ಮೂರನೇ ಚಂದ್ರಯಾನವನ್ನು ಭಾರತ ಕೈಗೊಂಡಿದೆ. ಮಾನವರಹಿತ ಚಂದ್ರಯಾನ-3ರ ರಾಕೇಟ್ ಜುಲೈ 13ರಂದು ಮಧ್ಯಾಹ್ನ 2:30ಕ್ಕೆ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧಿಕಾರಿಗಳು ತಿಳಿಸಿದ್ದಾರೆ.
“ಜುಲೈ 13 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್‌ಡಿಎಸ್‌ಸಿ) ಉಡಾವಣೆ ನಡೆಯಲಿದೆ. ಭಾರತದ ಬಾಹ್ಯಾಕಾಶ ಸಾಮರ್ಥ್ಯಗಳನ್ನು ಸಾಬೀತುಪಡಿಸುವ ಗುರಿಯನ್ನು ಚಂದ್ರಯಾನ-3 ಹೊಂದಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಚಂದ್ರಯಾನ-3 ನೌಕೆಗೆ ಜಿಎಸ್‌ಎಲ್‌ವಿ-ಎಂಕೆ3 ಎಂದು ಹೆಸರಿಡಲಾಗಿದೆ. ಚಂದ್ರಯಾನ-3 ಮಿಷನ್ ಆರ್ಬಿಟರ್ ಅನ್ನು ಹೊಂದಿರುವುದಿಲ್ಲ. ರೋವರ್ ಮತ್ತು ಲ್ಯಾಂಡರ್‌ಅನ್ನು ಹೊಂದಿರುತ್ತದೆ. ಇವೆರಡನ್ನೂ ಹೊತ್ತು ಪ್ರೊಪಲ್ಷನ್ ಮಾಡ್ಯೂಲ್ ಚಂದ್ರನ ಕಕ್ಷೆಯ 100 ಕಿ.ಮೀವರೆಗೆ ಹೋಗುತ್ತದೆ” ಎಂದು ಹೇಳಿದ್ದಾರೆ.
“ಹವಾಮಾನ, ಭೂಮಿಯಿಂದ ಚಂದ್ರನ ದೂರ ಮತ್ತು ಭೂಮಿಯ ಸುತ್ತ ತನ್ನ ಕಕ್ಷೆಯಲ್ಲಿ ಚಂದ್ರನ ಸ್ಥಾನವನ್ನು ಒಳಗೊಂಡಂತೆ ವಿವಿಧ ಅಂಶಗಳನ್ನು ಗಮನಿಸಿ ಜುಲೈ 12ರಿಂದ ಜುಲೈ 19ರ ನಡುವೆ ಉಡಾವಣೆಗೆ ಚಿಂತಿಸಿದ್ದೆವು. ಅಂತಿಮವಾಗಿ ಜುಲೈ 13ರಂದು ಉಡಾವಣೆಗೆ ನಿರ್ಧರಿಸಲಾಗಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಭೂಮಿಯ ಕಕ್ಷೆಯ ನಂತರ ಚಂದ್ರನ ಕಕ್ಷೆಗೆ ಸಂಧಿಸುವಂತೆ ಮಾಡಲು ಅಗತ್ಯವಿರುವ ಲೆಕ್ಕಾಚಾರಗಳನ್ನು ಗಣನೆಗೆ ತೆಗೆದುಕೊಂಡು ಸಮಯವನ್ನು ನಿರ್ಧರಿಸಿದ್ದೇವೆ” ಎಂದು ಇಸ್ತ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಹಾಸನ | ಮಕ್ಕಳು, ಮಹಿಳೆಯರ ನಾಪತ್ತೆ ಪ್ರಕರಣದ ತನಿಖೆಗೆ ವಿಶೇಷ ತಂಡ; ಒಂದು ತಿಂಗಳಲ್ಲಿ 51 ಮಂದಿ ಪತ್ತೆ
ಇಸ್ರೋ ಬಿಡುಗಡೆ ಮಾಡಿದ ಮಿಷನ್ ಪ್ರೊಫೈಲ್ ಪ್ರಕಾರ, ಇಂಟಿಗ್ರೇಟೆಡ್ ಚಂದ್ರಯಾನ-3 (ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್) ಚಂದ್ರನ ಕಕ್ಷೆಗೆ ಸೇರುವ ಮೊದಲು ಭೂಮಿಯನ್ನು ಐದು ಸುತ್ತು ಸುತ್ತುತ್ತದೆ. ಬಳಿಕ, ಚಂದ್ರನ ಮೇಲೆ ಇಳಿಯುವ ಮೊದಲು ಚಂದ್ರನ ಸುತ್ತ ಏಳು ಸುತ್ತು ಸುತ್ತುತ್ತದೆ.
ಚಂದ್ರನ ರಾಸಾಯನಿಕ ವಿಶ್ಲೇಷಣೆ ಮಾಡುವ ರೋವರ್
ಚಂದ್ರಯಾನ-3 ಒಂದು ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್ ಅನ್ನು ಒಳಗೊಂಡಿದೆ. ಇವುಗಳನ್ನು ಅಂತರ-ಗ್ರಹಗಳ ಕಾರ್ಯಾಚರಣೆಗಳಿಗೆ ಅಗತ್ಯವಾದ ಹೊಸ ತಂತ್ರಜ್ಞಾನಗಳ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಲ್ಯಾಂಡರ್ ಮತ್ತು ರೋವರ್‌ಅನ್ನು ಹೊತ್ತು ಪ್ರೊಪಲ್ಷನ್ ಮಾಡ್ಯೂಲ್ ಚಂದ್ರನ ಕಕ್ಷೆಯ 100 ಕಿ.ಮೀ.ವರೆಗೆ ಹೋಗುತ್ತದೆ. ಬಳಿಕ ಲ್ಯಾಂಡರ್ ಮತ್ತು ರೋವರ್‌ಅನ್ನು ಬಿಡಗುಡೆ ಮಾಡುತ್ತದೆ.
ರೋವರ್‌ಅನ್ನು ತನ್ನ ಉದರದಲ್ಲಿ ಇಟ್ಟುಕೊಂಡು ಕೆಳಗಿಳಿಯುವ ಲ್ಯಾಂಡರ್, ಚಂದ್ರನ ಮೇಲೆ ಇಳಿದ ಬಳಿ ರೋವರ್‌ಅನ್ನು ಚಂದ್ರನ ಮೇಲಿರಿಸುತ್ತದೆ. ರೋವರ್ ಚಂದ್ರನ ಮೇಲ್ಮೈಯ ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುತ್ತದೆ.
2019ರಲ್ಲಿ ಇಸ್ರೋ ಚಂದ್ರಯಾನ-2ಅನ್ನು ಕೈಗೊಂಡಿತ್ತು. ಲ್ಯಾಂಡರ್ ಮತ್ತು ರೋವರ್‌ಅನ್ನು ಆರ್ಬಿಟರ್ ಚಂದ್ರನ ಕಕ್ಷೆಗೆ ಸೇರಿಸಿತ್ತು. ಆದರೆ, ಲ್ಯಾಂಡರ್ ಚಂದ್ರನ ಮೇಲ್ಮೈನಲ್ಲಿ ಇಳಿಯುವ ವಿಫಲವಾಯಿತು. ಹೀಗಾಗಿ, ಆ ಕಾರ್ಯಾಚರಣೆಯನ್ನು ಚಂದ್ರಯಾನ-3 ಪೂರೈಸಲಿದೆ ಎಂಬ ವಿಶ್ವಾಸ ವಿಜ್ಞಾನಿಗಳಲ್ಲಿದೆ.