ಉಪಚುನಾವಣೆಗೂ ಮುನ್ನ ಗುಜರಾತ್‌ನ ಇಂಡಿಯಾ ಒಕ್ಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಗುಜರಾತ್ ಕಾಂಗ್ರೆಸ್ ಘಟಕವು ಎಎಪಿ ಜೊತೆಗಿನ ಮೈತ್ರಿಯನ್ನು ಕೈಬಿಟ್ಟಿದೆ. “ಮುಂಬರುವ ವಿಸಾವದರ್ ಮತ್ತು ಕಾಡಿ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ” ಎಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿನ್ಹ ಗೋಹಿಲ್ ಘೋಷಿಸಿದ್ದಾರೆ. ಇದರಿಂದಾಗಿ ಎಎಪಿ ಜೊತೆಗಿನ ಮೈತ್ರಿಯ ಮಾತುಕತೆ ಅಂತ್ಯವಾಗಿದೆ.
ಎಎಪಿ ಕಾಂಗ್ರೆಸ್ ಅನ್ನು ಸಂಪರ್ಕಿಸದೆ ಏಕಪಕ್ಷೀಯವಾಗಿ ಗೋಪಾಲ್ ಇಟಾಲಿಯಾ ಅವರನ್ನು ವಿಸಾವದರ್ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿ ಎಂದು ಘೋಷಿಸಿದೆ. ಇದರಿಂದಾಗಿ ಎಎಪಿ ಮತ್ತು ಕಾಂಗ್ರೆಸ್ ನಡುವೆ ಅಸಮಾಧಾನ ಉಂಟಾಗಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಗುಜರಾತ್ | ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಎಎಪಿ ಮೈತ್ರಿ
ಕಾಂಗ್ರೆಸ್ ರಾಜಕೀಯ ವ್ಯವಹಾರಗಳ ಸಮಿತಿಯ ಪ್ರಮುಖ ಸಭೆಯ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಗೋಹಿಲ್, “ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸುವುದು ಪಕ್ಷದ ನಿರ್ಧಾರ. ವಿಸಾವದರ್ ಮತ್ತು ವಾವ್ ಸ್ಥಾನಕ್ಕೆ ಸಂಬಂಧಿಸಿದಂತೆ ಎಎಪಿ ಜೊತೆ ಯಾವುದೇ ಒಪ್ಪಂದವನ್ನು ಮಾಡಿಕೊಂಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ವಿರೋಧ ಪಕ್ಷಗಳ ನಡುವೆ ಅಂತರ ಹೆಚ್ಚಾದಂತೆ ಬಿಜೆಪಿಗೆ ಲಾಭವಾಗಲಿದೆ ಎಂಬ ಅಭಿಪ್ರಾಯ ತಜ್ಞರುಗಳದ್ದು. ವಿರೋಧ ಪಕ್ಷಗಳು ಪ್ರತ್ಯೇಕವಾಗಿರುವ ಕಾರಣದಿಂದಾಗಿ ಈ ವರ್ಷದ ಅಂತ್ಯದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿ ಅಧಿಕ ಮತ ಪಡೆಯುವ ಸಾಧ್ಯತೆಯಿದೆ. ಪಾಟಿದಾರ್‌ಗಳು ಮತ್ತು ಮೇಲ್ಜಾತಿ ಎಂದು ಕರೆಸಿಕೊಂಡವರ ಪ್ರಾಬಲ್ಯವಿರುವ ಈ ಕ್ಷೇತ್ರವನ್ನು ಈ ಹಿಂದೆ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರು ಪ್ರತಿನಿಧಿಸಿದ್ದ ಕಾರಣದಿಂದಾಗಿ ಈ ಕ್ಷೇತ್ರ ಮಹತ್ವವನ್ನು ಪಡೆದುಕೊಂಡಿದೆ.
2022ರಲ್ಲಿ ಎಎಪಿ ಭೂಪೇಂದ್ರ ಭಯಾನಿ ಅವರು ಈ ಕ್ಷೇತ್ರದಲ್ಲಿ ಗೆಲುವು ಕಂಡಿದ್ದರು. ಕಾಂಗ್ರೆಸ್ ಅನ್ನು ಕೇವಲ 16,781 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಎಎಪಿ ತಳ್ಳಿತ್ತು. ಬಿಜೆಪಿ ಅಭ್ಯರ್ಥಿ ಹರ್ಷದ್ ರಿಬಾಡಿಯಾ ಅವರಿಗೆ ಸಂಬಂಧಿಸಿದ ಕಾನೂನು ಸವಾಲಿನ ಕಾರಣದಿಂದಾಗಿ ಉಪಚುನಾವಣೆ ನಡೆಯುತ್ತಿದೆ.
