ಸಮಾನತೆ ಮತ್ತು ಸ್ವಾತಂತ್ರ್ಯ ಜೊತೆಗೆ ಸಂಪನ್ಮೂಲಗಳ ಹಂಚಿಕೆಯಲ್ಲಿ ಸಮಾನ ಮೌಲ್ಯವನ್ನು ವಿವರಿಸುವ ಆರ್ಥಿಕ ಪ್ರಜಾಪ್ರಭುತ್ವದ ಬುನಾದಿ ಹಾಕಿದ, ಸಾಮಾಜಿಕ ಸಮಾನತೆಯ ಶಿಲ್ಪಿ ಮತ್ತು ಧೀಮಂತ ನಾಯಕ ಅಂಬೇಡ್ಕರ್ ಎಂದು ಪ್ರೊ. ನಾಗರಾಜ್ ಕನಕಣಿ ಹೇಳಿದರು.
ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಜನ್ಮ ವಾರ್ಷಿಕೋತ್ಸದ ಅಂಗವಾಗಿ ನಗರದ ಅಂಜುಮನ್ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಎಲ್ಲಾ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ತಂದುಕೊಟ್ಟ ಸಂವಿಧಾನ ಶಿಲ್ಪಿ ಆಗಿದ್ದಾರೆ ಎಂದರು.
ಎನ್ ಎಸ್ ಎಸ್ ಘಟಕ, ರಾಜ್ಯಶಾಸ್ತ್ರ ವಿಭಾಗ ಮತ್ತು ದಿನಾಚರಣೆಯ ಘಟಕ ಸಂಯೋಗದೊಂದಿಗೆ ಕಾರ್ಯಕ್ರಮ ನಡೆಯಿತು. ಉಸ್ಮಾನ್ ಅತ್ತಾರ್ ಖುರಾನ ಪಠಿಸಿದರು. ನಿಯಾಜ್ ಶ್ಲೋಕ ಹೇಳಿದರು. ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ ಐ.ಏ.ಮುಲ್ಲಾ ಮಾತನಾಡಿ, ಶಿಕ್ಷಣ ಮತ್ತು ಸಬಲೀಕರಣದಿಂದ ಅಸಮಾನತೆ ಹೋಗಲಾಡಿಸಲು ಸಾಧ್ಯ, ಎಲ್ಲಾ ವರ್ಗಗಳ ಅಭಿವೃದ್ಧಿಯಾಗಬೇಕು ಎಂಬುವುದು ಅಂಬೇಡ್ಕರ್ ಅವರ ಆಸೆಯಾಗಿತ್ತು ಎಂದರು.
ಡಾ. ನಾಗರಾಜ್ ಗುದಗನವರ ಸ್ವಾಗತಿಸಿದರು. ಡಾ. ತಾಜುನ್ನಿಸಾ ವಂದನಾರ್ಪಣೆ ಮಾಡಿದರು. ನೂರಜಹಾನ್ ಗಲಗಲಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಡಾ. ಏನ್ ಬಿ ನಾಲತವಾಡ, ಡಾ. ಅಸ್ಮನಾಜ್ ಬಳ್ಳಾರಿ, ಡಾ ಸೌಭಾಗ್ಯ ಜಾದವ್, ಡಾ. ಗೌರಿ ಕೇರಿಮಠ, ಪ್ರೊ. ಸುರೇಶ್ ವೇದಿಕೆ ಮೇಲಿದ್ದರು.