ಮಣಿಪುರ ರಾಜ್ಯದಲ್ಲಿ ಜನಾಂಗೀಯ ಘರ್ಷಣೆಗಳು ಹೆಚ್ಚಾಗಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ.
ಮುಖ್ಯಮಂತ್ರಿಗಳು ಶುಕ್ರವಾರ(ಜೂನ್ 30) ಮಧ್ಯಾಹ್ನ 3 ಗಂಟೆಗೆ ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರಿಗೆ ತಮ್ಮ ರಾಜೀನಾಮೆಯನ್ನು ಹಸ್ತಾಂತರಿಸುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಮಾಧ್ಯಮದ ವರದಿಯ ಪ್ರಕಾರ, ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ರಾಜೀನಾಮೆ ಸುದ್ದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಆಯ್ಕೆಯನ್ನು ಪತ್ರಿಕಾ ಮಂಡಳಿಗೆ ನೀಡಲಾಗಿತ್ತು ಅಥವಾ ಕೇಂದ್ರವು ಮಧ್ಯಪ್ರವೇಶಿಸಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.
ಈ ವರದಿಗಳಿಗೆ ಪ್ರತಿಕ್ರಿಯೆಯಾಗಿ, ಶುಕ್ರವಾರ ಮಣಿಪುರ ಮುಖ್ಯಮಂತ್ರಿಗಳ ಸಚಿವಾಲಯ ಮತ್ತು ರಾಜಭವನದ ಹೊರಗೆ ಮಹಿಳೆಯರ ಗುಂಪೊಂದು ಜಮಾಯಿಸಿ, ಸಿಂಗ್ ಅವರು ರಾಜೀನಾಮೆ ನೀಡದಂತೆ ಒತ್ತಾಯಿಸಿತು. ಅಲ್ಲದೆ ತೊಂದರೆ ಉಂಟುಮಾಡುವವರ ವಿರುದ್ಧ ದೃಢವಾದ ನಿಲುವು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಯನ್ನು ಕೇಳಿಕೊಂಡರು.
ಈ ಸುದ್ದಿ ಓದಿದ್ದೀರಾ? ತಮಿಳುನಾಡು ರಾಜ್ಯಪಾಲರ ಏಕಪಕ್ಷೀಯ ಸಚಿವರ ವಜಾ ನಿರ್ಧಾರ; ಅಮಿತ್ ಶಾ ಸಲಹೆ ಮೇರೆಗೆ ಆದೇಶಕ್ಕೆ ತಡೆ
ಸುದ್ದಿ ಸಂಸ್ಥೆ ಪ್ರಕಾರ, ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಘಟನೆಯಲ್ಲಿ, ಗುರುವಾರ ಭದ್ರತಾ ಪಡೆಗಳು ಮತ್ತು ಶಂಕಿತ ಗಲಭೆಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ .
ಮಣಿಪುರದಲ್ಲಿ ಕೇಂದ್ರದ ಮಧ್ಯಪ್ರವೇಶಬೇಕೆಂದು ಪ್ರತಿಭಟನಾಕಾರರು ಮತ್ತು ರಾಜಕೀಯ ಪಕ್ಷಗಳ ಪ್ರಮುಖ ಬೇಡಿಕೆಯಾಗಿದೆ. ಒಂದು ತಿಂಗಳ ಹಿಂದೆ, ಮಣಿಪುರದ ಕುಕಿ ಸಮುದಾಯದ ಸದಸ್ಯರು ಮುಖ್ಯಮಂತ್ರಿಯ ಮೇಲಿನ ನಂಬಿಕೆಯನ್ನು ಕಳೆದುಕೊಂಡ ನಂತರ ಮಣಿಪುರದಲ್ಲಿ ಸಾಮಾನ್ಯ ಸ್ಥಿತಿಗೆ ತರಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜೂನ್‌ನಲ್ಲಿ ಮಣಿಪುರದ ಒಂಬತ್ತು ಬಿಜೆಪಿ ಶಾಸಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಎನ್ ಬಿರೇನ್ ಸಿಂಗ್ ನೇತೃತ್ವದ ಸರ್ಕಾರದ ಮೇಲೆ ರಾಜ್ಯದ ಜನರು ಸಂಪೂರ್ಣ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಮೀಟೀ ಮತ್ತು ಕುಕಿ ಸಮುದಾಯಗಳ ನಡುವೆ ನಡೆಯುತ್ತಿರುವ ಜನಾಂಗೀಯ ಘರ್ಷಣೆಗಳಿಂದ ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ರಾಹುಲ್ ಗಾಂಧಿ ಭೇಟಿ
ಮಣಿಪುರ ರಾಜ್ಯದ ಚುರಾಚಂದ್‌ಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದ ನಿರಾಶ್ರಿತರಾದ ಜನರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಪರಿಹಾರ ಶಿಬಿರದಲ್ಲಿ ಭೇಟಿ ಮಾಡಿದರು.
ಪರಿಹಾರ ಶಿಬಿರದಲ್ಲಿ ಮಕ್ಕಳೊಂದಿಗೆ ರಾಹುಲ್ ಗಾಂಧಿ ಊಟ ಮಾಡಿದರು. ಪೋಷಕರು ಹಾಗೂ ಹಿರಿಯ ನಾಯಕರ ನೋವು ನಲಿವುಗಳನ್ನು ಹಂಚಿಕೊಂಡರು.
“ನಾನು ಮಣಿಪುರ ರಾಜ್ಯದ ನನ್ನ ಎಲ್ಲ ಸಹೋದರ ಸಹೋದರಿಯರ ಸಂಕಷ್ಟ ಕೇಳಲು ಬಂದಿದ್ದೇನೆ. ಎಲ್ಲ ಸಮುದಾಯಗಳ ಜನರು ನನ್ನನ್ನು ಸ್ವಾಗತಿಸಿ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಸರ್ಕಾರ ನನ್ನನ್ನು ತಡೆಯುತ್ತಿರುವುದು ತುಂಬಾ ದುರದೃಷ್ಟಕರ. ಮಣಿಪುರಕ್ಕೆ ಸಹಜ ಸ್ಥಿತಿಗೆ ಮರಳಬೇಕಿದೆ. ಶಾಂತಿ ನಮ್ಮ ಆದ್ಯತೆಯಾಗಬೇಕು” ಎಂದು ರಾಹುಲ್ ಗಾಂಧಿ ಹೇಳಿದರು.
ಹಿಂಸಾಚಾರದಿಂದ ಹೆಚ್ಚು ತತ್ತರಿಸಿರುವ ಮಣಿಪುರದ ಚುರಾಚಂದ್‌ಪುರ ಜಿಲ್ಲೆಗೆ ತೆರಳುತ್ತಿದ್ದಾಗ ಪೊಲೀಸರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನ ತಡೆಹಿಡಿದ ನಂತರ ಅವರು ಹೆಲಿಕಾಪ್ಟರ್ ಮೂಲಕ ಸಂತ್ರಸ್ತರ ಶಿಬಿರಗಳಿಗೆ ತೆರಳಿದರು.
ಮೇ 3 ರಂದು ಮೊದಲ ಬಾರಿಗೆ ಹಿಂಸಾಚಾರ ನಡೆದ ನಂತರ ಈಶಾನ್ಯ ರಾಜ್ಯಕ್ಕೆ ರಾಹುಲ್ ಗಾಂಧಿ ಅವರ ಮೊದಲ ಭೇಟಿ ಇದಾಗಿದೆ.
ಹಿಂಸಾಚಾರ ಹೆಚ್ಚಾಗುವ ಭೀತಿಯಿಂದಾಗಿ ಬೆಂಗಾವಲು ವಾಹನ ತಡೆ ಹಿಡಿಯಲಾಯಿತು ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಬೆಂಗಾವಲು ವಾಹನ ತಡೆ ಹಿಡಿದಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.