ಹಲವು ಕ್ರಿಮಿನಲ್ ಆರೋಪಗಳಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಚಾರ್ಜ್‌ಶೀಟ್ ಆಗಿರುವ ಕೇಸೊಂದರಲ್ಲಿ ಅಭಿಯೋಜನೆಗೆ (ಪ್ರಾಸಿಕ್ಯೂಷನ್‌ಗೆ) ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಅನುಮತಿ ನೀಡಿದ್ದಾರೆ.
ಈ ಕುರಿತ ಸರ್ಕಾರಿ ಆದೇಶದ ಪ್ರತಿ ಈದಿನ ಡಾಟ್ ಕಾಮ್‌ಗೆ ಲಭ್ಯವಾಗಿದೆ.
ಹನಿಟ್ರ್ಯಾಪ್ ನಡೆಸಲು ಎಚ್ ಐ ವಿ ಸೋಂಕಿತ ಮಹಿಳೆಯರನ್ನು ಬಳಸಿಕೊಂಡಿದ್ದು, ದಲಿತರ ಮೇಲೆ ಜಾತಿನಿಂದನೆ, ಆಮಿಷವೊಡ್ಡಿ ವಿಕಾಸಸೌಧದಲ್ಲೇ ಅತ್ಯಾಚಾರ ಮಾಡಿದ್ದು ಒಳಗೊಂಡಂತೆ ಬಹಳ ಗಂಭೀರ ಆರೋಪಗಳ ಮೇಲೆ ಮುನಿರತ್ನ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು ಮತ್ತು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು.
ಆ ನಂತರ ಜಾಮೀನಿನ ಮೇಲೆ ಹೊರಬಂದು ಕಳೆದ ಬಜೆಟ್ ಅಧಿವೇಶನದಲ್ಲೂ ಭಾಗಿಯಾಗಿದ್ದರು. ಬಜೆಟ್ ಅಧಿವೇಶನದಲ್ಲಿ ಸಚಿವ ಕೆ.ಎನ್.ರಾಜಣ್ಣ ಹನಿಟ್ರ್ಯಾಪ್ ನಡೆಯುತ್ತಿದೆಯೆಂದು ಹೇಳಿದಾಗ, ಸದನದಲ್ಲಿ ಭಾರೀ ಕೋಲಾಹಲ ಆಗಿತ್ತು. ಬಿಜೆಪಿ ಶಾಸಕರು ಈ ವಿಚಾರದಲ್ಲಿ ದೊಡ್ಡ ಪ್ರತಿಭಟನೆಯನ್ನೂ ನಡೆಸಿದ್ದರು.
ಅದೇ ಸಂದರ್ಭದಲ್ಲಿ ಅವರದ್ದೇ ಪಕ್ಷದ ಹನಿಟ್ರ್ಯಾಪ್ ಆರೋಪವನ್ನು ಹೊತ್ತಿದ್ದ ಶಾಸಕ ಮುನಿರತ್ನ ಸಹಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಪ್ರಶ್ನೆಗೊಳಗಾಗಿತ್ತು. ಸ್ವತಃ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಬಳಿಯೇ ಎಚ್ ಐ ವಿ ಸೋಂಕಿತರನ್ನು ಕಳಿಸಿ, ಸೋಂಕು ತಗುಲಿಸಲು ಯತ್ನಿಸಿದ್ದರು ಎಂಬ ಆರೋಪವೂ ಮುನಿರತ್ನ ಅವರ ಮೇಲಿದೆ. ಸದನದಲ್ಲಿ ಅದೇ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲೇ ನಡೆದ ಪ್ರತಿಭಟನೆಯಲ್ಲಿ ಮುನಿರತ್ನ ಅವರೂ ಇದ್ದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಪಿಸಿ 153 ಎ(1)(ಎ)(ಬಿ) ಮತ್ತು 504 ಹಾಗೂ 506 ಕಲಂಗಳ ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲು ಸರ್ಕಾರದ ಪೂರ್ವಾನುಮತಿ ಅಗತ್ಯವಿತ್ತು. ಅದನ್ನು ಈಗ ನೀಡಲಾಗಿದ್ದು, ಈ ಕಾರಣದಿಂದ ಮುನಿರತ್ನ ಅವರ ಮೇಲೆ ಹೂಡಲಾಗಿದ್ದ ಕೇಸಿನ ವಿಚಾರಣೆ ನ್ಯಾಯಾಲಯದಲ್ಲಿ ಆರಂಭವಾಗಲಿದೆ.
