ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪುನಶ್ಚೇತನ ಮತ್ತು ಅದರ ಪರಂಪರೆಯ ರಕ್ಷಣೆ ನಮ್ಮ ಗುರಿಯಾಗಿತ್ತೇ ಹೊರತು ರಿಯಲ್ ಎಸ್ಟೇಟ್‌ನಿಂದ ಲಾಭ ಗಳಿಸುವುದಲ್ಲ ಎಂಬುದು ಕಾಂಗ್ರೆಸ್‌ನ ವಾದವಾಗಿದೆ.
ಮತ್ತೆ ಮುನ್ನೆಲೆಗೆ ಬಂದಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣ ಹತ್ತು ವರ್ಷಗಳಷ್ಟು ಹಳೆಯದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ಚಾರ್ಜ್ ಶೀಟ್ ಸಲ್ಲಿಸಿರುವುದು ಹಾಲಿ ಬೆಳವಣಿಗೆ. ದೋಷಾರೋಪ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸ್ಯಾಮ್ ಪಿತ್ರೋಡಾ, ಪತ್ರಕರ್ತ ಸುಮನ್ ದುಬೆ ಹೆಸರಗಳೂ ಇವೆ.
ಏಪ್ರಿಲ್ 9ರಂದು ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಇದನ್ನು ಪರಿಶೀಲಿಸಿದ ವಿಶೇಷ ನ್ಯಾಯಾಲಯ ನ್ಯಾಯಾಧೀಶ ವಿಶಾಲ್ ಗೋಗನೆ, ವಿಚಾರಣೆಯನ್ನು ಏಪ್ರಿಲ್ 25ಕ್ಕೆ ಮುಂದೂಡಿದ್ದಾರೆ. ಹಣದ ಅಕ್ರಮ ವರ್ಗಾವಣೆ ಕಾಯ್ದೆ(ಪಿಎಂಎಲ್‌ಐ)ಯ ಸೆಕ್ಷನ್ 3 (ಹಣದ ಅಕ್ರಮ ವರ್ಗಾವಣೆ) ಹಾಗೂ ಸೆಕ್ಷನ್ 4 (ಹಣದ ಅಕ್ರಮ ವರ್ಗಾವಣೆಗೆ ಶಿಕ್ಷೆ) ಅಡಿಯಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಸೋನಿಯಾ ಮತ್ತು ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆ ನಡೆಸಿ ವರ್ಷಗಳೇ ಉರುಳಿವೆ. ಇದೀಗ ಆರೋಪಪಟ್ಟಿ ಸಲ್ಲಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನು ಓದಿದ್ದೀರಾ? ಮಹಿಳಾ ಮೀಸಲಾತಿ ಮಸೂದೆಗೆ ಸೋನಿಯಾ, ರಾಹುಲ್ ಬೆಂಬಲ
ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಮತ್ತು ಸೋನಿಯಾ, ರಾಹುಲ್ ಗಾಂಧಿಯವರ ತೆರಿಗೆ ಮೌಲ್ಯಮಾಪನ ಕೋರಿ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ 2013ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದಾಯ ತೆರಿಗೆ ಇಲಾಖೆಗೆ ಅವಕಾಶ ನೀಡುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಆಧರಿಸಿ ಇಡಿ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಈ ಪತ್ರಿಕೆಯನ್ನು ಗಾಂಧೀ ಕುಟುಂಬ ವಂಚನೆಯಿಂದ ಸ್ವಾಧೀನಪಡಿಸಿಕೊಂಡಿದೆ ಮತ್ತು ಹಣ ದುರುಪಯೋಗ ಮಾಡಿದೆ ಎಂಬುದು ಸ್ವಾಮಿ ಅವರ ಆರೋಪ. ಗಾಂಧಿ ಕುಟುಂಬವು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶಕ ಸಂಸ್ಥೆ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್). ಗಾಂಧೀ ಕುಟುಂಬ ಈ ಸಂಸ್ಥೆಯನ್ನು ಖರೀದಿಸುವ ಮೂಲಕ ಅದರ ಆಸ್ತಿಪಾಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ. ಶೇಕಡ 86ರಷ್ಟು ಷೇರುಗಳು ಗಾಂಧಿ ಕುಟುಂಬದ ನಿಯಂತ್ರಣದಲ್ಲಿವೆ ಎಂದು ಸ್ವಾಮಿ ದೂರಿದ್ದಾರೆ.
2015ರ ಡಿಸೆಂಬರ್ 19ರಂದು ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ಸೋನಿಯಾ ಮತ್ತು ರಾಹುಲ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತು. ಇವರಿಬ್ಬರ ಸಂಸ್ಥೆಯಾದ ವೈಐ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಯನ್ನು ಬರೀ 50 ಲಕ್ಷ ರೂಪಾಯಿಗೆ ತನ್ನದಾಗಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.
ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಎಂದರೇನು?
ಕಂಪನಿ ಕಾಯ್ದೆಯಡಿ 1937ರಲ್ಲಿ ಸಂಘಟಿತವಾದ ಸಾರ್ವಜನಿಕ ಸೀಮಿತ ಕಂಪನಿ AJL. ಪತ್ರಿಕೆ ಪ್ರಕಟಣೆ ಈ ಸಂಸ್ಥೆಯ ಮೂಲ ಉದ್ದೇಶ. ಆದರೆ ಕಾಲಾನಂತರದಲ್ಲಿ ದೆಹಲಿ, ಲಕ್ನೋ, ಮುಂಬೈ, ಪಾಟ್ನಾ, ಪಂಚಕುಲ ಮತ್ತು ಇತರ ನಗರಗಳಲ್ಲಿ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಮಾಡಿದೆ. 2008ರಲ್ಲಿ ಎಜೆಎಲ್ ಆರ್ಥಿಕ ಸಮಸ್ಯೆಯ ಕಾರಣ ನೀಡಿದ ಪತ್ರಿಕೆ ಪ್ರಕಟಣೆ ನಿಲ್ಲಿಸಿತು. ಆದರೆ ಅದರ ಸ್ವತ್ತುಗಳು ಹಾಗೆಯೇ ಉಳಿದಿವೆ. ಕಾಲಕ್ರಮೇಣ ಈ ಸಂಸ್ಥೆಯ ನಿಯಂತ್ರಣವನ್ನು ಯಂಗ್ ಇಂಡಿಯನ್ ಲಿಮಿಟೆಡ್(ವೈಐಎಲ್)ಗೆ ವರ್ಗಾಯಿಸಲಾಯಿತು. ಈ ವರ್ಗಾವಣೆ ವೇಳೆ ನಡೆದ ಹಣ ವರ್ಗಾವಣೆಯೇ ಇಡಿ ಪ್ರಕರಣದ ಕೇಂದ್ರ ಬಿಂದು.
ಇದನ್ನು ಓದಿದ್ದೀರಾ? ನ್ಯಾಷನಲ್ ಹೆರಾಲ್ಡ್ ಆಸ್ತಿ ಜಪ್ತಿ: ಇಡಿ ವಿರುದ್ಧ ಕಪಿಲ್ ಸಿಬಲ್ ಆಕ್ರೋಶ
ಯಂಗ್ ಇಂಡಿಯಾ ಲಿಮಿಟೆಡ್ (YIL) ಎಂದರೇನು?
2010ರ ನವೆಂಬರ್‌ನಲ್ಲಿ ಕಂಪನಿ ಕಾಯ್ದೆಯ ಸೆಕ್ಷನ್ 25ರ ಅಡಿಯಲ್ಲಿ ಲಾಭರಹಿತ ಕಂಪನಿಯಾಗಿ ಯಂಗ್ ಇಂಡಿಯನ್ ಲಿಮಿಟೆಡ್ ಅನ್ನು ಸ್ಥಾಪಿಸಲಾಗಿದೆ. ಸಾಮಾಜಿಕ ಕಾರ್ಯಗಳನ್ನು ಉತ್ತೇಜಿಸುವುದು ಇದರ ಗುರಿ ಎಂದು ಘೋಷಿಸಲಾಗಿದೆ. ಆದರೆ ಅದರ ಮಾಲೀಕತ್ವವು ಚರ್ಚೆಗೆ ಗ್ರಾಸವಾಗಿದೆ. ಈ ಲಾಭರಹಿತ ಸಂಸ್ಥೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಲಾ ಶೇಕಡ 38ರಷ್ಟು ಪಾಲನ್ನು ಹೊಂದಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಅವರು ಈ ಸಂಸ್ಥೆಯ ಉಳಿದ ಷೇರುಗಳನ್ನು ಹೊಂದಿದ್ದಾರೆ. 2010ರ ಡಿಸೆಂಬರ್‌ನಲ್ಲಿ ವೈಐಎಲ್ ಸಂಸ್ಥೆಯು ಎಜೆಎಲ್‌ನ ಶೇಕಡ 99ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ. ಕಂಪನಿ ಮತ್ತು ಅದರ ರಿಯಲ್ ಎಸ್ಟೇಟ್ ಹೂಡಿಕೆಗಳನ್ನೆಲ್ಲ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಗಾಂಧಿ ಕುಟುಂಬದ ಪಾತ್ರವೇನು?
1938ರಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಲು ಜವಾಹರಲಾಲ್ ನೆಹರು ಅವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಾರಂಭಿಸಿದರು. ಇದನ್ನು ಎಜೆಎಲ್ ಪ್ರಕಟಿಸಿತು. 2008ರಲ್ಲಿ ಆರ್ಥಿಕ ನಷ್ಟದ ಕಾರಣದಿಂದಾಗಿ ನ್ಯಾಷನಲ್ ಹೆರಾಲ್ಡ್, ಅದರ ಹಿಂದಿ ಮತ್ತು ಉರ್ದು ಪತ್ರಿಕೆಗಳ ಪ್ರಕಟಣೆಯನ್ನು (ನವಜೀವನ್ ಮತ್ತು ಕ್ವಾಮಿ ಆವಾಜ್) ನಿಲ್ಲಿಸಲಾಯಿತು. ಪತ್ರಿಕೆಗಳು ನಿಷ್ಕ್ರಿಯವಾಗಿದ್ದರೂ ಪೋಷಕ ಸಂಸ್ಥೆ ಎಜೆಎಲ್ ಅಸ್ತಿತ್ವದಲ್ಲಿತ್ತು. ಭಾರತದಾದ್ಯಂತ ಎರಡು ಸಾವಿರ ಕೋಟಿ ರೂಪಾಯಿಗಳಿಗಿಂತ ಅಧಿಕ ಮೌಲ್ಯದ ರಿಯಲ್ ಎಸ್ಟೇಟ್ ಆಸ್ತಿಯನ್ನು ಹೊಂದಿದೆ ಎನ್ನಲಾಗಿದೆ.
ಪತ್ರಿಕೆಯ ಪುನಶ್ಚೇತನದ ಪ್ರಸ್ತಾಪ ಮುಂದಿಟ್ಟು, ಪಕ್ಷದ ನಿಧಿಯಿಂದ 90 ಕೋಟಿ ರೂಪಾಯಿ ಬಡ್ಡಿರಹಿತ ಸಾಲವನ್ನು ವಿಸ್ತರಿಸಿತು. 2010ರಲ್ಲಿ, ಕಾಂಗ್ರೆಸ್ ಎಜೆಎಲ್ ಸಾಲವನ್ನು ಅದರ ಹೊಸದಾಗಿ ಸ್ಥಾಪಿಸಲಾದ ವೈಐಎಲ್‌ಗೆ ನಿಯೋಜಿಸಿತು. ಜೆಎಲ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ, ಅದರ ಸಂಪೂರ್ಣ ಷೇರುಗಳನ್ನು ಗಾಂಧಿ ಒಡೆತನದ ವೈಐಎಲ್‌ಗೆ 50 ಲಕ್ಷ ರೂ.ಗೆ ವರ್ಗಾಯಿಸಲಾಯಿತು. ಇದರಿಂದಾಗಿ ಎಜೆಎಲ್‌ನ ಆಸ್ತಿಗಳ ನಿಯಂತ್ರಣ ವೈಐಎಲ್ ಮತ್ತು ಗಾಂಧಿ ಕುಟುಂಬದ ಕೈಸೇರಿತು.
2010ರ ನವೆಂಬರ್ 23ರಂದು ಗಾಂಧಿ ಕುಟುಂಬದ ನಿಷ್ಠಾವಂತರು ಎಂದು ಹೇಳಲಾದ ಸುಮನ್ ದುಬೆ ಮತ್ತು ಸತ್ಯನ್ ಗಂಗಾರಾಮ್ (ಸ್ಯಾಮ್) ಪಿತ್ರೋಡಾ ಅವರನ್ನು ವೈಐಎಲ್‌ನ ನಿರ್ದೇಶಕರನ್ನಾಗಿ ಮಾಡಲಾಯಿತು. “ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಸಮಾಜದ ಆದರ್ಶಕ್ಕೆ ಭಾರತದ ಯುವಜನರ ಬದ್ಧತೆಯ ಮನಸ್ಸಿನಲ್ಲಿ ಮೂಡಿಸುವುದು” ಈ ಕಂಪನಿಯ ಉದ್ದೇಶವಾಗಿತ್ತು.
ಇದನ್ನು ಓದಿದ್ದೀರಾ? ರಾಹುಲ್ ಗಾಂಧಿಗೆ ಪಾಸ್‌ಪೋರ್ಟ್ ಪಡೆಯಲು ಕೋರ್ಟ್ ಅನುಮತಿ
ಇದಾದ ನಂತರ ಇಬ್ಬರೂ ನಿರ್ದೇಶಕರು ತಮ್ಮ ಷೇರುಗಳನ್ನು ಕಾಂಗ್ರೆಸ್ ನಾಯಕರಾದ ಆಸ್ಕರ್ ಫರ್ನಾಂಡಿಸ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮೋತಿ ಲಾಲ್ ವೋರಾ (ಈಗ ನಿಧನರಾಗಿದ್ದಾರೆ) ಅವರಿಗೆ ವರ್ಗಾಯಿಸಿದರು. ಬಳಿಕ 2010ರ ಡಿಸೆಂಬರ್‌ನಲ್ಲಿ ರಾಹುಲ್ ಗಾಂಧಿ ಅವರನ್ನು ಯಂಗ್ ಇಂಡಿಯನ್‌ನ ನಿರ್ದೇಶಕರಾಗಿ ನೇಮಿಸಲಾಯಿತು. 2011ರ ಜನವರಿ 22ರಂದು ಸೋನಿಯಾ ಗಾಂಧಿ ಮಂಡಳಿಗೆ ನಿರ್ದೇಶಕಿಯಾಗಿ ಸೇರಿದರು.
2017ರ ಮಾರ್ಚ್ ಹೊತ್ತಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕಂಪನಿಯಲ್ಲಿ ತಲಾ ಶೇಕಡ 38ರಷ್ಟು ಷೇರುಗಳನ್ನು ಹೊಂದಿದ್ದರು. ಉಳಿದ ಶೇಕಡ 24ರಷ್ಟು ಷೇರುಗಳನ್ನು ವೋರಾ ಮತ್ತು ಫರ್ನಾಂಡಿಸ್ ಸಮಾನ ಭಾಗಗಳಲ್ಲಿ ಹೊಂದಿದ್ದರು. ಬಳಿಕ ವೈಐ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 12A ಅಡಿಯಲ್ಲಿ ದತ್ತಿ ಸಂಸ್ಥೆಯಾಗಿ ನೋಂದಾಯಿಸಿಕೊಂಡಿತು. ಅದರಿಂದಾಗಿ ಶೇಕಡ 100ರಷ್ಟು ತೆರಿಗೆ ವಿನಾಯಿತಿಯನ್ನು ಪಡೆದುಕೊಂಡಿತು.
ಲಾಭರಹಿತ ಸಂಸ್ಥೆ ಎಂದು ಹೇಳಿಕೊಂಡು ಖಾಸಗಿ ಲಾಭಕ್ಕಾಗಿ ಸಾರ್ವಜನಿಕ ಸ್ವತ್ತುಗಳನ್ನು ಉದ್ದೇಶಪೂರ್ವಕವಾಗಿ ಮತ್ತು ಮೋಸದಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬುದು ಸ್ವಾಮಿ ಮತ್ತು ಇಡಿ ವಾದವಾಗಿದೆ.
ಇಡಿ ಆರೋಪವೇನು?
ವೈಐಎಲ್‌ಗೆ ಎಜೆಎಲ್ ಷೇರುಗಳನ್ನು ವರ್ಗಾಯಿಸುವುದು ದತ್ತಿ ಉದ್ದೇಶಗಳಿಗಾಗಿ ಅಲ್ಲ, ಬದಲಾಗಿ ಪ್ರಮುಖ ರಿಯಲ್ ಎಸ್ಟೇಟ್ ಮೇಲೆ ಹಿಡಿತ ಸಾಧಿಸಲು ಒಂದು ಕಾರ್ಯತಂತ್ರದ ಕಾರ್ಪೊರೇಟ್ ನಡೆ ಎಂಬುದು ಪ್ರಮುಖ ಆರೋಪ. ಕಾಂಗ್ರೆಸ್‌ನಿಂದ ಎಜೆಎಲ್‌ಗೆ ನೀಡಲಾದ ಸಾಲವು ಮೂಲಭೂತವಾಗಿ ಈ ಸ್ವಾಧೀನವನ್ನು ಸುಲಭಗೊಳಿಸಲು ಮಾಡಿದ ನಕಲಿ ವಹಿವಾಟು ಎಂಬ ಆರೋಪವೂ ಇದೆ.
ಕಾಂಗ್ರೆಸ್, ಬಿಜೆಪಿ ಆರೋಪ-ಪ್ರತ್ಯಾರೋಪ
ಪತ್ರಿಕೆಯನ್ನು ಕಾಂಗ್ರೆಸ್ ತನ್ನ ಖಾಸಗಿ ಉದ್ಯಮವನ್ನಾಗಿ ಬದಲಾಯಿಸಿದೆ. ಇದು ‘ವೈಟ್ ಕಾಲರ್’ ಅಪರಾಧ ಎಂಬುದು ಬಿಜೆಪಿ ಆರೋಪ. ಕಾಂಗ್ರೆಸ್ ನಾಯಕರು ಈ ಪ್ರಕರಣವನ್ನು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ. ಆರೋಪಗಳನ್ನು ತಳ್ಳಿಹಾಕಿದ್ದಾರೆ. ವಿರೋಧ ಪಕ್ಷಗಳನ್ನು ಗುರಿಯಾಗಿಸಲು ಬಿಜೆಪಿ ಸರ್ಕಾರ ಕೇಂದ್ರ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ಕಾಂಗ್ರೆಸ್ ಆರೋಪಿಸಿದೆ. ವೈಐಎಲ್ ಒಂದು ಲಾಭರಹಿತ ಸಂಸ್ಥೆ ಆದ್ದರಿಂದ ಯಾವುದೇ ವ್ಯಕ್ತಿ ವರ್ಗಾವಣೆಯಿಂದ ಆರ್ಥಿಕ ಲಾಭ ಪಡೆಯಲು ಸಾಧ್ಯವಿಲ್ಲ. 90 ಕೋಟಿ ರೂಪಾಯಿ ಸಾಲವನ್ನು ಎಜೆಎಲ್‌ನ ಸಾಲ ಪಾವತಿಸಲು ಮಾತ್ರ ಬಳಸಲಾಗಿದೆ. ನ್ಯಾಷನಲ್ ಹೆರಾಲ್ಡ್ ಅನ್ನು ಪುನರುಜ್ಜೀವನಗೊಳಿಸುವುದು ಮತ್ತು ಅದರ ಪರಂಪರೆಯನ್ನು ರಕ್ಷಿಸುವುದು ನಮ್ಮ ಗುರಿಯಾಗಿತ್ತೇ ಹೊರತು ರಿಯಲ್ ಎಸ್ಟೇಟ್‌ನಿಂದ ಲಾಭ ಗಳಿಸುವುದಲ್ಲ ಎಂಬುದು ಕಾಂಗ್ರೆಸ್‌ನ ವಾದವಾಗಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.