ಜಾತಿ ಗಣತಿ ವರದಿಯು ಅವಾಸ್ತವ ಹಾಗೂ ಅವೈಜ್ಞಾನಿಕವಾಗಿದ್ದು, ಈ ವರದಿಯನ್ನು ಮರಾಠ ಸಮಾಜ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಕೂಡಲೇ ಸರ್ಕಾರ ಇದನ್ನು ಕೈಬಿಡಬೇಕು ಎಂದು ಮರಾಠ ಸಮಾಜದ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಮಾರುತಿರಾವ ಮುಳೆ ಒತ್ತಾಯಿಸಿದ್ದಾರೆ.
ʼಯಾರಿಗೋ ಖುಷಿಪಡಿಸಲು ಅಥವಾ ಯಾರದೋ ತುಷ್ಠೀಕರಣಕ್ಕಾಗಿ ಸರ್ಕಾರ ಹಠಮಾರಿ ಧೋರಣೆ ತಾಳಿ ವರದಿ ಜಾರಿಗೊಳಿಸಲು ಮುಂದಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆʼ ಎಂದು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
ʼಮಾಧ್ಯಮಗಳಲ್ಲಿ ಬಂದ ವರದಿ ಪ್ರಕಾರ ಜಾತಿ ಗಣತಿಯಲ್ಲಿ ರಾಜ್ಯದಲ್ಲಿ ಮರಾಠ ಸಮಾಜದ ಜನಸಂಖ್ಯೆ 16 ಲಕ್ಷವಿದೆ ಎಂದು ತೋರಿಸಲಾಗಿದೆ. ಇದು ಶುದ್ಧ ತಪ್ಪು. ಬೀದರ್, ಬೆಳಗಾವಿ, ಕಾರವಾರ, ಶಿವಮೊಗ್ಗ, ದಾವಣಗೆರೆ, ಧಾರವಾಡ, ವಿಜಯಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧೆಡೆ 50 ಲಕ್ಷಕ್ಕೂ ಅಧಿಕ ಮರಾಠ ಸಮಾಜದ ಜನಸಂಖ್ಯೆ ಇದೆ. ಇಷ್ಟು ದೊಡ್ಡ ವ್ಯತ್ಯಾಸ ಹೇಗೆ ಸಾಧ್ಯ? ಎಲ್ಲೋ ಕುಳಿತು, ಯಾರದೋ ಮಾತು ಕೇಳಿ ಈ ಸಮೀಕ್ಷೆ ಮಾಡಿರುವುದು ಸ್ಪಷ್ಟ. ಸತ್ಯಾಂಶ ಇಲ್ಲದ ಮತ್ತು ಅಸ್ಪಷ್ಟ ಮಾಹಿತಿಯುಳ್ಳ ಈ ವರದಿ ಸ್ವೀಕರಿಸಿದರೆ ಸಮಾಜಕ್ಕೆ ಘೋರ ಅನ್ಯಾಯವಾಗಲಿದೆ. ಸಮಾಜ ಇದು ಸಹಿಸುವುದಿಲ್ಲ. ಇದಕ್ಕಾಗಿ ಎಂಥದ್ದೇ ಹೋರಾಟಕ್ಕೂ ಸಿದ್ಧʼ ಎಂದಿದ್ದಾರೆ.
ʼಇದೊಂದು ಅವೈಜ್ಞಾನಿಕ ಜಾತಿ ಗಣತಿ ವರದಿ. ಈ ಸಮೀಕ್ಷೆಯೇ ತಪ್ಪಾಗಿ ನಡೆದಿದೆ. ಅಂಕಿ-ಅಂಶಗಳು ಸಂಪೂರ್ಣ ತಪ್ಪಾಗಿವೆ. ನಿಖರ ಮಾಹಿತಿಯೇ ಇಲ್ಲದಿದ್ದಾಗ ಸರ್ಕಾರದಿಂದ ನಮ್ಮ ಸಮಾಜಕ್ಕೆ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ, ವರದಿಯನ್ನು ತಿರಸ್ಕರಿಸಲು ಗಟ್ಟಿ ನಿರ್ಧಾರ ಕೈಗೊಳ್ಳಬೇಕು. ಇದು ಸಮಾಜದಲ್ಲಿ ಉದ್ಭವಿಸಬಹುದಾದ ಅನಗತ್ಯ ಗದ್ದಲ, ಗೊಂದಲ ತಿಳಿಗೊಳಿಸಿ ಶಾಂತಿ, ಸೌಹಾರ್ದ ನೆಲೆಸಲು ಸಹ ಕಾರಣವಾಗಲಿದೆʼ ಎಂದು ಪ್ರತಿಪಾದಿಸಿದ್ದಾರೆ.
ʼರಾಜ್ಯ ಸರ್ಕಾರ ಜಾತಿ ಗಣತಿ ವಿಷಯದಲ್ಲಿ ದೊಡ್ಡ ತಪ್ಪು ಹೆಜ್ಜೆ ಇರಿಸಿದೆ. ಸಾಮಾಜಿಕ, ಆರ್ಥಿಕ ಸಮೀಕ್ಷೆ ಸರಿಯಾಗಿ ನಡೆಸಿ, ಆ ಮೂಲಕ ಎಲ್ಲರಿಗೂ ನ್ಯಾಯ ಕಲ್ಪಿಸುವ ಕೆಲಸ ಆಗಬೇಕು. ಆದರೆ ಇಲ್ಲಿ ಸರ್ಕಾರವೇ ಸಮಾಜ ಒಡೆಯುವಂತಹ ಕೆಲಸಕ್ಕೆ ಕೈಹಾಕಿದಂತೆ ಕಾಣುತ್ತಿದೆ. ರಾಜ್ಯದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆ, ಹೋರಾಟ, ಪರ-ವಿರೋಧದ ಹೇಳಿಕೆ ಗಮನಿಸಿದರೆ ಜಾತ್ಯತೀತತೆ ಮಂತ್ರ ಪಠಿಸುತ್ತಲೇ ಸಿಎಂ ಸಿದ್ಧರಾಮಯ್ಯನವರು ವಿನಾಕಾರಣ ಶಾಂತಿಯುತ ಸಮಾಜದಲ್ಲಿ ಜಾತಿ ಜಗಳಕ್ಕೆ ನೀರೆರೆಯುತ್ತಿದ್ದಾರೆ. ಬಸವತತ್ವ ಪರಿಪಾಲಕ ಎನ್ನುತ್ತಲೇ ಸಿದ್ಧರಾಮಯ್ಯ ಅವರು, ಈ ತತ್ವದ ವಿರುದ್ಧ ಹೆಜ್ಜೆ ಇಡುತ್ತಿದ್ದಾರೆʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಪತ್ರಕರ್ತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಲ್ಲೆ; ಖಂಡನೀಯ
ʼಜಾತಿ ಗಣತಿ ವರದಿಗೆ ಮರಾಠ ಸಮಾಜದ ಎಲ್ಲರೂ ಪಕ್ಷಾತೀತವಾಗಿ ವಿರೋಧ ಮಾಡಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಸಚಿವ, ಶಾಸಕರು ಸಹ ಸಮಾಜ ಬಿಟ್ಟು ಇಲ್ಲ. ಸಮಾಜ ಅಂದ ಮೇಲೆ ಎಲ್ಲರೂ ಒಂದೇ ವೇದಿಕೆಗೆ ಬರಲೇಬೇಕು. ಸಮಾಜದ ಹಿತದ ವಿಷಯ ಬಂದಾಗ ಪಕ್ಷಭೇದ ಮರೆತು ಹೋರಾಟ ಮಾಡುತ್ತೇವೆʼ ಎಂದು ಹೇಳಿದ್ದಾರೆ.