ವಿವಾಹೇತರ ಸಂಬಂಧವಿದೆ ಎಂದು ಶಂಕಿ ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು ತನ್ನ ಇಬ್ಬರು ಹೆಣ್ಣುಮಕ್ಕಳ ಮೇಲೆ ಆ್ಯಸಿಡ್ ಎರಚಿದ ಘಟನೆ ಉತ್ತರ ಪ್ರದೇಶದ ಟಿಕ್ರಿ ಗ್ರಾಮದಲ್ಲಿ ನಡೆದಿದೆ.
ಆ್ಯಸಿಡ್ ದಾಳಿಯಿಂದ 39 ವರ್ಷದ ರಾಮಗುಣಿ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳಾದ 16 ವರ್ಷದ ನೇಹಾ ಮತ್ತು 23 ವರ್ಷದ ರಚಿತಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ವಿವಾಹೇತರ ಸಂಬಂಧಕ್ಕೆ 35 ವರ್ಷದ ಮಹಿಳೆ ಬಲಿ
ಈ ಬಗ್ಗೆ ಭಾನುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ನಗರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ದೇವೇಂದ್ರ ಕುಮಾರ್, “ಸಂತ್ರಸ್ತ ಮಹಿಳೆ ತನ್ನ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನೊಂದಿಗೆ ಟಿಕ್ರಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆಕೆಯ ಪತಿ ರಾಮ್ ಗೋಪಾಲ್ ಶಹಾಬಾದ್ ಹರ್ದೋಯ್‌ನಲ್ಲಿ ವಾಸಿಸುತ್ತಿದ್ದನು. ಶುಕ್ರವಾರ ರಾತ್ರಿ, ರಾಮಗುಣಿ ಮತ್ತು ಆಕೆಯ ಹೆಣ್ಣುಮಕ್ಕಳು ನಿದ್ರಿಸುತ್ತಿದ್ದಾಗ ಆಕೆಯ ಪತಿ ಗೋಡೆ ಹಾರಿ ಮನೆಗೆ ನುಗ್ಗಿ ಅವರ ಮೇಲೆ ಆ್ಯಸಿಡ್ ಎರಚಿದ್ದಾನೆ” ಎಂದು ತಿಳಿಸಿದ್ದಾರೆ.
ಘಟನೆಯ ಸಮಯದಲ್ಲಿ, ರಾಮಗುಣಿ ಅವರ ಮಗ ಆಶು ತನ್ನ ಸ್ನೇಹಿತರೊಂದಿಗೆ ಇದ್ದ. ಬಳಿಕ ತನ್ನ ತಂದೆಯ ವಿರುದ್ಧ ದೂರು ದಾಖಲಿಸಿದ್ದಾನೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಒಡಿಶಾ | ಅಲೆಮಾರಿ ಕುಟುಂಬದ ಐವರ ಬರ್ಬರ ಹತ್ಯೆ; ಐವರ ಅಪಹರಣ
ಗಾಯಾಳುಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ತನ್ನ ತಂದೆ ಮದ್ಯವ್ಯಸನಿಯಾಗಿದ್ದು, ವ್ಯಸನದಿಂದಾಗಿ ಶಹಾಬಾದ್ ಪ್ರದೇಶದಲ್ಲಿರುವ ತನ್ನ ಕೃಷಿ ಭೂಮಿಯನ್ನು ಮಾರಿದ್ದಾಗಿ ಆಶು ಪೊಲೀಸರಿಗೆ ತಿಳಿಸಿದ್ದಾನೆ.
ಇದರ ನಂತರ, ರಾಮಗುಣಿ ತನ್ನ ಮಕ್ಕಳೊಂದಿಗೆ ಟಿಕ್ರಿ ಗ್ರಾಮಕ್ಕೆ ತೆರಳಿದರು. ಆದರೂ ಆಕೆಗೆ ವಿವಾಹೇತರ ಸಂಬಂಧವಿದೆ ಎಂದು ಅನುಮಾನಿಸಿದ ಪತಿ ಆಗಾಗ್ಗೆ ಬಂದು ನೋಡುತ್ತಿದ್ದ ಎನ್ನಲಾಗಿದೆ. ಸದ್ಯ ಗೋಪಾಲ್ ತಲೆಮರೆಸಿಕೊಂಡಿದ್ದು, ಆತನನ್ನು ಪತ್ತೆಹಚ್ಚಲು ಹುಡುಕಾಟ ನಡೆಯುತ್ತಿದೆ.
