ಉಡುಪಿ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದುಲ್ ಅಝಾ(ಬಕ್ರೀದ್ ಹಬ್ಬ)ವನ್ನು ಇಂದು ಸಂಭ್ರಮ ಸಡಗರದಿಂದ ಆಚರಿಸಿದರು.
ಉಡುಪಿ ನಗರ ಕಾಪು ಬ್ರಹ್ಮಾವರ ಕುಂದಾಪುರ ಬೈಂದೂರ್ ಹೆಬ್ರಿ ಕಾರ್ಕಳ ತಾಲೂಕುಗಳ ಹಲವು ಮಸೀದಿಗಳಲ್ಲಿ ವಿಶೇಷ ಈದ್ ನಮಾಜ್ ನೆರವೇರಿಸಲಾಯಿತು. ಮುಸ್ಲಿಂ ಬಾಂಧವರು ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಜ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಜ್ ಬಳಿಕ ಮುಸ್ಲಿಮ್ ಬಾಂಧವರು ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಧರ್ಮಗುರುಗಳು ಈದ್ ಸಂದೇಶ ನೀಡಿದರು. ಹಬ್ಬದ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.
ಚಿಕ್ಕಮಗಳೂರು : ಈದ್ ಉಲ್ ಆದ್ ಮುಬಾರಕ್
ಬಕ್ರೀದ್ ಹಬ್ಬದ ಪ್ರಯುಕ್ತ ಚಿಕ್ಕಮಗಳುರು ಜಿಲ್ಲೆ ಕಡೂರು ತಾಲೂಕಿನ ಗ್ರಾಮ, ಹೋಬಳಿಯಿಂದ ಮುಸ್ಲಿಂ ಬಾಂಧವರು ಹಾಗೂ ಧರ್ಮಗುರುಗಳು ಒಗ್ಗೂಡಿ ಕಡೂರಿನಲ್ಲಿ ಪ್ರಾರ್ಥನೆ ಮಾಡಿದ್ದಾರೆ.
ಕಡೂರಿನ ಶಾಸಕ ಆನಂದ್ ಭಾಗವಹಿಸಿ, “ಎಲ್ಲರೊಂದಿಗೆ ಒಳ್ಳೆಯ ಅಭಿಪ್ರಾಯದಿಂದ ಸಮಾಜದಲ್ಲಿ ಎಲ್ಲರೂ ಒಗ್ಗೂಡಿ ಸ್ನೇಹ ಸೌಹಾರ್ದತೆಯಿಂದ ಜೊತೆ್ಗೂಡಿ ಬದುಕಬೇಕು. ಯಾವುದೇ ಘರ್ಷಣೆ ಇಲ್ಲದೆ ಅಣ್ಣ ತಮ್ಮಂದಿರಂತೆ ಬಾಳಬೇಕು. ಜಾತಿ ಭೇದಗಳನ್ನು ಬಿಟ್ಟು ಸಾಮರಸ್ಯದಿಂದ ಬದುಕಬೇಕು” ಎಂದು ಹೇಳಿದರು.