ಸುಪ್ರೀಂ ಕೋರ್ಟ್‌ನಿಂದ ಅಣ್ವಸ್ತ್ರ ಪ್ರಯೋಗ: ಧನಕರ್ ಹೇಳಿಕೆ ಸಮಂಜಸವೇ?

Date:

Advertisements
ಇಲ್ಲಿ ರಾಜಕೀಯದ ಕಟು ಹೊಲಸು ವಾಸನೆ ಸಮಾಜದ ಶುದ್ಧ ವಾತಾವರಣವನ್ನೇ ಕೆಡಿಸುತ್ತಿದೆ. ದೇಶದಲ್ಲಿ ರಾಜಕಿಯೇತರ ಸ್ಥಾನವನ್ನು ನಿರ್ವಹಿಸಬೇಕಾದವರೇ ಕೇಂದ್ರಕ್ಕೆ ಜೋತು ಬಿದ್ದ ಬಾವಲಿಗಳಾಗಿದ್ದಾರೆ. ಆದರೆ ಸಾಮಾನ್ಯ ಜನರಿಗೆ ಇಲ್ಲಿರುವ ಕಾನೂನಿನ ಚೌಕಟ್ಟು ಅರ್ಥವಾಗದು.

ಮಸೂದೆಗಳ ವಿಚಾರದಲ್ಲಿ ರಾಷ್ಟ್ರಪತಿಯವರು ತೀರ್ಮಾನ ಕೈಗೊಳ್ಳುವುದಕ್ಕೆ ಸುಪ್ರೀಂ ಕೋರ್ಟ್ ಕಾಲಮಿತಿ ವಿಧಿಸಿರುವುದಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸುಪ್ರೀಂ ಕೋರ್ಟ್‌ಗೆ ವಿಶೇಷ ಅಧಿಕಾರ ನೀಡುವ ಸಂವಿಧಾನದ 142ನೇ ವಿಧಿಯನ್ನು ಅಣ್ವಸ್ತ್ರ ಕ್ಷಿಪಣಿಯಂತೆ ಪ್ರಯೋಗಿಸಲಾಗುತ್ತಿದೆ’ ಎಂದು ಧನಕರ್ ಹೇಳಿದ್ದಾರೆ. ಸದ್ಯ ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಧನಕರ್ ಹೇಳಿಕೆ ಕಾನೂನಿನ ಚೌಕಟ್ಟಿನಲ್ಲಿ ಸರಿಯೇ? ಓರ್ವ ಉಪರಾಷ್ಟ್ರಪತಿಯಾಗಿ ಸುಪ್ರೀಂ ಕೋರ್ಟ್‌ಗೆ ಸಂವಿಧಾನ ನೀಡಿದ ಅಧಿಕಾರವನ್ನು ಟೀಕಿಸಬಹುದೇ? ಇಲ್ಲಿ ರಾಜಕೀಯವಿಲ್ಲವೇ? ರಾಜ್ಯಪಾಲರು ತಮ್ಮ ಅಧಿಕಾರ ದುರುಪಯೋಗ ಮಾಡುತ್ತಿಲ್ಲವೇ? ಅಥವಾ ಉಪರಾಷ್ಟ್ರಪತಿ ಹೇಳುವುದು ಸರಿಯೇ? – ಹೀಗೆ ಹಲವು ಪ್ರಶ್ನೆಗಳನ್ನು ಉಪರಾಷ್ಟ್ರಪತಿ ನೀಡಿದ ಹೇಳಿಕೆ ಹುಟ್ಟುಹಾಕಿದೆ.

ವಿಪಕ್ಷಗಳು ಧನಕರ್ ಹೇಳಿಕೆಯನ್ನು ಟೀಕಿಸಿದರೆ, ಆಡಳಿತ ಪಕ್ಷದ ಕೆಲವರು ಉಪರಾಷ್ಟ್ರಪತಿ ಪರವಾಗಿ ನಿಂತಿದ್ದಾರೆ. ಶಾಸಕಾಂಗ, ಕಾರ್ಯಾಂಗಕ್ಕೆ ನ್ಯಾಯಾಧೀಶರು ಎಂದಿಗೂ ‘ಸೂಪರ್ ಪಾರ್ಲಿಮೆಂಟ್’ ಆಗುವಂತಹ ಪ್ರಜಾಪ್ರಭುತ್ವ ಭಾರತದ್ದು ಆಗಬಾರದು ಎಂಬುದು ಧನಕರ್ ಅವರ ವಾದ. ಆದರೆ ಇವೆಲ್ಲವನ್ನು ಮೀರಿ ಸಂವಿಧಾನವಿದೆ. ಅದೇ ನ್ಯಾಯಾಂಗಕ್ಕೆ ತೀರ್ಪು ನೀಡುವ ಹಕ್ಕು ನೀಡಿದೆ. ಸಂವಿಧಾನಕ್ಕೆ ನಾವೆಲ್ಲರೂ ತಲೆಬಾಗಲೇಬೇಕು ಎಂಬ ವಾಸ್ತವವನ್ನು ಧನಕರ್ ಕಂಡು ಕಾಣದಂತೆ ಬದಿಗೊತ್ತಿದ್ದಂತಿದೆ.

ಇದನ್ನು ಓದಿದ್ದೀರಾ? ಉಪರಾಷ್ಟ್ರಪತಿ ಜಗದೀಪ್ ಧನಕರ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

Advertisements

ಏನಿದು ಸಂವಿಧಾನದ 142ನೇ ವಿಧಿ?

ಸಂವಿಧಾನದ 142ನೇ ವಿಧಿಯು ಭಾರತದ ಸುಪ್ರೀಂ ಕೋರ್ಟ್‌ಗೆ ತನ್ನ ಮುಂದಿರುವ ಯಾವುದೇ ಪ್ರಕರಣದಲ್ಲಿ ‘ಸಂಪೂರ್ಣ ನ್ಯಾಯ’ವನ್ನು ನೀಡಲು ಅಗತ್ಯವಾದ ಯಾವುದೇ ತೀರ್ಪು ಅಥವಾ ಆದೇಶವನ್ನು ಹೊರಡಿಸಲು ಅಧಿಕಾರವನ್ನು ನೀಡುತ್ತದೆ. ಈ ವಿಶೇಷ ನಿಬಂಧನೆಯು ಸುಪ್ರೀಂ ಕೋರ್ಟ್‌ಗೆ ಕಾನೂನಿನ ಕಟ್ಟುನಿಟ್ಟನ್ನು ಮೀರಿ ಹೋಗುವ ಅಧಿಕಾರವನ್ನೂ ನೀಡುತ್ತದೆ. ಸದ್ಯ ಈ ಕಾನೂನೇ ಮಸೂದೆ ಜಾರಿ ವಿಚಾರದಲ್ಲಿ ರಾಜ್ಯಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದವರ ಕೈಗೆ ಕೋಳ ಹಾಕಿದ್ದಂತಾಗಿದೆ.ರಾಜಕೀಯವಾಡಲು ಸಾಧ್ಯವಾಗದಿರಲು ಕೈಕಟ್ಟಿದಂತೆಯೇ ಉಪರಾಷ್ಟ್ರಪತಿಗಳ ಬಾಯಿ ತೆರೆದಂತಿದೆ!

ಈ ಬಗ್ಗೆ ವಕೀಲರು ಹೇಳುವುದೇನು?

“142ನೇ ವಿಧಿಯು ನ್ಯಾಯಾಂಗವನ್ನು ಬಲಪಡಿಸುವ ಒಂದು ಕಲಂ ಆಗಿದೆ. ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಗೌರವ ನೀಡಬೇಕು. ನಮ್ಮಲ್ಲಿ ಮಾತ್ರವಲ್ಲ ಅಮೆರಿಕದಲ್ಲಿಯಾದರೂ ಸುಪ್ರೀಂ ಕೋರ್ಟ್ ಒಂದು ಆದೇಶವನ್ನು ನೀಡಿದರೆ, ಆ ಆದೇಶವನ್ನು ರಾಷ್ಟ್ರಪತಿಗಳು, ಅಧ್ಯಕ್ಷರು ಪಾಲಿಸಬೇಕಾದ ಅನಿವಾರ್ಯತೆ ಇರುತ್ತದೆ. ಉಪರಾಷ್ಟ್ರಪತಿ ಧನಕರ್ ಅವರು ಸುಪ್ರೀಂ ಕೋರ್ಟ್ ತೀರ್ಪನ್ನು ರಾಜಕೀಯ ದೃಷ್ಟಿಯಿಂದ ನೋಡಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಸರಿಯಲ್ಲ” ಎಂದು ವಕೀಲರು ಹೇಳಿದ್ದಾರೆ.

ಕಾನೂನು ಚೌಕಟ್ಟಿನ ವ್ಯಾಪ್ತಿಯಲ್ಲಿ ಧನಕರ್ ಅವರ ಹೇಳಿಕೆಯ ಬಗ್ಗೆ ಈದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ವಕೀಲ ಬಿ.ಟಿ ವೆಂಕಟೇಶ್, “ಒಂದು ರಾಜ್ಯಕ್ಕೆ ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿಯಿದ್ದಂತೆ. ರಾಜ್ಯದಲ್ಲಾಗುವ ಕಾನೂನು ಸಂಬಂಧಪಟ್ಟಂತೆ ರಾಜ್ಯಪಾಲರು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಯಾವುದೇ ಒಂದು ಗಣಿ ಗುತ್ತಿಗೆ, ಯೋಜನೆಗೆ ಸಂಬಂಧಿಸಿ ಕೈಗೊಂಡ ನಿರ್ಧಾರವು ರಾಜ್ಯಪಾಲರು ಕೈಗೊಂಡತೆಯೇ ಆಗುತ್ತದೆ. ರಾಜ್ಯಪಾಲರಿಗೆ ಅಂತಹ ವಿಶೇಷವಾದ ಸ್ಥಾನವಿದೆ” ಎಂದಿದ್ದಾರೆ.

ಇದನ್ನು ಓದಿದ್ದೀರಾ? ಬಿಜೆಪಿಗಾಗಿ ಉಪ ರಾಷ್ಟ್ರಪತಿ ಪಟ್ಟ ಕಳೆದುಕೊಳ್ತಾರಾ ಧನಕರ್?

“ರಾಜ್ಯಪಾಲರು ಚುನಾಯಿತರಲ್ಲ. ರಾಷ್ಟ್ರಪತಿಗಳು ಆಯ್ಕೆ ಮಾಡುವ ವ್ಯಕ್ತಿ. ಕಾನೂನಿಗೆ ಸಮ್ಮತಿ ನೀಡುವುದು, ಬದಲಾವಣೆ ಸೂಚಿಸುವುದು ರಾಜ್ಯಪಾಲರ ಹೊಣೆ. ಕಾನೂನು ಸಂವಿಧಾನಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬ ಚೌಕಟ್ಟಿನಲ್ಲಿ ರಾಜ್ಯಪಾಲರು ಬದಲಾವಣೆ ಸೂಚಿಸಬಹುದು. ಆದರೆ ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾಜ್ಯಪಾಲರ ಹುದ್ದೆಯ ದುರುಪಯೋಗ ಮಾಡಲಾಗುತ್ತಿದೆ” ಎಂಬುದು ವಕೀಲರ ಆರೋಪ.

“ಕೇಂದ್ರದಲ್ಲಿ ಒಂದು ಪಕ್ಷ, ರಾಜ್ಯದಲ್ಲಿ ಇನ್ನೊಂದು ಪಕ್ಷ ಆಡಳಿತದಲ್ಲಿದ್ದಾಗ ಕೇಂದ್ರದಿಂದ ಓರ್ವ ರಾಜ್ಯಪಾಲರನ್ನು ನೇಮಿಸಲಾಗುತ್ತದೆ. ಈ ವ್ಯಕ್ತಿ ರಾಜ್ಯ ಸರ್ಕಾರದ ಎಲ್ಲಾ ಕಾರ್ಯಗಳಿಗೆ ಅಡ್ಡಗಾಲು ಹಾಕುವುದನ್ನೇ ತನ್ನ ವೃತ್ತಿಯನ್ನಾಗಿಸಿಕೊಂಡಿರುತ್ತಾರೆ. ಕರ್ನಾಟಕದಲ್ಲಿ ನಾವು ದಶಕಗಳ ಕಾಲದಿಂದ ಇದನ್ನು ಅನುಭವಿಸಿದ್ದೇವೆ. ತಮಿಳುನಾಡು ಸರ್ಕಾರವೂ ಕೂಡಾ ಇದೇ ದೌರ್ಜನ್ಯಕ್ಕೆ ಒಳಗಾಗುತ್ತಿದೆ. ರಾಜ್ಯಪಾಲ ಆರ್‌ ಎನ್‌ ರವಿ ಅವರು 2020ರಿಂದ ಹಲವು ಮಸೂದೆಗಳಿಗೆ ಸಹಿ ಹಾಕದೆ, ಅದರ ತಿದ್ದುಪಡಿಯನ್ನೂ ಸೂಚಿಸದೆ ಹಾಗೆಯೇ ಇರಿಸಿಕೊಂಡಿದ್ದಾರೆ. ಇದರ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಸರ್ವೋಚ್ಛ ನ್ಯಾಯಾಲಯವು ಅದ್ಭುತವಾದ ಆದೇಶವನ್ನು ನೀಡಿದೆ. ಮಸೂದೆಗೆ ಸಹಿ ಹಾಕಲು ರಾಜ್ಯಪಾಲರಿಗೆ ಒಂದು ವರ್ಷ, ರಾಷ್ಟ್ರಪತಿಗಳಿಗೆ ಮೂರು ತಿಂಗಳ ಗಡುವನ್ನು ನಿಗದಿಪಡಿಸಿದೆ. ಈ ಅವಧಿಯಲ್ಲಿ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ ಸರ್ಕಾರ ಮತ್ತೆ ಸಹಿಗಾಗಿ ಮಸೂದೆ ಕಳುಹಿಸಬಹುದು. ಆಗಲೂ ಯಾವುದೇ ಪ್ರತಿಕ್ರಿಯೆ ಇರದಿದ್ದರೆ, ಕಾನೂನನ್ನು ಊರ್ಜಿತವೆಂದು ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ ಈ ಆದೇಶ ನೀಡುವ ವೇಳೆ ಕಾನೂನಿನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಬದಲಾಗಿ ಇದು ಕಾನೂನಿಗೆ ಗೌರವವನ್ನು ತರುವ ಪದ್ಧತಿ” ಎಂದಿದ್ದಾರೆ.

“ರಾಜ್ಯವು ಯಾವುದೇ ಒಂದು ಯೋಜನೆ, ಕಾನೂನು ರೂಪಿಸಿದಾಗ ಅದಕ್ಕೆ ಅಡ್ಡಗಾಲು ಹಾಕುವ ಕಾರ್ಯವನ್ನು ಕೇಂದ್ರ ಸರ್ಕಾರವು ರಾಜ್ಯಪಾಲರ ಮೂಲಕ ಮಾಡುತ್ತಿದೆ. ಇದು ರಾಜ್ಯ ಸರ್ಕಾರಗಳ ಸ್ವಾಯತ್ತತೆಯ ಪ್ರಶ್ನೆ ಕೂಡಾ ಹೌದು. ಇಂಗ್ಲೆಂಡ್‌ನ ಸಾಮಾನ್ಯ ಕಾನೂನನ್ನು (Common Law) ಭಾರತ, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಶ್ರೀಲಂಕಾ, ಮಲೇ‍ಷಿಯಾ, ಹಾಂಗ್‌ಕಾಂಗ್‌ನಲ್ಲಿ ಪಾಲಿಸಲಾಗುತ್ತದೆ. ಆದರೆ ಈ ಕಾನೂನನ್ನು ಧನಕರ್ ಅವರು ಅಣ್ವಸ್ತ್ರ ಎಂದಿದ್ದಾರೆ. ನೈಜವಾಗಿ ಧನಕರ್ ಹೇಳಿಕೆಯೇ ಊರ್ಜಿತವಾಗುವುದಿಲ್ಲ. 1973 ಕೇಶವಾನಂದ ಭಾರತಿ ತೀರ್ಪಿನೆಡೆ ನಾವೀಗ ಕಣ್ಣಾಡಿಸಬೇಕಾಗಿದೆ. ಈ ದೇಶದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಲ್ಲಿ ಯಾವುದು ಮುಖ್ಯ ಎಂಬ ಪ್ರಶ್ನೆ ಹುಟ್ಟಿತ್ತು. ಈ ವೇಳೆ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ‘ಈ ಮೂರರ ಪೈಕಿ ಯಾವುದೇ ಉಚ್ಛ ಎಂಬುದನ್ನು ನಮ್ಮ ಸಂವಿಧಾನ ಹೇಳಿಲ್ಲ. ಆದ್ದರಿಂದ ಸಂವಿಧಾನವೇ ಸಾರ್ವಭೌಮ’ ಎಂದು ಹೇಳಿದೆ. ಆದ್ದರಿಂದ ಸಂವಿಧಾನ ಸಾರ್ವಭೌಮತ್ವವನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ಉಪರಾಷ್ಟ್ರಪತಿಗಳಿಗೆ ಅವಮಾನ ಮಾಡಿದ ವಿಪಕ್ಷಗಳು: ಕುಲ್‍ಜೀತ್ ಸಿಂಗ್ ಚಾಹಲ್

“142ನೇ ವಿಧಿ ಈಗ ಉಪರಾಷ್ಟ್ರಪತಿಗಳಿಗೆ ಸಂಕಟ ತಂದಂತಿದೆ. ಯಾರು ತಪ್ಪು ಮಾಡಿದರೂ ಅದನ್ನು ಪ್ರಶ್ನಿಸುವ, ಶಿಕ್ಷಿಸುವ ಅಧಿಕಾರವನ್ನು ಸಂವಿಧಾನವು ನ್ಯಾಯಾಂಗಕ್ಕೆ ನೀಡಿದೆ. ಆ ಅಧಿಕಾರ ನೀಡಿರುವುದು ಸರಿಯಲ್ಲ, ಸುಪ್ರೀಂ ಕೋರ್ಟ್ ತುಂಬಾ ಅನ್ಯಾಯ ಮಾಡುತ್ತಿದೆ ಎಂಬಂತಹ ಹೇಳಿಕೆಯನ್ನು ಉಪರಾಷ್ಟ್ರಪತಿಗಳು ನೀಡುವುದು ಸರಿಯಲ್ಲ” ಎಂದಿದ್ದಾರೆ.

ಏನಿದು ಕೇಶವಾನಂದ ಭಾರತಿ ತೀರ್ಪು?

1972ರಲ್ಲಿ ಕೇರಳ ಸರ್ಕಾರವು ಎರಡು ಭೂಸುಧಾರಣಾ ಕಾನೂನುಗಳನ್ನು ರೂಪಿಸಿತ್ತು. ಈ ಕಾನೂನಿನಿಂದಾಗಿ ಸರ್ಕಾರವು ಎಡನೀರು ಮಠದ ಜಮೀನಿನ ನಿರ್ವಹಣೆಯನ್ನು ಮಠದಿಂದ ತನ್ನ ಉಸ್ತುವಾರಿಗೆ ಪಡೆಯಲು ಮುಂದಾಗಿತ್ತು. ಈ ವೇಳೆ ಈ ಕಾನೂನು ಪ್ರಶ್ನಿಸಿ, ಕೇಶವಾನಂದ ಭಾರತೀ ಸ್ವಾಮೀಜಿ ನ್ಯಾಯಾಲಯದ ಮೆಟ್ಟಿಲೇರಿದ್ದು ಇದನ್ನು ಕೇಶವಾನಂದ ಭಾರತಿ VS ಕೇರಳ ಸರ್ಕಾರ ಪ್ರಕರಣವೆಂದು ಕರೆಯಲಾಗುತ್ತದೆ. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಪೀಠದಲ್ಲಿ 13 ನ್ಯಾಯಾಧೀಶರು ಇದ್ದದ್ದು ಕೇಶವಾನಂದ ಭಾರತಿ ಪ್ರಕರಣದ ವಿಚಾರಣೆ ವೇಳೆ. ಸುಮಾರು 68 ದಿನಗಳ ಕಾಲ ಮುಖ್ಯ ನ್ಯಾಯಮೂರ್ತಿ ಎಸ್‌.ಎಂ ಸಿಕ್ರಿ ಅವರ ನೇತೃತ್ವದ 13 ನ್ಯಾಯಾಧೀಶರುಗಳ ಪೀಠವು ವಿಚಾರಣೆ ನಡೆಸಿದೆ.

ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನದ ಪ್ರಾಮುಖ್ಯತೆಯನ್ನು ಎತ್ತಿಹಿಡಿದ ಐತಿಹಾಸಿಕ ತೀರ್ಪನ್ನು ನೀಡಿದೆ. 1973ರಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಇದು. ಈ ತೀರ್ಪು ಸಂವಿಧಾನಕ್ಕೆ ತಿದ್ದುಪಡಿ ತರುವ ವಿಚಾರದಲ್ಲಿ ಸಂಸತ್ತಿಗೆ ಇದ್ದ ವ್ಯಾಪಕ ಅಧಿಕಾರವನ್ನು ಮೊಟಕುಗೊಳಿಸಿತು ಮತ್ತು ಯಾವುದೇ ತೀರ್ಪು ಸಂವಿಧಾನದ ಮೂಲ ಸ್ವರೂಪಕ್ಕೆ ಅನುಗುಣವಾಗಿದೆಯೇ ಎಂಬ ಪರಿಶೀಲನೆ ಮಾಡಲು ನ್ಯಾಯಾಂಗಕ್ಕೆ ಅಧಿಕಾರವನ್ನು ನೀಡಿತು.

ಸಂವಿಧಾನ 368ನೇ ವಿಧಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಹಕ್ಕನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಆದರೆ ಸಂವಿಧಾನದ ಮೂಲಸ್ವರೂಪವನ್ನು ಬದಲಾಯಿಸುವಂತಿಲ್ಲ. ಆದರೆ ‘ಮೂಲ ಸ್ವರೂಪ’ ಎಂದರೇನು ಎಂಬುದನ್ನು ತೀರ್ಪು ಹೇಳಿಲ್ಲ. ಒಕ್ಕೂಟ ವ್ಯವಸ್ಥೆ, ಜಾತ್ಯತೀತತೆ, ಪ್ರಜಾಪ್ರಭುತ್ವಗಳನ್ನು ಮಾತ್ರ ಉಲ್ಲೇಖಿಸಿದೆ. ಆದರೆ ಬಳಿಕ ನೀಡಿದ ಅನೇಕ ತೀರ್ಪುಗಳನ್ನು ಕೇಶವಾನಂದ ಭಾರತಿ ತೀರ್ಪನ್ನು ಉಲ್ಲೇಖಿಸಿಯೇ ಬರೆಯಲಾಗಿದೆ.

ಅವೆಲ್ಲವನ್ನೂ ಮೀರಿ, ಸಂವಿಧಾನವನ್ನು ದಾಟಿ ಉಪರಾಷ್ಟ್ರಪತಿ ನೀಡಿರುವ ಹೇಳಿಕೆ ಖಂಡನಾರ್ಹ. ಇಲ್ಲಿ ರಾಜಕೀಯದ ಕಟು ಹೊಲಸು ವಾಸನೆ ಸಮಾಜದ ಶುದ್ಧ ವಾತಾವರಣವನ್ನೇ ಕೆಡಿಸುತ್ತಿದೆ. ದೇಶದಲ್ಲಿ ರಾಜಕಿಯೇತರ ಸ್ಥಾನವನ್ನು ನಿರ್ವಹಿಸಬೇಕಾದವರೇ ಕೇಂದ್ರಕ್ಕೆ ಜೋತು ಬಿದ್ದ ಬಾವಲಿಗಳಾಗಿದ್ದಾರೆ. ಆದರೆ ಸಾಮಾನ್ಯ ಜನರಿಗೆ ಇಲ್ಲಿರುವ ಕಾನೂನಿನ ಚೌಕಟ್ಟು ಅರ್ಥವಾಗದು. ದೇಶದ ಮೊದಲ ಪ್ರಜೆ ರಾಷ್ಟ್ರಪತಿಗಿಂತ ಮೇಲೆ ಯಾವುದೂ ಇಲ್ಲ, ಯಾರೂ ಇಲ್ಲ ಎಂಬ ವಾದ ಹೊಂದಿರುವವರು, ಸಂವಿಧಾನವನ್ನು ಮರೆತಿದ್ದಾರೆ ಅಥವಾ ಸಂವಿಧಾನವನ್ನು ಕಡೆಗಣಿಸಿದ್ದಾರೆ ಎಂಬುದು ಸ್ಪಷ್ಟ.

ಎಲ್ಲಿ ರಾಜಕೀಯ ನಡೆಯಬೇಕೋ ಅಲ್ಲಿ ಮಾತ್ರ ರಾಜಕೀಯವಿದ್ದರೆ ಚೆಂದ. ಅನವಶ್ಯಕ ರಾಜಕೀಯ, ಇಡೀ ದೇಶದ ಪ್ರಜೆಗಳಿಗೆ ಮಾರಕ. ಮುಂದೊಂದು ದಿನ ಸರ್ಕಾರವನ್ನೇ ಕೆಳಗುರುಳಿಸಬಹುದು. ಈ ಸ್ಪಷ್ಟತೆಯನ್ನು ಉಪರಾಷ್ಟ್ರಪತಿಗಳು, ಎಲ್ಲಾ ರಾಜ್ಯದ ರಾಜ್ಯಪಾಲರುಗಳು ಹೊಂದಿರುವುದು ಅತ್ಯವಶ್ಯಕ. ಈ ಕೆಟ್ಟ ರಾಜಕೀಯ ರಾಜ್ಯಪಾಲರುಗಳ ಸ್ಥಾನಕ್ಕೆ ಚ್ಯುತಿ ತರುವುದು ಖಚಿತ.

Mayuri
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X