ಬೃಹತ್ ರಥೋತ್ಸವ ನಡೆಯುವ ಸಂದರ್ಭದಲ್ಲಿ ರಥಕ್ಕೆ ಹೈಟೆನ್ಶನ್ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಮೃತಪಟ್ಟು, 15 ಮಂದಿ ಗಾಯಗೊಂಡ ಘಟನೆ ತ್ರಿಪುರಾದ ಉನಕೋಟಿ ಜಿಲ್ಲೆಯ ಕುಮಾರ್‌ಘಾಟ್‌ನಲ್ಲಿ ನಡೆದಿದೆ.
ಸಂಜೆ 4.30 ಗಂಟೆಯ ಸಮಯದಲ್ಲಿ ಭಗವಾನ್ ಜಗನ್ನಾಥನ ವಾರ್ಷಿಕ ರಥ ಯಾತ್ರೆಯ ಉತ್ಸವ ಮೆರವಣಿಗೆ ನಡೆಯುತ್ತಿದ್ದಾಗ 133 ಕೆವಿ ಓವರ್‌ಲೋಡ್ ಕೇಬಲ್ ಸ್ಪರ್ಶವಾಗಿದೆ. ರಥವನ್ನು ಕಬ್ಬಿಣದಿಂದ ಮಾಡಲಾಗಿದ್ದು, ಅದ್ಧೂರಿಯಾಗಿ ಅಲಂಕರಿಸಲಾಗಿತ್ತು. ವಿದ್ಯುತ್ ತಂತಿಗೆ ಅದು ತಗುಲಿದಾಗ ವಿದ್ಯುತ್ ಪ್ರವಹಿಸಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ರಥಕ್ಕೆ ವಿದ್ಯುತ್ ತಂತಿ ಹೇಗೆ ತಗುಲಿತು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಇದು ಸ್ಟೇಷನ್ ಮಾಸ್ಟರ್ ಮಾಡುವ ಕೆಲಸ; ಪ್ರಧಾನಿಯ ವಂದೇ ಭಾರತ್ ಉದ್ಘಾಟನೆ ಛೇಡಿಸಿದ ಪ್ರಕಾಶ್ ರೈ
ಘಟನೆಗೆ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಸಂತಾಪ ಸೂಚಿಸಿದ್ದು, “ಕುಮಾರ್‌ಘಾಟ್‌ನಲ್ಲಿ ಸಂಭವಿಸಿದ ಭೀಕರ ವಿದ್ಯುತ್ ಸ್ಪರ್ಶದಿಂದ ಯಾತ್ರಾರ್ಥಿಗಳು ಪ್ರಾಣ ಕಳೆದುಕೊಂಡು ಹಲವರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ನನಗೆ ತೀವ್ರ ದುಃಖವಾಗಿದ್ದು, ಜೀವ ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಅಲ್ಲದೆ, ಗಾಯಗೊಂಡವರಿಗೆ ಬೇಗ ಚೇತರಿಸಿಕೊಳ್ಳಲೆಂದು ನಾನು ಹಾರೈಸುತ್ತೇನೆ. ಈ ಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ನೊಂದವರ ಬೆಂಬಲಕ್ಕೆ ನಿಂತಿದೆ” ಎಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.