ರಾಜ್ಯಾದ್ಯಂತ ಬಹುತೇಕ ಖಾಸಗಿ ಶಾಲಾ-ಕಾಲೇಜುಗಳಲ್ಲಿ ದಂಧೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ.ಅಸ್ಕರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
“ಶಾಲಾ- ಕಾಲೇಜುಗಳಲ್ಲಿ ನೋಟ್‌ಬುಕ್, ಪೆನ್, ಪೆನ್ಸಿಲ್ ಸೇರಿದಂತೆ ಇತರೆ ಲೇಖನಿ ಸಾಮಗ್ರಿ ಹಾಗೂ ಶಾಲಾ ಸಮವಸ್ತ್ರ ಶೂಗಳನ್ನು ತಮ್ಮ ಶಾಲೆಯಲ್ಲಿಯೇ ಮಾರಾಟ ಮಾಡುತ್ತಿದ್ದಾರೆ. ಈ ನಡೆ ನಿಯಮ ಬಾಹಿರವಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಖಾಸಗಿ ಶಾಲೆ ದಂಧೆ ನಿಯಂತ್ರಿಸುವ ನಿಟ್ಟಿನಲ್ಲಿ ಅಧಿಕಾರಿಗಳೂ ಅಗತ್ಯ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
“ಖಾಸಗಿ ಶಾಲೆಗಳು ವ್ಯಾಪಾರಸ್ಥರೊಂದಿಗೆ ಒಪ್ಪಂದ ಮಾಡಿಕೊಂಡು, ಪೋಷಕರಿಗೆ ಒತ್ತಡ ಹೇರಿ ಪ್ರವೇಶಾತಿ ಸಂದರ್ಭದಲ್ಲೇ ಲೇಖನಿ ಸಾಮಗ್ರಿ ಒದಗಿಸುವುದನ್ನು ರೂಢಿಸಿಕೊಂಡಿವೆ. ನೋಟ್ ಪುಸ್ತಕ, ಬೈಂಡ್ ಕಾಗದ, ಬಣ್ಣದ ಪೆನ್ಸಿಲ್, ನಕ್ಷೆ ಮೊದಲಾದವುಗಳನ್ನು ನೀಡುತ್ತಾರೆ. ಹಣ ಪಾವತಿಸಿ ಶಾಲೆಯಲ್ಲೇ ಅವುಗಳನ್ನು ಖರೀದಿಸುವಂತೆ ಪೋಷಕರ ಮೇಲೆ ಒತ್ತಡ ಹೇರಲಾಗುತ್ತಿದೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕೆಆರ್ ಆಸ್ಪತ್ರೆ ವಿರುದ್ಧ ಸುಮೊಟೊ ಪ್ರಕರಣ
ಮಾರುಕಟ್ಟೆಗಿಂತ ಹೆಚ್ಚಿನ ದರಗಳಲ್ಲಿ ಇವುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಬಡ ಪೋಷಕರ ಜೇಬಿಗೆ ಹೊರೆಯಾಗಿದೆ. ಆದ್ದರಿಂದ ಖಾಸಗಿ ಶಾಲಾ ಕಾಲೇಜುಗಳಲ್ಲಿ ನಡೆಯುವ ಈ ಅಕ್ರಮ ದಂಧೆಯನ್ನು ಕೂಡಲೇ ನಿಲ್ಲಿಸಬೇಕು ಹಾಗೂ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಸ್ವೀಕರಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಬೀವುಲ್ಲಾ, ಮುತ್ತೂಭಾಯಿ, ಉಸ್ಮಾನ್ ಗನ್ನಿ ಇದ್ದರು.