ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಅಧ್ಯಕ್ಷೆಯ ಸಹೋದರ ಹಸ್ತಕ್ಷೇಪ ನಡೆಸಿ ಅಭಿವೃದ್ಧಿ ಕಾರ್ಯಗಳು ನಡೆಯದೇ ಹಿನ್ನಡೆಯಾಗುತ್ತಿದೆ. ಅಣ್ಣನ, ಗಂಡನ ಮಾತುಗಳನ್ನು ಕೇಳಿ ಗ್ರಾಮ ಪಂಚಾಯತಿಯ ಸದಸ್ಯರಿಗೆ ಬೆಲೆ ನೀಡದೆ ಅಧ್ಯಕ್ಷೆ ಸರ್ವಾಧಿಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿಯ ಇತರೇ ಸದಸ್ಯರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಹಾಲಿ ಅಧ್ಯಕ್ಷರನ್ನು ವಜಾ ಮಾಡುವಂತೆ ಆಗ್ರಹಿಸಿದರು.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಬಳಿಯ ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು ಯಾರು? ಎನ್ನುವುದೇ ಸಾರ್ವಜನಿಕರಿಗೆ, ಸದಸ್ಯರುಗಳಿಗೆ ತಿಳಿಯದಾಗಿದೆ. ಅಧ್ಯಕ್ಷೆಯ ಸಹೋದರ, ಸಂಬಂಧಿಕರು ಹಸ್ತಕ್ಷೇಪ ನಡೆಸಿ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕಾಟಯ್ಯ ಹಾಗೂ ಸರ್ವ ಸದಸ್ಯರುಗಳು ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಕೊಠಡಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಸದಸ್ಯ ಕಾಟಯ್ಯ, “ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ, ಕಾಮಗಾರಿ, ಕಾರ್ಯಕ್ರಮಗಳನ್ನು ನೆಡೆಸುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಸಾಮಾನ್ಯ ಸಭೆ ಯಲ್ಲಿ ಕೈಗೊಂಡಂತಹ ಕಾಮಗಾರಿ, ಕಾರ್ಯಗಳನ್ನು ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾಬಾಯಿ ಕಾರ್ಯರೂಪಕ್ಕೆ ತರದೆ ಬೇಜವಾಬ್ದಾರಿ ನಿರ್ವಹಿಸುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“”ಅಧ್ಯಕ್ಷೆಯ ಸಹೋದರ ಸಂತೋಷ್ ನಾಯ್ಕ ಗ್ರಾಮ ಪಂಚಾಯಿತಿಯೊಂದರ ಕಂಪ್ಯೂಟರ್ ಆಪರೇಟರ್ ಆಗಿದ್ದು, ತಾನೇ ದೇವರಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಎಂದು ಹೇಳಿ ಕೊಳ್ಳುತ್ತಿದ್ದು, ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಪಂಚಾಯತಿ ಹಿನ್ನಡೆಗೆ ಕಾರಣನಾಗಿದ್ದಾನೆ. ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಅವರನ್ನು ವಜಾ ಮಾಡಬೇಕೆಂದು ಸರ್ವ ಸದಸ್ಯರುಗಳು ಒಪ್ಪಿಗೆ ಸೂಚಿಸಿದ್ದಾರೆ. ಆದ್ದರಿಂದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
“ಜಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಸದಸ್ಯರಿಗೆ ಮಾಹಿತಿ ತಿಳಿಸದೆ ದಾಖಲೆಗಳನ್ನು ತೋರಿಸದೆ ಸಾಕಷ್ಟು ಹಣ ಖರ್ಚು ಮಾಡಿದ್ದೇನೆ ಎಂದು ಸದಸ್ಯರುಗಳಿಗೆ ಉಡಾಫೆ ಉತ್ತರ ನೀಡುತ್ತಾರೆ. ಕುಡಿಯುವ ನೀರಿನ ಬೋರ್ ವೆಲ್ ಗೆ ಸಂಬಂಧಿಸಿದಂತೆ ಸಂಬಂಧಪಟ್ಟವರಿಗೆ ಬಿಲ್ ಪಾವತಿಸಿ ಎಂದು ಕೇಳಿದರೆ, ಜಾತ್ರೆಗೆ ಖರ್ಚು ಮಾಡಿರುವ ಹಣದ ಬಿಲ್ ಬರಬೇಕಿದೆ. ಅದನ್ನು ಎಲ್ಲರೂ ಒಪ್ಪಿ ಮಂಜೂರು ಮಾಡಿ ಎಂದು ಸಭೆ ಮೊಟಕುಗೊಳಿಸಿ ಎದ್ದು ಹೋಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈ ಅವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿ, ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟಿಸಿ ಮಾಧ್ಯಮಗಳಿಗೆ, ಸಾಮಾಜಿಕ ಜಾಲತಾಣದಲ್ಲಿ ವಿವರ ಹಾಕಿರುವುದಕ್ಕೆ ಸಂಬಂಧಿಸಿದಂತೆ ಕಂಪ್ಯೂಟರ್ ಆಪರೇಟರ್ ಆಗಿರುವ ಸಂತೋಷ್ ಮಾಧ್ಯಮಗಳಲ್ಲಿ ಪ್ರಚಾರ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದೀರಿ ಎಂದು ವಾಟ್ಸಪ್ ನಲ್ಲಿ ಕೆಟ್ಟ ಕೆಟ್ಟ, ಬೆದರಿಕೆಯ ಪದಗಳನ್ನು ಬಳಸಿ ಬೆದರಿಕೆ ಹಾಕಿದ್ದಾನೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಹಸಿದವರು ಕಾಂತರಾಜ್ ವರದಿ ಜಾರಿಗಾಗಿ ಕಾಯುತ್ತಿದ್ದಾರೆ, ಹೊಟ್ಟೆ ತುಂಬಿದವರು ವಿರೋಧಿಸುತ್ತಾರೆ ; ಈಶ್ವರಾನಂದಪುರಿ ಶ್ರೀ
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಲಿ ಸದಸ್ಯ ಕಾಟಲಿಂಗಯ್ಯ ಮಾತನಾಡಿ “ಸಾಮಾನ್ಯ ಸಭೆಯಲ್ಲಿ ಸದಸ್ಯರ ಸಮ್ಮುಖದಲ್ಲಿ ತೆಗೆದುಕೊಂಡ ತೀರ್ಮಾನ ಗಳನ್ನು ಅಧ್ಯಕ್ಷೆ ಸರಿತಾಬಾಯಿ ಗಾಳಿಗೆ ತೂರಿ, ತನ್ನ ಅಣ್ಣನಾದ ಸಂತೋಷ್ ನಾಯ್ಕ ಹೇಳಿದ ಹಾಗೆ ಕೇಳುತ್ತಿದ್ದಾರೆ. ಅಧ್ಯಕ್ಷೆಯ ಅಣ್ಣ ಪದೇ ಪದೇ ಗ್ರಾಮ ಪಂಚಾಯಿತಿ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಿದ್ದಾರೆ. ಹಲವಾರು ಸದಸ್ಯರುಗಳ ವಾರ್ಡ್ಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸಾಮಾನ್ಯ ಸಭೆ ಯಲ್ಲಿ ಪ್ರಸ್ಥಾಪಿಸಿದ್ದಾಗ ಅವಸರದಲ್ಲಿ ಬೇರೆಕಡೆ ಸಭೆ ಇದೆ ಎಂದು ಉಡಾಫೆಯಿಂದ ಸಾಮಾನ್ಯ ಸಭೆಯನ್ನು ಮೊಟಕುಗೊಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾಬಾಯಿ ಯವರನ್ನು ಅತೀ ಶೀಘ್ರದಲ್ಲೆ ಅವರನ್ನು ವಜಾ ಮಾಡಿ ಹೊಸ ನೇಮಕ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷೆ ರತ್ನಮ್ಮ, ರಾಜಣ್ಣ, ಟಿ.ಕಾಟಯ್ಯ, ಡಾ.ಕಾಟಲಿಂಗಯ್ಯ, ಗುರುಮೂರ್ತಿ, ಸೂರಮ್ಮ, ಅಕ್ಕಮ್ಮ, ಶಿವರುದ್ರಮ್ಮ, ರಾಯಮ್ಮ, ಸುಮ, ಹಾಗೂ ಸರ್ವ ಸದಸ್ಯರು ಹಾಜರಿದ್ದರು .