನಾಯಕರು ತಮ್ಮ ಮತ ಬ್ಯಾಂಕ್‌ ಆಗಿರುವ ಅಹಿಂದ ಸಮುದಾಯಗಳ ವಿರುದ್ಧ ಪರೋಕ್ಷವಾಗಿ ಸಮರ ಸಾರಿದಂತೆ ಕಾಣುತ್ತಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು, ಸಂವಿಧಾನ ರಚನೆಯಾಗಿ 75 ವರ್ಷ ಕಳೆದಿದ್ದರೂ ಈವರೆಗೂ ಸಂವಿಧಾನದ ಹಕ್ಕುಗಳು ಹಿಂದುಳಿದ ವರ್ಗದೊಳಗಿನ ಕೆಲವು ಸಮುದಾಯಗಳಿಗೆ ನ್ಯಾಯಯುತವಾಗಿ ದೊರಕಿಲ್ಲ. ಅಸಮಾನತೆಯಲ್ಲಿ ಹಿಂದುಳಿದ ವರ್ಗ ಸದಾ ತುಳಿತಕ್ಕೆ ಒಳಗಾಗುತ್ತಲೇ ಬರುತ್ತಿದೆ.

Advertisements

ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದವರಿಗೆ (ಇಡಬ್ಲ್ಯೂಎಸ್) ಶೇ.10ರಷ್ಟು ಮೀಸಲಾತಿ ಜಾರಿಗೆ ತಂದಿದೆ. ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರಬಾರದೆಂಬ ಸುಪ್ರೀಂ ಕೋರ್ಟ್ ತೀರ್ಪು ನಗಣ್ಯವಾಗಿದೆ. ಹೀಗಾಗಿ ಅನ್ಯಾಯಕ್ಕೆ ಗುರಿಯಾಗಿರುವವರಿಗೆ ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಜಾತಿ ಗಣತಿ ವರದಿ ಅನುಷ್ಠಾನವಾದರೆ ಅಹಿಂದ ವರ್ಗಕ್ಕೆ ಮತ್ತಷ್ಟು ಬಲ ಬರಲಿದೆ. ಅಹಿಂದಕ್ಕೆ ಬಲ ತುಂಬಲೇಬೇಕು ಎಂದು ಹೆಜ್ಜೆ ಇಟ್ಟಿರುವ ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯ ಅವರು ಜಾತಿವಾರು ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಿ, ಕಳೆದ ಸಚಿವ ಸಂಪುಟದಲ್ಲಿ ವರದಿಯನ್ನು ತೆರೆದಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ವರದಿಯಿಂದ ಮಾಹಿತಿಗಳು ಸೋರಿಕೆಯಾಗಿದ್ದು, ಮಾಧ್ಯಮಗಳಲ್ಲಿ ನಿತ್ಯ ವರದಿಯಾಗುತ್ತಿವೆ. ಸೋರಿಕೆ ಮಾಹಿತಿ ಪ್ರಕಾರ ಜಾತಿ ಗಣತಿ ವರದಿಯಂತೆ ನಾನಾ ಸಮುದಾಯಗಳ ಜನಸಂಖ್ಯೆ
ಪರಿಶಿಷ್ಟ ಜಾತಿ (ಎಸ್‌ಸಿ ) – 1.08 ಕೋಟಿ, ಮುಸ್ಲಿಂ – 70 ಲಕ್ಷ, ಲಿಂಗಾಯತರು – 65 ಲಕ್ಷ, ಒಕ್ಕಲಿಗರು – 60 ಲಕ್ಷ, ಕುರುಬರು – 45 ಲಕ್ಷ, ಈಡಿಗರು – 15 ಲಕ್ಷ, ಪರಿಶಿಷ್ಟ ಪಂಗಡ -40.45 ಲಕ್ಷ, ವಿಶ್ವಕರ್ಮ -15 ಲಕ್ಷ, ಬೆಸ್ತರು -15 ಲಕ್ಷ, ಬ್ರಾಹ್ಮಣ – 14 ಲಕ್ಷ, ಗೊಲ್ಲ- 10 ಲಕ್ಷ, ಮಡಿವಾಳ – 6 ಲಕ್ಷ, ಕುಂಬಾರ – 5 ಲಕ್ಷ ಹಾಗೂ ಸವಿತಾ ಸಮಾಜ – 5 ಲಕ್ಷ ಇದೆ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ? ರಾಯಭಾರ | ಜಾತಿ ಗಣತಿ; ಹೆಜ್ಜೆ ಮುಂದಿಟ್ಟರಷ್ಟೇ ದಾರಿ ನಿಚ್ಚಳ

ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ (2013-18) ಅವಧಿಯಲ್ಲಿ ಆಯೋಗದ ಅಂದಿನ ಅಧ್ಯಕ್ಷರಾಗಿದ್ದ ಎಚ್‌. ಕಾಂತರಾಜ ನೇತೃತ್ವದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಸಮೀಕ್ಷೆಗೆ ₹158 ಕೋಟಿ ವೆಚ್ಚವಾಗಿತ್ತು. ಸಿದ್ದರಾಮಯ್ಯ ಅವರ ಅವಧಿಯಲ್ಲಿ ವರದಿ ಸಿದ್ದಗೊಂಡಿರಲಿಲ್ಲ. ನಂತರ ವರದಿ ಸಿದ್ಧವಾಗಿದ್ದರೂ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ, ನಂತರ ಮುಖ್ಯಮಂತ್ರಿಯಾದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಈ ವರದಿಯನ್ನು ಸ್ವೀಕರಿಸಲು ಮುಂದಾಗಿರಲಿಲ್ಲ.

ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿದ ದಿನದಿಂದಲೇ ‘ವರದಿ ಸ್ವೀಕರಿಸುವ ನನ್ನ ನಿರ್ಧಾರ ಅಚಲ’ ಎಂದು ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿಕೊಂಡೇ ಬಂದಿದ್ದಾರೆ. ಆದರೆ, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಮಠಾಧೀಶರು, ಸಚಿವರು, ಶಾಸಕರು ವರದಿ ಸ್ವೀಕರಿಸಬಾರದು ಎಂದು ಮುಖ್ಯಮಂತ್ರಿ ಮೇಲೆ ಇನ್ನಿಲ್ಲದ ಒತ್ತಡ ಹೇರಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳೂ ಆದ ಸಚಿವ ಈಶ್ವರ ಖಂಡ್ರೆ, ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ವರದಿಗೆ ವಿರೋಧ ವ್ಯಕ್ತಪಡಿಸಿ ಮನವಿ ಪತ್ರವನ್ನೂ ಸಲ್ಲಿಸಿದ್ದನ್ನು ಗಮನಿಸಬಹುದು.

ಆದರೆ, ಲೋಕಸಭೆ ಚುನಾವಣೆ ಸನಿಹದಲ್ಲಿರುವಾಗಲೇ ಸಿಎಂ ಸಿದ್ದರಾಮಯ್ಯ ಅವರು ದಿಟ್ಟ ನಿರ್ಧಾರ ಮಾಡಿ ವರದಿಯನ್ನು ಸ್ವೀಕರಿಸಿದರು. ಅಲ್ಲಿಂದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿದೆ. ಸಿದ್ದರಾಮಯ್ಯ ನೇತೃತ್ವದ ಸಂಪುಟದ ಕೆಲವು ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ವರದಿ ಬಗ್ಗೆ ತಕರಾರು ತೆಗೆಯುತ್ತಲೇ ಬರುತ್ತಿದ್ದಾರೆ. ಸಮೀಕ್ಷೆಗೆ ವಿರೋಧವಿಲ್ಲ; ಸಮೀಕ್ಷೆ ವೈಜ್ಞಾನಿಕವೇ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅವರೆಲ್ಲ ಜಾತಿ ಗಣತಿ ವರದಿ ವಿರೋಧಿಸುತ್ತಿದ್ದಾರೆ.

ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಯಾಗಿದ್ದಾಗ ಜಾತಿ ಗಣತಿ ವರದಿ ಜಾರಿಯಾಗದಿದ್ದರೆ ಮುಂದೆ ವರದಿ ಜಾರಿ ಅಸಾಧ್ಯ ಎಂಬುದು ಅವರಿಗೂ ಗೊತ್ತಿದೆ. ಹೀಗಾಗಿಯೇ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ದಲಿತ (ಅಹಿಂದ) ಸಮುದಾಯಗಳ ಬೇಡಿಕೆಗೆ ಮಣೆ ಹಾಕಿ, ವರದಿಯನ್ನು ಸ್ವೀಕರಿಸಿ, ಅದನ್ನು ಸಚಿವ ಸಂಪುಟದಲ್ಲಿ ಓಪನ್‌ ಮಾಡಿ ಈಗ ವರದಿ ಬಗ್ಗೆ ಚರ್ಚಿಸಲು ಏ.17ಕ್ಕೆ ವಿಶೇಷ ಸಚಿವ ಸಂಪುಟ ಸಭೆಯನ್ನು ಸಿದ್ದರಾಮಯ್ಯ ಕರೆದಿದ್ದಾರೆ.

ಪ್ರಬಲ ಜಾತಿ ಸಮುದಾಯ ಎನಿಸಿಕೊಂಡಿರುವ ಒಕ್ಕಲಿಕ ಮತ್ತು ಲಿಂಗಾಯತ ನಾಯಕರಿಗೆ ಬಿಸಿ ತಟ್ಟಿದೆ. ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತರು ಸಂಖ್ಯೆಯು ಜಾತಿ ಗಣತಿ ವರದಿಯಲ್ಲಿ ಸಿಂಹಪಾಲು ಪಡೆದುಕೊಂಡಿರುವುದರಿಂದ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಪೆಟ್ಟು ಬೀಳುವ ಹೊಟ್ಟೆಕಿಚ್ಚಿನಿಂದ ಪಕ್ಷಭೇದ ಮರೆತು ಒಕ್ಕಲಿಗ ಮತ್ತು ಲಿಂಗಾಯತ ನಾಯಕರು ದೊಡ್ಡಮಟ್ಟದ ವಿರೋಧಕ್ಕೆ ಮುಂದಾಗಿದ್ದಾರೆ. ಆದರೆ ಈ ವಿರೋಧ ಹೀಗೆ ದೊಡ್ಡದಾಗುತ್ತ ಹೋದರೆ ದೊಡ್ಡ ರಾಜಕೀಯ ಧ್ರುವೀಕರಣಕ್ಕೂ ದಾರಿಯಾಗಬಹುದು.

ಅಂದರೆ, ಈ ಜಾತಿ ಗಣತಿ ವರದಿಯಿಂದ ರಾಜ್ಯದಲ್ಲಿ ಎಡ ಹಾಗೂ ಬಲ ಎಂಬ ಪರಿಶಿಷ್ಟರ ನಡುವಿನ ಎರಡು ಬಣಗಳ ನಡುವಿನ ಪ್ರಾಬಲ್ಯದ ಬಗ್ಗೆಯೂ ಒರೆಗೆ ಹಚ್ಚಿದಂತಾಗಿದೆ. ಜತೆಗೆ ಒಕ್ಕಲಿಗರು ಅಥವಾ ಲಿಂಗಾಯತರು ಈ ವರದಿಯನ್ನು ವಿರೋಧಿಸಿದರೆ, ತನ್ನಿಂತಾನೇ ಅವರು ಹಿಂದುಳಿದ ಮತ್ತು ದಲಿತ ಸಮುದಾಯದ ವಿರೋಧವನ್ನೂ ಕಟ್ಟಿಕೊಂಡಂತಾಗುತ್ತದೆ. ಇದು ಇನ್ನೊಂದು ರೀತಿಯ ರಾಜಕೀಯ ಧ್ರುವೀಕರಣಕ್ಕೂ ದಾರಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಅಹಿಂದ ನಾಯಕರ ಮೌನದ ಗುಟ್ಟು ಇಲ್ಲೇ ಅಡಗಿದೆ. ಜಾತಿ ಗಣತಿ ವರದಿ ಜಾರಿಯಾಗಲೇಬೇಕು ಎನ್ನುವ ಬಗ್ಗೆ ಅಹಿಂದ ವರ್ಗದ ವಿವಿಧ ಸ್ತರಗಳಲ್ಲಿ ದೊಡ್ಡ ಮಟ್ಟದ ಆಗ್ರಹಗಳು ಕೇಳಿಬರುತ್ತಿಲ್ಲ. ಎಲ್ಲೂ ಯಾವುದೇ ರೀತಿಯಲ್ಲೂ ಸಭೆ ಮಾಡಿಲ್ಲ. ಇದು ಕೂಡ ಸಹಜವಾಗಿ ಕುತೂಹಲ ಮೂಡಿಸಿರುವ ನಡೆ. ಒಂದು ರೀತಿಯಲ್ಲಿ ಕಾದು ನೋಡುವ ತಂತ್ರವೂ ಇರಬಹುದು. ಜೊತೆಗೆ ಸ್ಥಳೀಯ ರಾಜಕಾರಣದ ಹೊಂದಾಣಿಕೆಯೂ ಕಾರಣವಾಗಿರಬಹುದು.

ಜಾತಿ ಗಣತಿ ವರದಿ ಹಿನ್ನೆಲೆಯಲ್ಲಿ ದೊಡ್ಡ ಸಮುದಾಯವನ್ನು ಸ್ಥಳೀಯವಾಗಿ ವಿರೋಧಿಸಿಕೊಂಡರೆ ಆಗಬೇಕಾದ ಕೆಲಸಗಳಿಗೆ ಅಡೆತಡೆ ಉಂಟಾಗುವ ಅಪಾಯವನ್ನು ಗುರುತಿಸಿಕೊಂಡು, ಅಹಿಂದ ವರ್ಗದ ಸಣ್ಣ ಸಣ್ಣ ಸಮುದಾಯಗಳು ಜಾಣ್ಮೆಯ ಹೆಜ್ಜೆ ಇಡುತ್ತಿರಬಹುದು. ಆದರೆ ಜಾತಿ ಗಣತಿ ವರದಿಯಿಂದ ಅಹಿಂದ ವರ್ಗಕ್ಕೆ ದೊಡ್ಡ ಲಾಭವೇ ಆಗಲಿದೆ. ಹಂತ ಹಂತವಾಗಿ ವರದಿ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗಳು ಆರಂಭವಾಗಿ ನಮಗೂ ರಾಜಕೀಯ ಪ್ರಾತಿನಿಧ್ಯ ಸಾಧ್ಯವಿದೆ ಎಂಬುದು ಅರಿವಾಗುತ್ತಿದ್ದಂತೆ ಪ್ರಬಲ ಜಾತಿಗಳ ವಿರುದ್ಧ ತಿರುಗಿಯೂ ಬೀಳಬಹುದು. ಜಾತಿ ಗಣತಿ ವರದಿಯನ್ನು ವಿರೋಧಿಸುವ ಮುನ್ನ ಈ ಅಪಾಯವನ್ನು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಜನಪ್ರತಿನಿಧಿಗಳು ಅರ್ಥ ಮಾಡಿಕೊಂಡಷ್ಟು ಒಳ್ಳೆಯದು.

ವರದಿ ಮಂಡನೆಯಾದ ಬಳಿಕ ಕೆಲವೊಂದು ವಿರೋಧಗಳು ವ್ಯಕ್ತವಾಗಲಿರುವ ಕಾರಣಕ್ಕೆ ಏ.17ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಉಪ ಸಮಿತಿ ರಚನೆಯ ಸಾಧ್ಯತೆಯೂ ಇದೆ. ಪ್ರಮುಖ ಸಚಿವರ ಅಧ್ಯಕ್ಷತೆಯ ಉಪ ಸಮಿತಿ, ಈ ವರದಿ ಕುರಿತು ನಿರ್ಧಾರಕ್ಕೆ ಬರಲಿದೆ. ಆದರೆ, ಈ ವರದಿಗೆ ಕಾಂಗ್ರೆಸ್ ಹೈಕಮಾಂಡ್ ಬೆಂಬಲವಿದೆ ಎಂಬುದು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶವಾಗಿದೆ.

ಜಾತಿ ಗಣತಿ ವರದಿ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈಗಾಗಲೇ ಸ್ಪಷ್ಟ ನಿಲುವನ್ನು ದೇಶಕ್ಕೆ ನೀಡಿರುವುದರಿಂದ ಹೈಕಮಾಂಡ್‌ ಕಟ್ಟುನಿಟ್ಟಿನ ಸೂಚನೆಯನ್ನು ರಾಜ್ಯದ ನಾಯಕರಿಗೆ ನೀಡುವ ಸಾಧ್ಯತೆ ಹೆಚ್ಚಿರುತ್ತದೆ. ಜಾತಿ ಗಣತಿ ವರದಿಯನ್ನು ವಿರೋಧಿಸುವುದೇ ಆದರೆ ಅಲ್ಲಿಗೆ ಕಾಂಗ್ರೆಸ್‌ ಒಳಗಿನ ನಾಯಕರಿಗೇ ಪಕ್ಷದೊಳಗೆ ಅಳಿವು ಉಳಿವಿನ ಪ್ರಶ್ನೆ ಎದುರಾಗುತ್ತದೆ.

ಒಕ್ಕಲಿಗರನ್ನು ಪ್ರಧಾನವಾಗಿ ಆಶ್ರಯಿಸಿರುವ ಜೆಡಿಎಸ್‌, ಲಿಂಗಾಯತರನ್ನು ಆಶ್ರಯಿಸಿರುವ ಬಿಜೆಪಿಗೆ ಈ ವರದಿಯಿಂದ ಸ್ವಲ್ಪ ತೊಂದರೆ ಉಂಟಾಗಬಹುದು. ಪ್ರಮುಖವಾಗಿ ಬಿಜೆಪಿಗೆ ಬೆಂಬಲಿಸುತ್ತಿರುವ ಹಿಂದುಳಿದ ವರ್ಗಗಳು, ದಲಿತರು, ಪರಿಶಿಷ್ಟರು ಒಂದು ರಾಜಕೀಯ ಶಕ್ತಿಯಾಗಿ ಬೆಳೆಯಲು ಅರಂಭಿಸಿದರೆ, ಆ ಪಕ್ಷಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆಯೂ ಇದೆ. ಹಿಂದುತ್ವ ಹೆಸರಲ್ಲಿ ಮಾಡುವ ರಾಜಕಾರಣಕ್ಕೂ ಬ್ರೇಕ್‌ ಬೀಳಬಹುದು. ಈ ಕಾರಣಕ್ಕಾಗಿಯೇ ಬಿಜೆಪಿ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿದೆ.

ಜನಸಂಖ್ಯೆ ಲೆಕ್ಕಾಚಾರಕ್ಕೆ ಆಧರಿಸಿ ಬಜೆಟ್ ಮಂಡಿಸಬೇಕು ಎಂಬ ಆಗ್ರಹ ಮೊದಲಿನಿಂದಲೂ ಇದೆ. ಹೀಗಾಗಿ ಜಾತಿಗಣತಿ ವರದಿಯು ಇದಕ್ಕೆ ಹೊಸ ಮಾನದಂಡವಾಗಲಿದೆ. ಒಂದು ರೀತಿಯಲ್ಲಿ ಜಾತಿಗಣತಿ ವರದಿ ಗೇಮ್ ಚೇಂಜರ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಅನ್ನಿಸುತ್ತದೆ. ಮುಂಬರುವ ದಿನಗಳಲ್ಲಿ ಅಹಿಂದ ಧ್ರುವೀಕರಣಕ್ಕೆ ದೊಡ್ಡ ದಾರಿಯಾಗಲಿದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X