ಬೀದರ್‌ | ದೇಶದಲ್ಲಿ ಬೆಲೆಯೇರಿಕೆಯಾಗಿದ್ದು ಕೇಂದ್ರ ಬಿಜೆಪಿ ಸರ್ಕಾರದಿಂದ : ಸಿಎಂ ಸಿದ್ದರಾಮಯ್ಯ

Date:

Advertisements

ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಅವರ ಮನೆದೇವರು. ರಾಜ್ಯದ ಜನರನ್ನು ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ, ಹಾಗೂ ನನ್ನ ಮೇಲೆ ಅಪಪ್ರಚಾರ, ಸುಳ್ಳು ಆಪಾದನೆಗಳನ್ನು ಮಾಡಿದ್ದಾರೆ. ಆದರೂ ಮೂರೂ ಉಪಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬೀದರ್ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್‌‌ ವತಿಯಿಂದ ಬೀದರ್ ನಗರದ ನೆಹರು ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ₹2,025 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರೆವೇರಿಸಿ ಅವರು ಮಾತನಾಡಿದರು.

ʼನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಭರವಸೆಗಳನ್ನು ನಮ್ಮ ಸರ್ಕಾರ ಜಾರಿ ಮಾಡಿದೆ. ಗ್ಯಾರಂಟಿಗಳನ್ನು ಜಾರಿಮಾಡಲು ಸಾಧ್ಯವಿಲ್ಲ, ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಬಿಜೆಪಿಯವರು ಟೀಕೆ ಮಾಡಿದರು. ಆದರೆ ನಮ್ಮ ಪಕ್ಷ ಕೊಟ್ಟ ಮಾತಿನಂತೆ ನಡೆಯುತ್ತದೆ ಎಂಬುದನ್ನು ಜನರು ಅರಿತಿದ್ದಾರೆ. ಆದ್ದರಿಂದಲೇ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ರಾಜ್ಯದ ಜನ ನಮ್ಮನ್ನು ಬೆಂಬಲಿಸಿದ್ದಾರೆʼ ಎಂದರು.

Advertisements

ʼಪ್ರತಿಪಕ್ಷಗಳು ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಅಭಿವೃದ್ಧಿ ಕೆಲಸಗಳಿಗೆ ತಿಲಾಂಜಲಿ ಇಟ್ಟಿದ್ದಾರೆ ಎಂದು ಆರೋಪಿಸುತ್ತಾರೆ. ಬಿಜೆಪಿಯ ಆರ್.ಅಶೋಕ್, ನಾರಾಯಣಸ್ವಾಮಿ ಹಾಗೂ ಬಿ.ವೈ.ವಿಜಯೇಂದ್ರ ಅವರು ಬೀದರ್‌ಗೆ ಬಂದು ನೋಡಲು ಆಹ್ವಾನ ನೀಡುತ್ತೇನೆ. ಸರ್ಕಾರ ದಿವಾಳಿಯಾಗಿದ್ದರೆ ₹2,025 ಕೋಟಿಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲು ಸಾಧ್ಯವಾಗುತ್ತಿತ್ತೆʼ ಎಂದು ಪ್ರಶ್ನಿಸಿದರು.

ʼಬಿಜೆಪಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಕೈಗೊಂಡಿದ್ದಾರೆ. ಬಿಜೆಪಿಗೆ ಮಾನ ಮರ್ಯಾದೆ ಇದ್ದರೆ, ಕಿಂಚಿತ್ತಾದರೂ ಜನಪರವಾದ ಕಾಳಜಿ ಇದ್ದರೆ ಈ ಸುಳ್ಳು ನಾಟಕವನ್ನು ಬಂದ್ ಮಾಡಬೇಕು. ದೇಶದಲ್ಲಿ ಬೆಲೆಯೇರಿಕೆಯಾಗಿದ್ದರೆ ಕೇಂದ್ರದ ಬಿಜೆಪಿ ಸರ್ಕಾರ ಕಾರಣʼ ಎಂದು ಹೇಳಿದರು.

ʼಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರವಿದ್ದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ₹118 ರಿಂದ 120 ವರೆಗೆ ಇದ್ದಾಗಲೂ ಪೆಟ್ರೋಲ್ ಬೆಲೆ ₹73 ಹಾಗೂ ಡೀಸೆಲ್ ಬೆಲೆ ₹46.59 ಇತ್ತು. ಇಂದು ಎಷ್ಟಾಗಿದೆ? ಅಚ್ಚೆ ದಿನ್ ಬರುತ್ತದೆ ಎಂದು ನರೇಂದ್ರ ಮೋದಿ ಹೇಳಿದ್ದರು. ಅಚ್ಚೆ ದಿನ್ ಬಂದಿದೆಯೇʼ ಎಂದು ಜನರನ್ನು ಕೇಳಿದರು.

ʼಅಬಕಾರಿ ಸುಂಕ ಡೀಸೆಲ್ ಮೇಲೆ ₹10.45 ಗಳಿತ್ತು. ₹9.40 ಪೆಟ್ರೋಲ್ ಮೇಲಿತ್ತು ಇಂದು ಎಷ್ಟಾಗಿದೆ? ಮೊನ್ನೆಯವರೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದೆ. 35 ಡಾಲರ್ ಗಳಿಗೆ ಇಳಿದಿದೆ. 120 ಡಾಲರ್ ಇರುವಾಗ ಪೆಟ್ರೋಲ್ ಬೆಲೆ ₹73, ಡೀಸಲ್ ಬೆಲೆ ₹46 ಗಳಿದ್ದರೆ, ಇಂದು ₹90 ಗಳಿಗಿಂತ ಹೆಚ್ಚು ಮಾಡಿದ್ದು ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ. ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಇದ್ದನ್ನು ಕೇಳಬೇಕುʼ ಎಂದರು.

ʼಗ್ಯಾಸ್ ಸಿಲಿಂಡರ್ ಬೆಲೆ ₹420 ಇತ್ತು, ಈಗ ಒಂದು ಸಾವಿರಕ್ಕೆ ಏರಿದೆ. ಅವರ ಆಡಳಿತದ ತಪ್ಪುಗಳನ್ನು ಮುಚ್ಚಿಕೊಂಡು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿಯವರು ಜನಾಕ್ರೋಶ ಯಾತ್ರೆ ಕೈಗೊಂಡಿದ್ದಾರೆ. ಬಿಜೆಪಿ ಲಜ್ಜೆಗೆಟ್ಟವರು. 2008, 2018 ರಲ್ಲಿ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು. ಆಪರೇಶನ್ ಕಮಲ ಮಾಡಿ ಅಧಿಕಾರಕ್ಕೆ ಬಂದವರು ನಮಗೆ ಪಾಠ ಹೇಳಲು ಬರುತ್ತಾರೆ. ಇವರು ಜನವಿರೋಧಿ ಸರ್ಕಾರ ಎಂದು ಹಣೆಪಟ್ಟಿ ಹಚ್ಚಲು ಹೊರಟಿದ್ದಾರೆʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼಕಳೆದ ವರ್ಷ ₹3 ಲಕ್ಷ 71ಸಾವಿರ ಕೋಟಿ ಬಜೆಟ್ ಮಂಡಿಸಿದ್ದು, ಈ ವರ್ಷ ₹4 ಲಕ್ಷದ 9 ಸಾವಿರ ಕೋಟಿ ಬಜೆಟ್ ಮಂಡಿಸಲಾಗಿದೆ. ಆರ್ಥಿಕವಾಗಿ ಸದೃಢವಿದ್ದುದ್ದಕ್ಕೆ ಬಜೆಟ್ ಗಾತ್ರ ₹38 ಸಾವಿರ ಕೋಟಿ ಹೆಚ್ಚಿಸಲು ಸಾಧ್ಯವಾಯಿತು. ಕಳೆದ ವರ್ಷ ₹56 ಸಾವಿರ ಕೋಟಿ ಬಂಡವಾಳ ವೆಚ್ಚ ಮಾಡಿದ್ದರೆ, ಈ ವರ್ಷ ₹83 ಸಾವಿರ ಕೋಟಿಗಳ ಬಂಡವಾಳ ವೆಚ್ಚ ಮಾಡಲಾಗುವುದು. ದಿವಾಳಿಯಾಗಿರುವ ಸರ್ಕಾರ ಬಂಡವಾಳ ವೆಚ್ಚ ಮಾಡಲು ಸಾಧ್ಯವಿಲ್ಲʼ ಎಂದರು.

ʼ2025ರ ಮೇ 20 ರಂದು ನಮ್ಮ ಸರ್ಕಾರಕ್ಕೆ ಎರಡು ವರ್ಷ ತುಂಬಲಿದ್ದು, ಸರ್ಕಾರದ ಎರಡು ವರ್ಷದ ಸಾಧನೆಯ ಕಾರ್ಯಕ್ರಮವನ್ನು ರಾಜ್ಯದ ಯಾವುದಾದರೂ ಜಿಲ್ಲೆಯಲ್ಲಿ ಆಚರಿಸಲಿದ್ದೇವೆ. ರಾಜ್ಯದ ಮುಕುಟ ಎಂದೇ ಕರೆಯಲ್ಪಡುವ ಬೀದರ್ ಜಿಲ್ಲೆಯಲ್ಲಿ ₹2,025 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆʼ ಎಂದು ತಿಳಿಸಿದರು.

ಪಂಚಗ್ಯಾರಂಟಿ ಯೋಜನೆ ಕಿರುಹೊತ್ತಿಗೆ ಕೈಪಿಡಿ ಬಿಡುಗಡೆ:

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರತಂದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಕಿರುಹೊತ್ತಿಗೆ ಕೈಪಿಡಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆಗೊಳಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮಾತನಾಡಿ, ʼಬೀದರ್ ಜಿಲ್ಲೆಗೆ ಸಚಿವ ಈಶ್ವರ ಬಿ.ಖಂಡ್ರೆ ಅವರು ಬಂಪರ್ ಕೊಡುಗೆ ಪಡೆದಿದ್ದಾರೆ. ಇಂದು ಐತಿಹಾಸಿಕ ದಿನ, ಈ ಭಾಗದ ನೀರಾವರಿ ಯೋಜನೆಗಳಿಂದ ಸಾವಿರಾರು ಎಕರೆ ಭೂಮಿಗೆ ನೀರು ಒದಗಲಿದೆ. ಕುಡಿಯುವ ನೀರು, ತಲೆಮೇಲೆ ಸೂರು ಶಿಕ್ಷಣ ಹಾಗೂ ಉದ್ಯೋಗ ಸೃಷ್ಠಿಯೇ ಸರಕಾರದ ಉದ್ದೇಶ. ಬಸವಣ್ಣನ ಈ ನಾಡಿನಲ್ಲಿ ಕಾಯಕ ಹಾಗೂ ಕೃಷಿ ಅಭಿವೃದ್ಧಿಗೆ ಒತ್ತು ನೀಡಲಾಗುವುದುʼ ಎಂದರು.

ʼ₹2,025 ಕೋಟಿ ರೂ.ಗಳ ಇಂದಿನ ಕಾರ್ಯಕ್ರಮ ಬೀದರ ಇತಿಹಾಸದಲ್ಲಿ ದಾಖಲೆಯಾಗಿದೆ. ಅಭಿವೃದ್ಧಿ ಪರ್ವಕ್ಕೆ ನಾಂದಿಯಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಇಲ್ಲಿ 371(ಜೆ) ಜಾರಿ ಮಾಡಿ ₹5 ಸಾವಿರ ಕೋಟಿ ಮೀಸಲಿಟ್ಟು ಎಲ್ಲ ವರ್ಗದ ಜನರ ಏಳಿಗೆಗೆ ಸರಕಾರ ಶ್ರಮಿಸುತ್ತಿದೆʼ ಎಂದರು.

ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಮಾತನಾಡಿ, ʼ₹2025 ಕೋಟಿ ಯೋಜನೆ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರೆವೇರಿಸಿದ್ದು ಇಂದು ಬೀದರ್‌ಗೆ ಐತಿಹಾಸಿಕ ದಿನ. ಉಡಾನ್ ಯೋಜನೆಯಡಿ ನೀಡುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ 3 ವರ್ಷದ ಬಳಿಕ ನಿಲ್ಲಿಸಿದ ಕಾರಣ ಬೀದರ್-ಬೆಂಗಳೂರು ನಾಗರಿಕ ವಿಮಾನಯಾನ ಸೇವೆ ಕಳೆದ ಒಂದೂವರೆ ವರ್ಷದಿಂದ ಸ್ಥಗಿತವಾಗಿತ್ತು. ಹೀಗಾಗಿ ಬೀದರ್ ಜನರು, ವ್ಯಾಪಾರಸ್ಥರು, ಉದ್ಯಮಿಗಳು, ಪ್ರವಾಸಿಗರು ವಿಮಾನಯಾನ ಪ್ರಯಾಣಕ್ಕಾಗಿ ಹೈದ್ರಾಬಾದ್, ಕಲಬುರಗಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈಗ ರಾಜ್ಯ ಸರ್ಕಾರವೇ ಸಬ್ಸಡಿ ನೀಡಿ ವಿಮಾನಯಾನ ಸೇವೆ ಆರಂಭಿಸಿದೆʼ ಎಂದರು.

ʼಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೀದರ್ ಜಿಲ್ಲೆ ನಂಬರ್‌ ಒನ್ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ. ಹೃದಯ‌ ರೋಗದಿಂದ ಬಳಲುವವರು ಚಿಕಿತ್ಸೆಗಾಗಿ ಕಲಬುರಗಿ, ಸೋಲಾಪುರ್, ಹೈದ್ರಾಬಾದ್‌ಗೆ ಹೋಗುವ ಸ್ಥಿತಿ ಇತ್ತು. ಈಗ ಬ್ರಿಮ್ಸ್ ಸೂಪರ್ ಸ್ಪೆಷಾಲಿಟಿ ಹೃದ್ರೋಗ ಚಿಕಿತ್ಸಾ ಘಟಕ ಮತ್ತು ಕ್ಯಾಥ್ ಲ್ಯಾಬ್ ನಿರ್ಮಿಸಲಾಗಿದ್ದು, ಜಿಲ್ಲೆಯ ಜನತೆಗೆ ಇಲ್ಲಿಯೇ ಗುಣಮಟ್ಟದ ಚಿಕಿತ್ಸೆ ಲಭಿಸಲಿದೆʼ ಎಂದರು.

WhatsApp Image 2025 04 17 at 9.27.58 AM
ಬೀದರ್ ದಿಂದ ಬೆಂಗಳೂರಿಗೆ ಪ್ರಯಾಣಿಸಲಿರುವ ಐದು ಜನರಿಗೆ ಬೋರ್ಡಿಂಗ್ ಪಾಸ್ ವಿತರಿಸಿದರು.

ಬಸವಕಲ್ಯಾಣದಲ್ಲಿ ನಿರ್ಮಾಣ ಆಗುತ್ತಿರುವ ಅತ್ಯಾಧುನಿಕ ನೂತನ ಅನುಭವ ಮಂಟಪ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸು ಆಗಿದೆ. ಆಧುನಿಕ ಅನುಭವ ಮಂಟಪ ಕಾಮಗಾರಿಗೆ ನಮ್ಮ ಸರ್ಕಾರ ₹125 ಕೋಟಿ ನೀಡಿದೆ. 2026ರ ಏಪ್ರಿಲ್ ಒಳಗಾಗಿ ಅನುಭವ ಮಂಟಪ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವುದುʼ ಎಂದರು.

ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಅವರು ಮಾತನಾಡಿ, ʼಪ್ರತಿಪಕ್ಷಗಳು ಸರಕಾರದಲ್ಲಿ ಹಣ ಇಲ್ಲ ಎಂದು ಟೀಕಿಸುತ್ತಾರೆ. ಆದರೆ ಇಂದು ಜರುಗಿದ ₹2,025 ಕೋಟಿ ರೂ. ಕಾರ್ಯಕ್ರಮ ಅಭಿವೃದ್ಧಿಗೆ ಸಾಕ್ಷಿಯಾಗಿದೆʼ ಎಂದರು.

ʼಕಳೆದ ವರ್ಷ ನನ್ನ ಕ್ಷೇತ್ರ ಅಭಿವೃದ್ಧಿಗಾಗಿ ₹1 ಸಾವಿರ ಕೋಟಿ ಅನುದಾನ ಬಂದಿದೆ. ₹50 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆ, ಬ್ರಿಮ್ಸ್ ಅಭಿವೃದ್ಧಿಗೆ ₹15 ಕೋಟಿ ನೀಡಿದ್ದಾರೆ. ನಗರಾಭಿವೃದ್ಧಿ, ಒಳಚರಂಡಿಗೆ ನೂರಾರು ಕೋಟಿ ನೀಡಿದ್ದಾರೆ. ಈಗ ಕಳೆದ 2 ವರ್ಷಗಳಲ್ಲಿ ಒಟ್ಟು ₹700 ಕೋಟಿ ನೀಡಿದ್ದಾರೆʼ ಎಂದರು.

ಬೀದರ್-ಬೆಂಗಳೂರು ವಿಮಾನಯಾನಕ್ಕೆ ಚಾಲನೆ

ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಬೀದರ್-ಬೆಂಗಳೂರು ನಾಗರಿಕ ವಿಮಾನಯಾನ ಪುನಾರಂಭಕ್ಕೆ ಬುಧವಾರ (ಏ.16) ಸಿಎಂ ಸಿದ್ದರಾಮಯ್ಯ ಅವರು ಕೇಕ್ ಕತ್ತರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ‘ಈ ಹಿಂದೆ ಉಡಾನ್ ಯೋಜನೆಯಡಿ ನಾಗರಿಕ ವಿಮಾನಯಾನ ಆರಂಭವಾಗಿತ್ತು. ಆದರೆ ಏಕಾಏಕಿ ಕೇಂದ್ರ ಸರ್ಕಾರ ಸಹಾಯಧನ ಸ್ಥಗಿತಗೊಳಿಸಿತು. ಆದರೆ ಹಿಂದಿನ ಡಬಲ್ ಇಂಜಿನ್ ಸರ್ಕಾರಕ್ಕೆ ವಿಮಾನಯಾನ ಪುನರಾರಂಭಿಸಲು ಸಾಧ್ಯ ಆಗಲಿಲ್ಲ. ವಿಮಾನಯಾನ ಪುನಾರಂಭಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು ಸಹಕಾರ ನೀಡಿ, ಕೆಕೆಆರ್‌ಡಿಬಿ ಅಡಿಯಲ್ಲಿ ₹14 ಕೋಟಿ ಮೀಸಲಿಡಲಾಗಿದೆ’ ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಸಂವಿಧಾನವೇ ಭಾರತ ದೇಶದ ಧರ್ಮಗ್ರಂಥ : ನಿಜಗುಣಾನಂದ ಸ್ವಾಮೀಜಿ

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು, ಬೀದರ ಲೋಕಸಭಾ ಸದಸ್ಯ ಸಾಗರ ಈಶ್ವರ ಖಂಡ್ರೆ, ಮಾಜಿ ಸಚಿವ ರಾಜಶೇಖರ ಪಾಟೀಲ, ಮಾಜಿ ಶಾಸಕ ಅಶೋಕ ಖೇಣಿ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಬಿ.ಪಾಟೀಲ, ಭೀಮರಾವ ಬಿ.ಪಾಟೀಲ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರುಗಳಾದ ಅರವಿಂದ ಅರಳಿ, ವಿಜಯಸಿಂಗ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾಲಾ ನಾರಾಯಣರಾವ, ಬೀದರ ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕರ್ನಾಟಕ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ ಸೇರಿದಂತೆ ಜಿಲ್ಲೆಯ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X