ಪ್ರಧಾನಿಯಾಗಿ ನರೇಂದ್ರ ಮೋದಿ ಒಂಬತ್ತು ವರ್ಷದಲ್ಲಿ ಸಾಧಿಸಿದ್ದೇನು? ಭಾಗ-1

Date:

ಪ್ರಧಾನಿಯಾದ ನಂತರ ಮೋದಿಯವರು ಕೈಗೊಂಡ ಮಹತ್ವದ ಯೋಜನೆಗಳೆಲ್ಲವೂ ವಿಫಲವಾದವು. ಬಹುತೇಕ ಯೋಜನೆಗಳು ಭಾರೀ ವಿವಾದಕ್ಕೆ ಕಾರಣವಾದವು. 2014ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದಾಗ ಪ್ರಮಾಣ ವಚನ ಸ್ವೀಕರಿಸಲು ಅದಾನಿಯವರ ಖಾಸಗಿ ವಿಮಾನದಲ್ಲಿ ಅಹಮದಾಬಾದ್‌ನಿಂದ ದೆಹಲಿಗೆ ತೆರಳಿದ ಮೋದಿ, ತಮ್ಮ ಅವಧಿಯ ಉದ್ದಕ್ಕೂ ಅಂಬಾನಿ, ಅದಾನಿಗಳ ಉದ್ಯಮ ವಿಸ್ತರಣೆಗೆ ನೀತಿ ನಿಯಮ ಮೀರಿ ನೆರವು ನೀಡಿದರು ಎನ್ನುವ ಆರೋಪಗಳು ಬಂದವು. 

ಸತತ ನಾಲ್ಕು ಅವಧಿಗೆ, 12  ವರ್ಷಕ್ಕೂ ಹೆಚ್ಚು ಕಾಲ, ಗುಜರಾತ್ ಮುಖ್ಯಮಂತ್ರಿಯಾಗಿದ್ದವರು ನರೇಂದ್ರ ಮೋದಿ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದಾಗ ಮೋದಿ ಅವರ ಬಗ್ಗೆ ದೇಶದ ಜನರಿಗೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು. ಹಾಗೆಯೇ ಅನೇಕ ಆತಂಕಗಳೂ ಇದ್ದವು. ಕಾರಣ, ಗೋಧ್ರಾ ಹತ್ಯಾಕಾಂಡ. 2002ರ ಗೋಧ್ರಾ ಹತ್ಯಾಕಾಂಡ ನಡೆದಾಗ ಮೋದಿಯವರೇ ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದರು. ಗಲಭೆಯನ್ನು ಸರಿಯಾಗಿ ನಿರ್ವಹಿಸಲಿಲ್ಲ, ಜೊತೆಗೆ ಹಿಂಸಾಚಾರಕ್ಕೆ ಸರ್ಕಾರ ಕುಮ್ಮಕ್ಕು ನೀಡಿತು ಎನ್ನುವ ವ್ಯಾಪಕ ಟೀಕೆಗಳು ವ್ಯಕ್ತವಾದವು. ಬಿಜೆಪಿಯಲ್ಲೇ ಮೋದಿಗೆ ವಿರೋಧ ವ್ಯಕ್ತವಾಯಿತು. ಅಂದು ಭಾರತದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರಿಗೆ ‘ರಾಜಧರ್ಮ’ ಪಾಲನೆ ಮಾಡುವಂತೆ ಸೂಚಿಸಿದ್ದರು. ಅಂಥ ಕಷ್ಟದ ಸಂದರ್ಭದಲ್ಲಿ ಮೋದಿ ಅವರ ನೆರವಿಗೆ ಬಂದಿದ್ದು ಲಾಲ್‌ಕೃಷ್ಣ ಅಡ್ವಾಣಿ. ವಿಚಿತ್ರ ಎಂದರೆ, ಅಡ್ವಾಣಿಯವರಲ್ಲಿ ಒಬ್ಬ ಪ್ರತಿಸ್ಪರ್ಧಿಯನ್ನು ಕಂಡ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅವರನ್ನು ನಿಧಾನಕ್ಕೆ ತೆರೆಮರೆಗೆ ಸರಿಯುವಂತೆ ನೋಡಿಕೊಂಡರು.       

ನರೇಂದ್ರ ಮೋದಿ ಚತುರ ಮಾತುಗಾರರು; ಆದರೆ, ಅವರದ್ದು ಏಕಮುಖದ ಮಾತು. ಅವರು ಮಾತನಾಡುತ್ತಾರೆ, ಉಳಿದವರು ಕೇಳಬೇಕು. 9 ವರ್ಷದಲ್ಲಿ ಒಂದೇ ಒಂದು ಪತ್ರಿಕಾ ಗೋಷ್ಠಿಯನ್ನು ನಡೆಸದ, ಪತ್ರಕರ್ತರ ಪ್ರಶ್ನಗಳಿಗೆ ಖಚಿತ, ನೇರ ಉತ್ತರ ನೀಡದ ಏಕೈಕ ಪ್ರಧಾನಿ ಅವರೊಬ್ಬರೇ ಅನ್ನಿಸುತ್ತದೆ.   

ಪ್ರಧಾನಿ ನರೇಂದ್ರ ಮೋದಿಯವರು ಪ್ರಚಂಡ ತಂತ್ರಗಾರರು. ಅವರು 2014ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಬಿಜೆಪಿ ಕೇವಲ 7 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಅವುಗಳ ಪೈಕಿ ಐದು ರಾಜ್ಯಗಳಲ್ಲಿ ಬಿಜೆಪಿಯ ಮುಖ್ಯಮಂತ್ರಿಗಳಿದ್ದರು. ಇಂದು ಬಿಜೆಪಿ ಆಡಳಿತವಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 15ಕ್ಕೇರಿದೆ. 2014ಕ್ಕೆ ಮುಂಚೆ ಈಶಾನ್ಯ ಭಾರತದ ಒಂದು ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದಲ್ಲಿರಲಿಲ್ಲ. ಆದರೆ ಇಂದು ಮೀಜೊರಾಂ ಹೊರತುಪಡಿಸಿ ಎಲ್ಲ ಎಂಟು ರಾಜ್ಯಗಳೂ ಬಿಜೆಪಿ ಹಿಡಿತದಲ್ಲಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಂಥ ತಂತ್ರಗಾರಿಕೆಯ, ಪಕ್ಷ ವಿಸ್ತರಣೆಯ ಆಚೆಗೆ ಪ್ರಧಾನಿಯಾದ ನಂತರ ನರೇಂದ್ರ ಮೋದಿಯವರು ದೇಶಕ್ಕೆ ಮಾಡಿದ್ದೇನು ಎನ್ನುವುದನ್ನು ಪರಿಶೀಲಿಸಿದರೆ, ಅತ್ಯಂತ ಪ್ರತಿಕೂಲ ಚಿತ್ರಣ ಸಿಗುತ್ತದೆ.

ಪ್ರಧಾನಿಯಾದ ನಂತರ ಮೋದಿಯವರು ಕೈಗೊಂಡ ಮಹತ್ವದ ಯೋಜನೆಗಳೆಲ್ಲವೂ ಒಂದಿಲ್ಲೊಂದು ರೀತಿ ವಿಫಲವಾದವು. ಬಹುತೇಕ ಯೋಜನೆಗಳು ಭಾರೀ ವಿವಾದಕ್ಕೆ ಕಾರಣವಾದವು. 2014ರಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅದಾನಿಯವರ ಖಾಸಗಿ ವಿಮಾನದಲ್ಲಿ ದೆಹಲಿಗೆ ತೆರಳಿದ ಮೋದಿ, ತಮ್ಮ ಪ್ರಧಾನಿ ಅವಧಿಯ ಉದ್ದಕ್ಕೂ ಅಂಬಾನಿ, ಅದಾನಿಗಳ ಉದ್ಯಮ ವಿಸ್ತರಣೆಗೆ ನೀತಿ ನಿಯಮ ಮೀರಿ ನೆರವು ನೀಡಿದರು; ದೇಶದ ಬಡವರು, ಶ್ರಮಿಕರ ಹಿತಾಸಕ್ತಿಯನ್ನು ಬದಿಗೊತ್ತಿ, ತಮ್ಮ ಅಧಿಕಾರ ದುರ್ಬಳಕೆ ಮೂಲಕ ಉದ್ಯಮಿಗಳ ರಕ್ಷಣೆಗೆ, ಬೆಳೆವಣಿಗೆಗೆ ಪೂರಕವಾಗಿ ನಿಂತರು ಎನ್ನುವ ಆರೋಪಗಳು ಬಂದವು. ಹೀಗಾಗಿ ಮೋದಿಯವರ ಪ್ರಧಾನಿ ಅವಧಿ ಎಂದರೆ, ಅದು ವೈಫಲ್ಯಗಳ ಮತ್ತು ವಿವಾದಗಳ ಅವಧಿ ಎಂದೇ ಹೆಸರಾಗಿದೆ.

ಅದಾನಿ ವಿಮಾನದಲ್ಲಿ ಮೋದಿ

ಘೋಷಣೆಗಳಾಗಿಯೇ ಉಳಿದ ‘ಮೇಕ್ ಇನ್ ಇಂಡಿಯಾ’ ಮತ್ತು ‘ಸ್ವಚ್ಛ ಭಾರತ’

ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪರಿಶೀಲಿಸೋಣ. ಮೊದಲನೆಯದಾಗಿ, ‘ಮೇಕ್ ಇನ್ ಇಂಡಿಯಾ’; ಎಲ್ಲ ವಿಧದ ಸರಕುಗಳನ್ನು ದೇಶದಲ್ಲಿಯೇ ಉತ್ಪಾದಿಸುವ ಮೂಲಕ ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ಮತ್ತು ರಫ್ತನ್ನು ಹೆಚ್ಚಿಸುವ ಗುರಿಯೊಂದಿಗೆ ಮೋದಿಯವರು ಸೆಪ್ಟೆಂಬರ್ 2014ರಲ್ಲಿ ‘ಮೇಕ್ ಇನ್ ಇಂಡಿಯಾ’ ಅಭಿಯಾನ ಆರಂಭಿಸಿದರು. ಅಗತ್ಯ ಸಿದ್ಧತೆ, ಮುಂಗಾಣ್ಕೆ ಇಲ್ಲದ ಕಾರಣಕ್ಕೆ ಕೆಲವೇ ವರ್ಷಗಳಲ್ಲಿ ಅದು ವಿಫಲ ಯೋಜನೆ ಅನ್ನಿಸಿಕೊಂಡಿತು. 2014ರಲ್ಲಿ ಭಾರತದ ಜಿಡಿಪಿಗೆ ಉತ್ಪಾದನಾ ವಲಯದ ಕೊಡುಗೆ ಶೇ.15 ಆಗಿತ್ತು. ಮೇಕ್ ಇನ್ ಇಂಡಿಯಾ ಅಭಿಯಾನದ ನಂತರದ ವರ್ಷಗಳಲ್ಲಿ ಅದು ಶೇ.14ಕ್ಕೆ ಇಳಿದಿತ್ತು.

2014ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಪ್ರಧಾನಿ ಮೋದಿಯವರು ‘ಸ್ವಚ್ಛ ಭಾರತ’ ಅಭಿಯಾನವನ್ನು ಆರಂಭಿಸಿದರು. ತಾವೇ ಕೈಯಲ್ಲಿ ಪೊರಕೆ ಹಿಡಿದು ದೆಹಲಿಯ ರಾಜ್‌ಘಾಟ್‌ನಲ್ಲಿ ರಸ್ತೆಯನ್ನು ಗುಡಿಸುವುದರ ಮೂಲಕ ಅಭಿಯಾನವನ್ನು ಉದ್ಘಾಟಿಸಿದ್ದರು. ಯೋಜನೆಗೆ 62009 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ಕೇಂದ್ರ ಹೇಳಿತ್ತು. ನಿಗದಿತ ಅವಧಿಯೊಳಗೆ ಗುರಿ ತಲುಪುವುದಾಗಿ ಕೇಂದ್ರ ಹೇಳಿತ್ತು. ಅದರಂತೆ, 2019ರಲ್ಲಿ ದೇಶ ಶೇ.100 ರಷ್ಟು ಬಯಲು ಶೌಚ ಮುಕ್ತವಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿಬಿಟ್ಟಿತ್ತು.

ಕಥೆ ಅಲ್ಲಿಗೇ ಮುಗಿಯಲಿಲ್ಲ ಅದಾದ ಒಂದೇ ತಿಂಗಳಲ್ಲಿ ರಾಷ್ಟ್ರೀಯ ಅಂಕಿಅಂಶ ಕಚೇರಿ (ಸಿಎಸ್‌ಒ) ಬಿಡುಗಡೆ ಮಾಡಿದ್ದ ಸಮೀಕ್ಷಾ ವರದಿ ಸ್ವಚ್ಛ ಭಾರತ ಎಷ್ಟರ ಮಟ್ಟಿಗೆ ವಿಫಲವಾಗಿದೆ ಎಂಬುದನ್ನು ಬಹಿರಂಗಪಡಿಸಿತು. ವರದಿ ಪ್ರಕಾರ, ಗುಜರಾತ್ನಲ್ಲಿ ಶೇ.75.8, ಮಹಾರಾಷ್ಟ್ರದಲ್ಲಿ ಶೇ.78 ಮತ್ತು ರಾಜಸ್ಥಾನದಲ್ಲಿ ಶೇ.65.8ರಷ್ಟು ಗ್ರಾಮೀಣ ಕುಟುಂಬಗಳು ಮಾತ್ರ ವೈಯಕ್ತಿಕ, ಸಾಮುದಾಯಿಕ ಅಥವಾ ಪಾವತಿ ಬಳಕೆಯ ಹೀಗೆ ಯಾವುದೋ ರೀತಿಯಲ್ಲಿ ಶೌಚಾಲಯ ವ್ಯವಸ್ಥೆಯನ್ನು ಹೊಂದಿದ್ದವು. ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಕನಿಷ್ಠ ಶೇ.43ರಷ್ಟು ಗ್ರಾಮೀಣ ಜನರು ಬಯಲಿನಲ್ಲಿ ಮಲವಿಸರ್ಜನೆ ಮಾಡುವುದನ್ನು ಮುಂದುವರಿಸಿದ್ದಾರೆ ಎಂದೂ ಕೂಡ ಸಮೀಕ್ಷೆ ತಿಳಿಸಿತ್ತು.

ಆರ್ಥಿಕತೆಯನ್ನು ನೆಲಕಚ್ಚಿಸಿದ ನೋಟು ರದ್ದತಿ ಮತ್ತು ಜಿಎಸ್‌ಟಿ

ಇನ್ನು ಮೋದಿ ಸರ್ಕಾರ 2016ರಲ್ಲಿ ಕೈಗೊಂಡ ನೋಟು ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿಯಂತೂ ದೇಶದ ಆರ್ಥಿಕತೆಯನ್ನು ಪಾತಾಳ ಮುಟ್ಟಿಸಿದವು. ಭಾರತದ ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳು (ಎಂಎಸ್ಎಂಇ), ಅಸಂಘಟಿತ ಬೀದಿ ಬದಿ ವ್ಯಾಪಾರಿಗಳು, ರೈತರು ನೋಟು ರದ್ದತಿಯಿಂದ ಬೀದಿಗೆ ಬಿದ್ದಿದ್ದರು. ತಮ್ಮ ಬದುಕಿನ ಆಸರೆಯನ್ನೇ ಕಳೆದುಕೊಂಡಿದ್ದರು. ಇಷ್ಟೆಲ್ಲದರ ನಡುವೆ ನೋಟು ಅಮಾನ್ಯೀಕರಣ ಒಂದು ವಿಫಲ ಪ್ರಯತ್ನ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಅಂಕಿಅಂಶಗಳೇ ಹೇಳಿದವು. ಚಲಾವಣೆಯಲ್ಲಿದ್ದ ಶೇ.99.3ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು 2018ರಲ್ಲಿ ಆರ್‌ಬಿಐ ಮಾಹಿತಿ ನೀಡಿತು. ಇದಲ್ಲದೇ ನೋಟು ಅಮಾನ್ಯೀಕರಣದ ನಂತರ ಕರೆನ್ಸಿ ಬಳಕೆಯೂ ಹೆಚ್ಚಾಗಿತ್ತು. ಜೊತೆಗೆ ದೇಶದ ಜಿಡಿಪಿ ಶೇ.8ರಿಂದ ಶೇ.5ಕ್ಕೆ ಕುಸಿದಿತ್ತು.

ನೋಟು ಅಮಾನ್ಯೀಕರಣದ ಹೊಡೆತದಿಂದ ಸುಧಾರಿಸಿಕೊಳ್ಳುವ ಮುನ್ನವೇ ಜನರ ಮೇಲೆ ಮೋದಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಸ್ತ್ರ ಪ್ರಯೋಗಿಸಿದರು. ದೇಶೀಯ ತೆರಿಗೆಗಳನ್ನು ಸರಳಗೊಳಿಸುವ ಮತ್ತು ಏಕರೂಪಗೊಳಿಸುವ ಮೂಲಕ ತೆರಿಗೆ ಆದಾಯವನ್ನು ಹೆಚ್ಚಿಸುವ ಮತ್ತು ಆರ್ಥಿಕತೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವುದಕ್ಕಾಗಿ ಜಿಎಸ್‌ಟಿ ಜಾರಿಗೆ ತಂದಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ಜಿಎಸ್‌ಟಿ ತನ್ನ ತೆರಿಗೆ ಸಂಗ್ರಹದ ನಿರೀಕ್ಷೆಯನ್ನು ಮುಟ್ಟಲೇ ಇಲ್ಲ. 2017-18ರಲ್ಲಿ ತೆರಿಗೆ ಸಂಗ್ರಹವು ಶೇ.10ರಷ್ಟು ಇಳಿಕೆಯಾಗಿತ್ತು. ನಂತರದ ವರ್ಷಗಳಲ್ಲಿಯೂ ಅದು ಸಾಧಾರಣ ಮಟ್ಟದಲ್ಲಿಯೇ ಇದೆ ಎಂದು ಸಿಎಜಿ ವರದಿ ಹೇಳಿತ್ತು. ಐಷಾರಾಮಿ ವಸ್ತಗಳ ಮೇಲೆ ಕಡಿಮೆ ತೆರಿಗೆ ಹಾಕಿ, ಕೆಲವು ವಸ್ತುಗಳಿಗೆ ವಿನಾಯ್ತಿ ನೀಡಿ, ಹಾಲು, ಮೊಸರು ಮುಂತಾದ ಆಹಾರ ಪದಾರ್ಥಗಳ ಮೇಲೆ ತೆರಿಗೆ ವಿಧಿಸಲಾಯಿತು. ಇದರಿಂದ ಬೇಳೆಕಾಳು, ಮೊಸರು, ಮಜ್ಜಿಗೆ, ಲಸ್ಸಿ, ಅಕ್ಕಿ ಮುಂತಾದ ಅಗತ್ಯ ವಸ್ತುಗಳ ಮೇಲೆ ಆಕಾಶಕ್ಕೇರಿ ಜನ ಜೀವನ ನಡೆಸುವುದೇ ದುಸ್ತರವಾಯಿತು.

ಮೋದಿ ಜಿಎಸ್‌ಟಿ

ಭಾರತದ ಅತಿ ದೊಡ್ಡ ರಕ್ಷಣಾ ಹಗರಣ: ರಫೇಲ್

ಇದರ ನಡುವೆಯೇ ಮೋದಿ ಸರ್ಕಾರದ ಬಹುದೊಡ್ಡ ಹಗರಣವೊಂದು ಸ್ಫೋಟಗೊಂಡಿತು. ಅದು ರಫೇಲ್ ಹಗರಣ. ತಮ್ಮ ಸ್ನೇಹಿತ ಅನಿಲ್ ಅಂಬಾನಿಗೆ ಸಹಾಯ ಮಾಡಲು ಪ್ರಧಾನಿ ಮೋದಿ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನುವ ಆರೋಪಗಳು ಕೇಳಿಬಂದವು. ಅದನ್ನು ಪುಷ್ಟೀಕರಿಸುವಂತೆ, 36 ಯುದ್ಧ ವಿಮಾನಗಳ ಖರೀದಿ ಸಂಬಂಧ ಪ್ರಧಾನಿಯವರು ಆಗಿನ ಅಧ್ಯಕ್ಷ ಫ್ರಾಂಸ್ವಾ ಓಲಾಂಡ್ ಅವರನ್ನು ಭೇಟಿಯಾಗುವಾಗ ಅವರ ಜೊತೆಯಲ್ಲಿ ಅನಿಲ್ ಅಂಬಾನಿಯವರನ್ನು ಕರೆದೊಯ್ದಿದ್ದರು. ಅದಕ್ಕೂ ವಾರದ ಮೊದಲಷ್ಟೇ ಅಂಬಾನಿ ರಿಲಯನ್ಸ್ ಡಿಫೆನ್ಸ್ ಹೆಸರಿನ ರಕ್ಷಣಾ ಸಾಮಗ್ರಿಗಳ ಕಂಪನಿಯನ್ನು ರಿಜಿಸ್ಟರ್ ಮಾಡಿಸಿದ್ದರು.

ರಕ್ಷಣಾ ವಹಿವಾಟಿನಲ್ಲಿ ತೊಡಗಿಸಿಕೊಳ್ಳಲು ಯಾವುದೇ ಅನುಭವ, ಹಣಕಾಸು ಇಲ್ಲದಿದ್ದರೂ ಖುದ್ದು ಪ್ರಧಾನಿಯೇ ಮುಂದಾಗಿ ಅನಿಲ್ ಅಂಬಾನಿ ಪರವಾಗಿ ಡೀಲ್ ಕುದುರಿಸಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿತ್ತು. ಅದಕ್ಕೂ ಮುಂಚೆ ರಫೇಲ್ ಒಪ್ಪಂದದ ವೆಚ್ಚವನ್ನು ಪ್ರಧಾನಿ ನೇತೃತ್ವದ ಸಚಿವ ಸಂಪುಟ ಭದ್ರತಾ ಸಮಿತಿಯು ನಾಲ್ಕು ಲಕ್ಷ ಕೋಟಿಯಿಂದ 6.41 ಲಕ್ಷ ಕೋಟಿಗೆ ಹೆಚ್ಚಿಸಿತ್ತು. ಅಂಬಾನಿಯವರದ್ದು ದುರ್ಬಲ ಕಂಪನಿ ಎಂದು ಗೊತ್ತಿದ್ದರೂ ಯಾವುದೇ ಬ್ಯಾಂಕ್ ಖಾತರಿಯನ್ನೂ ಪಡೆಯದೇ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು, ಮಾಧ್ಯಮಗಳು ಹಗರಣದ ಬಗ್ಗೆ ಹಲವು ದಾಖಲೆ, ಮಾಹಿತಿ ಹೊರತೆಗೆದರೂ, ಕೊನೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದರೂ ದೇಶದ ರಕ್ಷಣೆಯ ವಿಚಾರ, ಗೌಪ್ಯತೆ ಇತ್ಯಾದಿಗಳ ಹೆಸರು ಹೇಳಿ ಮೋದಿ ಹಗರಣದಿಂದ ಪಾರಾದರು ಎನ್ನುವ ವಿಶ್ಲೇಷಣೆಗಳು ಕೇಳಿಬಂದವು.

ಮೋದಿ ಸರ್ಕಾರ ಮೊದಲ ಅವಧಿಯಲ್ಲಿ ಜಾರಿಗೆ ತಂದ ಮತ್ತೊಂದು ವಿವಾದಾಸ್ಪದ ಸಂವಿಧಾನ ತಿದ್ದುಪಡಿಯೆಂದರೆ, ಆರ್ಥಿಕವಾಗಿ ದುರ್ಬಲರು ಎನ್ನುವ ಆಧಾರದ ಮೇಲೆ ಬ್ರಾಹ್ಮಣರು ಸೇರಿದಂತೆ ಮೀಸಲಾತಿಯಿಂದ ಹೊರಗಿದ್ದ ಮೇಲ್ಜಾತಿಗಳಿಗೆ ಶೇ.10ರಷ್ಟು ಮೀಸಲಾತಿಯನ್ನು ನೀಡಿದ್ದು. ಅದರಿಂದ ಸಂವಿಧಾನದ ಮೂಲ ರಚನೆಗೆ ಧಕ್ಕೆಯಾಯಿತು ಎನ್ನುವ ಟೀಕೆಗಳು ವ್ಯಕ್ತವಾದವು.

ಅಧಿಕಾರ ಉಳಿಸಿಕೊಳ್ಳಲು ‘ಹಿಂದುತ್ವದ ಅಸ್ತ್ರಗಳ’ ಬಳಕೆ

ಇದೆಲ್ಲ ಆಗುವ ಹೊತ್ತಿಗೆ ಮೋದಿಯವರ ಜನಪ್ರಿಯತೆ ಸಾಕಷ್ಟು ಕುಗ್ಗಿ, ಅವರ ಇಮೇಜ್‌ಗೆ ಪೆಟ್ಟು ಬಿದ್ದಿತ್ತು. ಸರ್ಕಾರದ ಬಗೆಗೆ ಜನರಿಗಿದ್ದ ನಿರೀಕ್ಷೆಗಳು ಸುಳ್ಳಾಗಿದ್ದವು. ಇಂಥ ಸಂದರ್ಭದಲ್ಲಿ ತಮ್ಮ ಇಮೇಜ್ ಮತ್ತು ಸರ್ಕಾರದ ಭವಿಷ್ಯವನ್ನು ಕಾಪಾಡಿಕೊಳ್ಳಲು ಮೋದಿ ತಮ್ಮ ಬತ್ತಳಿಕೆಯಿಂದ ಹಿಂದುತ್ವದ ಅಸ್ತ್ರಗಳನ್ನು ಒಂದೊಂದಾಗಿ ಪ್ರಯೋಗಿಸತೊಡಗಿದರು. ಮೊದಲಿಗೆ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದರು. ಅದರ ಹಿಂದೆಯೇ ಪುಲ್ವಾಮಾದಲ್ಲಿ ಭಾರತದ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಸೈನಿಕರನ್ನು ಭಯೋತ್ಪಾದಕರ ಗುಂಪೊಂದು ಬಲಿ ಪಡೆದಿತ್ತು. ಅದು ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯದಿಂದ ನಡೆದ ಘಟನೆ ಎಂದೂ, ಕೇಂದ್ರ ಸರ್ಕಾರ ಸೈನಿಕರಿಗೆ ಸೂಕ್ತ ಭದ್ರತೆ ಕಲ್ಪಿಸಿರಲಿಲ್ಲ ಎಂದೂ ವ್ಯಾಪಕ ಟೀಕೆಗಳು ವ್ಯಕ್ತವಾದವು.

ಈ ಸುದ್ದಿ ಓದಿದ್ದೀರಾ: ಕಾಯ್ದೆ ಕಾನೂನುಗಳ ದುರ್ಬಳಕೆ ಹೆಚ್ಚಾಗಿದೆ; ಈ ಅಘೋಷಿತ ಎಮರ್ಜೆನ್ಸಿ ಹೆಚ್ಚು ಅಪಾಯಕಾರಿ

ಅದರ ಹಿಂದೆಯೇ ಪಾಕಿಸ್ತಾನದ ಬಾಲಾಕೋಟ್‌ನಲ್ಲಿನ ಉಗ್ರರ ನೆಲೆಯ ಮೇಲೆ ಭಾರತವು ವಾಯು ದಾಳಿ ನಡೆಸಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿತು. ತನ್ಮೂಲಕ ಭಾರತವು ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ ಎಂದು ಬಿಜೆಪಿ ಅದನ್ನು ಪ್ರಚಾರ ಮಾಡಿತು. ಪಾಕಿಸ್ತಾನ ಭಾರತದ ಹೇಳಿಕೆಗಳನ್ನು ನಿರಾಕರಿಸಿ, ಅಂಥ ಯಾವ ದಾಳಿಯೂ ನಡೆದಿಲ್ಲ ಎಂದಿತು. ಭಾರತ ನಿಜಕ್ಕೂ ವಾಯು ದಾಳಿ ನಡೆಸಿದೆಯೋ ಇಲ್ಲವೋ ಎನ್ನುವುದು ಕೂಡ ಖಚಿತವಾಗಲಿಲ್ಲ. ಆದರೆ, ಇವೆಲ್ಲ ಬಿಜೆಪಿಗೆ ನೆರವಾದವು; ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತಗಳಿಕೆಯ ಅಸ್ತ್ರಗಳಾದವು. 2019ರ ಲೋಕಸಭಾ ಚುನಾವಣೆಯಲ್ಲಿ 303 ಸ್ಥಾನಗಳನ್ನು ಗೆಲ್ಲುವ ಮೂಲಕ ಮೋದಿ ಎರಡನೆ ಬಾರಿಗೆ ಪ್ರಧಾನ ಮಂತ್ರಿಯಾದರು.   

ಮುಂದಿನ ಭಾಗದಲ್ಲಿ ನಿರೀಕ್ಷಿಸಿ: ಮೋದಿಯವರನ್ನು ಮಣಿಸಿದ ಕೃಷಿಕರ ಐತಿಹಾಸಿಕ ಹೋರಾಟ, ಕೊರೊನಾ ಕಾಲದಲ್ಲಿ ದೇಶವಾಸಿಗಳ ಸಂಕಟ, ಜಾಗತಿಕ ಮಟ್ಟದಲ್ಲಿ ಬಯಲಾದ ಭಾರತದ ಅಸಮರ್ಥತೆ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲ್ಲು ತೂರಾಟ, ಗಲಾಟೆ ನಡುವೆ ಬಹುತೇಕ ಕಡೆ ರಾಜ್ಯದಲ್ಲಿ ಶಾಂತಿಯುತ ಮತದಾನ

ದೇಶದಲ್ಲಿ ಶುಕ್ರವಾರ (ಏ.26) ಎರಡನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯದ...

ನಾಮಪತ್ರ ತಿರಸ್ಕೃತಗೊಂಡ ಸೂರತ್ ಅಭ್ಯರ್ಥಿ ನೀಲೇಶ್ ಕಾಂಗ್ರೆಸ್‌ನಿಂದ ಅಮಾನತು

ಸೂರತ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡು ಬಿಜೆಪಿಯ ಮುಖೇಶ್...

ಲೋಕಸಭೆ ಹಣಾಹಣಿ -2024 | 5 ಗಂಟೆ ವೇಳೆಗೆ ರಾಜ್ಯದಲ್ಲಿ ಶೇ.63.90 ಮತದಾನ

ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ...

ಹದಗೆಟ್ಟ ರಸ್ತೆ| 600ಕ್ಕೂ ಹೆಚ್ಚು ತ್ರಿಪುರಾ ಬುಡಕಟ್ಟು ಮತದಾರರಿಂದ ಚುನಾವಣೆ ಬಹಿಷ್ಕಾರ

ತ್ರಿಪುರಾ ಪೂರ್ವ ಲೋಕಸಭಾ ಕ್ಷೇತ್ರದ ಭಾಗವಾದ ಧಲೈ ಜಿಲ್ಲೆಯ ದೂರದ ಬುಡಕಟ್ಟು...