ಸಿಪಿಐ(ಎಂ) | ನವ-ಫ್ಯಾಸಿಸಂ ಚರ್ಚೆಯ ಸುತ್ತ

Date:

Advertisements

ಭಾರತದಲ್ಲಿ ನವ-ಫ್ಯಾಸಿಸಂನ್ನು ಆರ್.ಎಸ್.ಎಸ್. ಮತ್ತು ಅದರ ಹಿಂದುತ್ವ ಕೋಮುವಾದಿ ಸಿದ್ಧಾಂತದಿಂದ ರೂಪಿಸಲಾಗಿದೆ. ಹಿಂದುತ್ವ ಸಿದ್ಧಾಂತವು ನವ-ಫ್ಯಾಸಿಸ್ಟ್ ರೀತಿಯದ್ದೇ ಆಗಿದೆ. ಹೀಗಾಗಿಯೇ ಬಿಜೆಪಿ ಆಳ್ವಿಕೆಯಲ್ಲಿ ಆರ್.ಎಸ್.ಎಸ್.ಗೆ ಅಧಿಕಾರದ ಸೂತ್ರಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಹಿಂದುತ್ವ ಕೋಮುವಾದಿ ಸಿದ್ದಾಂತ, ನವ-ಉದಾರವಾದಿ ಬಿಕ್ಕಟ್ಟು ಮತ್ತು ದೊಡ್ಡ ಬಂಡವಾಳದಾರರ ಹಿತಾಸಕ್ತಿಗಳ ರಕ್ಷಣೆ, ಇವೆಲ್ಲಕ್ಕೂ ಸರ್ವಾಧಿಕಾರದ ಹೇರಿಕೆಯ ಅನಿವಾರ್ಯತೆ ಹೆಚ್ಚಾಗುತ್ತದೆ. ಇವೆಲ್ಲವೂ ನವ-ಉದಾರವಾದಿ ಫ್ಯಾಸಿಸಂನ ಲಕ್ಷಣಗಳಾಗಿವೆ ಎಂದು ಸಿಪಿಐ(ಎಂ) ವಿವರಿಸುತ್ತದೆ.


ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ಯ 24ನೇ ಅಖಿಲ ಭಾರತ ಮಹಾಧಿವೇಶನ 2025 ಏಪ್ರಿಲ್ 2-6ರವರೆಗೆ ತಮಿಳುನಾಡಿನ ಮಧುರೈನಲ್ಲಿ ನಡೆಯಿತು. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಮಹಾಧಿವೇಶನಗಳಲ್ಲಿ ಸಿಪಿಐ(ಎಂ) ತನ್ನ ಮುಂದಿನ ಮೂರು ವರ್ಷಗಳ ರಾಜಕೀಯ ಧೋರಣೆಯನ್ನು ಅಂಗೀಕರಿಸುತ್ತದೆ. ಸಿಪಿಐ(ಎಂ) ನಿಯಮದ ಪ್ರಕಾರ, ಮಹಾಧಿವೇಶನಗಳಲ್ಲಿ ಅಂಗೀಕರಿಸುವ ರಾಜಕೀಯ ನಿರ್ಣಯದ ಕರಡನ್ನು ಕನಿಷ್ಠ ಎರಡು ತಿಂಗಳ ಮೊದಲು ಪಕ್ಷದ ಸದಸ್ಯರು ಮತ್ತು ಸಾರ್ವಜನಿಕರು ಚರ್ಚಿಸಲು ಮತ್ತು ಅಭಿಪ್ರಾಯಗಳನ್ನು ನೀಡಲು ಬಿಡುಗಡೆ ಮಾಡುತ್ತದೆ. ಇಂತಹ ಚರ್ಚೆಯ ಆಧಾರದಲ್ಲಿ ಮಹಾಧಿವೇಶನದಲ್ಲಿ ಮತ್ತಷ್ಟು ವಿಮರ್ಶೆ ನಡೆಸಿ ಅಂತಿಮವಾಗಿ ಅಂಗೀಕಾರ ಮಾಡುತ್ತದೆ. ಸಿಪಿಐ(ಎಂ)ನ ಈ ಆಂತರಿಕ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಸಾಮಾನ್ಯವಾಗಿ ಇತರೆ ಯಾವುದೇ ಬಂಡವಾಳಶಾಹಿ ಪಕ್ಷಗಳಲ್ಲಿ ನಡೆಯುವುದಿಲ್ಲ.

ಸಿಪಿಐ(ಎಂ) ಮಧುರೈ ಮಹಾಧಿವೇಶನದ ಸಂದರ್ಭಕ್ಕೆ ಬಿಡುಗಡೆ ಮಾಡಿದ ರಾಜಕೀಯ ನಿರ್ಣಯದಲ್ಲಿ ಬಳಸಿದ ನವ-ಫ್ಯಾಸಿಸ್ಟ್ ಶಬ್ದವು ಸಾಕಷ್ಟು ಚರ್ಚೆಗಳನ್ನು ಉಂಟು ಮಾಡಿತು. ಸಿಪಿಐ(ಎಂ) ತನ್ನ ರಾಜಕೀಯ ನಿರ್ಣಯದಲ್ಲಿ, “ಹನ್ನೊಂದು ವರ್ಷಗಳ ಮೋದಿ ಆಡಳಿತವು, ನವ-ಫ್ಯಾಸಿಸ್ಟ್ ಲಕ್ಷಣಗಳೊಂದಿಗೆ, ಬಲಪಂಥೀಯ, ಕೋಮುವಾದಿ, ಸರ್ವಾಧಿಕಾರಿ ಶಕ್ತಿಗಳ ಕ್ರೋಢೀಕರಣದಲ್ಲಿ ಪರಿಣಮಿಸಿದೆ” ಎಂದು ಹೇಳಿದೆ.

ನವ-ಫ್ಯಾಸಿಸ್ಟ್ ಶಬ್ದದ ಕುರಿತು ಉಂಟಾಗಬಹುದಾದ ಗೊಂದಲಗಳ ಬಗ್ಗೆ ಪ್ರತ್ಯೇಕವಾಗಿ ಒಂದು ವಿವರಣಾ ಟಿಪ್ಪಣಿಯನ್ನು ಪ್ರಕಟಿಸಿದೆ. ಈ ಟಿಪ್ಪಣಿಯ ಪರಿಣಾಮವಾಗಿ, ಪರ-ವಿರೋಧ ಚರ್ಚೆಗಳು, ಕಟುವಾದ ಟೀಕೆಗಳು ಮತ್ತು ಸಮಚಿತ್ತದ ವಿಮರ್ಶೆಗಳೂ ನಡೆದಿವೆ. ಕೆಲವು ಪತ್ರಿಕೆಗಳು ಮತ್ತು ಮಾಧ್ಯಮಗಳು “ಮೋದಿ ಸರ್ಕಾರ ಫ್ಯಾಸಿಸ್ಟ್ ಅಲ್ಲ – ಸಿಪಿಐ(ಎಂ)” ಎಂದು ಪ್ರಕಟಿಸಿದವು ಮತ್ತು ಗೊಂದಲಗಳನ್ನು ಸೃಷ್ಟಿಸಿದವು. ಬಹುತೇಕ ಟೀಕೆಗಳಿಗೆ ಕಾರಣವಾದದ್ದು, ಮೋದಿ ಆಡಳಿತದಲ್ಲಿ ಭಾರತವು ಫ್ಯಾಸಿಸ್ಟ್ ಆಳ್ವಿಕೆಯಾಗಿ ಮಾರ್ಪಟ್ಟಿದೆಯೇ ಅಥವಾ ಮಾರ್ಪಡುವ ಪ್ರಕ್ರಿಯೆಯಲ್ಲಿ ಇದೆಯೇ ಎಂಬುದರ ಕುರಿತಾಗಿದೆ.

ಸಿಪಿಐ(ಎಂ) ತನ್ನ ರಾಜಕೀಯ ನಿರ್ಣಯದಲ್ಲಿ “ನವ-ಫ್ಯಾಸಿಸ್ಟ್” ಎಂಬ ಶಬ್ದವನ್ನು ಬಳಸಿದ್ದು ಇದೇ ಮೊದಲು. 2018 ರಲ್ಲಿ ನಡೆದ 22 ನೇ ಮಹಾಧಿವೇಶನದ ನಿರ್ಣಯದಲ್ಲಿ ಸರ್ವಾಧಿಕಾರಿ ಮತ್ತು ಹಿಂದುತ್ವ ಕೋಮು ದಾಳಿಗಳು “ಹೊಮ್ಮುತ್ತಿರುವ ಫ್ಯಾಸಿಸ್ಟ್ ರೀತಿಯ ಪ್ರವೃತ್ತಿಗಳನ್ನು” emerging fascistic trends ಪ್ರದರ್ಶಿಸುತ್ತಿದೆ ಎನ್ನಲಾಗಿತ್ತು. 2022 ರಲ್ಲಿ ನಡೆದ 23 ನೇ ಮಹಾಧಿವೇಶನದಲ್ಲಿ ಮೋದಿ ಸರ್ಕಾರವು “ಆರ್.ಎಸ್.ಎಸ್.ನ ಫ್ಯಾಸಿಸ್ಟ್ ರೀತಿಯ ಅಜೆಂಡಾ” (RSS’s fascistic agenda) ಜಾರಿ ಮಾಡುತ್ತಿದೆ ಎನ್ನಲಾಗಿತ್ತು. “ಫ್ಯಾಸಿಸ್ಟ್ ರೀತಿಯ” ಎಂಬುದರ ಬೆಳವಣಿಗೆಯ ಜೊತೆಯಲ್ಲೇ ಸಿಪಿಐ(ಎಂ) ಮೋದಿ ಆಡಳಿತವನ್ನು ವಿಶ್ಲೇಷಣೆ ಮಾಡುತ್ತಾ ಬರುತ್ತಿದೆ. ಹೀಗಿರುವಾಗ, ಇದುವರೆಗೂ ಇಲ್ಲದಿದ್ದ ಕಟುವಾದ ವಿಮರ್ಶೆಯನ್ನು ಸಿಪಿಐ(ಎಂ) ಮೇಲೆ ಮಾಡುತ್ತಿರುವುದೇಕೆ? “ನವ-ಫ್ಯಾಸಿಸ್ಟ್” ಲಕ್ಷಣಗಳೊಂದಿಗೆ ಎಂಬುದರಲ್ಲಿ ‘ನವ’ ಎಂಬ ಶಬ್ದವನ್ನು ಮಾತ್ರವೇ ಸಿಪಿಐ(ಎಂ) ಮೊದಲ ಬಾರಿಗೆ ಬಳಸಿದೆ.
ನವ-ಫ್ಯಾಸಿಸಂ (Neo-Fascist) ಎಂಬ ಪದದ ಅರ್ಥವೇನು? ಸಿಪಿಐ(ಎಂ) ತನ್ನ ಟಿಪ್ಪಣಿಯಲ್ಲಿ ವಿವರಿಸಿದಂತೆ, ʼನಿಯೋʼ ಎಂದರೆ ಹೊಸದು ಅಥವಾ ಹಳೆಯದಾದ ಒಂದರ ಸಮಕಾಲೀನ ಆವೃತ್ತಿ. ಯೂರೋಪಿನಲ್ಲಿ ಎರಡು ಮಹಾಯುದ್ಧಗಳ ನಡುವಿನ ಅವಧಿಯಲ್ಲಿ ಹುಟ್ಟಿ ಬೆಳೆದ, ಮುಸೋಲಿನಿ ನಾಯಕತ್ವದಲ್ಲಿ ಇಟಲಿ ಮತ್ತು ಹಿಟ್ಲರ್ ನಾಯಕತ್ವದಲ್ಲಿ ಜರ್ಮನಿಯಲ್ಲಿ ಇದ್ದಂತಹ ಕ್ಲಾಸಿಕಲ್ ಫ್ಯಾಸಿಸಂನ ವಿಶ್ಲೇಷಣೆಗಳಿಂದ ಪ್ರತ್ಯೇಕಿಸಲು ನವ-ಫ್ಯಾಸಿಸಂ ಎಂಬ ಪದವನ್ನು ಬಳಸಲಾಗಿದೆ.

ಕ್ಲಾಸಿಕಲ್ ಫ್ಯಾಸಿಸಂ ಎಂಬುದು, 1929 ಮತ್ತು 1933ರ ನಡುವಿನ ವಿಶ್ವ ಆರ್ಥಿಕ ಕುಸಿತಕ್ಕೆ ಕಾರಣವಾದ ವಿಶ್ವ ಬಂಡವಾಳಶಾಹಿ ಬಿಕ್ಕಟ್ಟಿನ ಅವಧಿಯಲ್ಲಿ ಮೂಡಿತ್ತು. ಅದು ಸಾಮ್ರಾಜ್ಯಶಾಹಿ ದೇಶಗಳ ನಡುವಿನ ವೈರುಧ್ಯಗಳು ತೀಕ್ಷ್ಣವಾಗುತ್ತಿದ್ದ ಅವಧಿ ಸಹ ಆಗಿತ್ತು. ಮೊದಲ ಮತ್ತು ಎರಡನೇ ಮಹಾಯುದ್ಧಗಳೂ ಸಹ ಸಾಮ್ರಾಜ್ಯಶಾಹಿ ವಿಶ್ವ ಬಂಡವಾಳಿಗರ ನಡುವಿನ ಸಂಘರ್ಷಗಳ ಪರಿಣಾಮವಾಗಿತ್ತು. ಜರ್ಮನಿ ಮತ್ತು ಇಟಲಿಗಳಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಫ್ಯಾಸಿಸ್ಟ್ ಶಕ್ತಿಗಳು ಬಂಡವಾಳಶಾಹಿ ಪ್ರಜಾಪ್ರಭುತ್ವವನ್ನು ರದ್ದುಗೊಳಿಸಿದವು. ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಯುದ್ಧವನ್ನು ಒಂದು ವಿಧಾನವಾಗಿ ಬಳಸಿಕೊಂಡವು. ಈ ದೇಶಗಳಲ್ಲಿನ ಏಕಸ್ವಾಮ್ಯ ಬಂಡವಾಳಶಾಹಿಗಳು ಫ್ಯಾಸಿಸ್ಟ್ ಶಕ್ತಿಗಳನ್ನು ಸಂಪೂರ್ಣವಾಗಿ ಬೆಂಬಲಿಸಿದರು. ಬಂಡವಾಳಶಾಹಿಗಳ ಲಾಭದ ಬಿಕ್ಕಟ್ಟನ್ನು ನಿವಾರಿಸಲು ಉಗ್ರ ಕ್ರಮಗಳನ್ನು ತೆಗೆದುಕೊಳ್ಳಲು ಫ್ಯಾಸಿಸ್ಟ್ ಶಕ್ತಿಗಳನ್ನು ಅವಲಂಬಿಸಿದ್ದರು.

ನವ-ಫ್ಯಾಸಿಸಂ ನವ-ಉದಾರವಾದದ ಬಿಕ್ಕಟ್ಟಿನ ಉತ್ಪನ್ನವಾಗಿದೆ ಮತ್ತು ಇದು ಜಾಗತಿಕ ವಿದ್ಯಮಾನವಾಗಿದೆ. ಪ್ರಸಕ್ತ ಜಗತ್ತಿನಾದ್ಯಂತ ಫ್ಯಾಸಿಸ್ಟಿಕ್ ಚಳುವಳಿಗಳು ಮೇಲುಗೈ ಪಡೆದುಕೊಂಡಿವೆ. ಯೂರೋಪಿಯನ್ ಯೂನಿಯನ್ ಚುನಾವಣೆಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ. ನವ-ಫ್ಯಾಸಿಸ್ಟ್‌ ಶಕ್ತಿಗಳು ವಿವಿಧ ದೇಶಗಳಲ್ಲಿ ಹೊರಹೊಮ್ಮಿವೆ ಮತ್ತು ಕೆಲವು ದೇಶಗಳಲ್ಲಿ ಅವು ಅಧಿಕಾರಕ್ಕೆ ಬಂದಿವೆ. ನವ-ಉದಾರವಾದಿ ಕಾಲಘಟ್ಟದ ಜಾಗತಿಕವಾದ ಇಂತಹ ಚಳುವಳಿಗಳನ್ನು ಉದಾರವಾದಿ ಮಾಧ್ಯಮವು ಫ್ಯಾಸಿಸ್ಟ್ ಎಂದು ಎಲ್ಲಿಯೂ ಕರೆದಿಲ್ಲ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ. ಹಾಗೆ ನೋಡಿದರೆ 1930ರ ದಶಕದಲ್ಲಿದ್ದ ಫ್ಯಾಸಿಸಂನ ಎಲ್ಲಾ ಮೂಲಭೂತ ಲಕ್ಷಣಗಳನ್ನು ಇವು ಪಡೆದುಕೊಂಡಿವೆ. ಈ ಬೆಳವಣಿಗೆಗಳನ್ನು ರಾಷ್ಟ್ರೀಯವಾದಿ, ಉಗ್ರ ರಾಷ್ಟ್ರೀಯವಾದಿ, ಬಲಪಂಥೀಯ ಜನಪ್ರಿಯ ಇತ್ಯಾದಿ ಶಬ್ದಗಳಿಂದ ಕರೆದಿದೆ. ಜೊತೆಗೆ ಈ ಬೆಳವಣಿಗೆಗಳಿಗೆ ರಾಜಕೀಯ ಕಾರಣಗಳನ್ನು ಮಾತ್ರ ಗುರುತಿಸಿದೆ.

Advertisements
1740558941 modi 1

ಭಾರತದಲ್ಲೂ ಇಂತಹ ಬೆಳವಣಿಗೆಯನ್ನು ಕಾಣಬಹುದು. ಮೋದಿ ಅಥವಾ ಹಿಂದುತ್ವ ಕೋಮುವಾದದ ಬೆಳವಣಿಗೆಗೆ ಬಾಬ್ರಿ ಮಸೀದಿ ಧ್ವಂಸ, ಅದ್ವಾನಿ ರಥಯಾತ್ರೆ ಇಂತಹ ರಾಜಕೀಯ ಕಾರಣಗಳನ್ನು ಮಾತ್ರ ಗುರುತಿಸಲಾಗುತ್ತದೆ. ಆದರೆ ಇಂತಹ ಚಳುವಳಿಗಳು ಯಾಕೆ ಜಗತ್ತಿನಾದ್ಯಂತ ಬೆಳವಣಿಗೆಯಾಗುತ್ತವೆ ಎಂಬುದರ ಮೂಲ ಕಾರಣವನ್ನು ಗುರುತಿಸಲು ಹೋಗುವುದಿಲ್ಲ. ಇಟಾಲಿಯನ್ ಫ್ಯಾಸಿಸಂನ ಮುಂದುವರಿದ ಭಾಗವಾಗಿ ಮೆಲೋನಿ ಅಧಿಕಾರ ಹಿಡಿದಿರುವುದು, ಜರ್ಮನಿಯಲ್ಲಿ ಎ.ಎಫ್.ಡಿ. ಹೆಚ್ಚು ಜನಪ್ರಿಯಗೊಳ್ಳುತ್ತಿರುವುದು, ಅಮೇರಿಕದಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದಿರುವುದು, ಟರ್ಕಿಯಲ್ಲಿ ಎರ್ದೋಗನ್, ಇಂತಹ ಬೆಳವಣಿಗೆಗಳು ಬಿಡಿಬಿಡಿಯಾಗಿ ಸಂಭವಿಸುತ್ತಿರುವುದಲ್ಲ. ಹೀಗಾಗಿ ಭಾರತದಲ್ಲಿ ಮೋದಿಯ ಬೆಳವಣಿಗೆಯನ್ನು ಗಮನಿಸಬೇಕು. ಪ್ರತಿಯೊಂದು ದೇಶದೊಳಗಿನ ಬೆಳವಣಿಗೆಗೆ ಆಯಾ ದೇಶಗಳ ವಿಭಿನ್ನತೆಗಳು ಮತ್ತು ವಿಶಿಷ್ಟತೆಗಳು ಇವೆಯಾದರೂ, ಇವೆಲ್ಲ ಬೆಳವಣಿಗೆಗಳ ಹಿಂದಿನ ಕೆಲವು ಜಾಗತಿಕ ಅಂಶಗಳನ್ನು ಗುರುತಿಸಬೇಕು.

ನವ-ಫ್ಯಾಸಿಸಂನ ಕೆಲವು ಅಂಶಗಳು ಕ್ಲಾಸಿಕಲ್ ಫ್ಯಾಸಿಸಂನ ರೀತಿಯಲ್ಲೇ ಇವೆ ಎಂಬುದನ್ನು ಸಿಪಿಐ(ಎಂ) ತನ್ನ ಟಿಪ್ಪಣಿಯಲ್ಲಿ ಗುರುತಿಸಿದೆ. ಅವುಗಳಲ್ಲಿ ಮುಖ್ಯವಾಗಿ, ಚಾರಿತ್ರಿಕವಾಗಿ ಅನ್ಯಾಯಗಳು ಮತ್ತು ತಪ್ಪುಗಳು ಸಂಭವಿಸಿವೆ ಎಂಬ ಗ್ರಹಿಕೆಯ ಆಧಾರದಲ್ಲಿ ಹುಟ್ಟು ಹಾಕಲಾದ ಉಗ್ರ-ರಾಷ್ಟ್ರೀಯತೆ. ಇದಕ್ಕಾಗಿ, ಜನಾಂಗೀಯ ಅಥವಾ ಧಾರ್ಮಿಕ ಅಲ್ಪಸಂಖ್ಯಾತರನ್ನು “ಅನ್ಯರು ಅಥವಾ ಹೊರಗಿನವರು” ಎಂಬಂತೆ ಬಿಂಬಿಸಿ ಅವರ ವಿರುದ್ಧ ದ್ವೇಷದ ಭಾವನೆಗಳನ್ನು ಬಡಿದೆಬ್ಬಿಸುತ್ತದೆ ಮತ್ತು ಎಲ್ಲ ರೀತಿಯ ದಾಳಿಗಳಿಗೆ ಗುರಿಯಾಗಿಸುತ್ತದೆ. ಇದರ ಮೂಲಕ ಬಹುಸಂಖ್ಯಾತ ಸಮುದಾಯಗಳನ್ನು ತನ್ನ ಸುತ್ತ ಅಣಿನೆರೆಸುತ್ತದೆ. ಒಂದು ಸರ್ವಾಧಿಕಾರಿ ಆಡಳಿತವು ಪ್ರಭುತ್ವವನ್ನು ದಮನಕಾರಿ ಅಸ್ತ್ರವಾಗಿ ಬಳಸುತ್ತದೆ, ಒಂದು ಫ್ಯಾಸಿಸ್ಟ್ ಆಡಳಿತವು ಪ್ರಭುತ್ವದ ದಮನದ ಜೊತೆಯಲ್ಲಿ ಬೀದಿ ಕಳ್ಳರನ್ನು, ಗೂಂಡಾಗಳನ್ನು, ಮೂರ್ಖರನ್ನು ದಮನದ ಅಸ್ತ್ರಗಳಾಗಿ ಬಳಸುತ್ತದೆ. ಉಗ್ರ-ರಾಷ್ಟ್ರೀಯ ಅಥವಾ ನವ-ಫ್ಯಾಸಿಸ್ಟ್ ಪಕ್ಷಗಳು ಅಥವಾ ಶಕ್ತಿಗಳು ದೊಡ್ಡ ಬಂಡವಾಳದಾರರ ಬೃಹತ್ ಪ್ರಮಾಣದ ಹಣಕಾಸಿನ ಬೆಂಬಲದ ನಂಟನ್ನು ಹೊಂದಿರುತ್ತವೆ. ಜರ್ಮನಿ, ಇಟಲಿ, ಜಪಾನ್ ನಂತಹ ದೇಶಗಳ ಏಕಸ್ವಾಮ್ಯ ಬಂಡವಾಳದಾರರಲ್ಲಿ ಹೊಸ ರೀತಿಯ ಬಂಡವಾಳದಾರರು ಫ್ಯಾಸಿಸಂಗೆ ಬೆಂಬಲ ಕೊಡುತ್ತಿದ್ದ ಹಾಗೆಯೇ ಭಾರತದಲ್ಲಿ ಈಗ ಹೊಸ ರೀತಿಯ ಬಂಡವಾಳದಾರರು (ಉದಾ: ಅದಾನಿ, ಅಂಬಾನಿ, ಇತ್ಯಾದಿ) ಫ್ಯಾಸಿಸಂ ಚಟುವಟಿಕೆಗಳಿಗೆ ಹೆಚ್ಚು ಬೆಂಬಲವನ್ನು ಕೊಡುತ್ತಿದ್ದಾರೆ. ಫ್ಯಾಸಿಸಂನ ಮತ್ತೊಂದು ಲಕ್ಷಣವೆಂದರೆ, ವ್ಯಕ್ತಿ ವೈಭವೀಕರಣ. ಭಾರತದಲ್ಲಿ ಮೋದಿ ಭಕ್ತ ಗಣಗಳ ಸೃಷ್ಟಿ. ಇಂತಹ ಇನ್ನೂ ಹಲವು ಅಂಶಗಳು ಕ್ಲಾಸಿಕಲ್ ಫ್ಯಾಸಿಸಂ ರೀತಿಯಲ್ಲೇ ಇವೆ ಎಂಬುದನ್ನು ಸಿಪಿಐ(ಎಂ) ಗುರುತಿಸುತ್ತದೆ.

ಭಾರತದಲ್ಲಿ ನವ-ಫ್ಯಾಸಿಸಂನ್ನು ಆರ್.ಎಸ್.ಎಸ್. ಮತ್ತು ಅದರ ಹಿಂದುತ್ವ ಕೋಮುವಾದಿ ಸಿದ್ಧಾಂತದಿಂದ ರೂಪಿಸಲಾಗಿದೆ. ಹಿಂದುತ್ವ ಸಿದ್ಧಾಂತವು ನವ-ಫ್ಯಾಸಿಸ್ಟ್ ರೀತಿಯದ್ದೇ ಆಗಿದೆ. ಹೀಗಾಗಿಯೇ ಬಿಜೆಪಿ ಆಳ್ವಿಕೆಯಲ್ಲಿ ಆರ್.ಎಸ್.ಎಸ್.ಗೆ ಅಧಿಕಾರದ ಸೂತ್ರಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಹಿಂದುತ್ವ ಕೋಮುವಾದಿ ಸಿದ್ದಾಂತ, ನವ-ಉದಾರವಾದಿ ಬಿಕ್ಕಟ್ಟು ಮತ್ತು ದೊಡ್ಡ ಬಂಡವಾಳದಾರರ ಹಿತಾಸಕ್ತಿಗಳ ರಕ್ಷಣೆ, ಇವೆಲ್ಲಕ್ಕೂ ಸರ್ವಾಧಿಕಾರದ ಹೇರಿಕೆಯ ಅನಿವಾರ್ಯತೆ ಹೆಚ್ಚಾಗುತ್ತದೆ. ಇವೆಲ್ಲವೂ ನವ-ಉದಾರವಾದಿ ಫ್ಯಾಸಿಸಂನ ಲಕ್ಷಣಗಳಾಗಿವೆ ಎಂದು ಸಿಪಿಐ(ಎಂ) ವಿವರಿಸುತ್ತದೆ.

1930ರ ದಶಕದಲ್ಲಿ ಜಾಗತಿಕ ಹಣಕಾಸು ಬಂಡವಾಳದ ಉದಯದೊಂದಿಗೆ ಸಾಮ್ರಾಜ್ಯಶಾಹಿಗಳ ನಡುವಿನ ಸಂಘರ್ಷಗಳು ಫ್ಯಾಸಿಸಂನ ಬೆಳವಣಿಗೆಗೆ ಕಾರಣವಾಗಿ ಯುದ್ಧಗಳು ಸಂಭವಿಸಿದವು. ಎರಡನೇ ಮಹಾಯುದ್ಧದ ನಂತರ ದೀರ್ಘಕಾಲ ಮೌನವಾಗಿದ್ದ ಈ ಸಂಘರ್ಷಗಳು ಇಂದು ಜಾಗತಿಕವಾಗಿ ವಿಸ್ತರಿಸಿಕೊಳ್ಳುತ್ತಿವೆ. ರಾಷ್ಟ್ರ-ಪ್ರಭುತ್ವಗಳ ನೆಲೆಯಿಂದ ಕಾರ್ಯಾಚರಣೆ ಮಾಡುತ್ತಿದ್ದ ಏಕಸ್ವಾಮ್ಯ ಬಂಡವಾಳವು ಸ್ವರೂಪವು ಈಗ ನವ-ಉದಾರವಾದಿ ಏಕಸ್ವಾಮ್ಯ ಬಂಡವಾಳದ ಸ್ವರೂಪವನ್ನು ಪಡೆದುಕೊಂಡಿದೆ. ಜಗತ್ತಿನೆಲ್ಲೆಡೆ ನವ-ಉದಾರವಾದಿ ಬಂಡವಾಳದ ಬೆಳವಣಿಗೆಯು ಬಿಕ್ಕಟ್ಟಿಗೆ ಒಳಗಾಗಿದೆ. ವ್ಯಾಪಕವಾದ ನಿರುದ್ಯೋಗ, ಬಡತನ, ಅಸಮಾನತೆಗಳು ಈ ಬಿಕ್ಕಟ್ಟಿನ ಲಕ್ಷಣಗಳಾಗಿವೆ. ಈ ಬಿಕ್ಕಟ್ಟಿನ ಪರಿಹಾರಕ್ಕೆ ನವ-ಉದಾರವಾದಿ ಬಂಡವಾಳ ಮತ್ತು ಫ್ಯಾಸಿಸ್ಟ್ ಶಕ್ತಿಗಳ ನಡುವಿನ ಪರಸ್ಪರ ಬೆಂಬಲ ಮತ್ತು ಸಹಕಾರ ಆಳಗೊಂಡಿದೆ ಮತ್ತು ಇದನ್ನೇ ಸಾಧಾರಣವಾಗಿ ನವ-ಫ್ಯಾಸಿಸಂ ಎಂದು ಕರೆಯಲಾಗುತ್ತಿದೆ.

ನವ-ಫ್ಯಾಸಿಸಂ ಸ್ವರೂಪದಲ್ಲಿ ನವೀನವಾದದ್ದು ಏನೆಂಬುದನ್ನು ಗಮನಿಸಬೇಕಾಗಿದೆ. ನವ-ಫ್ಯಾಸಿಸ್ಟ್ ಆಡಳಿತಗಳು ಸಾಮ್ರಾಜ್ಯಶಾಹಿಯ ಭಾಗವಾಗಿ ಯುದ್ಧಕ್ಕೆ ಹೋಗುವುದಿಲ್ಲ. ನವ-ಉದಾರವಾದಿ ಬಿಕ್ಕಟ್ಟು ಮತ್ತು ಜನರಲ್ಲಿ ಉಂಟಾಗುವ ಅಸಮಾಧಾನವನ್ನು ಉಗ್ರ-ಬಲಪಂಥೀಯ ದಿಕ್ಕಿನತ್ತ ತಿರುಗಿಸಲು ಪ್ರಯತ್ನಿಸುತ್ತವೆ. ನವ-ಫ್ಯಾಸಿಸ್ಟ್ ಶಕ್ತಿಗಳು ಜನರನ್ನು ಮರುಳು ಮಾಡಲು ಪ್ರಯತ್ನಿಸುತ್ತವೆ. ಆದರೆ ಅವು ಅಧಿಕಾರಕ್ಕೆ ಬಂದಾಗ ನವ-ಉದಾರವಾದಿ ನೀತಿಗಳನ್ನು ನಿಲ್ಲಿಸುವುದಿಲ್ಲ. ಬದಲಿಗೆ, ದೊಡ್ಡ ಬಂಡವಾಳಶಾಹಿಗಳ ಹಿತಾಸಕ್ತಿಗಳಿಗೆ ಅನುಗುಣವಾಗಿರುವ ನೀತಿಗಳನ್ನೇ ಅನುಸರಿಸುತ್ತವೆ. ಕ್ಲಾಸಿಕಲ್ ಫ್ಯಾಸಿಸಂನೊಂದಿಗಿನ ಇನ್ನೊಂದು ವ್ಯತ್ಯಾಸವೆಂದರೆ ನವ-ಫ್ಯಾಸಿಸ್ಟ್ ಪಕ್ಷಗಳು ತಮ್ಮ ರಾಜಕೀಯ ಯೋಜನೆಯನ್ನು ಮುನ್ನಡೆಸಲು ಚುನಾವಣೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತವೆ ಮತ್ತು ಅವು ಅಧಿಕಾರಕ್ಕೆ ಬಂದರೂ ಸಹ ಚುನಾವಣಾ ವ್ಯವಸ್ಥೆಯನ್ನು ಕಿತ್ತು ಹಾಕುವುದಿಲ್ಲ. ಅವು ಚುನಾವಣಾ ವ್ಯವಸ್ಥೆಯನ್ನು ಉಳಿಸಿಕೊಳ್ಳುತ್ತವೆ. ವಿರೋಧವನ್ನು ನಿಗ್ರಹಿಸಲು ಮತ್ತು ಲಾಭ ಪಡೆಯಲು ಸರ್ವಾಧಿಕಾರಿ ವಿಧಾನಗಳನ್ನು ಬಳಸುತ್ತವೆ. ಒಳಗಿನಿಂದ ಕೆಲಸ ಮಾಡುವ ಮೂಲಕ ದೀರ್ಘ ಕಾಲದವರೆಗೆ ಪ್ರಭುತ್ವ ರಚನೆಯಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತವೆ ಎಂದು ಸಿಪಿಐ(ಎಂ) ವಿಶ್ಲೇಷಿಸುತ್ತದೆ.

ಬಿಜೆಪಿ-ಆರ್.ಎಸ್.ಎಸ್. ಅಡಿಯಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆಯು “ನವ-ಫ್ಯಾಸಿಸ್ಟ್ ಗುಣ ಲಕ್ಷಣಗಳನ್ನು ಪ್ರದರ್ಶಿಸುವ” ಹಿಂದುತ್ವ-ಕಾರ್ಪೊರೇಟ್ ಸರ್ವಾಧಿಕಾರಿ ಆಡಳಿತವಾಗಿದೆ ಎಂದು ಸಿಪಿಐ(ಎಂ) ಹೇಳಿದೆ. ಮೋದಿ ಸರ್ಕಾರವನ್ನು ಫ್ಯಾಸಿಸ್ಟ್ ಅಥವಾ ನವ-ಫ್ಯಾಸಿಸ್ಟ್ ಆಗಿದೆ ಎಂದಾಗಲೀ, ಭಾರತದ ಪ್ರಭುತ್ವವನ್ನು ನವ-ಫ್ಯಾಸಿಸ್ಟ್ ಪ್ರಭುತ್ವವಾಗಿದೆ ಎಂದಾಗಲೀ ಸಿಪಿಐ(ಎಂ) ನಿರೂಪಿಸುತ್ತಿಲ್ಲ. ಬದಲಿಗೆ ಆ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ವಿಶ್ಲೇಷಣೆ ಮಾಡಿದೆ. ಆರ್.ಎಸ್.ಎಸ್.ನ ರಾಜಕೀಯ ವಿಭಾಗವಾದ ಬಿಜೆಪಿಯ ಹತ್ತು ವರ್ಷಗಳ ನಿರಂತರ ಆಡಳಿತದ ನಂತರ, ಬಿಜೆಪಿ-ಆರ್.ಎಸ್.ಎಸ್. ಕೈಯಲ್ಲಿ ರಾಜಕೀಯ ಅಧಿಕಾರದ ಕ್ರೋಢೀಕರಣವಾಗಿದೆ ಮತ್ತು ಇದು “ನವ-ಫ್ಯಾಸಿಸ್ಟ್ ಗುಣಲಕ್ಷಣಗಳ ಅಭಿವ್ಯಕ್ತಿಗೆ ಕಾರಣವಾಗಿದೆ ಎಂದು ಸಿಪಿಐ(ಎಂ) ಪ್ರತಿಪಾದಿಸಿದೆ. ‘ಗುಣಲಕ್ಷಣಗಳು’ ಎಂಬ ಪದದ ಅರ್ಥ ಲಕ್ಷಣಗಳು ಅಥವಾ ಪ್ರವೃತ್ತಿಗಳು. ಅವು ನವ-ಫ್ಯಾಸಿಸ್ಟ್ ಸರ್ಕಾರ ಮತ್ತು ರಾಜಕೀಯ ವ್ಯವಸ್ಥೆಯಾಗಿ ಪೂರ್ಣವಾಗಿ ಬೆಳೆದಿಲ್ಲ. ಆದ್ದರಿಂದ, ಬಿಜೆಪಿ-ಆರ್.ಎಸ್.ಎಸ್.ನ್ನು ಎಲ್ಲಾ ರೀತಿಯಲ್ಲೂ ಹಿಮ್ಮೆಟ್ಟಿಸದಿದ್ದರೆ ಮತ್ತು ಸೋಲಿಸದಿದ್ದರೆ, ಹಿಂದುತ್ವ-ಕಾರ್ಪೊರೇಟ್ ಸರ್ವಾಧಿಕಾರವು ನವ-ಫ್ಯಾಸಿಸಂ ಕಡೆಗೆ ಹೋಗುವ ಅಪಾಯವಿದೆ ಎಂಬುದರ ಬಗ್ಗೆ ಸಿಪಿಐ(ಎಂ) ರಾಜಕೀಯ ನಿರ್ಣಯವು ಮಾತನಾಡುತ್ತದೆ.

ಇದನ್ನೂ ಓದಿ 1ನೇ ತರಗತಿ ಸೇರ್ಪಡೆಗೆ ಮಕ್ಕಳ ವಯೋಮಿತಿ ಸಡಿಲ: ಶಿಕ್ಷಣ ಸಚಿವ ಘೋಷಣೆ

ಇಂತಹ ಕೂದಲು ಸೀಳುವ ವಿಶ್ಲೇಷಣೆಯ ಅಗತ್ಯವಿದೆಯೇ ಎಂದು ಕೆಲವು ಪ್ರಜ್ಞಾವಂತ ಜನರು ಪ್ರಶ್ನೆ ಮಾಡಿದ್ದಾರೆ. ಇಂತಹ ವಿಶ್ಲೇಷಣೆಗಳಿಂದ ಫ್ಯಾಸಿಸಂ ವಿರೋಧಿ ಹೋರಾಟವನ್ನು ದುರ್ಬಲಗೊಳಿಸಿದಂತಾಗುತ್ತದೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಜನತೆಯ ಪರವಾಗಿ ಯೋಚಿಸುವವರ ಇಂತಹ ಆತಂಕಗಳನ್ನು ಅಭಿಪ್ರಾಯಗಳನ್ನು ಸಿಪಿಐ(ಎಂ) ಕಡೆಗಣಿಸುವುದಿಲ್ಲ. ಆದರೆ ಭಾರತದ ಜನತೆಯ ಪ್ರಜಾಪ್ರಭುತ್ವ ಮತ್ತು ಸಮತೆಯ ಆಶಯಗಳನ್ನು ಬಯಸುವವರು, ತಾವು ಎದುರಿಸಬೇಕಾದ ಶತ್ರುಗಳ ಸ್ವರೂಪವನ್ನು ಸರಿಯಾಗಿ ಅರ್ಥೈಸಿಕೊಳ್ಳುವುದು ಅಗತ್ಯವಾಗಿದೆ. ಫ್ಯಾಸಿಸಂ ವಿರೋಧಿ ಹೋರಾಟವನ್ನು ಫ್ಯಾಸಿಸಂನ ಸಮರ್ಪಕ ವಿಶ್ಲೇಷಣೆಯಿಲ್ಲದೆ ನಡೆಸುವುದು ಕಷ್ಟ. ಭಾರತದ ಜನತೆ ನಡೆಸಬೇಕಾದ ಹೋರಾಟದ ದಿಕ್ಕು, ಫ್ಯಾಸಿಸಂ ಪೂರ್ಣವಾಗಿ ಜಾರಿಯಾಲ್ಲಿದ್ದರೆ ಒಂದು ರೀತಿ ಇರುತ್ತದೆ, ಜಾರಿಯಾಗುವ ನಿಟ್ಟಿನಲ್ಲಿ ಸಾಗುತ್ತಿದ್ದರೆ ಮತ್ತೊಂದು ರೀತಿ ಇರುತ್ತದೆ ಎಂಬುದನ್ನು ಸಿಪಿಐ(ಎಂ) ಹೇಳಲು ಬಯಸುತ್ತಿದೆ. ಸಮಸ್ಯೆಯ ಸ್ವರೂಪ, ಪ್ರಮಾಣ ಮತ್ತು ಹಂತ ಇವುಗಳನ್ನು ಅನುಸರಿಸಿ ಚಿಕಿತ್ಸೆ ನೀಡುವುದು ಸೂಕ್ತ. ಮುಂದೆ ಸಮಸ್ಯೆ ಬರಲಾರದ ಹಾಗೆ ಗಮನಿಸುವುದು ಅಗತ್ಯ ಎಂಬ ನೆಲೆಯಲ್ಲಿ ಸಿಪಿಐ(ಎಂ) ‘ನವ-ಫ್ಯಾಸಿಸಂ’ ಕುರಿತು ವಿಶ್ಲೇಷಣೆ ಮಾಡಿದೆ. ಹೀಗಾಗಿ ಹಿಂದುತ್ವ-ಕೋಮುವಾದವನ್ನು ಮತ್ತು ಕಾರ್ಪೊರೇಟ್ ಲೂಟಿಯನ್ನು ಒಟ್ಟೊಟ್ಟಿಗೆ ಎದುರಿಸುವ ಕಣ್ಣೋಟವನ್ನು ಹೊಂದಿದ್ದರೆ ಮಾತ್ರ ನವ-ಫ್ಯಾಸಿಸಂನ್ನು ಎದುರಿಸಲು ಮತ್ತು ಸೋಲಿಸಲು ಸಾಧ್ಯ. ನವ-ಉದಾರವಾದಿ ನೀತಿಗಳು ಮತ್ತು ಅದು ಉಂಟು ಮಾಡುತ್ತಿರುವ ಬಿಕ್ಕಟ್ಟುಗಳ ಬಗ್ಗೆ ಕಣ್ಣು ಮುಚ್ಚಿಕೊಂಡು ಫ್ಯಾಸಿಸಂನ್ನು ಎದುರಿಸಬಯಸುವ ಎಲ್ಲರೂ ಈ ಅಂಶಗಳನ್ನು ಗಮನಿಸಬೇಕೆಂಬುದು ಸಿಪಿಐ(ಎಂ)ನ ಆಶಯವಾಗಿದೆ.

ಮುರ್ಶಿದಾಬಾದ್ ಗಲಭೆ | ಸುಳ್ಳು ಮಾಹಿತಿ ಹರಡುತ್ತಿರುವ ಗೋಧಿ ಮೀಡಿಯಾಗಳು: ಮಮತಾ ಬ್ಯಾನರ್ಜಿ

ಪ್ರಕಾಶ್‌ ಕೆ
ಡಾ ಪ್ರಕಾಶ್ ಕೆ
+ posts

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಪ್ರಕಾಶ್ ಕೆ
ಡಾ ಪ್ರಕಾಶ್ ಕೆ
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X