ಡಾ. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ ಹೋಗಲು ಪಶ್ಚಿಮ ಬಂಗಾಳದ ಮುಸ್ಲಿಂ ಲೀಗ್ ಮೂಲಕ ಮುಸ್ಲಿಮರು ಬೆಂಬಲ ಸೂಚಿಸಿದ್ದರು ಎಂದು ಭ್ರಾತೃತ್ವ ಸಮಿತಿಯ ಕೊಪ್ಪಳ ಜಿಲ್ಲಾ ಸಂಚಾಲಕ ಎಸ್ ಎ ಗಫಾರ್ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಭ್ರಾತೃತ್ವ ಸಮಿತಿಯಿಂದ ಹಮ್ಮಿಕೊಂಡಿದ್ದ ಬಾಬಾ ಸಾಹೇಬರ 134 ನೇ ಜಯಂತೋತ್ಸವದಲ್ಲಿ ಮಾತನಾಡಿದ ಅವರು, “ಸಂವಿಧಾನ ಸಭೆಗೆ ಕಳುಹಿಸುವ ಮೂಲಕ ದಲಿತರು ಮುಸ್ಲಿಮರು ಅಂದಿನಿಂದಲೂ ಒಡನಾಟ ಹೊಂದಿದ್ದರು. ನಂತರದ ದಿನಗಳಲ್ಲಿ ಒಗ್ಗಟ್ಟಾಗಿದ್ದ ದಲಿತರು ಹಾಗೂ ಮುಸ್ಲಿಮರನ್ನು ಕೆಲ ದುಷ್ಟ ಶಕ್ತಿಗಳು ಬೇರ್ಪಡಿಸುವ ಕಾರ್ಯದಲ್ಲಿ ನಿರತರಾಗಿದ್ದು, ಇದರಿಂದ ನಾವು ಎಚ್ಚರದಿಂದಿರಬೇಕು. ದೇಶದ ಎಲ್ಲ ಜಾತಿ ಜನಾಂಗದವರಿಗೆ ಅನುಕೂಲವಾಗುವಂತೆ ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ಎಲ್ಲಾ ಜನಾಂಗದವರು ಒಗ್ಗಟ್ಟಿನಿಂದ ಸಂವಿಧಾನವನ್ನು ಉಳಿಸಿಕೊಳ್ಳೊಣ” ಎಂದು ಕೋರಿದರು.
ಭ್ರಾತೃತ್ವ ಸಮಿತಿಯ ಸಂಸ್ಥಾಪಕ ಹೈಕೋರ್ಟ್ ನ್ಯಾಯವಾದಿ ಮಂಜುನಾಥ್ ಬಾಗೇಪಲ್ಲಿ ಮಾತನಾಡಿ, “ಆಗ ರಾಮ ಸೀತೆಯನ್ನು ಕಾಡಿಗೆ ಕಳುಹಿಸಿದರೆ, ಅಂಬೇಡ್ಕರ್ ಅವರು ಮಹಿಳೆಯನ್ನು ಲೋಕ ಸಭೆಗೆ ಕಳುಹಿಸಿದರು. ಮಹಿಳೆಯರಿಗೆ ಮತದಾನದ ಹಕ್ಕು, ಚುನಾವಣೆಗೆ ಸ್ಪರ್ಧಿಸುವ ಹಕ್ಕು ನೀಡಿದರು. ಇದು ಸಮಾನತೆ” ಎಂದರು.
ಇದನ್ನೂ ಓದಿ: ಕೊಪ್ಪಳ | ಸೌಜನ್ಯ ಕೊಲೆ ಪ್ರಕರಣ; ಉನ್ನತ ತನಿಖೆಗೆ ಆಗ್ರಹ
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ (ಭೀಮ ವಾದ) ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಚೌಡಕಿ, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಮುದುಕಪ್ಪ ಹೊಸಮನಿ, ಭ್ರಾತೃತ್ವ ಸಮಿತಿಯ ಮುಖಂಡ ಫಾದರ್ ಚನ್ನಬಸಪ್ಪ ಅಪ್ಪಣ್ಣವರ್, ಸಮಿತಿಯ ಕಾರ್ಯಕರ್ತ ಸುಂಕಪ್ಪ ಮೀಸಿ, ಜನಪರ ಸಂಘಟನೆಗಳ ಒಕ್ಕೂಟದ ಮುಖಂಡ ಗೌಸ್ ನೀಲಿ, ಗವಿಸಿದ್ದಪ್ಪ ಹಲಗಿ, ಗಾಳೆಪ್ಪ ಹಾಗೂ ಇತರರಿದ್ದರು.