- ಬಾಕಿ ಇರುವ 40.86 ಕೋಟಿ ರೂ. ವಿದ್ಯುತ್ ಬಿಲ್ ಹಂತ ಹಂತವಾಗಿ ಕಟ್ಟಿಸಿಕೊಳ್ಳಲು ಮನವಿ
- ವಿದ್ಯುತ್ ಪೂರೈಕೆ ಸ್ಥಗಿತಗೊಂಡರೆ ರೈತರಿಗೆ ಸಮಸ್ಯೆ ಆಗುವ ಕುರಿತು ಗಮನ ಸೆಳೆದ ಶಾಸಕ
ಮೈಷುಗರ್ ಸಕ್ಕರೆ ಕಾರ್ಖಾನೆಯು ಮಂಡ್ಯ ಭಾಗದ ರೈತರ ಜೀವನಾಡಿಯಾಗಿದೆ. ಇಲ್ಲಾಗುವ ಕಬ್ಬಿನ ಕಟಾವನ್ನು ನಂಬಿಕೊಂಡು ಲಕ್ಷಾಂತರ ರೈತ ಕುಟುಂಬಗಳು ಇವೆ. ಅಲ್ಲದೆ, ಈ ಬಾರಿ ಸುಮಾರು 5 ಲಕ್ಷ ಟನ್ ಕಬ್ಬನ್ನು ನುರಿಸುವ ಗುರಿಯನ್ನು ಹಾಕಿಕೊಂಡಿದೆ.
ಈಗ ಎದುರಾಗಿರುವ ಸಮಸ್ಯೆಯೆಂದರೆ ಈ ಹಿಂದಿನಿಂದಲೂ ನಷ್ಟದಲ್ಲಿದ್ದ ಕಂಪನಿಗೆ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗಿಲ್ಲ. 40.86 ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಬಾಕಿ ಇದ್ದು, ಇದನ್ನು ಹಂತ ಹಂತವಾಗಿ ಪಾವತಿ ಮಾಡಲು ಹಾಗೂ ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸಲು ಅಗತ್ಯ ವಿದ್ಯುತ್ ಸರಬರಾಜು ಮಾಡಲು ಚೆಸ್ಕಾಂನವರಿಗೆ ಆದೇಶಿಸಬೇಕು ಎಂದು ಮಂಡ್ಯ ಕ್ಷೇತ್ರದ ಶಾಸಕ ದಿನೇಶ್ ಗೂಳಿಗೌಡ ಅವರು ಇಂಧನ ಸಚಿವ ಕೆ ಜೆ ಜಾರ್ಜ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಮಂಡ್ಯ ಭಾಗದಲ್ಲಿ ಕಬ್ಬು ಪ್ರಮುಖ ಬೆಳೆಯಲ್ಲೊಂದಾಗಿದೆ. ಈ ಹಂತದಲ್ಲಿ ಕಬ್ಬು ನುರಿಸಲು ತೊಂದರೆಯಾದರೆ ಅದು ರೈತರ ಮೇಲೆ ಬಹಳವೇ ಪರಿಣಾಮವನ್ನು ಬೀರುತ್ತದೆ. ರೈತರ ಹಿತದೃಷ್ಟಿಯಿಂದ ತಾವು ಮಧ್ಯ ಪ್ರವೇಶ ಮಾಡಿ ಕಬ್ಬು ನುರಿಸಲು ವಿದ್ಯುತ್ ಸಮಸ್ಯೆ ಆಗದಂತೆ ಆದೇಶಿಸಬೇಕು ಎಂದು ಶಾಸಕ ದಿನೇಶ್ ಗೂಳಿಗೌಡ ಅವರು ಕೋರಿದ್ದಾರೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು, ಅಧಿಕಾರಿಗಳ ಜತೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ಪತ್ರದಲ್ಲೇನಿದೆ?
“ಮೈಸೂರು ಸಕ್ಕರೆ ಕಂಪೆನಿ ನಿಯಮಿತ, ಮಂಡ್ಯ ಕಂಪನಿಯು ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದ್ದು, ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು 5 ಲಕ್ಷ ಟನ್ ಕಬ್ಬನ್ನು ಈ ಕಾರ್ಖಾನೆಗೆ ಸರಬರಾಜು ಮಾಡಲು ರೈತರು ಒಪ್ಪಂದ ಮಾಡಿಕೊಂಡಿದ್ದಾರೆ. ಪ್ರಸ್ತುತ ಈ ಕಂಪೆನಿಯವರು ಚೆಸ್ಕಾಂಗೆ ಸುಮಾರು ರೂ.40.86 ಕೋಟಿಗಳ ವಿದ್ಯುತ್ ಬಿಲ್ ಬಾಕಿ ಮೊತ್ತವನ್ನು ಪಾವತಿಸಬೇಕಾಗಿದೆ. ಆದರೆ, ಕಂಪನಿಯ ಆರ್ಥಿಕ ಪರಿಸ್ಥಿತಿಯು ಇನ್ನೂ ಸುಧಾರಿಸದಿರುವುದರಿಂದ ವಿದ್ಯುತ್ ಬಾಕಿ ಮೊತ್ತವನ್ನು ಪಾವತಿಸಲು ಸಾಧ್ಯವಾಗಿರುವುದಿಲ್ಲ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅನ್ನಭಾಗ್ಯ ಯೋಜನೆ | 10 ಕೆ.ಜಿ ಅಕ್ಕಿಯ ಹಣವನ್ನು ಜನರ ಖಾತೆಗೆ ವರ್ಗಾಯಿಸಿ: ಬಿಜೆಪಿ
“ಆದುದರಿಂದ, ಪ್ರಸಕ್ತ ಹಂಗಾಮಿನಲ್ಲಿ ಕಬ್ಬನ್ನು ನುರಿಯಲು ವಿದ್ಯುತ್ ಅವಶ್ಯಕತೆಯಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ತೊಂದರೆಯಾಗದಂತೆ ವಿದ್ಯುತ್ ಸರಬರಾಜು ಮಾಡಲು ಮತ್ತು ಬಾಕಿ ಮೊತ್ತವನ್ನು ಹಂತ-ಹಂತವಾಗಿ ಪಾವತಿಸಲು ಸಕ್ಕರೆ ಕಾರ್ಖಾನೆಗೆ ಅನುಮತಿ ನೀಡಲು ವ್ಯವಸ್ಥಾಪಕ ನಿರ್ದೇಶಕರು, ಚೆಸ್ಕಾಂ ಇವರಿಗೆ ಆದೇಶಿಸಬೇಕು” ಎಂದು ಮಂಡ್ಯ ಜಿಲ್ಲೆಯ ರೈತರ ಪರವಾಗಿ ಶಾಸಕ ದಿನೇಶ್ ಗೂಳಿಗೌಡ ಕೋರಿದ್ದಾರೆ.