ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಬೀಡಿ ಗ್ರಾಮದಲ್ಲಿ ನಡೆದ ವೃದ್ಧ ದಂಪತಿಯ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ತಿರುವು ಕಂಡಿದ್ದು, ‘ಡಿಜಿಟಲ್ ಅರೆಸ್ಟ್’ ಮಾಯಾಜಾಲದ ಮೂಲಕ ಹಣಕಾಸು ವಂಚನೆ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಚಿರಾಗ್ ಜೀವರಾಜಬಾಯ್ ಲಕ್ಕಡ್ (ಸೂರತ್, ಗುಜರಾತ್) ಎನ್ನಲಾಗಿದ್ದು, ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಅತ್ಯಂತ ಹೃದಯವಿದ್ರಾವಕ ಆತ್ಮಹತ್ಯೆ:
ಮಾರ್ಚ್ 27 ರಂದು ಡಿಯಾಗೋ ನಜರತ್ (83) ಹಾಗೂ ಪ್ಲೇವಿಯಾ ನಜರತ್ (78) ಎಂಬ ವೃದ್ಧ ದಂಪತಿ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ಲೇವಿಯಾ ನಿದ್ರೆ ಮಾತ್ರೆ ಸೇವಿಸಿ ಸಾವಿಗೀಡಾಗಿದರೆ, ಡಿಯಾಗೋ ಚಾಕುವಿನಿಂದ ಕುತ್ತಿಗೆ ಚುಚ್ಚಿಕೊಂಡು ನೀರಿನ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟಿದ್ದರು.
ಡೆತ್‌ನೋಟ್‌ನಿಂದ ಭಯಾನಕ ಬಯಲು:
ಡಿಯಾಗೋ ಬರೆದಿಟ್ಟಿದ್ದ ಡೆತ್‌ನೋಟ್ ಪ್ರಕಾರ, ಆತ್ಮಹತ್ಯೆಗೆ ‘ಡಿಜಿಟಲ್ ಅರೆಸ್ಟ್’, ಸೈಬರ್ ಬೆದರಿಕೆ, ಮತ್ತು ಹಣಕಾಸು ಹಗರಣವೇ ಕಾರಣವಾಗಿದೆ. “ನಿಮ್ಮ ನಂಬರಿನಿಂದ ಅಶ್ಲೀಲ ಸಂದೇಶಗಳು ಬಂದಿವೆ, ಸೈಬರ್ ಸೆಲ್‌ಗೆ ದೂರು ನೀಡಲಾಗಿದೆ” ಎಂದು ಅನಿಲ್ ಯಾದವ್ ಎಂಬಾತ ಕರೆಮಾಡಿ ಬೆದರಿಸುತ್ತಿದ್ದ ಎನ್ನಲಾಗಿದೆ.
ಆನ್‌ಲೈನ್ ವಂಚನೆ:
ಆರೋಪಿ, ಮೃತರ ಎಸ್‌ಬಿಐ ಖಾತೆಯಿಂದ ಐಡಿಎಫ್‌ಸಿ ಬ್ಯಾಂಕ್‌ನ ಖಾತೆಗೆ ₹6.10 ಲಕ್ಷ ವರ್ಗಾಯಿಸಿ, ಬಳಿಕ ವಿವಿಧ ಖಾತೆಗಳಿಗೆ ಹಣ ಹಂಚಿದ್ದ. ಪ್ರಕರಣದ ತನಿಖೆಯಲ್ಲಿ ಮೊಬೈಲ್ ಸಂಖ್ಯೆಯನ್ನ ಅಡವಟ್ಟಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧನ ಮಾಡಿದರು.
ಪೊಲೀಸರ ಸ್ಪಷ್ಟನೆ:
“ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಂತಹ ಡಿಜಿಟಲ್ ಅಪರಾಧಗಳ ವಿರುದ್ಧ ಜನರು ಎಚ್ಚರಿಕೆಯಿಂದ ಇರಬೇಕು,” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ.