ಆಟಗಾರ ಅತ್ಯುತ್ತಮ ಫಾರ್ಮ್ ನಲ್ಲಿ ಇದ್ದಾಗ ಆಯ್ಕೆದಾರರು ಆತನಿಗೆ ಅವಕಾಶ ಕೊಡಬೇಕು. ಹಾಗಾದಲ್ಲಿ ತಂಡಕ್ಕೆ ಅತ್ಯಧಿಕ ಲಾಭ ಸಿಗುತ್ತದೆ. ಆಟಗಾರ ಯಾವ ಧರ್ಮದವನೇ ಆಗಿರಲಿ, ಅಗಾಧ ಪ್ರತಿಭೆ ಇದ್ದರೆ ಹೆಚ್ಚು ಕಾಲ ಆತನನ್ನು ತುಳಿದಿಡಲೂ ಆಗುವುದಿಲ್ಲ. ಕ್ರಿಕೆಟ್ ನಲ್ಲಿ ಮುಸ್ಲಿಂ ಕಾರ್ಡ್ ಬಗ್ಗೆ ಮಾತನಾಡುವವರು ಇದನ್ನು ನೆನಪಿಟ್ಟುಕೊಳ್ಳಬೇಕು.
ಮುಂಬೈಯ ಸರ್ಫ್ರಾಜ್ ಖಾನ್ ಸಿಡಿಲಬ್ಬರದ ಬ್ಯಾಟ್ಸ್ ಮನ್. ಇನ್ನೂ 25 ರ ಹರೆಯದ ಈತನ ಸ್ಕೋರ್ ಬೋರ್ಡ್ ಅತ್ಯುತ್ತಮವಾಗಿದೆ. ಸತತ ಎರಡು ರಣಜಿ ಸೀಸನ್ ನಲ್ಲಿ ಒಟ್ಟು 900 ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಮೂರನೇ ಬ್ಯಾಟ್ಸ್ ಮನ್ ಈತ. ಮೊದಲ ದರ್ಜೆ ಕ್ರಿಕೆಟ್ ನಲ್ಲಿ 82.83 ಸರಾಸರಿ ರನ್! (ಈ ಹಿಂದೆ ಡಾನ್ ಬ್ರಾಡ್ ಮನ್ ಈ ದಾಖಲೆ ಮಾಡಿದ ಏಕೈಕ) 37 ಪಂದ್ಯಗಳಲ್ಲಿ 3505 ರನ್ ಹೊಡೆದಿದ್ದಾನೆ.
ಇಂತಹ ಸ್ಫೋಟಕ ಬ್ಯಾಟರ್ ನನ್ನು ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಏಕೆ ಆಯ್ಕೆ ಮಾಡಿಲ್ಲ? ಅಮಿತ್ ಷಾ ಮಗ ಜಯ್ ಷಾ ಈಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಲ್ಲಿ ಬಂದು ಕೂತದ್ದೇ ಇದಕ್ಕೆ ಕಾರಣವೆ? ಸರ್ಫ್ರಾಜ್ ಖಾನ್ ಮುಸ್ಲಿಂ ಆದದ್ದೇ ಇದಕ್ಕೆ ಕಾರಣವೆ? ಹೀಗೊಂದು ಚರ್ಚೆ ಮಾಧ್ಯಮಗಳಲ್ಲಿ/ ಜಾಲತಾಣಗಳಲ್ಲಿ ನಡೆದಿದೆ.
ಸರ್ಫ್ರಾಜ್ ಪರವಾಗಿ ಹಲವರು ಧ್ವನಿ ಎತ್ತಿದ ಬೆನ್ನಲ್ಲೇ, ಆತನಿಗೆ ಫಿಟ್ ನೆಸ್ ಇರಲಿಲ್ಲ, ದೇಹತೂಕ ಜಾಸ್ತಿ ಆಗಿದೆಯಂತೆ ಎಂದು ಕೆಲವರು ರೂಮರ್ ಹಬ್ಬಿಸಿದರು. ಇನ್ನು ಕೆಲವರು “ಮೈದಾನದ ಹೊರಗೆ ಆತನ ನಡತೆ ಸರಿ ಇಲ್ಲವಂತೆ” ಎಂದು ಒಗ್ಗರಣೆ ಹಾಕಿದರು! ಆತ ಭಾರತ ತಂಡದ ಕೋಚ್ ಚಂದ್ರಕಾಂತ ಪಂಡಿತ್ ಜೊತೆಗೆ ದುರ್ನಡತೆ ತೋರಿದ್ದಾನಂತೆ ಎನ್ನುವ ಸುದ್ದಿಯೂ ಹಬ್ಬಿತು.
ಒಟ್ಟಾರೆ ಸರ್ಫ್ರಾಜ್ ಗೆ ಉಭಯ ಸಂಕಟ. ಒಂದೆಡೆ ವೆಸ್ಟ್ ಇಂಡೀಸ್ ಪ್ರವಾಸದ ಟೆಸ್ಟ್ ತಂಡಕ್ಕೆ ಆಯ್ಕೆಯಾಗದ ಬೇಸರ. ಇನ್ನೊಂದೆಡೆ ಈ ರೀತಿಯ ಅಪಪ್ರಚಾರಗಳಿಗೆ ಉತ್ತರ ಕೊಡಲಾಗದ ಒತ್ತಡ!
ಈ ರೀತಿ ಒಬ್ಬ ಆಟಗಾರನ ಮೇಲೆ ಒತ್ತಡದ ಪರಿಸ್ಥಿತಿ ಬಂದಾಗ ಬಿಸಿಸಿಐ ಆದರೂ ಪತ್ತಿಕಾಗೋಷ್ಠಿ ಕರೆದು ವಿಷಯ ಸ್ಪಷ್ಟಪಡಿಸಬೇಕು. ಅದೂ ನಡೆಯುತ್ತಿಲ್ಲ. ಬಿಸಿಸಿಐ ದಿವ್ಯ ಮೌನ.
ಆದರೆ ಭಾರತೀಯ ಕ್ರಿಕೆಟ್ ರಂಗದಲ್ಲಿ ಅಂತಹ ಕಮ್ಯೂನಲ್ ವಿಭಜನೆ ಆಗಿಲ್ಲ ಎನ್ನುವುದು ಸಮಾಧಾನದ ಸಂಗತಿ. ಸುನಿಲ್ ಗಾವಸ್ಕರ್ ಮತ್ತು ಸೌರವ್ ಗಂಗೂಲಿ ಇಬ್ಬರೂ ಸರ್ಫ್ರಾಜ್ ಖಾನ್ ಬೆಂಬಲಿಸಿ ಬಹಿರಂಗವಾಗಿ ಮಾತನಾಡಿದ್ದಾರೆ. ವೆಸ್ ಇಂಡೀಸ್ ಪ್ರವಾಸಕ್ಕೆ ಆಯ್ಕೆ ಮಾಡದೆ ಇದ್ದದ್ದು ತಪ್ಪು ಎಂದಿದ್ದಾರೆ. ಮುಂಬೈ ರಣಜಿ ತಂಡದ ಸಹ ಆಟಗಾರರು “ಸರ್ಫ್ರಾಜ್ ನಡತೆಯ ಬಗ್ಗೆ ಟೀಕೆ ಸರಿಯಲ್ಲ. ಆತನ ನಡತೆ ಚೆನ್ನಾಗಿದೆ” ಎಂದಿದ್ದಾರೆ.
ಹಾಗಿದ್ದರೆ ಸರ್ಫ್ರಾಜ್ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಏಕೆ ಆಯ್ಕೆ ಆಗಿಲ್ಲ? ಇನ್ಯಾವ ರೀತಿ ಆತ ತನ್ನ ಸಾಮರ್ಥ್ಯ ತೋರಿಸಬೇಕಿತ್ತು? ಈ ಪ್ರಶ್ನೆಗಳನ್ನು ಪರಿಶೀಲಿಸಿದಾಗ ಸಿಗುವ ಕುತೂಹಲಕರ ಉತ್ತರವೊಂದಿದೆ.
ಸರ್ಫ್ರಾಜ್ ಖಾನ್ ತಂಡದಲ್ಲಿ ಐದನೇ ಬ್ಯಾಟ್ಸ್ ಮನ್ ಆಗಿ ಆಡುತ್ತಿದ್ದಾರೆ. ಕಳೆದ 16 ವರ್ಷಗಳ ರೆಕಾರ್ಡ್ ತೆಗೆದು ನೋಡಿದರೆ 5ನೇ ಬ್ಯಾಟ್ಸ್ ಮನ್ ಆಗಿ ಅತ್ಯುತ್ತಮ ಆಟವಾಡಿದ ಯಾರೂ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿಲ್ಲ- ಕರಣ್ ನಾಯರ್ ಒಬ್ಬರನ್ನು ಬಿಟ್ಟು! ನಂಬರ್ 5 ಅಥವಾ ಅದರ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಆಟಗಾರ ಆಲ್ ರೌಂಡರ್ ಅಥವಾ ವಿಕೆಟ್ ಕೀಪರ್ ಆಗಿದ್ದರೆ ಮಾತ್ರ ಟೆಸ್ಟ್ ತಂಡಕ್ಕೆ ಆಯ್ಕೆ ಆಗಿದ್ದಾರೆ! ಉದಾಹರಣೆಗೆ ರವೀಂದ್ರ ಜಡೇಜ, ರಿಷಬ್ ಪಂತ್, ವೃದ್ಧಿಮಾನ್ ಷಹಾ, ಅಕ್ಷರ್ ಪಟೇಲ್…!
ಇದೇನೋ ಸರಿ. ಹಾಗೆಂದು ಆಯ್ಕೆದಾರರ ಎಲ್ಲ ಮಾನದಂಡಗಳೂ ಸರಿ ಅನ್ನಲಾಗದು.
ಭಾರತ ತಂಡದ ಆಯ್ಕೆದಾರರಲ್ಲಿ ಒಂದು ಮೂಢನಂಬಿಕೆ ಇದ್ದಂತಿದೆ. ಐದನೆ ಕ್ರಮಾಂಕದಲ್ಲಿ ಅಥವಾ ಆ ಬಳಿಕ ಆಡಲು ಬರುವವರಿಗೆ ಎದುರಿಸಲು ಫಾಸ್ಟ್ ಬೌಲರ್ಸ್ ಸಿಗಲ್ಲ, ಸಿಕ್ಕರೂ ಆ ಬೌಲರ್ಸ್ 15 ಓವರ್ ಬಳಿಕ ಬಳಲಿರುತ್ತಾರೆ. ಹಾಗಾಗಿ ಈ ಹಂತದಲ್ಲಿ ಆಡುವ ಬ್ಯಾಟ್ಸ್ ಮನ್ ನ ರನ್ ಗಳಿಕೆಯನ್ನು ಗಂಭೀರವಾಗಿ ಆಯ್ಕೆಗೆ ಪರಿಗಣಿಸಬೇಕಿಲ್ಲ ಎನ್ನುವುದೇ ಆ ಮೂಢನಂಬಿಕೆ!
ಇದನ್ನು ಓದಿದ್ದೀರಾ?: ಪ್ರಧಾನಿಯಾಗಿ ನರೇಂದ್ರ ಮೋದಿ ಒಂಬತ್ತು ವರ್ಷದಲ್ಲಿ ಸಾಧಿಸಿದ್ದೇನು? ಭಾಗ-1
ಆದರೆ ಸರ್ಫ್ರಾಜ್ ಖಾನ್ ಬ್ಯಾಟಿಂಗ್ ನೋಡಿದರೆ ಹಾಗೆ ಅನಿಸುತ್ತಿಲ್ಲ. ರಣಜಿಯಲ್ಲಿ ಸರ್ಫ್ರಾಜ್ ನನ್ನು 4 ನೇ ಅಥವಾ 3ನೇ ಕ್ರಮಾಂಕದಲ್ಲಿ ಆಡಿಸಿದರೂ ಆತ ಅತ್ಯುತ್ತಮ ಪ್ರದರ್ಶನ ನೀಡಬಲ್ಲ ಅನ್ನಿಸ್ತದೆ. ಅವಕಾಶ ಕೊಟ್ಟು ನೋಡಬೇಕು ಅಷ್ಟೆ.
ಇಲ್ಲಿ ಇನ್ನೂ ಒಂದು ಗಮನಿಸಬೇಕಾದ ಸಂಗತಿ ಇದೆ. ಇತ್ತೀಚೆಗೆ ಆಯ್ಕೆದಾರರು ಭಾರತ ತಂಡಕ್ಕೆ ಆಯ್ಕೆ ಮಾಡುವಾಗ ರಣಜಿ ಸಹಿತ ದೇಶೀಯ ಕ್ರಿಕೆಟ್ ನ ಸಾಧನೆ ಕಡೆಗೆ ನೋಡುವುದು ಬಿಟ್ಟು ಐಪಿಎಲ್ ಪಂದ್ಯಗಳ ಸಾಧನೆಯ ಕಡೆಗೇ ಹೆಚ್ಚು ಗಮನಿಸುತ್ತಾರಾ…? “ಐಪಿಎಲ್ ಸಾಧನೆಗೆ ಹಣದ ಆಯಾಮವೂ ಇದೆ. ದೇಶೀಯ ಕ್ರಿಕೆಟ್ ನಲ್ಲಿ ಆಟದ ನೈಜ ಕಳಕಳಿ ಇರುತ್ತದೆ” ಎನ್ನುವ ವಾದವೂ ಇದೆ.
ಒಂದು ಮಾತ್ರ ಸತ್ಯ. ಆಟಗಾರ ಅತ್ಯುತ್ತಮ ಫಾರ್ಮ್ ನಲ್ಲಿ ಇದ್ದಾಗ ಆಯ್ಕೆದಾರರು ಆತನಿಗೆ ಅವಕಾಶ ಕೊಡಬೇಕು. ಹಾಗಾದಲ್ಲಿ ತಂಡಕ್ಕೆ ಅತ್ಯಧಿಕ ಲಾಭ ಸಿಗುತ್ತದೆ. ತಂಡ ಗೆಲ್ಲುವುದು ಸಾಧ್ಯವಾಗುತ್ತದೆ. ಸದ್ಯಕ್ಕೆ ಇರಲಿ, ಆಮೇಲೆ ನೋಡೋಣ ಎನ್ನುವ ಧೋರಣೆ ಖಂಡಿತಾ ಸರಿಯಲ್ಲ.
ಇನ್ನೂ ಒಂದು ವಿಷಯ. ಆಟಗಾರ ಯಾವ ಧರ್ಮದವನೇ ಆಗಿರಲಿ, ಅಗಾಧ ಪ್ರತಿಭೆ ಇದ್ದರೆ ಹೆಚ್ಚು ಕಾಲ ಆತನನ್ನು ತುಳಿದಿಡಲೂ ಆಗುವುದಿಲ್ಲ. ಮನ್ಸೂರ್ ಪಟೌಡಿ, ಅಜರುದ್ದೀನ್, ಜಹೀರ್ ಖಾನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಅಬಿದ್ ಅಲಿ, ಸೈಯದ್ ಕಿರ್ಮಾನಿ, ಸಲೀಂ ದುರಾನಿ, ಅಬ್ಬಾಸ್ ಅಲಿ ಬೇಗ್- ಹೀಗೆ ಇದಕ್ಕೆ ಹತ್ತಾರು ಉದಾಹರಣೆಗಳಿವೆ. ಕ್ರಿಕೆಟ್ ನಲ್ಲಿ ಮುಸ್ಲಿಂ ಕಾರ್ಡ್ ಬಗ್ಗೆ ಮಾತನಾಡುವವರು ಇದನ್ನು ನೆನಪಿಟ್ಟುಕೊಳ್ಳಬೇಕು.

ಬಿ ಎಂ ಹನೀಫ್
ಹಿರಿಯ ಪತ್ರಕರ್ತ, ಲೇಖಕ