ಕುರಿಗಾಹಿಗಳ ಹಿತರಕ್ಷಣೆಗಾಗಿ ಸರ್ಕಾರ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಆಗ್ರಹಿಸಿದರು.
ಬಾಗಲಕೋಟೆ ನಗರದಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬೆಟ್ಟ ಗುಡ್ಡಗಳಲ್ಲಿ ಒಬ್ಬಂಟಿಯಾಗಿ ಹಗಲು ರಾತ್ರಿ ಮಳೆ, ಬಿಸಿಲು ಲೆಕ್ಕಿಸದೆ ತಮ್ಮ ಕಾಯಕವನ್ನೇ ನಂಬಿ ಜೀವನ ನಡೆಸುತ್ತಿರುವ ಕುರಿಗಾಹಿಗಳಿಗೆ ಇತ್ತೀಚಿನ ದಿನಗಳಲ್ಲಿ ರಕ್ಷಣೆಯೇ ಇಲ್ಲದಂತಾಗಿದೆ. ಸರ್ಕಾರ ಕೂಡಲೇ ಅವರ ರಕ್ಷಣೆಗೆ ಕಾಯ್ದೆಯೊಂದನ್ನು ಜಾರಿಗೊಳಿಸಲು ಮುಂದಾಗಬೇಕು” ಎಂದರು.
“2024-25ನೇ ಸಾಲಿನ ಬಜೆಟ್‌ನಲ್ಲಿ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ತಿಳಿಸಿದ್ದರು. ಆದರೆ ಇದುವರೆಗೂ ಮಾಡಿಲ್ಲ. ಇದೇ ರೀತಿ ಮುಂದುವರೆದರೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಕಳೆದ ಮಾ.9 ರಂದು ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದ ಕುರಿಗಾಹಿ ಶರಣಪ್ಪ ಜಮ್ಮನಕಟ್ಟಿ ಎಂಬಾತನ್ನು ಕುರಿಗಳ್ಳರು ಕೊಲೆ ಮಾಡಿದ ಹಿನ್ನೆಲೆಯಲ್ಲಿ ಕುರಿಗಾಹಿಗಳ ಆತ್ಮ ರಕ್ಷಣೆಗೆ ಬಂದೂಕು ತರಬೇತಿ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ, ರಾಜ್ಯದಲ್ಲಿ ಪ್ರಥಮ ಬಾರಿಗೆ ಒಂದು ವಾರಗಳ ಕಾಲ ಕುರಿಗಾಹಿಗಳಿಗೆ ಬಂದೂಕು ತರಬೇತಿ ನೀಡಿದೆ. ಇದೇ ರೀತಿ ಹಿತರಕ್ಷಣಾ ಕಾಯ್ದೆಯೊಂದನ್ನು ಜಾರಿಗೊಳಿಸಿದರೆ ಕುರಿಗಳನ್ನೇ ನಂಬಿ ಜೀವನ ಸಾಗಿಸುತ್ತಿರುವ ಎಷ್ಟೋ ಕುಟುಂಬಗಳಿಗೆ ರಕ್ಷಣೆ ನೀಡಿದಂತಾಗುತ್ತದೆ” ಎಂದು ಮನವಿ ಮಾಡಿದರು.
ಇದನ್ನೂ ಓದಿ: ಬಾಗಲಕೋಟೆ | ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ
ಸುದ್ದಿಗೋಷ್ಠಿಯಲ್ಲಿ ಮುಖಂಡ ಕಾಶಿನಾಥ ಹುಡೇದ, ಯಲ್ಲಪ್ಪ ಹೆಗಡೆ, ಬಸವರಾಜ ಧರ್ಮಂತಿ, ಸಿದ್ದಪ್ಪ ಬಳಗಾನೂರ, ಪರಶುರಾಮ ಮಂಟೂರ, ಈರಪ್ಪ ಹಂಚಿನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.